ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆನೆರಿಕ್ ಔಷಧಿ ಮತ್ತು ಬ್ರ್ಯಾಂಡ್ ಮಹತ್ವ: ಡಾ. ಗೋಪಾಲ ದಾಬಡೆ ಅವರ ವಿಶ್ಲೇಷಣೆ

ವೈದ್ಯರು ಬ್ರ್ಯಾಂಡೆಡ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ
Published 24 ಆಗಸ್ಟ್ 2023, 0:10 IST
Last Updated 24 ಆಗಸ್ಟ್ 2023, 0:10 IST
ಅಕ್ಷರ ಗಾತ್ರ

‘ವೈದ್ಯರು ರೋಗಿಗಳಿಗೆ ಬ್ರ್ಯಾಂಡೆಡ್‌ ಔಷಧಿಗಳ ಬದಲಾಗಿ ಜೆನೆರಿಕ್ ಔಷಧಿಗಳನ್ನೇ ಶಿಫಾರಸು ಮಾಡಬೇಕು’ ಎಂಬ ರಾಷ್ಟ್ರೀಯ ವೈದ್ಯಕೀಯ ಆಯೋಗದ ಇತ್ತೀಚಿನ ಸುತ್ತೋಲೆಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಇದನ್ನು ಕಟುವಾಗಿ ವಿರೋಧಿಸಿದೆ ಕೂಡ.

ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ– 2019ರ ಆಧಾರದ ಮೇಲೆ ರಚಿಸಲಾಗಿದೆ. ಐಎಂಎ, ದೇಶದ ಆಧುನಿಕ ವೈದ್ಯ ಪದ್ಧತಿಯ ವೈದ್ಯರ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ವೈದ್ಯರ ಹಿತಾಸಕ್ತಿಗಳು ಮತ್ತು ಸಮುದಾಯದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ. ಇದು 28 ರಾಜ್ಯ ಶಾಖೆಗಳು, 5 ಕೇಂದ್ರಾಡಳಿತ ಪ್ರಾದೇಶಿಕ ಶಾಖೆಗಳು ಮತ್ತು 1,702 ಸ್ಥಳೀಯ ಶಾಖೆಗಳನ್ನು ಹೊಂದಿದೆ. 3.5 ಲಕ್ಷ ವೈದ್ಯರು ಇದರ ಸದಸ್ಯತ್ವ ಪಡೆದಿದ್ದಾರೆ.

ಮೊದಲು ನಾವು ಜೆನೆರಿಕ್ ಮತ್ತು ಬ್ರ್ಯಾಂಡೆಡ್‌ ಈ ಎರಡು ಪದಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಜೆನೆರಿಕ್ ಎಂದರೆ ಔಷಧದ ರಾಸಾಯನಿಕ ಹೆಸರು. ಪ್ರಪಂಚದಾದ್ಯಂತ ಫಾರ್ಮಸಿ ಅಧ್ಯಯನಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳಲ್ಲಿ ಈ ಹೆಸರನ್ನು ಬಳಸಲಾಗುತ್ತದೆ. ಒಂದು ಔಷಧಿಯನ್ನು ವಿವಿಧ ಕಂಪನಿಗಳು ತಯಾರಿಸಿದಾಗ, ಅವು ಅದಕ್ಕೆ ತಮ್ಮದೇ ಆದ ವಿಭಿನ್ನ ಹೆಸರುಗಳನ್ನು ನೀಡುತ್ತವೆ. ಉದಾಹರಣೆಗೆ, ಪ್ಯಾರಸಿಟಮಾಲ್ ಎಂಬುದು ಜೆನೆರಿಕ್ ಹೆಸರು. ಇದರ ಬ್ರ್ಯಾಂಡ್ ಹೆಸರು ‘ಕ್ರೋಸಿನ್’,  ‘ಡೋಲೊ’ ಅಥವಾ ‘ಕ್ಯಾಲ್ಪೋಲ್’.

ನಮ್ಮ ವೈದ್ಯರ ಬಗ್ಗೆ ನಮಗೆ ಅಪಾರ ಗೌರವವಿದೆ. ಏಕೆಂದರೆ ಅವರು ನಮ್ಮ ಜೀವವನ್ನು ಉಳಿಸುತ್ತಾರೆ. ಆ ಗೌರವವನ್ನು ಇಟ್ಟುಕೊಂಡೇ ವೈದ್ಯರಿಗೆ ಗ್ರಾಹಕರು ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದೇ? ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳನ್ನು ಪರೀಕ್ಷಿಸುವ ವೈದ್ಯರಿಗೆ, ಜೆನೆರಿಕ್ ಔಷಧಿಗಳು ಗುಣಮಟ್ಟದವಾಗಿಲ್ಲ ಮತ್ತು ಬ್ರ್ಯಾಂಡೆಡ್ ಔಷಧಿಗಳು ಉತ್ತಮ ಗುಣಮಟ್ಟದ್ದಾಗಿವೆ ಎಂಬುದು ಹೇಗೆ ತಿಳಿಯುತ್ತದೆ? ಯಾವುದೇ ಔಷಧಿಯ ಗುಣಮಟ್ಟ ತಿಳಿಯಬೇಕೆಂದರೆ, ಅದನ್ನು ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು. ವೈದ್ಯರ ಬಳಿ ಈ ಸೌಲಭ್ಯವೇನೂ ಇರುವುದಿಲ್ಲ. ಬಹುಮಟ್ಟಿಗೆ ಯಾವುದೇ ಪ್ರಯೋಗಾಲಯದ ಸಂಪರ್ಕದಲ್ಲೂ ಅವರು ಇರುವುದಿಲ್ಲ.

ನಮ್ಮ ವೈದ್ಯರು ಈ ಪ್ರಶ್ನೆಗೆ, ತಮ್ಮ ಅಪಾರ ಅನುಭವದ ಆಧಾರದ ಮೇಲೆ ಇದನ್ನು ನಿರ್ಧರಿಸುವುದಾಗಿ ಉತ್ತರ ನೀಡುತ್ತಾರೆ. ಆದರೆ ಕೆಲವು ವೈದ್ಯರು, ತಮ್ಮ ಒಡೆತನದ ಫಾರ್ಮಸಿಯಲ್ಲಿ ಅಥವಾ ತಮ್ಮ ಕ್ಲಿನಿಕ್‌ ನೆರೆಹೊರೆಯಲ್ಲಿ ಮಾತ್ರ ಲಭ್ಯವಿರುವ ಔಷಧಿಯನ್ನು ಸೂಚಿಸುತ್ತಾರೆ ಎಂಬುದು ರೋಗಿಗಳ ಅನುಭವದ ಮಾತು. ಆ ವೈದ್ಯರು ಸೂಚಿಸಿದ ಔಷಧಿ ಇತರ ಸ್ಥಳಗಳಲ್ಲಿ ಲಭ್ಯವಿರುವುದಿಲ್ಲ. ವೈದ್ಯರು ಇದಕ್ಕೆ ಏನು ವಿವರಣೆ ನೀಡುತ್ತಾರೆ? ವೈದ್ಯರು ಅನುಭವಿಗಳಾಗಿರುತ್ತಾರೆ, ಆದ್ದರಿಂದ ಯಾವ ಔಷಧಿ ಕೆಲಸ ಮಾಡುತ್ತದೆ ಮತ್ತು ಯಾವುದು ಮಾಡುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ ಎಂದು ಹೇಳಬಹುದು. ಆದರೆ ಅಂತಹ ಹೇಳಿಕೆ ಅವೈಜ್ಞಾನಿಕ.

ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಔಷಧಿಗಳಿಗೆ ಸಂಬಂಧಿಸಿದಂತೆ ಜೆನೆರಿಕ್ ಹೆಸರಿನಲ್ಲಿ ಮಾತ್ರ ಅಧ್ಯಯನ ಮಾಡುತ್ತಾರೆ. ವೈದ್ಯಕೀಯದ ಎಲ್ಲಾ ಪ್ರಮಾಣಿತ ಪಠ್ಯಪುಸ್ತಕಗಳು ಮತ್ತು ಪ್ರಪಂಚದಾದ್ಯಂತ ನಿಯತಕಾಲಿಕಗಳು ಜೆನೆರಿಕ್ ಹೆಸರನ್ನೇ ಬಳಸುತ್ತವೆ. ಆದರೆ ವೃತ್ತಿಯಲ್ಲಿ ಮಾತ್ರ ಬ್ರ್ಯಾಂಡೆಡ್ ಔಷಧಿಯನ್ನು ಶಿಫಾರಸು ಮಾಡುವ ಈ ಬಯಕೆ ಏಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ.

ಭಾರತೀಯ ಔಷಧಿ ಕಂಪನಿಗಳು 200ಕ್ಕೂ ಹೆಚ್ಚು ದೇಶಗಳಿಗೆ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುತ್ತವೆ. ಅಮೆರಿಕದ ಶೇಕಡ 40ಕ್ಕಿಂತ ಹೆಚ್ಚು ಜೆನೆರಿಕ್ ಬೇಡಿಕೆಯನ್ನು ಮತ್ತು ಇಂಗ್ಲೆಂಡ್‌ನ ಶೇ 25ರಷ್ಟು ಪ್ರಿಸ್ಕ್ರಿಪ್ಷನ್ ಸಹಿತ ಔಷಧಿಗಳನ್ನು ಪೂರೈಸುತ್ತವೆ. ಜೆನೆರಿಕ್ ಔಷಧಿಗಳನ್ನು ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡಬಹುದಾದರೆ ಅವುಗಳನ್ನು ಭಾರತದಲ್ಲಿ ಏಕೆ ಬಳಸಬಾರದು?

‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ’ (ಪಿಎಂಬಿಜೆಪಿ), ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿದ ಅಭಿಯಾನವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿನ ದುಬಾರಿ ಬ್ರ್ಯಾಂಡೆಡ್ ಔಷಧಿಗಳಿಗೆ ಹೋಲಿಸಿದರೆ ಈ ಔಷಧಿಗಳ ಪರಿಣಾಮ ಒಂದೇ ಆಗಿರುತ್ತದೆ. ಭಾರತ ಸರ್ಕಾರವು ದೇಶದಾದ್ಯಂತ ತನ್ನ 9,400 ಪಿಎಂಬಿಜೆಪಿ ಔಷಧ ಮಳಿಗೆಗಳ ಮೂಲಕ ಜೆನೆರಿಕ್ ಹೆಸರುಗಳನ್ನು ಉತ್ತೇಜಿಸುತ್ತಿದೆ. ವೈದ್ಯರು ಜೆನೆರಿಕ್ ಹೆಸರಿನಲ್ಲಿ ಮಾತ್ರ ಔಷಧಿಗಳನ್ನು ಶಿಫಾರಸು ಮಾಡಬೇಕು ಎಂದು 2017ರಲ್ಲಿ ಪ್ರಧಾನಿ ಸ್ಪಷ್ಟಪಡಿಸಿದ್ದರು. ಆದರೆ ಖಾಸಗಿ ವೈದ್ಯರು ಇದನ್ನು ಒಪ್ಪುವುದಿಲ್ಲ.

ಮಾರುಕಟ್ಟೆಯಲ್ಲಿರುವ ಎಲ್ಲಾ ಬ್ರ್ಯಾಂಡೆಡ್ ಔಷಧಿಗಳನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ಅವುಗಳ ಬದಲಿಗೆ ಜೆನೆರಿಕ್ ಔಷಧಿಗಳನ್ನು ಬಳಸಬೇಕು ಎಂದು 1975ರಲ್ಲಿಯೇ ಹಾಥಿ ಸಮಿತಿಯು ಸಲಹೆ ನೀಡಿತ್ತು. ಹಾಥಿ ಸಮಿತಿಯ ನೇತೃತ್ವವನ್ನು ಸಂಸತ್ ಸದಸ್ಯ ಜೈಸುಖ್‌ಲಾಲ್ ಹಾಥಿ ವಹಿಸಿದ್ದರು. ಈಗ ರಾಷ್ಟ್ರೀಯ ವೈದ್ಯಕೀಯ ಆಯೋಗವೂ ಅದನ್ನೇ ಹೇಳುತ್ತಿದೆ. ದೇಶದ ಅತ್ಯುನ್ನತ ಸಂಸ್ಥೆ ಮಾಡಿದ ಈ ಶಿಫಾರಸುಗಳು ತಪ್ಪಾಗಲು ಹೇಗೆ ಸಾಧ್ಯ?

ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆಯುವ ಹೆಚ್ಚಿನ ರೋಗಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಾರೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಔಟ್ ಆಫ್ ಪಾಕೆಟ್ ವೆಚ್ಚಗಳು (ಒಒಪಿ) ಎಂದು ಕರೆಯಲಾಗುತ್ತದೆ. ಔಷಧಿಗಳ ಮೇಲಿನ ಒಒಪಿ ವೆಚ್ಚವು ಒಟ್ಟು ಚಿಕಿತ್ಸಾ ವೆಚ್ಚದ ಶೇ 86ರಷ್ಟು ಎಂದು ಅಂದಾಜಿಸಲಾಗಿದೆ ಮತ್ತು ಇದು ಭಾರತೀಯರಲ್ಲಿ ಹೆಚ್ಚಿನ ಹೊರೆಗೆ ಕಾರಣವಾಗಿದೆ. ಹೀಗಾಗಿ, ಆರೋಗ್ಯ ಸೇವೆಯನ್ನು ಕೈಗೆಟಕುವಂತೆ ಮಾಡಬೇಕೆಂದಾದರೆ, ಔಷಧಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು ಅದಕ್ಕಿರುವ ಏಕೈಕ ಮಾರ್ಗವಾಗಿದೆ.

2017ರ ನವೆಂಬರ್‌ನಲ್ಲಿ ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, ನಾಲ್ಕು ಔಷಧಿಗಳ ಗುಣಮಟ್ಟದ ಪರೀಕ್ಷೆಯನ್ನು ಮಾಡಲಾಯಿತು- (ಮೆಟ್ಫಾರ್ಮಿನ್, ಗ್ಲಿಬೆಂಕ್ಲಾಮೈಡ್, ಅಟೆನೊಲೋಲ್ ಮತ್ತು ಅಮ್ಲೋಡಿಪೈನ್). ಈ ಎಲ್ಲಾ ಜೆನೆರಿಕ್ ಔಷಧಿಗಳ ಗುಣಮಟ್ಟವು ಬ್ರ್ಯಾಂಡೆಡ್ ಔಷಧಿಗಳ ಗುಣಮಟ್ಟಕ್ಕೆ ಸಮನಾಗಿದೆ ಎಂಬುದು ಈ ಸಂದರ್ಭದಲ್ಲಿ ಸಾಬೀತಾಯಿತು.

ಬ್ರ್ಯಾಂಡೆಡ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡಲು ವೈದ್ಯರು ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಯಾರಾದರೂ ಆಶ್ಚರ್ಯಪಡಬಹುದು. ಅದಕ್ಕೆ ಅವರ ಬಳಿ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಮಾರುಕಟ್ಟೆಯಲ್ಲಿ ಗ್ರಾಹಕರು ತಮ್ಮಿಚ್ಛೆಯಂತೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದ ಏಕೈಕ ಸರಕೆಂದರೆ ಔಷಧಿಗಳು. ಆ ಗ್ರಾಹಕನಿಗಾಗಿ ವೈದ್ಯರು ಅದನ್ನು ನಿರ್ಧರಿಸುತ್ತಾರೆ. ವೈದ್ಯರು ಸೂಚಿಸಿದ ಔಷಧಿಗಳನ್ನು ಖರೀದಿಸುವುದನ್ನು ಬಿಟ್ಟು ರೋಗಿಗೆ ಬೇರೆ ಆಯ್ಕೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶಿಫಾರಸು ಮಾಡುವ ವೈದ್ಯರು ಔಷಧ ಕಂಪನಿಗಳ ಕೈಗೊಂಬೆಯಾಗಿದ್ದರೆ ಏನಾಗುತ್ತದೆ?

ಗ್ರಾಹಕರಲ್ಲಿ ಮಾಹಿತಿಯ ಕೊರತೆಯೇ ಈ ಸಮಸ್ಯೆಗೆ ಕಾರಣವಾಗಿದೆ. ಅದರ ಹಿಂದಿನ ನಿಜವಾದ ಕಾರಣವೆಂದರೆ, ಔಷಧ ಕಂಪನಿಗಳು ಹಾಗೂ ವೈದ್ಯರ ನಡುವಿನ ಸಂಬಂಧ! ದುರದೃಷ್ಟವಶಾತ್, ಅವರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಔಷಧ ಕಂಪನಿಗಳು ವೈದ್ಯರಿಗೆ ಉಚಿತ ಉಡುಗೊರೆಗಳನ್ನು ನೀಡುತ್ತವೆ ಮತ್ತು ತಮ್ಮ ಕಂಪನಿಗಳ ಉತ್ಪನ್ನಗಳನ್ನು ಶಿಫಾರಸು ಮಾಡಲು ಅವರನ್ನು ಪ್ರಲೋಭನೆಗೆ ಒಳಪಡಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಸಮಸ್ಯೆಯಾಗಿದೆ. ವೈದ್ಯರು ಹೇಗೆ ಔಷಧ ಕಂಪನಿಗಳ ಕೈಗೊಂಬೆಗಳಾಗುತ್ತಾರೆ ಎಂಬುದರ ಕುರಿತು ಪ್ರಪಂಚದಾದ್ಯಂತ ಹಲವಾರು ಅಧ್ಯಯನಗಳು ನಡೆದಿವೆ.

ಈ ಬಗ್ಗೆ ವೈದ್ಯರನ್ನು ಪ್ರಶ್ನಿಸಿದಾಗ ಅವರು ‘ನಾನು ಪ್ರಭಾವಿತನಾಗಿಲ್ಲ. ಆದರೆ ನನ್ನ ಇತರ ಸಹೋದ್ಯೋಗಿಗಳು ಪ್ರಭಾವಿತರಾಗಿದ್ದಾರೆ’ ಎಂದು ಉತ್ತರಿಸುತ್ತಾರೆ. ಈ ಹೇಳಿಕೆಯ ದಿಸೆಯಲ್ಲಿಯೂ ವ್ಯಾಪಕವಾಗಿ ಅಧ್ಯಯನ ನಡೆಸಲಾಗಿದೆ.

ಬ್ರ್ಯಾಂಡ್ ಹೆಸರಿನಲ್ಲಿ ಯಾವುದೇ ಔಷಧಿಯ ಪ್ರಿಸ್ಕ್ರಿಪ್ಷನ್ ಬರೆಯದೆ, ಜೆನೆರಿಕ್‌ನಲ್ಲಿಯೇ ಎಲ್ಲ ಔಷಧಗಳನ್ನೂ ಬರೆಯುವಂತಾದರೆ, ಬ್ರ್ಯಾಂಡ್‌ಗಳನ್ನು ಉತ್ತೇಜಿಸಲು ವೈದ್ಯರಿಗೆ ಯಾವುದೇ ಕಾರಣ ಇರುವುದಿಲ್ಲ. ಆಗ ಫಾರ್ಮಾ ಕಂಪನಿಗಳಿಗೆ ಆಮಿಷ ಒಡ್ಡಲು ಸಹ ಸಾಧ್ಯವಾಗುವುದಿಲ್ಲ. ರೋಗಿಯು ಮಳಿಗೆಯಿಂದ ಖರೀದಿಸುವ ಔಷಧದ ಮೇಲೆ ಸಲ್ಲದ ಪ್ರಭಾವ ಬೀರಲು ಸಹ ವೈದ್ಯರಿಗೆ ಸಾಧ್ಯವಾಗುವುದಿಲ್ಲ.

ಇವೆಲ್ಲ ಕಾರ್ಯರೂಪಕ್ಕೆ ಬರಬೇಕೆಂದರೆ, ಇರುವುದು ಒಂದೇ ಒಂದು ಮಾರ್ಗ ಎಂದು ತೋರುತ್ತದೆ. ಅದೆಂದರೆ, ಗ್ರಾಹಕರು ತಮ್ಮ ವೈದ್ಯರ ಬಳಿ ಹೋದಾಗ, ಜೆನೆರಿಕ್ ಹೆಸರುಗಳಲ್ಲಿ ಮಾತ್ರ ಔಷಧಗಳನ್ನು ಬರೆಯುವಂತೆ ಒತ್ತಾಯಿಸುವುದು. ವೈದ್ಯರ ಒತ್ತಾಯದ ಮೇರೆಗೆ ಸರ್ಕಾರವು ಈ ಆದೇಶವನ್ನು ಇಷ್ಟರಲ್ಲಿಯೇ ವಾಪಸ್ ಪಡೆದರೂ ಏನೂ ಆಶ್ಚರ್ಯವಿಲ್ಲ.

ಲೇಖನ: ಡಾ. ಗೋಪಾಲ ದಾಬಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT