ಜಗತ್ತಿನ ಆರ್ಥಿಕ ಮತ್ತು ಮಿಲಿಟರಿ ಕ್ಷೇತ್ರಗಳ ಸೂಪರ್ ಪವರ್ ಎನ್ನುವ ಹೆಗ್ಗಳಿಕೆ ಅಮೆರಿಕದ್ದು. ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಸೂಪರ್ ಪವರ್. ತಮ್ಮ ಸ್ಥಾನಗಳನ್ನು ಈ ದೇಶಗಳು ನಿರಂತರವಾಗಿ ಕಾಯ್ದುಕೊಳ್ಳುತ್ತಿವೆ. ಸೌದಿ ಅರೇಬಿಯಾ ಮತ್ತು ರಷ್ಯಾಗಳದು ತೈಲೋದ್ಯಮದ ಸೂಪರ್ ಪವರ್ ಎನ್ನುವ ಖ್ಯಾತಿ. ಸಾಫ್ಟ್ವೇರ್ ಸೂಪರ್ ಕ್ಷೇತ್ರದ ಸೂಪರ್ ಪವರ್ ಎನಿಸಿರುವ ಭಾರತ, ‘ಹಸಿರು ಸೂಪರ್ ಪವರ್’ ಆಗುವ ಲಕ್ಷಣಗಳೂ ಕಾಣಿಸುತ್ತಿವೆ. ಆ ಹಿರಿಮೆಯನ್ನು ಸಾಕಾರಗೊಳಿಸುವ ಹಲವು ಕೆಲಸಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.

ಮುಂದಿನ ಐದು ವರ್ಷಗಳಲ್ಲಿ 500 ಗಿಗಾವಾಟ್ ವಿದ್ಯುಚ್ಛಕ್ತಿಯನ್ನು ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ಪಡೆಯುವ ವಿಶ್ವದ ಅತ್ಯಂತ ಬೃಹತ್ ಯೋಜನೆ ನಮ್ಮಲ್ಲಿ ಶುರುವಾಗಿದೆ. ಇದಕ್ಕಾಗಿ 50 ಬೃಹತ್ ಸೌರ ಪಾರ್ಕ್ಗಳು ನಿರ್ಮಾಣವಾಗಲಿವೆ. ಇವುಗಳಿಂದ 37.49 ಗಿಗಾವಾಟ್ ವಿದ್ಯುತ್ ಉತ್ಪಾದನೆಯೊಂದಿಗೆ, 50 ಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ನೀಲನಕ್ಷೆ ತಯಾರಾಗಿದೆ. ಯೋಜನೆಯು ಸಾಕಾರಗೊಂಡರೆ, ಇನ್ನು 25 ವರ್ಷಗಳಲ್ಲಿ ವಾತಾವರಣಕ್ಕೆ 72 ಕೋಟಿ ಟನ್ ಇಂಗಾಲದ ಡೈಆಕ್ಸೈಡ್ (ಇಂಡೈ) ಸೇರ್ಪಡೆ ಗೊಳ್ಳುವುದು ನಿಲ್ಲುತ್ತದೆ. ‘ಇಂಡೈ’ ನಿಯಂತ್ರಣದಲ್ಲಿ ಭಾರತದಂಥ ಬೃಹತ್ ಜನಸಂಖ್ಯೆಯ ದೇಶವು ಯಶಸ್ವಿಯಾದರೆ, ಏರುತ್ತಿರುವ ಭೂತಾಪವನ್ನು ಒಂದೂವರೆ ಡಿಗ್ರಿ ಸೆಲ್ಸಿಯಸ್ ಒಳಗಿರುವಂತೆ ನಿಯಂತ್ರಿಸಬಹುದು.

ಪ್ರಸ್ತುತ, ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಸೌರ ವಿದ್ಯುತ್ ಪಾಲು ಶೇ 17ರಷ್ಟಿದೆ. ಪ್ಯಾರಿಸ್ ಒಪ್ಪಂದದ ನಿಬಂಧನೆಗೆ ದೇಶವನ್ನು ಸಜ್ಜುಗೊಳಿಸಲು ಹಲವು ಪರಿಸರಸ್ನೇಹಿ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅದರಲ್ಲಿ ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ’ ಯೋಜನೆಯೂ ಒಂದು. ಮನೆಗಳ ತಾರಸಿ ಮೇಲೆ ಸೌರ ವಿದ್ಯುತ್ ಫಲಕ ಅಳವಡಿಸಿ ಉಚಿತ ವಿದ್ಯುತ್ ನೀಡುವ ಯೋಜನೆ ಇದಾಗಿದೆ. ಇದಕ್ಕಾಗಿ ₹75 ಸಾವಿರ ಕೋಟಿ ಮೀಸಲಿರಿಸಿದೆ. ದೇಶದ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ಮಾಸಿಕ ತಲಾ 300 ಯೂನಿಟ್ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವ ಗುರಿ ಹೊಂದಲಾಗಿದೆ. ಯೋಜನೆಯ ಫಲವಾಗಿ, 17 ಲಕ್ಷ ಜನರಿಗೆ ಉದ್ಯೋಗ ದೊರಕಲಿದೆ; ಪ್ರತಿ ಮನೆಯ ವಿದ್ಯುತ್ ಬಿಲ್ಲಿನ ಮೇಲೆ ವಾರ್ಷಿಕ ₹15 ಸಾವಿರದಿಂದ ₹18 ಸಾವಿರ ಉಳಿತಾಯವಾಗಲಿದೆ. ತಾರಸಿ ಸೌರ ಘಟಕ ಅಳವಡಿಸಿಕೊಳ್ಳುವ ಪ್ರತಿ ಕುಟುಂಬಕ್ಕೆ ₹30 ಸಾವಿರದಿಂದ ₹78 ಸಾವಿರದವರೆಗೆ ಸಬ್ಸಿಡಿ ಸಿಗಲಿದೆ. ಅಲ್ಲದೆ, ಪ್ರತಿ ಜಿಲ್ಲೆಯಲ್ಲೂ ‘ಮಾದರಿ ಸೌರ ಗ್ರಾಮ’ ನಿರ್ಮಾಣಗೊಳ್ಳಲಿವೆ.

ಇಡೀ ಜಗತ್ತು ಪರಿಸರಸ್ನೇಹಿ ವಿದ್ಯುತ್ ಪಡೆಯುವ ಪ್ರಯತ್ನದಲ್ಲಿದೆ. ಅಭಿವೃದ್ಧಿ ಹೊಂದಿರುವ ದೇಶಗಳು ದೊಡ್ಡ ಬಂಡವಾಳ ಹೂಡಿ ತಮ್ಮ ವಾತಾವರಣಕ್ಕೆ ಸೇರುವ ‘ಇಂಡೈ’ಯನ್ನು ಸಾಧ್ಯವಾದಷ್ಟೂ ನಿಯಂತ್ರಿಸುತ್ತಿವೆ.

ಈಗಂತೂ ಎಲ್ಲೆಡೆ ಹಸಿರು ಜಲಜನಕದ್ದೇ ಜಪ. ನವೀಕರಿಸಬಹುದಾದ ಇಂಧನ ಬಳಸಿ ನೀರನ್ನು ವಿಭಜಿಸಿ ಪಡೆಯುವ ಜಲಜನಕವನ್ನು ಹಸಿರು ಜಲಜನಕ ಎನ್ನುತ್ತೇವೆ. ಇದನ್ನು ಶಕ್ತಿಯನ್ನಾಗಿ ಬಳಸಬಹುದು. ಭಾರತದ ಬಹುಭಾಗ ಬಿಸಿಲಿನ ಭಂಡಾರವೇ ಆಗಿದೆ. ಒಂದು ಚ.ಮೀ. ಜಾಗದಲ್ಲಿ 500 ವಾಟ್ನಷ್ಟು ಶಕ್ತಿ ಬಿಸಿಲಿನ ರೂಪದಲ್ಲಿ ಬೀಳುತ್ತದೆ. ಇದರ ನಾಲ್ಕನೇ ಒಂದು ಭಾಗದಷ್ಟನ್ನು ವಿದ್ಯುತ್ತನ್ನಾಗಿ ಪರಿವರ್ತಿಸಿದರೆ, ದೇಶದ ಅರ್ಧದಷ್ಟು ಬೇಡಿಕೆ ಪೂರೈಕೆಗೊಳ್ಳುತ್ತದೆ. ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಯಿಂದ 2,600 ಟನ್ ‘ಇಂಡೈ’ ಹೊರ ಸೂಸುವಿಕೆಯನ್ನು ತಡೆಯಬಹುದು. ಸದ್ಯಕ್ಕೆ ನಮ್ಮ ಅಕ್ಷಯ ಇಂಧನ ಸ್ಥಾಪಿತ ಸಾಮರ್ಥ್ಯವು 212 ಗಿಗಾವಾಟ್ನಷ್ಟಿದೆ.

ಭಾರತ ಹಸಿರು ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ಆಗಬೇಕಾದ ಮುಖ್ಯ ಕೆಲಸಗಳಲ್ಲಿ ಮೊದಲನೆಯದು, ಬಂಡವಾಳದ ಕ್ರೋಡೀಕರಣ. ಭಾರೀ ಪ್ರಮಾಣದ ಆರ್ಥಿಕ ಮತ್ತು ಮಾನವಿಕ ಬಂಡವಾಳ ಬೇಕು. ನಮ್ಮಲ್ಲಿ ಮಾನವಿಕ ಬಂಡವಾಳಕ್ಕೆ ಕೊರತೆ ಇಲ್ಲ. ಆದರೆ, ಸೂಕ್ತ ಕೌಶಲದ ಕೊರತೆ ದೊಡ್ಡದಾಗಿದೆ. ಉತ್ಪಾದನೆ ಪ್ರಾರಂಭಗೊಳ್ಳುವ ವೇಳೆಗೆ ಜನರ ಕೌಶಲ ವೃದ್ಧಿಗೊಳ್ಳಬೇಕು. ಬಂಡವಾಳಕ್ಕೆ ಹೊರಗಿನ ಮತ್ತು ನಮ್ಮ ಬ್ಯಾಂಕ್ಗಳ ಹಣ ಹರಿದು ಬರಬೇಕು. ವಿದೇಶಿ ಬ್ಯಾಂಕ್ಗಳಿಂದ ಸಾಲವೇನೋ ಸಿಗುತ್ತದೆ. ಆದರೆ, ಆ ಸಾಲಗಳ ಬಡ್ಡಿದರ ತಲೆಸುತ್ತು ತರುವಂತಿರುತ್ತದೆ. ನಮ್ಮ ಬ್ಯಾಂಕ್ಗಳು ಸರ್ಕಾರದ ಯೋಜನೆಗಳನ್ನು ನಂಬಿ ಹಣ ಹೂಡಬೇಕು.

ಉತ್ಪಾದನೆಯಾದ ಮಾತ್ರಕ್ಕೆ ಕೆಲಸ ಮುಗಿಯುವುದಿಲ್ಲ. ಉತ್ಪಾದನೆಯಾಗುವ ವಿದ್ಯುತ್ ಅನ್ನು ಪೂರ್ಣ ಪ್ರಮಾಣದಲ್ಲಿ ಕೊಳ್ಳುವ ವ್ಯವಸ್ಥೆ ಇರಬೇಕು ಮತ್ತು ಕೊಳ್ಳುವುದು ನಿಧಾನವಾದಾಗ, ಅದನ್ನು ಶೇಖರಿಸಿಡುವ ವ್ಯವಸ್ಥೆಯಾಗಬೇಕು. ವಿದ್ಯುತ್ ಶೇಖರಣೆಯ ಆಧುನಿಕ ವಿಧಾನಗಳು ರೂಪುಗೊಳ್ಳಬೇಕು. ಈಗ ಲಭ್ಯವಿರುವ ತಂತ್ರಜ್ಞಾನ, ಕಡಿಮೆ ಪ್ರಮಾಣದ ವಿದ್ಯುತ್ ಸಂಗ್ರಹಕ್ಕೆ ಸಾಕು. ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆ ಶುರುವಾಗುವ ವೇಳೆಗೆ ತಂತ್ರಜ್ಞಾನ– ಸಲಕರಣೆ ಎರಡೂ ನಮ್ಮಲ್ಲಿರಬೇಕು. ವಿದ್ಯುತ್ ಸರಬರಾಜು ಕಂಪನಿಗಳು ಕಡ್ಡಾಯವಾಗಿ ಹಸಿರು ವಿದ್ಯುತ್ ಖರೀದಿಸಬೇಕು ಮತ್ತು ಶೇ 85ರಷ್ಟು ವಿದ್ಯುಚ್ಛಕ್ತಿಯನ್ನು ಶೇಖರಿಸಿಟ್ಟುಕೊಳ್ಳಬೇಕು.

ಉತ್ಪಾದನೆಯಾದ ವಿದ್ಯುತ್ ಅನ್ನು ಮಾರಲು ಸಶಕ್ತವಾದ ಮಾರಾಟ ವ್ಯವಸ್ಥೆ ರೂಪಿಸುವುದು ಮತ್ತು ಯೋಜನಾಬದ್ಧವಾಗಿ ಮಾರುವುದು ಕೂಡ ಅಗತ್ಯ. ಸರ್ಕಾರ ಮತ್ತು ಖಾಸಗಿ ವಲಯಗಳೆರಡೂ ಪಾಲುದಾರಿಕೆಯಿಂದ ಕೆಲಸ ಮಾಡುವುದು, ಭಾರತದ ‘ಹಸಿರು ಶಕ್ತಿ’ ಪರಿಕಲ್ಪನೆ ಸಾಕಾರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಗಣೆ ವಿಷಯದಲ್ಲಿ ನಮ್ಮಲ್ಲಿ ದುರ್ಬಲವಾಗಿರುವ ಮೂಲ ಸೌಲಭ್ಯಗಳು ಸದೃಢಗೊಳ್ಳಬೇಕು. ಹಣಕಾಸಿನ ನೀತಿಯು ಸರ್ಕಾರ ಮಾಡುವ ಖರ್ಚಿಗೆ ಅನುಗುಣವಾಗಿರಬೇಕು ಮತ್ತು ಆ ನೀತಿ ‘ಶೂನ್ಯ ಇಂಗಾಲ ಪರಿಸರ’ದ ಗುರಿ ಸಾಧನೆಗೆ ಹೊಂದುವಂತಿರಬೇಕು. ಇಂಗಾಲ ತೆರಿಗೆಯನ್ನು ಜಾರಿಗೆ ತರಬೇಕು. ಲಾಭ–ನಷ್ಟದ ವಿಷಯದಲ್ಲಿ ಸರ್ಕಾರ ಮತ್ತು ಖಾಸಗಿಯವರಿಬ್ಬರೂ ಸಮಾನ ಜವಾಬ್ದಾರಿ ಹೊರಬೇಕು. ದೂರದರ್ಶಿತ್ವ ಮತ್ತು ಭದ್ರತೆ ಆಧಾರದ ಮೇಲೆ ಕೆಲಸಗಳು ನಡೆದು, ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ಹಸಿರು ಮೂಲ ಸೌಲಭ್ಯ ರೂಪುಗೊಳ್ಳಬೇಕು.

ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವವನ್ನು ಸಶಕ್ತಗೊಳಿಸಲು ಈಗ ಅಸ್ತಿತ್ವದಲ್ಲಿರುವ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ವಿದ್ಯುತ್ ಕೊಳ್ಳುವವರಲ್ಲಿ ನಿಯಂತ್ರಕರು, ಯೋಜನಾ ತಜ್ಞರು ಆತ್ಮವಿಶ್ವಾಸ ತುಂಬಬೇಕು. ‘ಬ್ಯೂರೊ ಆಫ್ ಎನರ್ಜಿ ಎಫಿಷಿಯನ್ಸಿ’, ‘ಇಂಡಿಯನ್ ರಿನೆವಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ, ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ’ ಮತ್ತು ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ’ ಸಂಸ್ಥೆಗಳು ‘ಹಸಿರು ಪವರ್’ ಗುರಿ ಸಾಧನೆಯಲ್ಲಿ ಮುಂಚೂಣಿ ಪಾತ್ರ ವಹಿಸಬೇಕು.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವು ಹಸಿರು ಪವರ್ ಸಾಕಾರಗೊಳ್ಳಲು ಅಗತ್ಯ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಭಾರತವೂ ಸೇರಿ ಸುಧಾರಣೆ ಬಯಸುತ್ತಿರುವ ದೇಶಗಳ ಬೆನ್ನಿಗೆ ನಿಲ್ಲಬೇಕು. ಇತ್ತೀಚೆಗೆ, ವಿಶ್ವಬ್ಯಾಂಕ್ ಕೊಡುವ ಸಾಲದ ಮೊತ್ತ 600 ಕೋಟಿ ಡಾಲರ್ವರೆಗೆ ಹೆಚ್ಚಾಗಿರುವುದು ಆಶಾದಾಯಕ ಸಂಗತಿ. ಹೂಡಿಕೆಗೆ ಭಾರತವು ಅತ್ಯಂತ ಸಶಕ್ತ ನೆಲ ಹಾಗೂ ನವೀಕೃತ ಇಂಧನ ಯೋಜನೆಗಳು ಇಲ್ಲಿ ಯಶಸ್ವಿಯಾಗುವುದು ಸುಲಭ ಎನ್ನುವುದನ್ನು ವಿದೇಶಿ ಬಂಡವಾಳದಾರರಿಗೆ ಮನದಟ್ಟು ಮಾಡಿಕೊಡಬೇಕು. ಹಸಿರು ಶಕ್ತಿ ಯೋಜನೆಗಳಿಂದ ದೊಡ್ಡ ಲಾಭಗಳಿವೆ ಎಂಬ ಮಾತು ಮಾರುಕಟ್ಟೆಯಲ್ಲಿ ಸ್ಥಿರವಾಗಬೇಕು.

‘ಹಸಿರು ಶಕ್ತಿ’ ಉತ್ಪಾದನೆಯ ಯೋಜನೆ ಗಳಲ್ಲಿನ ಸಂಭಾವ್ಯ ಅಪಾಯಗಳನ್ನು ಗುರ್ತಿಸಿ, ಅವುಗಳ ನಿಯಂತ್ರಣ ಕ್ರಮಗಳ ಜವಾಬ್ದಾರಿ ಯನ್ನು ಯೋಜನೆಯಲ್ಲಿನ ಎಲ್ಲ ಪಾಲುದಾರ ದೇಶಗಳಿಗೆ ವಹಿಸಬೇಕಾಗಿದೆ. ಉದಾಹರಣೆಗೆ, ನಮ್ಮ ಯೋಜನೆಯೊಂದಕ್ಕೆ ಅಮೆರಿಕ ಬಂಡವಾಳ ಹೂಡಿತ್ತು ಎಂದಿಟ್ಟುಕೊಳ್ಳೋಣ. ಆ ಯೋಜನೆ ವಿಫಲವಾಗಿ ಅಪಾರ ಆಸ್ತಿ–ಜೀವ ನಷ್ಟವಾದರೆ, ಅದರ ಹೊಣೆಗಾರಿಕೆ ಭಾರತದೊಂದಿಗೆ ಅಮೆರಿಕದ್ದೂ ಆಗಿರಬೇಕು. ಎಲ್ಲಕ್ಕಿಂತ ಮೊದಲು, ಅಪಾಯ ಸ್ವೀಕರಿಸುವ ಮನೋಭಾವ ಬೆಳೆಯುವಂತೆ ಸಹಭಾಗಿತ್ವದ ದೇಶಗಳನ್ನು ಸಜ್ಜುಗೊಳಿಸಬೇಕು. ಯೋಜನೆಯ ಪ್ರಾರಂಭಕ್ಕೂ ಮುನ್ನ ಲಾಭಗಳ ಜೊತೆ ಜೊತೆಗೆ ಅಪಾಯಗಳನ್ನೂ ಎದುರಿಸುವ ಕುರಿತು ಆಳವಾದ ಚಿಂತನೆ ಅಗತ್ಯ. ಹೂಡಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರುತ್ತದೆ ಎಂಬ ಭರವಸೆಯನ್ನು ಮಾರುಕಟ್ಟೆಯಲ್ಲಿರುವ ವಹಿವಾಟುದಾರರಿಗೆ ಮನದಟ್ಟು ಮಾಡಿಕೊಡಬೇಕು.

ವಿದ್ಯುತ್ ಉತ್ಪಾದನೆ, ನಿರ್ವಹಣೆ ಮತ್ತು ಸಾಗಣೆಗಳಿಗೆಂದೇ ಹಲವು ನೀತಿ ನಿಬಂಧನೆಗಳಿವೆ. 2022ರ ‘ಶಕ್ತಿ ಸಂರಕ್ಷಣಾ ಕಾಯ್ದೆ’ಯು ಕಟ್ಟಡ, ಉದ್ಯಮ, ಉಪಕರಣ ಹಾಗೂ ವಾಹನಗಳು ಬಳಸುವ ವಿದ್ಯುತ್ನ ಪ್ರಮಾಣವನ್ನು ನಿಯಂತ್ರಿಸುವ ಕುರಿತು ಬೆಳಕು ಚೆಲ್ಲುತ್ತದೆ. ಕಾರ್ಬನ್ ಟ್ರೇಡಿಂಗ್ ಮತ್ತು ಕಟ್ಟಡ ಹಾಗೂ ಉದ್ಯಮಗಳಿಗಾಗಿ ‘ಶಕ್ತಿ ಸಂರಕ್ಷಣಾ ಕೋಡ್’ ನೀಡುವ ವ್ಯವಸ್ಥೆ ನಮ್ಮಲ್ಲಿದೆ. 2006ರ ರಾಷ್ಟ್ರೀಯ ದರ ನೀತಿಯು ನವೀಕರಿಸ ಬಹುದಾದ ಇಂಧನ ತಂತ್ರಜ್ಞಾನದ ಬೆಳವಣಿಗೆಗೆ ಸಹಾಯ ಮಾಡುತ್ತದೆ. 2017ರಲ್ಲಿ ಜಾರಿಗೆ ಬಂದ ಟೆಕ್ನಾಲಜಿ ಡೆವಲಪ್ಮೆಂಟ್ ಆ್ಯಂಡ್ ಇನ್ವೆಸ್ಟ್ಮೆಂಟ್ ಪ್ರಮೋಷನ್ (ಟಿಡಿಐಪಿ) ನೀತಿಯು ಇಂಧನ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಪುಷ್ಟಿ ನೀಡುತ್ತದೆ.

ಹೊಸದಾಗಿ ಜಾರಿಗೆ ಬಂದಿರುವ ‘ಇಂಟರ್ ಸ್ಟೇಟ್ ಟ್ರಾನ್ಸ್ಮಿಷನ್ ಸಿಸ್ಟಂ’ ಅಂತರರಾಜ್ಯ ವಿದ್ಯುತ್ ಸಾಗಣೆಯ ಮೇಲಿನ ಶುಲ್ಕವನ್ನು ತೆಗೆದು ಹಾಕಿರುವುದರಿಂದ, ನವೀಕರಿಸಬಹುದಾದ ಇಂಧನ ಉದ್ಯಮ ದೊಡ್ಡದಾಗಿ ತಲೆ ಎತ್ತುವ ಸೂಚನೆ ಇದೆ. ಸೌರ ಪಾರ್ಕ್ಗಳು ವಿಳಂಬವಿಲ್ಲದೆ ನಿರ್ಮಾಣವಾಗಬೇಕು. ಹಸಿರು ಜಲಜನಕದಿಂದ ಉತ್ಪಾದಿಸುವ ವಿದ್ಯುತ್ ಅನ್ನು ಗ್ರಿಡ್ಗೆ ಜೋಡಿಸಲು ಆದ್ಯತೆ ನೀಡಬೇಕು.

ಸರ್ಕಾರದ ನೀತಿ ಹಾಗೂ ಪ್ರೋತ್ಸಾಹದ ಕ್ರಮಗಳು ಬೃಹತ್ ಸೌರ ಪಾರ್ಕ್ಗಳಿಗೆ ಬಂಡವಾಳ ಹೂಡುವವರಲ್ಲಿ ಹುರುಪು ಮೂಡಿಸುತ್ತಿರುವುದು ನಿಜ. ಆರ್ಥಿಕ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿ, ಹವಾಮಾನ ವೈಪರೀತ್ಯಗಳ ನಿಯಂತ್ರಣ ಹಾಗೂ ಪುಟಿದೇಳುವ ಶಕ್ತಿಯ ಸಂಪಾದನೆ ಆಗುತ್ತದೆ. ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವ ನಿರ್ಧಾರ ದೃಢವಾಗಿದ್ದರೆ ಇಂಗಾಲದ ಹೆಜ್ಜೆಗುರುತುಗಳನ್ನು ಅರ್ಧದಷ್ಟು ಕಡಿಮೆಗೊಳಿಸಬಹುದು.

ಹಸಿರು ಶಕ್ತಿಯ ಹರಿಕಾರನಾಗಿ ಗುರ್ತಿಸಿಕೊಳ್ಳುವ ಮೂಲಕ ಇಂಧನ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆ ಸಾಧಿಸುವುದರೊಂದಿಗೆ, ಜಾಗತಿಕ ಮಟ್ಟದಲ್ಲಿ ಪರಿಸರಸ್ನೇಹಿ ಮಾದರಿಯೊಂದರ ಮುಂದಾಳತ್ವ ವಹಿಸಿದ ಕೀರ್ತಿಯೂ ಭಾರತದ್ದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.