ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಮೀಸಲು ಕ್ಷೇತ್ರ: ಒಳರಾಜಕಾರಣ

ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ, ತಳಕಚ್ಚಿದ ಮೂರನೇ ಶಕ್ತಿಗಳು
Published : 23 ಮೇ 2023, 0:00 IST
Last Updated : 23 ಮೇ 2023, 0:00 IST
ಫಾಲೋ ಮಾಡಿ
Comments

ಕರ್ನಾಟಕದ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ತಂದುಕೊಟ್ಟಿರುವುದು ಹಲವು ಸಂದೇಶಗಳನ್ನು ಹೊರಹಾಕಿದೆ. ಪರಿಶಿಷ್ಟ ಜಾತಿಗಳ 36 ಮೀಸಲು ಕ್ಷೇತ್ರಗಳ ಫಲಿತಾಂಶ ಈ ಸಂದೇಶಗಳ ಜೊತೆಗೆ ಮತ್ತಷ್ಟು ಒಳವಿವರಗಳನ್ನು ಒದಗಿಸುತ್ತದೆ.

ಮೀಸಲಾತಿಯ ಪ್ರಮಾಣ ಹೆಚ್ಚಳ, ಒಳಮೀಸಲಾತಿ ಶಿಫಾರಸು, ಬಂಜಾರ ಸಮುದಾಯದ ಪ್ರತಿಭಟನೆ, ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗಿರುವುದು, ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಕೆಲ ದಲಿತ ಸಂಘಟನೆಗಳ ಪ್ರಮುಖರು ಕಾಂಗ್ರೆಸ್ಸಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದು... ಹೀಗೆ ಅನೇಕ ಸಂಗತಿಗಳು ಎಸ್‌ಸಿ ಮೀಸಲು ಕ್ಷೇತ್ರಗಳ ಚುನಾವಣೆಯನ್ನು ಪ್ರಭಾವಿಸಿವೆ.

ಕಾಂಗ್ರೆಸ್‌ ಹಿಂದಿನ ಸಲ 13 ಮೀಸಲು ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಸಲ 21ಕ್ಕೆ ಏರಿದೆ. ಬಿಜೆಪಿ 17ರಿಂದ 12ಕ್ಕೆ, ಜೆಡಿಎಸ್ 6ರಿಂದ 3ಕ್ಕೆ ಕುಸಿದಿವೆ. ಕಾಂಗ್ರೆಸ್ ಗೆದ್ದ 21 ಕ್ಷೇತ್ರಗಳಲ್ಲಿ ಬಲಗೈ ಪ‍ಂಗಡದ 11, ಎಡಗೈ ಪಂಗಡದ 6, ಬೋವಿ ಸಮುದಾಯದ ಮೂವರು ಹಾಗೂ ಬಂಜಾರ ಸಮುದಾಯದ ಒಬ್ಬರು ಗೆದ್ದಿದ್ದಾರೆ. ಅದೇ ಬಿಜೆಪಿಯಲ್ಲಿ ಬಲಗೈನಿಂದ ಒಬ್ಬರು, ಎಡಗೈನ ಇಬ್ಬರು, ಬೋವಿ ಹಾಗೂ ಬಂಜಾರ ಸಮುದಾಯಗಳ ತಲಾ ನಾಲ್ವರು, ಇತರರಲ್ಲಿ ಒಬ್ಬ ಶಾಸಕರು ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಿಂದ ಬಲಗೈನ ಒಬ್ಬರು, ಬಂಜಾರ ಸಮುದಾಯದ ಇಬ್ಬರು ಗೆದ್ದಿದ್ದಾರೆ. ಅಸ್ಪೃಶ್ಯ ಜಾತಿಗಳ ನಡುವೆ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಿರುವುದನ್ನು ಗಮನಿಸಬಹುದು.

ಕೇಂದ್ರ ಸರ್ಕಾರಕ್ಕೆ ಒಳಮೀಸಲಾತಿಯ ಶಿಫಾರಸು ಮಾಡಿದ್ದು ಬಂಜಾರ ಸಮುದಾಯ ಬೀದಿಗೆ ಬರಲು ಕಾರಣವಾಯಿತು. ಆದರೆ ಬಂಜಾರ ಸಮುದಾಯದಿಂದ ಗೆದ್ದ ಏಳು ಶಾಸಕರಲ್ಲಿ ನಾಲ್ವರು ಬಿಜೆಪಿಯವರೇ ಆಗಿದ್ದಾರೆ. ಕಾಂಗ್ರೆಸ್ಸಿನಿಂದ ಐವರು ಸ್ಪರ್ಧಿಸಿದ್ದರೂ ಗೆದ್ದದ್ದು ಹಾವೇರಿಯ ರುದ್ರಪ್ಪ ಲಮಾಣಿ ಮಾತ್ರ. ಬೋವಿ ಸಮುದಾಯಕ್ಕೆ ಕಾಂಗ್ರೆಸ್ ಐದು ಹಾಗೂ ಬಿಜೆಪಿ ಆರು ಮಂದಿಗೆ ಟಿಕೆಟ್ ನೀಡಿದ್ದವು. ಕಾಂಗ್ರೆಸ್‌ನಿಂದ ಮೂವರು, ಬಿಜೆಪಿಯಿಂದ ನಾಲ್ವರು ಗೆದ್ದಿರುವುದು ಆ ಸಮುದಾಯದ ಸಂಘಟಿತ ಶಕ್ತಿ ಹಾಗೂ ಆರ್ಥಿಕ ಗಟ್ಟಿತನವನ್ನು ತೋರಿಸುತ್ತದೆ. ಈ ಸಲವೂ ಇಳಕಲ್ಲಿನ ಗ್ರಾನೈಟ್ ದೊರೆಗಳೇ ಲಿಂಗಸುಗೂರು, ಕನಕಗಿರಿಯಲ್ಲಿ ಹಿಡಿತ ಸಾಧಿಸಿದ್ದಾರೆ.

ಕಲ್ಯಾಣ ಕರ್ನಾಟಕವು ತಳವರ್ಗಗಳ ಜನಬಾಹುಳ್ಯ ಇರುವ ಪ್ರದೇಶ. ಇಲ್ಲಿನ ಎಂಟು ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವು ಒಂದು ಕ್ಷೇತ್ರದ ಟಿಕೆಟ್ಟನ್ನೂ ಮಾದಿಗರಿಗೆ ಕೊಡದೇ ಇದ್ದದ್ದು ಚರ್ಚೆಗೆ ಕಾರಣವಾಗಿತ್ತು. ಈ ಎಂಟರಲ್ಲಿ ಬಿಜೆಪಿ ಐದು ಸ್ಥಾನಗಳಲ್ಲಿ ಗೆದ್ದಿತು. ಕಾಂಗ್ರೆಸ್ ಗೆದ್ದದ್ದು ಎರಡರಲ್ಲಷ್ಟೆ. ಇಡೀ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಗೆದ್ದದ್ದೇ 10 ಕ್ಷೇತ್ರಗಳನ್ನು. ಆದರೆ ಆ 10ರಲ್ಲಿ ಐವರು ಎಸ್‌ಸಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ದಲಿತ ಮೀಸಲು ಕ್ಷೇತ್ರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಸಾಂಕೇತಿಕ ಎನಿಸಿಬಿಟ್ಟಿದೆ. ಈವರೆಗೂ ಒಬ್ಬರೋ ಇಬ್ಬರೋ ಗೆದ್ದರೆ ಹೆಚ್ಚು ಎನ್ನುವಂತೆ ಇತ್ತು. ಆದರೆ ಈ ಸಲ ರೂಪಾ ಶಶಿಧರ್, ನಯನಾ ಮೋಟಮ್ಮ, ಶಾರದಾ ಪೂರ್ಯಾನಾಯ್ಕ, ಭಾಗೀರಥಿ ಮುರುಳ್ಯ, ಮಂಜುಳಾ ಲಿಂಬಾವಳಿ ಸೇರಿ ಐವರು ಶಾಸನಸಭೆ ಪ್ರವೇಶಿಸಿದ್ದಾರೆ. ಸುಳ್ಯದ ಭಾಗೀರಥಿ ಮುರುಳ್ಯ ಅವರು ಆಶ್ರಯ ಮನೆಯಲ್ಲಿ ನೆಲೆಸಿರುವ ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಅವರದು ‘ಮನ್ಸ’ ಎಂದು ಗುರುತಿಸಲಾಗುವ ಅತ್ಯಂತ ಸಣ್ಣ ಪ್ರಮಾಣದ ಅಸ್ಪೃಶ್ಯ ಜಾತಿ. ಈ ‘ಮನ್ಸ’ ಎಂಬ ಜಾತಿ 101 ಜಾತಿಗಳ ಎಸ್‌ಸಿ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಆರು ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರವು ಮನ್ಸ ಜಾತಿಯ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಿದೆ ಎನ್ನುತ್ತಾರೆ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅಚ್ಚುತ ಮನ್ಸ.

ಜೆಡಿಎಸ್‌ನ ಬಲ ಕ್ಷೀಣಿಸಿದ್ದರಿಂದಾಗಿ ಬಹುತೇಕ ಕಡೆ ಕಾಂಗ್ರೆಸ್- ಬಿಜೆಪಿಯ ನಡುವೆಯೇ ಹಣಾಹಣಿ. ಹಾಗೆ ನೋಡಿದರೆ, ಈ ಸಲ ಚುನಾವಣಾ ಹೋರಾಟದಲ್ಲಿ ಕಣ್ಮರೆಯಾಗಿರುವುದು ಬಹುಜನ ಸಮಾಜ ಪಕ್ಷ. ದಲಿತರ ಅಸ್ಮಿತೆಯಾಗಿ ರೂಪುಗೊಂಡಿದ್ದ ಬಿಎಸ್‌ಪಿಗೆ ಈ ಸಲ ಮರ್ಯಾದೆ ಉಳಿಸಿದ್ದು- ಕಾಂಗ್ರೆಸ್ ಟಿಕೆಟ್ ಸಿಗದೆ ಬಿಎಸ್‌ಪಿ ಚಿಹ್ನೆಯಡಿ ಸ್ಪರ್ಧಿಸಿ 25 ಸಾವಿರ ವೋಟು ಪಡೆದ ಪುಲಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ ಮಾತ್ರ. ಉಳಿದೆಡೆ ಬಿಎಸ್‌ಪಿ ಹುರಿಯಾಳುಗಳು ಮೂರು ಸಾವಿರದೊಳಗೆ ಮತ ಪಡೆದಿದ್ದಾರೆ. ದಲಿತ ಸಂಘಟನೆಗಳ ಕಾಂಗ್ರೆಸ್ ಬೆಂಬಲಿಸುವ ನಿರ್ಣಯದ ಹೊಡೆತ ಬಿಎಸ್‌ಪಿಗೂ ಬಿದ್ದಂತಿದೆ. ದಲಿತ ಸಂಘಟನೆಗಳ ಜೊತೆಗಿನ ಮಾತುಕಥೆಯಲ್ಲಿ ಕಾಂಗ್ರೆಸ್ ಪಕ್ಷವು ಮಾದಿಗ ಸಮುದಾಯಕ್ಕೆ 14 ಟಿಕೆಟ್‌ಗಳನ್ನು ನೀಡುವುದಾಗಿ ಹೇಳಿತ್ತು. ಹಾಗೆಯೇ ಎಡ- ಬಲ ಗುಂಪಿನ ನಾಲ್ವರು ದಲಿತ ಚಳವಳಿಯ ಹೋರಾಟಗಾರರಿಗೆ ಟಿಕೆಟ್‌ ಕೊಡುವುದಾಗಿ ಒಪ್ಪಿತ್ತು. ಇದ್ಯಾವುದನ್ನೂ ಈಡೇರಿಸದಿದ್ದರೂ ದಲಿತ ಸಂಘಟನೆಗಳು ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಔದಾರ್ಯ ತೋರಿವೆ.

36 ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ನಾಲ್ಕು ಕಡೆ ‘ನೋಟಾ’ಕ್ಕೆ ಮೂರನೇ ಸ್ಥಾನ ದಕ್ಕಿದೆ. ಇಲ್ಲೆಲ್ಲ ನೋಟಾಕ್ಕೆ ದಕ್ಕಿರುವುದು ಸಾವಿರ ಚಿಲ್ಲರೆ ಮತ. ಜೆಡಿಎಸ್, ಬಿಎಸ್‌‍ಪಿ ಅಷ್ಟೂ ವೋಟು ಪಡೆಯದಿರುವುದು ನೋಟಾವನ್ನು 3ನೇ ಸ್ಥಾನಕ್ಕೆ ಏರಿಸಿದೆ. ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ದೊಡ್ಡ ಫಲಾನುಭವಿಯೇ ಆದರೂ, ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದು ರಾಯಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಲ್ಕನೇ ಸ್ಥಾನಕ್ಕೆ ಇಳಿಸಿದೆ.

ದಾವಣಗೆರೆ ಪಕ್ಕದ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಬೇಡಜಂಗಮ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ ಆರೋಪ ಎದುರಿಸುತ್ತಿರುವ ಪುಷ್ಪಾ ವಾಗೀಶಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸಿ 37,614 ಮತ ಗಳಿಸಿ ಎರಡನೇ ಸ್ಥಾನ ಪಡೆದಿರುವುದು ದಲಿತ ವಲಯಕ್ಕೆ ಆತಂಕದ ಬೆಳವಣಿಗೆ. ಪ್ರಬಲ ಜಾತಿಗಳ ಮತಗಳು ಈ ಪಕ್ಷೇತರ ಅಭ್ಯರ್ಥಿಯ ಪಾಲಾಗಿ ಬಿಜೆಪಿಯ ಅಭ್ಯರ್ಥಿ ಬಸವರಾಜ್ ನಾಯಕ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿವೆ.

ದಲಿತ- ಮುಸ್ಲಿಂ ಏಕತೆಯ ಹೆಸರಿನಲ್ಲಿ ಎಸ್‌ಡಿಪಿಐ, ಎಐಎಂಐಎಂ ಪಕ್ಷಗಳು ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತವೆ. ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕರನ್ನು ಹಿಂದಿಕ್ಕಿ ಎಐಎಂಐಎಂ ಮೂರನೇ ಸ್ಥಾನಕ್ಕೆ ಬಂದಿದೆ.

ಒಂದು ಸಾವಿರಕ್ಕೂ ಕಡಿಮೆ ಅಂತರದಲ್ಲಿ ಗೆಲುವು ನಿಶ್ಚಯವಾಗಿರುವುದು ಚಿಂಚೋಳಿ, ಮೂಡಿಗೆರೆಯಲ್ಲಿ. ಐದು ಸಾವಿರದೊಳಗಿನ ಅಂತರದಲ್ಲಿ ಹಡಗಲಿ, ರಾಯಭಾಗ, ಸಕಲೇಶಪುರ, ದೇವನಹಳ್ಳಿಯಲ್ಲಿ ಜಯ ಸಿಕ್ಕಿದೆ. ಇಲ್ಲೆಲ್ಲ ಸ್ವಲ್ಪ ಗಮನಹರಿಸಿ ಚುನಾವಣೆ ನಿಭಾಯಿಸಿದ್ದರೆ, ಸೋತವರು ಫಲಿತಾಂಶ ತಮ್ಮ ಕಡೆ ತಿರುಗುವಂತೆ ಮಾಡಿಕೊಳ್ಳಬಹುದಿತ್ತು.

2008ರಲ್ಲಿ ಪರಿಶಿಷ್ಟ ಜಾತಿಗಳ ಮೀಸಲು ಕ್ಷೇತ್ರಗಳ ಮರುವಿಂಗಡಣೆ ಆಯಿತು. ಆನಂತರ ಇದು ನಾಲ್ಕನೇ ಚುನಾವಣೆ. ಈ ನಾಲ್ಕೂ ಚುನಾವಣೆಗಳಲ್ಲಿ ಬಿಜೆಪಿಯು ಔರಾದ್, ರಾಯಭಾಗ, ಮಹದೇವಪುರ, ಸಿ.ವಿ.ರಾಮನ್ ನಗರ, ಸುಳ್ಯ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಚಿತ್ತಾಪುರದಲ್ಲಿ ಕಾಂಗ್ರೆಸ್ ಇದೇ ಸಾಧನೆ ಮಾಡಿದೆಯಾದರೂ ಮಧ್ಯದಲ್ಲೊಮ್ಮೆ ಉಪಚುನಾವಣೆಯಲ್ಲಿ ಸೋತಿತ್ತು. ದಲಿತ ಮುಖ್ಯಮಂತ್ರಿಯ ಸಾಧ್ಯತೆ ಚುನಾವಣಾ ವಿಷಯವೂ ಆಗದಿರುವುದು ಕರ್ನಾಟಕದ ಮಟ್ಟಿಗೆ ಈ ಹೊತ್ತಿನ ದುರಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT