ಭಾರತದ ಹಾಕಿ ಸುವರ್ಣ ಯುಗದಲ್ಲಿ ಕರ್ನಾಟಕದ ಹೊಳಪೂ ಸೇರಿಕೊಂಡಿತ್ತು. ಭಾರತೀಯ ಹಾಕಿಗೆ ಮಹತ್ವದ ಕೊಡುಗೆ ನೀಡಿರುವ ಕರ್ನಾಟಕ, ಈಗ ಹಾಕಿ ನಕಾಶೆಯಲ್ಲಿ ತನ್ನ ಸ್ಥಾನವನ್ನು ಒಡಿಶಾ ಹಾಗೂ ಬಿಹಾರಕ್ಕೆ ಬಿಟ್ಟುಕೊಟ್ಟಂತಿದೆ. ರಾಜ್ಯದ ಶ್ರೀಮಂತ ಹಾಕಿ ಪರಂಪರೆ ತನ್ನ ವೈಭವ ಕಳೆದುಕೊಂಡಿದೆ.

ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಗೆ ಸಂಬಂಧಿಸಿದ ಗೊಂದಲ ಮತ್ತು ವಿವಾದಗಳ ಮೂಲಕ ಸುದ್ದಿಯಲ್ಲಿರುವ ಬಿಹಾರದಲ್ಲಿ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡವು ಏಷ್ಯಾ ಕಪ್ ಎತ್ತಿಹಿಡಿದು ಸಂಭ್ರಮಿಸಿತು. ಇದರೊಂದಿಗೆ ತಂಡವು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಹಾಕಿ ಚಾಂಪಿಯನ್ಷಿಪ್ಗೂ ಅರ್ಹತೆ ಗಳಿಸಿತು.

ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ದೇಶದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಷಿಪ್ನಲ್ಲಿ ಭಾರತದ ಅಭಿಮಾನಿಗಳ 50 ವರ್ಷಗಳ ಕನಸು (ಭಾರತ ಕೊನೆಯದಾಗಿ ವಿಶ್ವಕಪ್ ಗೆದ್ದದ್ದು 1975ರಲ್ಲಿ) ಈಡೇರುವ ನಿರೀಕ್ಷೆ ಮೂಡಿದೆ. ಈ ಸಾಧನೆಗೆ ಹೆಮ್ಮೆಪಡುತ್ತಲೇ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳಿವೆ.

ಹಿಂದುಳಿದ ರಾಜ್ಯಗಳೆಂದು ಕರೆಸಿಕೊಳ್ಳುವ ಬಿಹಾರ ಮತ್ತು ಒಡಿಶಾ, ಪ್ರಸ್ತುತ ‘ರಾಷ್ಟ್ರೀಯ ಕ್ರೀಡೆ’ ಹಾಕಿಯ ಪುನರುತ್ಥಾನದಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಆದರೆ, ಈ ಕ್ರೀಡೆಯೊಂದಿಗೆ ಹಲವು ದಶಕಗಳ ನಂಟು ಹೊಂದಿರುವ ಕರ್ನಾಟಕದ ಹಾಕಿ ಇವತ್ತು ಏನಾಗಿದೆ ಎಂಬ ಪ್ರಶ್ನೆಯೂ ಕಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತ ತಂಡದಲ್ಲಿ ಕನ್ನಡಿಗರ ಆಟ ನೋಡಲು ಸಾಧ್ಯವೇ ಆಗಿಲ್ಲ. ಇತ್ತೀಚೆಗೆ ಮುಗಿದ ಏಷ್ಯಾ ಚಾಂಪಿಯನ್ಷಿಪ್ ಕೂಡ ಅದಕ್ಕೆ ಹೊರತಲ್ಲ. ದಶಕಗಳ ಹಿಂದೆ ಭಾರತದ ಹಾಕಿಯ ‘ಸ್ವರ್ಣಯುಗ’ದಲ್ಲಿ ಕನ್ನಡಿಗರ ಕಾಣಿಕೆಯೂ ಇತ್ತು. ಆದರೆ, ಈಗ ಏಕೆ ಬರಗಾಲ?

ಹಾಕಿ ಆಟದ ಬೇರುಮಟ್ಟದಿಂದ ಉನ್ನತ ಮಟ್ಟದವರೆಗಿನ ಬೆಳವಣಿಗೆಗೆ ಬೇಕಾದ ಕ್ರಾಂತಿ ಕಾರಕ ಹೆಜ್ಜೆಗಳನ್ನು ಇಡುವಲ್ಲಿ ಕರ್ನಾಟಕ ಹಿಂದುಳಿದಿರುವುದು ಇದಕ್ಕೆ ಕಾರಣ. ಒಡಿಶಾ ಮತ್ತು ಈಗ ಬಿಹಾರ ಅನುಸರಿಸುತ್ತಿರುವ ನೀತಿಗಳು ಕರ್ನಾಟಕದಲ್ಲಿ ಇಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯವೂ ಕರ್ನಾಟಕ ದಲ್ಲಿ ಹಾಕಿ ಪ್ರಗತಿ ಕುಂಠಿತಕ್ಕೆ ಪ್ರಮುಖ ಕಾರಣ.

ರಾಜ್ಯ ಸರ್ಕಾರವೊಂದು ಮನಸ್ಸು ಮಾಡಿದರೆ ಕ್ರೀಡೆಯನ್ನು ಎಷ್ಟು ಉನ್ನತ ಮಟ್ಟಕ್ಕೇರಿಸಬಹುದು ಎಂಬುದಕ್ಕೆ ಉದಾಹರಣೆಯಂತೆ, ದೇಶದ ‘ಹಾಕಿ ರಾಜಧಾನಿ’ಯಾಗಿ ಒಡಿಶಾ ಕಂಗೊಳಿಸುತ್ತಿದೆ. ಎರಡು ವರ್ಷಗಳ ಹಿಂದೆ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ವಿಶ್ವಕಪ್ ಹಾಕಿ ಆಯೋಜಿಸಿತ್ತು. ಎಫ್ಐಎಚ್ ಪ್ರೊ ಲೀಗ್ ಟೂರ್ನಿಗಳನ್ನು ಆಯೋಜಿಸಿದೆ. ಅಷ್ಟೇ ಅಲ್ಲ. 2018ರಿಂದಲೇ ಭಾರತ ತಂಡಕ್ಕೆ ಒಡಿಶಾ ಸರ್ಕಾರವು ಪ್ರಾಯೋಜಕತ್ವ ನೀಡುತ್ತಿದೆ. ಆಗಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರವು ಅಲ್ಲಿಯ ಆದಿವಾಸಿ ಹಾಡಿಗಳಲ್ಲಿದ್ದ ಪ್ರತಿಭೆಗಳನ್ನು ಹುಡುಕಿ ಮುನ್ನೆಲೆಗೆ ತಂದಿದೆ. ಅವರಲ್ಲಿ ಅನೇಕರು ಪ್ರಸ್ತುತ ಅಂತರರಾಷ್ಟ್ರೀಯ ಆಟಗಾರರಾಗಿದ್ದಾರೆ. ಅಲ್ಲಿಯವರೇ ಆದ ದಿಲೀಪ್ ಟಿರ್ಕಿ ಅವರು ಹಾಕಿ ಇಂಡಿಯಾ ಅಧ್ಯಕ್ಷರಾಗಿರುವುದೂ ಒಡಿಶಾಕ್ಕೆ ವರದಾನವಾಗಿದೆ.

ಈಗ ಬಿಹಾರ ಕೂಡ ಅದೇ ಹಾದಿಯಲ್ಲಿದೆ. ಅಲ್ಲಿಯ ನಳಂದ ವಿಶ್ವವಿದ್ಯಾಲಯದ 90 ಎಕರೆ ಜಾಗದಲ್ಲಿ 17 ಕ್ರೀಡೆಗಳಿಗಾಗಿ ಮೂಲಸೌಲಭ್ಯಗಳು ಅಭಿವೃದ್ಧಿಯಾಗುತ್ತಿವೆ; ಎರಡು ಹಾಕಿ ಟರ್ಫ್ ಮೈದಾನಗಳು ಮತ್ತು ಕ್ರಿಕೆಟ್ ಕ್ರೀಡಾಂಗಣನಿರ್ಮಾಣಗೊಳ್ಳುತ್ತಿವೆ. ‘ಪಿರಮಿಡ್’ ಮಾದರಿಯಲ್ಲಿ ಉನ್ನತಮಟ್ಟದಲ್ಲಿ ಆದ ಅಭಿವೃದ್ಧಿಯ ಪ್ರಭಾವವು ತಳಮಟ್ಟದವರೆಗೆ ಪಸರಿಸುತ್ತಿದೆ.

ಬಿಹಾರದ ಗ್ರಾಮೀಣ ಭಾಗಗಳ ಮಕ್ಕಳು ಕ್ರೀಡೆಗಳತ್ತ, ಅದರಲ್ಲೂ ಹಾಕಿ ಆಟದತ್ತ ಆಸಕ್ತಿ ತೋರುತ್ತಿದ್ದಾರೆ. ಅವರಿಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಉಚಿತ ಕ್ರೀಡಾ ವಸತಿ ನಿಲಯಗಳು, ಮೈದಾನಗಳು ಮತ್ತು ತರಬೇತಿ ಸೌಲಭ್ಯಗಳು ಅಭಿವೃದ್ಧಿಯಾಗುತ್ತಿವೆ. ಈಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದವರು ಗ್ರಾಮಾಂತರ ಕೇಂದ್ರಗಳಲ್ಲಿ ಹಾಕಿ ತರಬೇತಿ ಪಡೆಯುತ್ತಿರುವ ಮಕ್ಕಳೇ ಆಗಿದ್ದರು. ಅವರಿಗೆ ಒಲಿಂಪಿಯನ್ ಆಟಗಾರರೊಂದಿಗೆ ಒಡನಾಡುವ ಅವಕಾಶ ಸಿಕ್ಕಿತು. ಮುಂದೊಂದು ದಿನ ಆ ಮಕ್ಕಳಲ್ಲಿಯೇ ಕೆಲವರು ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಲು ಇದು ಪ್ರೇರಣೆಯಾಗಬಹುದು ಎಂದು ಬಿಹಾರ ಕ್ರೀಡಾ ಪ್ರಾಧಿಕಾರದ ಮುಖ್ಯಸ್ಥ ರವೀಂದ್ರನ್ ಶಂಕರನ್ ಅಭಿಪ್ರಾಯಪಡುತ್ತಾರೆ. ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿಯಾಗಿರುವ ರವೀಂದ್ರನ್, 2022ರಿಂದ ಬಿಹಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕ್ರಿಯಾಶೀಲ ಯೋಜನೆಗಳಿಂದಾಗಿ ಬಿಹಾರದ ಕ್ರೀಡೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.

ಒಡಿಶಾ ಮತ್ತು ಬಿಹಾರಕ್ಕಿಂತಲೂ ಹಾಕಿ ಕ್ರೀಡೆಯೊಂದಿಗೆ ಅತ್ಯಂತ ಹಳೆಯ ಚಾರಿತ್ರಿಕ ನಂಟು ಹೊಂದಿರುವ ರಾಜ್ಯ ಕರ್ನಾಟಕ. 1964ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದಲ್ಲಿ ಬೆಳಗಾವಿಯ ಬಂಡು ಪಾಟೀಲ, 1972ರಲ್ಲಿ ಮ್ಯೂನಿಕ್ ಒಲಿಂಪಿಕ್ಸ್ನಲ್ಲಿ ಕಂಚು ಜಯಿಸಿದ್ದ ಬಳಗದಲ್ಲಿ ಕೊಡಗಿನ ಎಂ.ಪಿ. ಗಣೇಶ್, ಬಿ.ಪಿ. ಗೋವಿಂದ ಹಾಗೂ 1980ರಲ್ಲಿ ಚಿನ್ನ ಗೆದ್ದ ಬಳಗದಲ್ಲಿ ಎಂ.ಎಂ. ಸೋಮಯ್ಯ ಇದ್ದರು. 1975ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಬಿ.ಪಿ. ಗೋವಿಂದ ಮತ್ತು ಪಿ.ಇ. ಕಾಳಯ್ಯ ಆಡಿದ್ದರು. ನಂತರವೂ ಭಾರತದ ಹಾಕಿ ಕ್ರೀಡೆಗೆ ಕರ್ನಾಟಕ ಕೊಡುಗೆ ಕೊಟ್ಟಿದೆ. ಎ.ಬಿ. ಸುಬ್ಬಯ್ಯ, ಸಿ. ಪೂಣಚ್ಚ, ರವಿ ನಾಯ್ಕರ್, ಆಶಿಶ್ ಬಲ್ಲಾಳ, ಜ್ಯೂಡ್ ಫೆಲಿಕ್ಸ್, ಅರ್ಜುನ್ ಹಾಲಪ್ಪ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಭಾರತ ತಂಡವು 2008ರಲ್ಲಿ ಒಲಿಂಪಿಕ್ ಅರ್ಹತೆಯನ್ನು ಗಿಟ್ಟಿಸಿರಲಿಲ್ಲ. 2012ರ ಲಂಡನ್ ಒಲಿಂಪಿಕ್ ಕೂಟದಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ಎಸ್.ವಿ. ಸುನೀಲ್, ವಿ.ಆರ್. ರಘುನಾಥ್, ಭರತ್ ಚೆಟ್ರಿ ಅವರ ಆಟವೇ ಪ್ರಮುಖವಾಗಿತ್ತು. ಅಂದು ಆರಂಭವಾದ ಪುನರುತ್ಥಾನದ ಫಲ ಟೋಕಿಯೊ ಒಲಿಂಪಿಕ್ಸ್ನಲ್ಲಿ ಲಭಿಸಿತು.

ಕಳೆದ ಎರಡು ದಶಕಗಳಿಂದ, ಭಾರತದ ಹಾಕಿ ತಂಡಗಳು ಒಲಿಂಪಿಕ್ಸ್ ಮತ್ತು ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸುವ ಮುನ್ನ ತರಬೇತಿ ಮತ್ತು ಅಭ್ಯಾಸ ನಡೆಸುವುದು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ (ಎಸ್ಎಐ) ವಸತಿ ನಿಲಯದಲ್ಲಿ ಎಂಬುದು ಗಮನಾರ್ಹ. ಆಹ್ಲಾದಕರ ಹವಾಮಾನ ಮತ್ತು ಆಹಾರ ವೈವಿಧ್ಯದಿಂದಾಗಿ ಹಾಕಿ ತಂಡಗಳು ಬೆಂಗಳೂರಿನಲ್ಲಿ ಇರಲು ಇಷ್ಟಪಡುತ್ತವೆ.

ಇಷ್ಟೆಲ್ಲ ಇದ್ದರೂ ಬೆಂಗಳೂರಿನಲ್ಲಿ ಅಂತರ ರಾಷ್ಟ್ರೀಯ ಹಾಕಿ ಪಂದ್ಯ ನಡೆದು 28 ವರ್ಷಗಳು ಉರುಳಿಹೋಗಿವೆ. 1997ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ‘ಸ್ನೇಹಪರ ಪಂದ್ಯ’ ನಡೆದಿದ್ದೇ ಕೊನೆಯದು ಎಂದು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್ಎಚ್ಎ) ಪದಾಧಿಕಾರಿ ಕೃಷ್ಣಮೂರ್ತಿ ನೆನಪಿಸಿಕೊಳ್ಳುತ್ತಾರೆ.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) ನಿಯಮಗಳ ಪ್ರಕಾರ, ಸೌಲಭ್ಯಗಳಿ ರುವ ಕ್ರೀಡಾಂಗಣ ನಿರ್ಮಿಸಬೇಕಾದ ಅಗತ್ಯ ಇದೆ. ಈಗ ರಾಜ್ಯದಲ್ಲಿರುವ ಕ್ರೀಡಾಂಗಣಗಳು ಎಫ್ಐಎಚ್ ಮಾನದಂಡಗಳಿಗೆ ಹೊಂದಾಣಿಕೆಯಾಗುವು ದಿಲ್ಲ. ಆದ್ದರಿಂದ ಈಗಿರುವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಬೇಕು ಇಲ್ಲವೇ ಹೊಸದನ್ನು ನಿರ್ಮಿಸಬೇಕು ಎಂದೂ ಅವರು ಹೇಳುತ್ತಾರೆ.

ಕರ್ನಾಟಕದ ಹಾಕಿ ಅಂಗಳಕ್ಕೆ ಹೆಚ್ಚು ಆಟಗಾರರು ಬಂದಿರುವುದು ಕೊಡಗು, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ ಹಾಗೂ ಗದುಗಿನಿಂದ. ಹುಬ್ಬಳ್ಳಿ, ಬಾಗಲಕೋಟೆ ಮತ್ತು ಗದುಗಿನ ಸೆಟ್ಲಮೆಂಟ್ ಪ್ರದೇಶಗಳು ಹಾಕಿ ಕಣಜಗಳೇ ಆಗಿದ್ದವು. ಗದುಗಿನ ಬೇನು ಬಾಳು ಭಾಟ್, ಎಚ್.ವೈ. ಸಿದ್ಲಿಂಗ್, ರಾಚಯ್ಯ, ಮಾಣಿಕ್ ಭಾಟ್, ಸಿದ್ಧಪ್ಪ ಬಾಲೆಹೊಸೂರು, ಎಚ್.ಬಿ. ವೀರಾಪುರ, ಜಾಕ್ಸನ್ ಭಾಟ್, ಕೆ.ಆರ್. ಹಬೀಬ್, ಕಾರ್ಲಟನ್ ಗೋಮ್ಸ್ ರಾಷ್ಟ್ರಮಟ್ಟ ದಲ್ಲಿ ಆಡಿರುವವರು. ರಾಜು ಬಗಾಡೆ 90ರ ದಶಕದಲ್ಲಿ ಬೆಂಗಳೂರಿನ ಕ್ರೀಡಾ ಹಾಸ್ಟೆಲ್ನಲ್ಲಿ ಕೆಲವು ವರ್ಷ ಆಡಿದ್ದರು. ಈಚೆಗೆ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿದ್ದ ಹರೀಶ ಮುತಗಾರ ಗದುಗಿನವರು.

‘ರಾಜ್ಯದಲ್ಲಿ ಹಾಕಿ ಅಥವಾ ಯಾವುದೇ ಕ್ರೀಡೆಯಾಗಲಿ ಒಂದು ಜಿಲ್ಲೆ ಅಥವಾ ನಗರಕ್ಕೆ ಸೀಮಿತವಾಗಬಾರದು. ಪ್ರತಿ ಜಿಲ್ಲೆಗೊಂದರಂತೆ ವಸತಿ ನಿಲಯ ಇರಬೇಕು. ಅದರಲ್ಲೂ ಹಾಕಿ ಆಟಕ್ಕೆ ಹುಬ್ಬಳ್ಳಿ, ಧಾರವಾಡದಂತಹ ಊರಿನಲ್ಲಿ ಹಾಸ್ಟೆಲ್ ಇಲ್ಲದಿರುವುದು ವಿಪರ್ಯಾಸ. ಇದ್ದ ರಾಜ್ಯ ವಸತಿ ನಿಲಯವು 1991ರಲ್ಲಿ ಬಂದ್ ಆಗಿತ್ತು. ಇಲ್ಲಿ ಆಸ್ಟ್ರೋ ಟರ್ಫ್ ಕೂಡ ಇಲ್ಲ. ಗದಗ ಮತ್ತು ಬಳ್ಳಾರಿಯಲ್ಲಿ ಮಾತ್ರ ಟರ್ಫ್ ಆಗಿವೆ. ಸ್ಥಳೀಯ ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈ ಕುರಿತ ಮನವಿ ಪತ್ರಗಳನ್ನು ಹಲವು ಬಾರಿ ಸಲ್ಲಿಸಿದ್ದೇವೆ. ಪ್ರತಿಫಲ ಇಲ್ಲ’ ಎಂದು ಧಾರವಾಡದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿಯ ಸಂಚಾಲಕರೂ ಆದ ನಿವೃತ್ತ ಹಾಕಿ ಕೋಚ್ ಪುಲಿಕೇಶಿ ಶೆಟ್ಟೆಪ್ಪನವರ ಬೇಸರ ವ್ಯಕ್ತಪಡಿಸು ತ್ತಾರೆ.

ರಾಜ್ಯದಲ್ಲಿ ಇರುವ ಮೂಲಸೌಲಭ್ಯಗಳು ಸಾಲದು. ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶ ಗಳಲ್ಲಿರುವ ಪ್ರತಿಭಾವಂತರನ್ನು ಶೋಧಿಸುವ ಕೆಲಸ ಮಾಡಬೇಕು, ಪ್ರತಿ ಜಿಲ್ಲಾ ಕೇಂದ್ರಕ್ಕೂ ಸುಸಜ್ಜಿತ ಕ್ರೀಡಾಂಗಣ ಇರಬೇಕು ಎಂದು ‘ಹಾಕಿ ಕರ್ನಾಟಕ’ದ ಮಹಾಪ್ರಧಾನ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಹೇಳುತ್ತಾರೆ. ಈ ಕುರಿತು ಸರ್ಕಾರವನ್ನು ಒತ್ತಾಯಿಸಿ ರುವುದಾಗಿಯೂ ಅವರು ಹೇಳುತ್ತಾರೆ. ಆದರೆ, ಪ್ರತಿಫಲ ಶೂನ್ಯ.

ದಶಕಗಳ ಹಿಂದೆ ಪಂಜಾಬ್ ಮತ್ತು ಹರಿಯಾಣ ದೊಂದಿಗೆ ಕರ್ನಾಟಕದ ಹಾಕಿ ಪಟುಗಳು ಪೈಪೋಟಿ ನಡೆಸಬೇಕಿತ್ತು. ಈಗ ಆ ಸಾಲಿಗೆ ಒಡಿಶಾ, ಬಿಹಾರ ಸೇರಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಜ್ಯಗಳ ಸ್ಪರ್ಧೆಯೂ ಎದುರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.