ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಿನಿಮಾ ಸಂಸ್ಕೃತಿಗೆ ಬೇಕು ಆದ್ಯತೆ

ಹೊಸ ಪೀಳಿಗೆಯ ಸಲುವಾಗಿ ಕನ್ನಡ ಸಿನಿಮೋತ್ಸವಗಳು ನಿಯತವಾಗಿ ನಡೆಯಬೇಕು
ಬರಗೂರು ರಾಮಚಂದ್ರಪ್ಪ
Published 29 ಫೆಬ್ರುವರಿ 2024, 22:30 IST
Last Updated 29 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಕನ್ನಡ ವಾಕ್ಚಿತ್ರಕ್ಕೆ ತೊಂಬತ್ತು ವರ್ಷಗಳಾಗುತ್ತಿರುವುದು ಒಂದು ವಿಶೇಷ. ಇದು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಿನಿಮಾ ಸಂಸ್ಕೃತಿಗಳನ್ನು ಒಟ್ಟಿಗೆ ನೆನಪಿಸುವ ಸಂದರ್ಭ. ‘ಅಂತರರಾಷ್ಟ್ರೀಯ’ ಎಂಬ ಆಕರ್ಷಣೆಯಲ್ಲಿ ‘ಸ್ಥಳೀಯ’ವನ್ನು ಮರೆಯಬಾರದೆನ್ನುವ ಜಾಗೃತಿಯ ಸಂಕೇತವಾಗಿಯೂ ಈ ಸಂದರ್ಭವನ್ನು ಗಮನಿಸಬಹುದು. ಹಾಗೆ ನೋಡಿದರೆ, ನಾವು ಯಾವುದನ್ನು ‘ಅಂತರರಾಷ್ಟ್ರೀಯ’ ಎಂದು ಕರೆಯುತ್ತೇವೋ ಆ ಸಿನಿಮಾಗಳೆಲ್ಲ ಆಯಾ ದೇಶಗಳಲ್ಲಿ ‘ಸ್ಥಳೀಯ’ವೇ ಆಗಿರುತ್ತವೆ. ಸ್ಥಳೀಯ ಸಿನಿಮಾಗಳೇ ಬೇರೆ ದೇಶದ ‘ಉತ್ಸವ’ಗಳ ಭಾಗವಾದಾಗ ‘ಅಂತರರಾಷ್ಟ್ರೀಯ’ ಆಗುತ್ತವೆ!

ಯಾವುದೇ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳನ್ನು ಉತ್ತಮವಾದವುಗಳೆಂದು ಆಯ್ಕೆ ಮಾಡಲಾಗಿರುತ್ತದೆ. ಅಂದರೆ ‘ಆಯ್ಕೆಯ ಮಾನದಂಡ’ದಲ್ಲಿ ಆ ಸಿನಿಮಾಗಳು ಆಯಾ ದೇಶದ ಪ್ರಾತಿನಿಧಿಕ ಕೃತಿಗಳಾಗಿರುತ್ತವೆ. ಆದರೆ ಆಯಾ ದೇಶಗಳ ಸಿನಿಮಾಗಳೆಲ್ಲ ಇದೇ ರೀತಿಯ ಗುಣಮಟ್ಟವನ್ನು ಹೊಂದಿರುತ್ತವೆಯೆಂದೇನೂ ಅಲ್ಲ, ಅಲ್ಲಿಯೂ ನಮ್ಮಲ್ಲಿ ಇರುವಂತೆ ಉತ್ತಮ ಹಾಗೂ ಉತ್ತಮವಲ್ಲದ ಸಿನಿಮಾಗಳೂ ಇರುತ್ತವೆ. ಅಷ್ಟೇಕೆ, ಚಿತ್ರೋತ್ಸವಕ್ಕೆ ಆಯ್ಕೆಯಾದ ಸಿನಿಮಾಗಳಲ್ಲಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗದೆ ಇರುವ ಕೆಲವು ಸಿನಿಮಾಗಳೂ ಇರಬಹುದು.

ಇಷ್ಟಾಗಿಯೂ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ವಿವಿಧ ದೇಶದ ಸಿನಿಮಾ ಮಾದರಿಗಳನ್ನಂತೂ ಪರಿಚಯಿಸುತ್ತವೆ. ಹೀಗೆ ಪರಿಚಯ ಮಾಡಿಕೊಳ್ಳುವುದು ಪ್ರೇಕ್ಷಕರ ಪ್ರತಿಷ್ಠೆಯ ವಿಷಯವಾಗಬಾರದು. ನಮ್ಮ ಕನ್ನಡ ಸಿನಿಮಾಗಳ ವೀಕ್ಷಣೆಯಂತೆಯೇ ಬೇರೆ ದೇಶದ ಸಿನಿಮಾಗಳನ್ನೂ ನೋಡುವ ಮನಃಸ್ಥಿತಿ ಮುಖ್ಯ. ಇಲ್ಲವಾದರೆ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಾಣಿಸಿಕೊಳ್ಳುವುದು, ನೋಡುವುದು ಸಹಜ ಸಂಭ್ರಮವಾಗದೆ, ವ್ಯಕ್ತಿ ಪ್ರತಿಷ್ಠೆಯ ಭ್ರಮೆಗಳಿಗೂ ಕಾರಣವಾಗಬಹುದು.

ಕನ್ನಡದಂತೆಯೇ ಅಲ್ಲಿಯೂ ಒಂದು ಸಿನಿಮಾ ನೋಡುತ್ತೇವೆಂಬ ಸಹಜ ಸ್ವಬಾವವಿದ್ದರೆ ಮಾತ್ರ ವೀಕ್ಷಣೆ ಮತ್ತು ವಿಮರ್ಶೆಗೆ ಬೇಕಾದ ‘ಪೂರ್ವಗ್ರಹ ಪ್ರತಿಷ್ಠೆ’ ಇಲ್ಲದ ಮಾನಸಿಕತೆ ಸಾಧ್ಯವಾಗುತ್ತದೆ. ‘ಸ್ಥಳೀಯ’ ಮತ್ತು ‘ಅಂತರರಾಷ್ಟ್ರೀಯ’ಗಳ ನೈಜ ಸಂಬಂಧ ಬೆಸೆಯುತ್ತದೆ.

ಜನಮಾಧ್ಯಮವಾಗಿರುವ ಸಿನಿಮಾದ ಸೃಷ್ಟಿ ಸ್ವರೂಪವೇ ವಿಶಿಷ್ಟವಾದುದು. ಸಿನಿಮಾ–ಒಂದು ಒಕ್ಕೂಟ ಕಲೆ (ಫೆಡರಲ್‌ ಆರ್ಟ್‌). ನಮ್ಮ ದೇಶದಲ್ಲಿ ಪ್ರತಿ ರಾಜ್ಯಕ್ಕೂ ತನ್ನದೇ ಆದ ಅಸ್ತಿತ್ವವಿದ್ದು, ಅವುಗಳೆಲ್ಲ ಒಂದಾಗಿ ಒಕ್ಕೂಟ ರಾಜ್ಯವಾದಂತೆ, ಸಿನಿಮಾವು ವಿವಿಧ ಕಲಾ ಪ್ರಕಾರಗಳೊಂದಾದ ‘ಒಕ್ಕೂಟ ಕಲೆ’ಯಾಗಿದೆ. ಸಿನಿಮಾವು ಸಾಹಿತ್ಯ, ಸಂಗೀತ, ಛಾಯಾಗ್ರಹಣ, ಸಂಕಲನ, ಅಭಿನಯ, ಮೇಕಪ್, ವಸ್ತ್ರವಿನ್ಯಾಸ, ಕಲಾವಿನ್ಯಾಸ, ಅಗತ್ಯವಿದ್ದಾಗ ನೃತ್ಯ ಸಂಯೋಜನೆ ಮತ್ತು ಸಾಹಸ ಸಂಯೋಜನೆ- ಹೀಗೆ ವಿವಿಧ ಕಲಾ ಪ್ರಕಾರಗಳಿಗೆ ತಮ್ಮದೇ ಸ್ವತಂತ್ರ ಅಸ್ತಿತ್ವವಿದ್ದೂ ಸಿನಿಮಾ ಸೃಷ್ಟಿಯಲ್ಲಿ ‘ನಿರ್ದೇಶನ’ದ ಆಶಯಕ್ಕನುಗುಣವಾಗಿ ಒಂದಾಗುತ್ತವೆ. ನಮ್ಮ ದೇಶಕ್ಕೆ ಅನ್ವಯಿಸುವ ‘ವಿವಿಧತೆಯಲ್ಲಿ ಏಕತೆ’ ಎಂಬ ಉಕ್ತಿಯು ಸಿನಿಮಾ ಸೃಷ್ಟಿಗೂ ಹೊಂದಿಕೊಳ್ಳುತ್ತದೆ.

ಶ್ರಮ ಮತ್ತು ಸೃಜನಶೀಲತೆ ಒಂದಾಗಿರುವುದು ಸಿನಿಮಾ ಸೃಷ್ಟಿಯ ಇನ್ನೊಂದು ವಿಶೇಷ. ಇಲ್ಲಿ ಲೈಟ್ ಬಾಯ್ಸ್, ಪ್ರೊಡಕ್ಷನ್ ಬಾಯ್ಸ್‌ನಂತಹ ಶ್ರಮಜೀವಿಗಳು ಇರುತ್ತಾರೆ. ಸೃಜನಶೀಲ ಕ್ಷೇತ್ರದವರೂ ಇರುತ್ತಾರೆ. ಶ್ರಮಜೀವಿಗಳ ಸಹಕಾರವಿಲ್ಲದೆ ಸೃಜನಶೀಲತೆ ಪೂರ್ಣಗೊಳ್ಳುವುದಿಲ್ಲ, ಅಂತೆಯೇ ಸಿನಿಮಾದಲ್ಲಿ ತಂತ್ರಜ್ಞಾನವೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗೆ ವೈರುಧ್ಯಗಳನ್ನು ಒಂದಾಗಿಸಿಕೊಂಡು ರೂಪುಗೊಳ್ಳುವ ಸಿನಿಮಾ, ಉದ್ಯಮದ ಒತ್ತಾಸೆಗಳನ್ನೂ ಒಳಗೊಂಡಿದೆ.

ನನ್ನ ದೃಷ್ಟಿಯಲ್ಲಿ ಸಿನಿಮಾ ಎನ್ನುವುದು ಒಂದು ‘ಕಲೋದ್ಯಮ’. ಇದು ಕಲೆಯೂ ಹೌದು, ಬಂಡವಾಳ ತೊಡಗಿಸುವಿಕೆಯು ಅನಿವಾರ್ಯವಾದ್ದರಿಂದ ‘ಉದ್ಯಮ’ವೂ ಹೌದು. ಉದ್ಯಮಕ್ಕೆ ‘ಸಂಪಾದನೆ’ ಮುಖ್ಯ, ಕಲೆಗೆ ‘ಸಂವೇದನೆ’ ಮುಖ್ಯ. ಸಂಪಾದನೆ ಮತ್ತು ಸಂವೇದನೆಗಳೊಂದಾಗುವ ಬಿಕ್ಕಟ್ಟನ್ನು ಎದುರಿಸಿ ಉತ್ತಮವಾದದ್ದನ್ನು ಕೊಡುವುದು ಒಂದು ಸವಾಲೂ ಹೌದು. ಕನ್ನಡ ಚಿತ್ರರಂಗವು ಈ ಬಿಕ್ಕಟ್ಟನ್ನು ಎದುರಿಸಿ ತನ್ನದೇ ಮಾದರಿಗಳ ಮೂಲಕ ಅಭಿವ್ಯಕ್ತಗೊಂಡಿದೆ.

ಉದ್ಯಮದ ಆಶಯಗಳು ಪ್ರಧಾನವಾದ ‘ಮುಖ್ಯವಾಹಿನಿ’ ಸಿನಿಮಾಗಳು ಕಲೆಗೆ ಜನಪ್ರಿಯ ಸ್ವರೂಪವನ್ನು ತಂದುಕೊಂಡರೆ, ಕಲೆಯ ಆಶಯವು ಪ್ರಧಾನವಾದ ‘ಪ್ರಯೋಗಾತ್ಮಕ’ ಸಿನಿಮಾಗಳು ಪರ್ಯಾಯ ಕಲಾವಿನ್ಯಾಸವನ್ನು ತೆರೆದಿಟ್ಟಿವೆ. ಎರಡೂ ಮಾದರಿಗಳು ನಮ್ಮ ಚಿತ್ರಜಗತ್ತನ್ನು ತಂತಮ್ಮ ವಿಧಾನದಲ್ಲಿ ಜೀವಂತವಾಗಿಟ್ಟಿವೆ.

ಕನ್ನಡವನ್ನೂ ಒಳಗೊಂಡಂತೆ ಜಾಗತಿಕ ಸಿನಿಮಾದ ಆರಂಭಿಕ ಕಥನಗಳು ಪುರಾಣಕಾವ್ಯ ಹಾಗೂ ಐತಿಹ್ಯಗಳನ್ನು ಒಳಗೊಂಡಿವೆ. ಇದಕ್ಕೆ ಹಾಲಿವುಡ್‍ನವರು ಕೊಟ್ಟ ಸಮರ್ಥನೆಯೆಂದರೆ, ಪುರಾಣ ಮೂಲ ಕಥನಗಳು ‘ಸಾಬೀತಾದ ಸಾಮಗ್ರಿ’ ಎಂಬುದು. ಈಗಾಗಲೇ ಜನಮಾನಸದಲ್ಲಿ ನೆಲೆಗೊಂಡ ಪುರಾಣ ಕಥನಗಳು ಜನಪ್ರಿಯವೂ ಲಾಭದಾಯಕವೂ ಆಗಿರುತ್ತವೆಯೆಂಬ ಭರವಸೆಯು ನಿರ್ಮಾಪಕರಲ್ಲಿತ್ತು.

1934ರಲ್ಲಿ ಬಿಡುಗಡೆಗೊಂಡ ‘ಸತಿ ಸುಲೋಚನ’ದಿಂದ ಆರಂಭವಾದ ಕನ್ನಡ ವಾಕ್ಚಿತ್ರವು ಕಡೇಪಕ್ಷ ಕಾಲು ಶತಮಾನದವರೆಗೆ ಪುರಾಣ ಕಥನಗಳನ್ನೇ ಒಳಗೊಂಡಿದೆ. ಈ ಕಾಲು ಶತಮಾನದ ಕನ್ನಡ ಸಿನಿಮಾವು ಪುರಾಣ ಕಥನಗಳ ‘ಪ್ರಧಾನ’ ವಸ್ತುಗಳಿಗೆ ಬದಲಾಗಿ ‘ಉಪಧಾರೆ’ಯ ಹಾದಿ ಹಿಡಿದದ್ದು ಅಧ್ಯಯನಶೀಲ ಆಯಾಮವಾಗಿದೆ. ಈಗ ಗಮನಿಸಿ: ರಾಮಾಯಣದಲ್ಲಿ ಕನ್ನಡದ ಮೊದಲ ವಾಕ್ಚಿತ್ರವು ಆಯ್ಕೆ ಮಾಡಿಕೊಂಡದ್ದು ರಾವಣನ ಮಗನಾದ ಇಂದ್ರಜಿತುವಿನ ಪತ್ನಿ ಸುಲೋಚನೆ ಕೇಂದ್ರಿತವಾದ ಕಥನವನ್ನು ಎಂಬುದೇ ಒಂದು ವಿಶೇಷ ಆರಂಭ. ಮುಂದಿನ ಬಹಳಷ್ಟು ಕನ್ನಡ ಸಿನಿಮಾಗಳು ರಾಮಾಯಣ ಮತ್ತು ಮಹಾಭಾರತದ ಪ್ರಧಾನಧಾರೆಗೆ ಬದಲಾಗಿ ಪುರಾಣಕಾವ್ಯ ಹಾಗೂ ಐತಿಹ್ಯಗಳ ‘ಉಪಧಾರೆ’ಯ ವಸ್ತುಗಳನ್ನೇ ಒಳಗೊಂಡಿವೆ. ಈ ವ್ಯಾಖ್ಯಾನಕ್ಕೆ ಉದಾಹರಣೆಯಾಗಿ 1960ರೊಳಗಿನ ಕೆಲವು ಸಿನಿಮಾಗಳನ್ನು ಸಾಂಕೇತಿಕವಾಗಿ ಗಮನಿಸಬಹುದು. ಸತಿ ಸುಲೋಚನ, ಭಕ್ತದ್ರುವ, ಚಿರಂಜೀವಿ, ಭಕ್ತಪ್ರಹ್ಲಾದ, ಹರಿಶ್ಚಂದ್ರ, ಭಕ್ತಕುಂಬಾರ, ಶ್ರೀಕೃಷ್ಣ, ಶಿವಪಾರ್ವತಿ, ಸಂತ ಸಕ್ಕು, ಹೇಮರೆಡ್ಡಿ ಮಲ್ಲಮ್ಮ, ಹರಿಭಕ್ತ, ರೇಣುಕಾ ಮಹಾತ್ಮೆ, ನಳದಮಯಂತಿ, ಮಹಾಕವಿ ಕಾಳಿದಾಸ, ಶ್ರೀಕೃಷ್ಣ ಲೀಲಾ, ಶ್ರೀರಾಮಾಂಜನೇಯ ಯುದ್ಧ, ಭೂಕೈಲಾಸ, ಕೃಷ್ಣ ಸುಧಾಮ, ಗುಣಸಾಗರಿ, ಶ್ರೀಕೃಷ್ಣಗಾರುಡಿ, ಬೇಡರ ಕಣ್ಣಪ್ಪ, ಭಕ್ತವಿಜಯ, ಓಹಿಲೇಶ್ವರ- ಹೀಗೆ ಅನೇಕ ಸಿನಿಮಾಗಳನ್ನು ಉದಾಹರಿಸಬಹುದು.

ಇನ್ನೊಂದು ವಿಶೇಷವೆಂದರೆ, ಈ ಕಾಲು ಶತಮಾನದ ಬಹುಪಾಲು ಸಿನಿಮಾಗಳಲ್ಲಿ ‘ಭಕ್ತಿ’ಯೇ ಪ್ರಧಾನ ವಸ್ತು, ರಾಜಪ್ರಭುತ್ವ ಕೇಂದ್ರಿತವಾದ ಕನ್ನಡ ಸಿನಿಮಾಗಳು ಆಗ ಬರಲೇ ಇಲ್ಲ. ಬಹುಶಃ ಬ್ರಿಟಿಷ್ ಆಡಳಿತ ಇದ್ದದ್ದು ಇದಕ್ಕೆ ಒಂದು ಕಾರಣ. ಬ್ರಿಟಿಷ್ ರಾಜರ ಎದುರು ನಮ್ಮ ರಾಜರ ಪ್ರಶಂಸೆ ಕಷ್ಟವಾಗಿ, ಜನಮನಕೇಂದ್ರಿತ ಭಕ್ತಿಯೇ ಮುಖ್ಯ ವಸ್ತುವಾಗಿರಬಹುದು. ಸ್ವಾತಂತ್ರ್ಯಾನಂತರದ ಆರಂಭದಲ್ಲಿ ಸ್ವಲ್ಪ ಕಾಲ ಅದೇ ಪರಂಪರೆ ಮುಂದುವರಿದು, ಪ್ರಜಾಪ್ರಭುತ್ವದ ಫಲವಾಗಿ ಪ್ರಜಾಕೇಂದ್ರಿತ ಸಾಮಾಜಿಕ ಸಿನಿಮಾಗಳು ಬರಲಾರಂಭಿಸಿವೆ. ಆನಂತರ ನಮ್ಮ ಚಾರಿತ್ರಿಕ ಅಸ್ಮಿತೆಯ ಸಿನಿಮಾಗಳು ನಿರ್ಮಾಣಗೊಂಡಿವೆ. ಹೊಸ ಪ್ರಯೋಗಗಳು ಅಭಿವ್ಯಕ್ತಗೊಂಡಿವೆ.

ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಗಳು ಕನ್ನಡ ಸಿನಿಮಾ ನಿರ್ಮಾಣದ ಮೇಲೆ ಉಂಟುಮಾಡಿದ ಪರಿಣಾಮವನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡ ವಸ್ತುವಿನ್ಯಾಸದಲ್ಲಿ ಕಾಣಬಹುದು. ಇದು ಕಲೆ ಮತ್ತು ಸಾಮಾಜಿಕ ರಾಜಕೀಯ ಸ್ಥಿತ್ಯಂತರಗಳ ಸಂಬಂಧದ ಸಂಕೇತವಾಗಿದೆ.

ಎಲ್ಲಾ ದೇಶ ಭಾಷೆಗಳ ಸಿನಿಮಾಗಳಿಗೂ ಆಯಾ ದೇಶ-ಪ್ರದೇಶಗಳ ಸ್ಥಳೀಯ ಸನ್ನಿವೇಶದ ಪ್ರೇರಣೆ, ಪ್ರಭಾವಗಳ ಪಾತ್ರವೇ ಪ್ರಮುಖ ಎಂಬ ತಿಳಿವಳಿಕೆ ಮುಖ್ಯ. ಆಗ ಸ್ಥಳೀಯ ಕನ್ನಡ ಸಿನಿಮಾ ಕ್ಷೇತ್ರದ ವಿಕಾಸ ಮತ್ತು ಒಳಿತಿನ ಹಾದಿ ಅರ್ಥವಾಗುತ್ತದೆ.

ಎಪ್ಪತ್ತು-ಎಂಬತ್ತರ ದಶಕದಲ್ಲಿ ಪ್ರಯೋಗಾತ್ಮಕ ಚಿತ್ರಗಳನ್ನು ವೀಕ್ಷಿಸಲು ಬರುತ್ತಿದ್ದವರ ಸಂಖ್ಯೆ ಇವತ್ತು ಕ್ಷೀಣಿಸಿದೆ. ಪುಸ್ತಕಗಳ ವಾಚಾನಾಭಿರುಚಿ ಮೂಡಿಸುವಂತೆ ಸಿನಿಮಾಗಳ ವೀಕ್ಷಣಾಭಿರುಚಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಚಲನಚಿತ್ರ ಅಕಾಡೆಮಿ ಹಮ್ಮಿಕೊಳ್ಳಬೇಕು. ಸ್ಥಳೀಯ ಸಿನಿಮಾ ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸಲು ಕನ್ನಡ ಸಿನಿಮೋತ್ಸವಗಳು ನಿಯತವಾಗಿ ನಡೆಯಬೇಕು. ಭಾರತೀಯ ಸಿನಿಮೋತ್ಸವಗಳನ್ನು ಆಯೋಜಿಸಬೇಕು. ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇನ್ನೂರ ಐವತ್ತರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಮಿನಿ ಚಿತ್ರಮಂದಿರಗಳನ್ನು ಸರ್ಕಾರವೇ ನಿರ್ಮಾಣ ಮಾಡಿ ಪ್ರದರ್ಶನ ಸಮಸ್ಯೆಯನ್ನು ಪರಿಹರಿಸಬೇಕು.

ಇವುಗಳ ಉಸ್ತುವಾರಿಯನ್ನೂ ಒಳಗೊಂಡಂತೆ ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿದ್ದ ‘ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ’ವನ್ನು ಮತ್ತೆ ಸ್ಥಾಪಿಸಬಹುದು. ಒಟ್ಟಾರೆ ಸ್ಥಳೀಯ ಸಿನಿಮಾ ಸಂಸ್ಕೃತಿ ನಮ್ಮ ಆದ್ಯತೆಯಾಗಬೇಕು. ಅದಕ್ಕಾಗಿ ಸಮಾಲೋಚನೆ, ಚಿಂತನೆ, ಕ್ರಿಯಾಯೋಜನೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT