ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗೇ ಪೇಟೆಂಟ್: ಕಾನೂನಿಗೆ ಸವಾಲು

ತೊಡಕು– ಅನಿವಾರ್ಯದ ನಡುವೆ ತೊಳಲಾಟ
Published 6 ಆಗಸ್ಟ್ 2023, 23:32 IST
Last Updated 6 ಆಗಸ್ಟ್ 2023, 23:32 IST
ಅಕ್ಷರ ಗಾತ್ರ

ಡಾ. ಎಚ್ ಆರ್.ಕೃಷ್ಣಮೂರ್ತಿ

‘ದಿ ರೀಸನಬಲ್ ರೊಬಾಟ್: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ದಿ ಲಾ’. ಇಂಗ್ಲೆಂಡ್‍ನ ಸರ್ರೇ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಡಾ. ರ್‍ಯಾನ್ ಅಬಾಟ್ ಅವರು 2020ರಲ್ಲಿ ಪ್ರಕಟಿಸಿದ ಕೃತಿ. ಪ್ರಪಂಚದ ಅನೇಕ ದೇಶಗಳಲ್ಲಿ ವೈದ್ಯಕೀಯ, ಔಷಧಿ ಸಂಶೋಧನೆ, ಜೈವಿಕ ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತರುತ್ತಿರುವ ತ್ವರಿತಗತಿಯ ಬದಲಾವಣೆಗಳು ಮತ್ತು ಅವುಗಳ ಸಾಮಾಜಿಕ ಪರಿಣಾಮಗಳ ಸಂದರ್ಭದಲ್ಲಿ ಕಾನೂನುಗಳಲ್ಲಿ ಆಗಬೇಕಾದ ಪರಿವರ್ತನೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಈ ಕೃತಿಯಲ್ಲಿ, ಪೇಟೆಂಟ್‍ಗಳಿಗೆ ಸಂಬಂಧಿಸಿದ ಅಧ್ಯಾಯವೊಂದಿದೆ.

ಸ್ವತಂತ್ರವಾಗಿ, ಸೃಜನಾತ್ಮಕವಾಗಿ ಯೋಚಿಸಿ, ಮಾನವನ ಮಧ್ಯಪ್ರವೇಶವಿಲ್ಲದೇ ಆವಿಷ್ಕಾರ ಮಾಡಬಲ್ಲ ಸಾಮರ್ಥ್ಯ ಇರುವ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗೇ ಪೇಟೆಂಟ್ ದೊರೆಯಬೇಕೆಂಬ ವಿನೂತನ ವಾದವು ಎಲ್ಲ ದೇಶಗಳಲ್ಲಿ ಗಂಭೀರವಾದ ಚಿಂತನೆ, ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ.

ಯಾವುದೇ ಸಂಶೋಧನೆಗೆ ಪೇಟೆಂಟ್ ದೊರೆಯಬೇಕಾದರೆ ಅದು ಮುಖ್ಯವಾಗಿ ಮೂರು ಷರತ್ತುಗಳನ್ನು ಪೂರೈಸಬೇಕು. ಮೊದಲನೆಯದಾಗಿ, ಸಂಶೋಧನೆ ಹೊಸದಾಗಿದ್ದು ಸ್ವಂತಿಕೆಯಿರಬೇಕು. ಎರಡನೆಯದಾಗಿ, ಹೊಸ ಸೃಷ್ಟಿಯಲ್ಲಿ ಆವಿಷ್ಕಾರದ ‘ಹೊಸ ಹೆಜ್ಜೆ’ (ಇನ್ವೆಂಟಿವ್ ಸ್ಟೆಪ್) ಇರಬೇಕು. ಕಡೆಯದಾಗಿ, ಆ ಸಂಶೋಧನೆಯು ಕೃಷಿ, ಕೈಗಾರಿಕೆ, ವೈದ್ಯಕೀಯದಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವಂತೆ ಇರಬೇಕು. ಇವುಗಳನ್ನು ನಾವೆಲ್ಟಿ, ಇನ್ವೆಂಟಿವ್ ಸ್ಟೆಪ್ ಮತ್ತು ಯುಟಿಲಿಟಿ ಎಂದು ಕರೆಯುವುದು ವಾಡಿಕೆ.

ಹೊಸತನ್ನು ಆವಿಷ್ಕರಿಸುವ ಪ್ರತಿಭಾವಂತರಲ್ಲಿ ಎದ್ದು ಕಾಣುವ ಗುಣಗಳೆಂದರೆ ಅದಮ್ಯ ಕುತೂಹಲ, ಸುಲಭಕ್ಕೆ ಕೈಚೆಲ್ಲಿ ಕೂರದ ಸತತ ಪ್ರಯತ್ನಶೀಲತೆ, ಸೃಜನಾತ್ಮಕ ಚಿಂತನೆ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲದಂತಹವು. ಪೇಟೆಂಟ್‍ಗಳಿಗೆ ಸಂಬಂಧಿಸಿದ ಹಿಂದಿನ ಎಲ್ಲ ಕಾನೂನುಗಳೂ ರೂಪುಗೊಂಡಿರುವುದು ಈ ಎಲ್ಲ ಗುಣ, ಯೋಗ್ಯತೆ, ಸಾಮರ್ಥ್ಯಗಳಿರುವುದು ಮನುಷ್ಯರಲ್ಲಿ ಮಾತ್ರ ಎಂಬ ಗ್ರಹಿಕೆಯ ಮೇಲೆ. ಆದರೆ ಕಳೆದೊಂದು ದಶಕದಲ್ಲಿ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳು ಈ ಮೂಲ ಗ್ರಹಿಕೆಯನ್ನೇ ಪ್ರಶ್ನಿಸುತ್ತಿವೆ.

ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಮತ್ತು ಇಮ್ಯಾಜಿನೇಷನ್ ಎಂಜಿನ್ಸ್ ಎಂಬ ಕೃತಕ ಬುದ್ಧಿಮತ್ತೆ ಸಂಸ್ಥೆಯ ಸಂಸ್ಥಾಪಕ ಸ್ಟೀಫನ್ ಥೇಲರ್, 2019ರಲ್ಲಿ ‘ಡೇಬಸ್’ (Device for the Autonomous Bootstrapping of Unified Sentience) ಹೆಸರಿನ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ರೂಪಿಸಿದರು. ಮನುಷ್ಯನ ಮಿದುಳಿನ ಮುಖ್ಯ ಭಾಗಗಳಾದ ಲಿಂಬಿಕ್, ಥಾಲಮಸ್, ಕಾರ್ಟೆಕ್ಸ್‌ನಂತೆಯೇ ಭಾಗಗಳಿರುವ ಡೇಬಸ್, ಸಂಯೋಜಿತ ಮಿದುಳಿನಂತೆ (ಸಿಂಥೆಟಿಕ್ ಬ್ರೈನ್) ಕೆಲಸ ಮಾಡುತ್ತದೆ.

ಈ ಸಂಯೋಜಿತ ಮಿದುಳಿನ ಚಟುವಟಿಕೆಗಳನ್ನು, ಆಲೋಚನೆಗಳು ರೂಪುಗೊಳ್ಳುವುದನ್ನು ಎಮ್‍ಆರ್‌ಐ ಬಳಸಿ ಗುರುತಿಸಿ, ಅಧ್ಯಯನ ಮಾಡಬಹುದು. ಅದರೊಡನೆ ಸಂವೇದನೆಗಳು ಹಾಗೂ ಭಾವನೆಗಳನ್ನು ಗುರುತಿಸಿ, ಅನುಭವಿಸಿ, ಪ್ರತಿಕ್ರಿಯಿಸುವ ಸಾಮರ್ಥ್ಯವೂ ಡೇಬಸ್‍ಗೆ ಇದೆ ಎಂದು ಥೇಲರ್ ಪ್ರಕಟಿಸಿದರು. ಹೊಸ ವಿಧಾನ, ಪ್ರಕ್ರಿಯೆ, ಉತ್ಪನ್ನಗಳನ್ನು ಆವಿಷ್ಕರಿಸುವುದೇ ಡೇಬಸ್ ವ್ಯವಸ್ಥೆಯ ಮುಖ್ಯ ಉದ್ದೇಶವೆಂದು ಪ್ರತಿಪಾದಿಸಿದ ಥೇಲರ್, ಆ ಕೃತಕ ಬುದ್ಧಿಮತ್ತೆಯ ಯಂತ್ರಕ್ಕೆ ಅಂತಹ ಸಾಮರ್ಥ್ಯ ಇದೆ ಎಂದು ಸಾರಿದರು.

ಮಾನವನ ಮಧ್ಯಪ್ರವೇಶವಿಲ್ಲದೆಯೇ ಡೇಬಸ್ ಎರಡು ವಿಶಿಷ್ಟ ಉತ್ಪನ್ನಗಳ ವಿನ್ಯಾಸ ಮಾಡಿತು. ಮೊದಲನೆಯದು, ಫಾಕ್ಟ್ರಲ್ ಜ್ಯಾಮಿತಿಯನ್ನು ಆಧರಿಸಿದ ಆಹಾರ, ಪಾನೀಯಗಳ ಧಾರಕ (ಫುಡ್ ಕಂಟೇನರ್). ಎರಡನೆಯದು, ನೈಸರ್ಗಿಕ ಅವಘಡಗಳ ಸಂದರ್ಭದಲ್ಲಿ ಶೋಧನೆ ಮತ್ತು ರಕ್ಷಣೆಗಾಗಿ ಬಳಸಬಹುದಾದ, ವಿಶೇಷ ಸಂಕೇತಗಳನ್ನು ಸ್ಫುರಿಸುವ ಉತ್ಪನ್ನ. ಥೇಲರ್, ರ್‍ಯಾನ್ ಅಬಾಟ್ ಮತ್ತು ಆಸಕ್ತ ವಕೀಲರ ತಂಡ ಹದಿನೇಳು ದೇಶಗಳಲ್ಲಿ ಈ ಎರಡು ಉತ್ಪನ್ನಗಳಿಗೆ ಪೇಟೆಂಟ್ ಕೋರಿ 2019ರಲ್ಲಿ ಅರ್ಜಿ ಸಲ್ಲಿಸಿತು. ಈ ಎಲ್ಲ ಅರ್ಜಿಗಳಲ್ಲಿ ಎರಡೂ ಉತ್ಪನ್ನಗಳ ‘ಇನ್ವೆಂಟರ್’ ಡೇಬಸ್ ಎಂದು ನಮೂದಿಸಲಾಗಿತ್ತು. ಇದು, ಕೃತಕ ಬುದ್ಧಿಮತ್ತೆಗೆ ಬೌದ್ಧಿಕ ಆಸ್ತಿ ಹಕ್ಕನ್ನು ನೀಡುವಂತೆ ಕೇಳಿ, ಅದರ ಪರವಾಗಿ ಸಲ್ಲಿಸಿದ ಮೊದಲ ಅರ್ಜಿ!

ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ಸ್‌ ಕಚೇರಿ ಮೊದಲನೆಯ ಹಂತದಲ್ಲೇ ಈ ಅರ್ಜಿಯನ್ನು ತಿರಸ್ಕರಿಸಿತು. ಅಲ್ಲಿನ ಪೇಟೆಂಟ್ ಕಾನೂನುಗಳಂತೆ, ಹೊಸತನ್ನು ಆವಿಷ್ಕರಿಸಿದ ಒಬ್ಬ ಮನುಷ್ಯನಿಗೆ ಪೇಟೆಂಟ್ ಕೊಡಬಹುದೇ ವಿನಾ ಕೃತಕ ಬುದ್ಧಿಮತ್ತೆಯ ಯಂತ್ರಕ್ಕಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಈ ನಿರ್ಣಯದ ವಿರುದ್ಧ ಥೇಲರ್ ಮತ್ತು ಸಂಗಡಿಗರು ಮಾಡಿದ ಅಪೀಲನ್ನು ಫೆಡರಲ್ ಡಿಸ್ಟ್ರಿಕ್ಟ್ ನ್ಯಾಯಾಲಯ ಮತ್ತು ಫೆಡರಲ್ ಸರ್ಕ್ಯೂಟ್ ನ್ಯಾಯಾಲಯಗಳೂ ಮನ್ನಿಸಲಿಲ್ಲ. ಥೇಲರ್ ಅಂತಿಮವಾಗಿ ಅಲ್ಲಿನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಪ್ರಕರಣದಲ್ಲಿ, 2023ರ ಏಪ್ರಿಲ್‍ನಲ್ಲಿ, ‘ಒಂದು ಯಂತ್ರ ಅಥವಾ ಕೃತಕ ಬುದ್ಧಿಮತ್ತೆ ‘ಇನ್ವೆಂಟರ್’ ಆಗುವುದು ಸಾಧ್ಯವಿಲ್ಲದ ಕಾರಣ ಅದಕ್ಕೆ ಪೇಟೆಂಟ್ ನೀಡಲಾಗದು’ ಎಂಬ ತೀರ್ಪನ್ನು ನೀಡಿತು.

ಇಂಗ್ಲೆಂಡ್, ಯುರೋಪಿನ ದೇಶಗಳು, ನ್ಯೂಜಿಲೆಂಡ್ ಮತ್ತು ಜಪಾನ್‍ ಕೂಡ ಈ ಪೇಟೆಂಟ್ ಅರ್ಜಿಯನ್ನು ತಿರಸ್ಕರಿಸಿದವು. ಆಸ್ಟ್ರೇಲಿಯಾದ ನ್ಯಾಯಾಲಯಗಳು ಪ್ರಾರಂಭದಲ್ಲಿ ಒಮ್ಮತಕ್ಕೆ ಬರದಿದ್ದರೂ ಅಂತಿಮವಾಗಿ ಅಲ್ಲಿಯೂ ಅರ್ಜಿಗೆ ಮನ್ನಣೆ ದೊರೆಯಲಿಲ್ಲ. ಆದರೆ ವಿವಿಧ ದೇಶಗಳ ನ್ಯಾಯಾಲಯಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, 2021ರ ಜುಲೈನಲ್ಲಿ, ಡೇಬಸ್ ವಿನ್ಯಾಸ ಮಾಡಿದ ಎರಡೂ ಉತ್ಪನ್ನಗಳಿಗೆ ದಕ್ಷಿಣ ಆಫ್ರಿಕಾದ, ‘ದಿ ಕಂಪನೀಸ್ ಆ್ಯಂಡ್‌ ಇಂಟೆಲೆಕ್ಚುಯಲ್ ಪ್ರಾಪರ್ಟಿ ಕಮಿಷನ್’ ಪೇಟೆಂಟ್ ನೀಡಿ, ಕೃತಕ ಬುದ್ಧಿಮತ್ತೆಗೆ ಇನ್ವೆಂಟರ್ ಪಟ್ಟ ಕಟ್ಟಿತು. ಇದು ಇಡೀ ಪ್ರಪಂಚದಲ್ಲಿ ಕೃತಕ ಬುದ್ಧಿಮತ್ತೆಗೆ ದೊರೆತ ಮೊದಲ ಪೇಟೆಂಟ್.

ಡೇಬಸ್ ವಿನ್ಯಾಸ ಮಾಡಿದ ಎರಡು ಉತ್ಪನ್ನಗಳಿಗೆ ಪೇಟೆಂಟ್ ಕೋರಿ 17 ದೇಶಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ 16 ದೇಶಗಳಲ್ಲಿ ಅರ್ಜಿ ತಿರಸ್ಕೃತವಾದುದನ್ನು ಥೇಲರ್ ಮತ್ತು ರ್‍ಯಾನ್ ಅಬಾಟ್ ತಾತ್ಕಾಲಿಕ ಹಿನ್ನಡೆ ಮಾತ್ರವೆಂದು ಹೇಳಿದ್ದಾರೆ, ಅಮೆರಿಕದ ಕಾಂಗ್ರೆಸ್ ಸದಸ್ಯರ ಮೂಲಕವಾಗಿಯೇ ಕಾನೂನಿನಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರುವುದು ಮುಂದಿನ ಪ್ರಯತ್ನ ಎಂದಿದ್ದಾರೆ. ನಮ್ಮ ಮಿದುಳಿನ ರಚನೆ ಮತ್ತು ಕಾರ್ಯವೈಖರಿಯ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು ಅದರ ಅಸಾಧಾರಣ ಸಾಮರ್ಥ್ಯದ ಬಗ್ಗೆ ಹೊಸ ವಿಷಯಗಳನ್ನು ಬೆಳಕಿಗೆ ತರುತ್ತಿವೆ. ಅವೆಲ್ಲವನ್ನೂ ಮುಂದೆ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗಳಲ್ಲಿ ಅಳವಡಿಸುವ ಪ್ರಯತ್ನ ನಡೆಯುವುದರಲ್ಲಿ ಅನುಮಾನವಿಲ್ಲ. ಅಂತಹ ಪ್ರತಿಯೊಂದು ಪ್ರಯತ್ನವೂ ಬೌದ್ಧಿಕ ಹಕ್ಕು ಕಾನೂನುಗಳಿಗೆ ಹೊಸ ಸವಾಲಾಗುತ್ತದೆ ಎಂಬುದು ಪರಿಣತರ ಅಭಿಪ್ರಾಯ. ಈ ಸವಾಲುಗಳು ಹೊಸ ಔಷಧಿಗಳ ವಿನ್ಯಾಸ ಮತ್ತು ಉತ್ಪಾದನೆಯ ಕ್ಷೇತ್ರಗಳಲ್ಲಿ ಮೊದಲಿಗೆ ಎದುರಾಗಲಿವೆ ಎಂಬುದು ತಜ್ಞರ ನಿರೀಕ್ಷೆ.

ಹೊಸ ಔಷಧಿಗಳ ವಿನ್ಯಾಸ, ವಿವಿಧ ಪರೀಕ್ಷೆಗಳು ಮತ್ತು ಉತ್ಪಾದನೆಗೆ ಬೇಕಾದ ಸಮಯವನ್ನು ಶೇ 50ರಷ್ಟು ಕಡಿಮೆ ಮಾಡಿ, ವೆಚ್ಚವನ್ನು ಶೇ 30ರಿಂದ 40ರಷ್ಟು ಇಳಿಸುವ ಭರವಸೆಯನ್ನು ತೋರುತ್ತಿರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ಇಂದು ಆ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. 2022ರ ‘ನೇಚರ್’ ಪತ್ರಿಕೆಯಲ್ಲಿನ ಸಂಶೋಧನಾ ಲೇಖನದಂತೆ, 2021ರಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವ 20 ಕಂಪನಿಗಳು ಒಟ್ಟು 160 ಹೊಸ ಔಷಧಿಗಳನ್ನು ರೂಪಿಸುವ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿದ್ದವು. ಇದೇ ಪ್ರವೃತ್ತಿ ಮುಂದುವರಿದರೆ, 2030ರ ಹೊತ್ತಿಗೆ ಒಟ್ಟಾರೆ ಹೊಸ ಔಷಧಿಗಳ ಶೇ 10ರಷ್ಟನ್ನು, ಸ್ವತಂತ್ರವಾಗಿ, ಮಾನವನ ಮಧ್ಯಪ್ರವೇಶವಿಲ್ಲದೆ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗಳೇ ರೂಪಿಸಲಿವೆ ಎಂಬ ಮುನ್ಸೂಚನೆ ಇದೆ. ಆ ವೇಳೆಗೆ ಪೇಟೆಂಟ್ ಕಾನೂನುಗಳಲ್ಲಿ ಬದಲಾವಣೆಗಳು ಅನಿವಾರ್ಯವಾಗಲಿವೆ.

ನಮ್ಮ ದೇಶದಲ್ಲೂ ಕೃತಕ ಬುದ್ಧಿಮತ್ತೆ ಬೆಂಬಲಿತ ಸಂಶೋಧನೆಗಳಿಗೆ ಪೇಟೆಂಟ್ ಕೋರಿ ಸಲ್ಲಿಸುವ ಅರ್ಜಿಗಳ ಸಂಖ್ಯೆ ತ್ವರಿತಗತಿಯಲ್ಲಿ ಏರುತ್ತಿದೆ. 2017- 18ರಲ್ಲಿ 657 ಅರ್ಜಿಗಳಿದ್ದು, 2021- 22ರಲ್ಲಿ 4,067 ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಎಲ್ಲ ಅರ್ಜಿಗಳನ್ನು 2017ರ ‘ಕಂಪ್ಯೂಟರ್ ರಿಲೇಟೆಡ್ ಇನ್ವೆನ್‍ಶನ್ಸ್ ಗೈಡ್‍ಲೈನ್ಸ್’ ಅಡಿಯಲ್ಲಿ ಪರಿಶೀಲಿಸಲಾಗುತ್ತದೆ. ಉಳಿದೆಲ್ಲ ದೇಶಗಳಂತೆ ನಮ್ಮಲ್ಲಿ ಕೂಡ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಉಪಜ್ಞೆಕಾರ ಅಥವಾ ಇನ್ವೆಂಟರ್ ಎಂದು ಪರಿಗಣಿಸುವುದಿಲ್ಲ. ಕೃತಕ ಬುದ್ಧಿಮತ್ತೆ ಮತ್ತು ಪೇಟೆಂಟ್ ಕಾನೂನುಗಳಿಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಪ್ರಾರಂಭವಾಗಿರುವ ಬದಲಾವಣೆಗಳ ಪ್ರಭಾವ ನಮ್ಮ ದೇಶದಲ್ಲೂ ಭವಿಷ್ಯದಲ್ಲಿ ಕಂಡುಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT