ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪ್ರಜನನ ಹಕ್ಕು ಮತ್ತು ಸಮಾಜದ ನಿರೀಕ್ಷೆ

ಈಗಿನ ತಾಯ್ತನದ ಪರಿಕಲ್ಪನೆಯು ಹೆಣ್ಣಿನ ಮೇಲೆ ಹೇರುವ ಸಾಮಾಜಿಕ ಒತ್ತಡವಾಗಿ ಪರಿಣಮಿಸಿದೆ
Last Updated 22 ಮೇ 2022, 19:31 IST
ಅಕ್ಷರ ಗಾತ್ರ

ಹರಿದ್ವಾರದಲ್ಲಿರುವ ಒಬ್ಬ ನಿವೃತ್ತ ಅಧಿಕಾರಿ ಮತ್ತು ಅವರ ಪತ್ನಿ ನ್ಯಾಯಾಲಯದ ಮುಂದೆ ಒಂದು ವಿಚಿತ್ರವಾದ ಬೇಡಿಕೆಯನ್ನಿಟ್ಟಿದ್ದಾರೆ. ‘ನಿವೃತ್ತಿಯ ನಂತರ ನಾವು ಮೊಮ್ಮಗನೊಡನೆ ಆಡುತ್ತಾ ಕಾಲ ಕಳೆಯಬಹುದೆಂಬ ಆಸೆಯಿಂದ ನಮ್ಮ ಮಗನಿಗೆ 2016ರಲ್ಲಿ ಮದುವೆ ಮಾಡಿದೆವು. ಅದಾಗಿ ಆರು ವರ್ಷಗಳಾಗಿದ್ದರೂ ನಮಗೆ ಒಂದು ಮೊಮ್ಮಗುವನ್ನು ಕೊಡಲು ಅವರು ವಿಫಲರಾಗಿದ್ದಾರೆ. ಇದು ನಮಗೆ ಅತೀವವಾದ ಮಾನಸಿಕ ಹಿಂಸೆಯನ್ನು ಉಂಟುಮಾಡಿದೆ. ನಮಗೆ ಒಂದು ವರ್ಷದ ಒಳಗೆ ಮೊಮ್ಮಗು ಬೇಕು. ಇಲ್ಲದಿದ್ದರೆ ನಮ್ಮ ಮಗ, ಸೊಸೆ ನಮಗೆ ₹ 5 ಕೋಟಿ ಪರಿಹಾರ ನೀಡಬೇಕು. ಹಾಗೆಂದು ಮಗ, ಸೊಸೆಗೆ ಆದೇಶಿಸಬೇಕು’ ಎಂದು ಕೋರಿ ದಂಪತಿ ಉತ್ತರಾಖಂಡದ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಇದೊಂದು ವಿಚಿತ್ರವಾದ ಪ್ರಕರಣ. ಹೀಗೂ ಒಂದು ದಾವೆಯನ್ನು ಹೂಡಬಹುದೇ ಎಂಬುದು ಸಹಜವಾಗಿ ಮೂಡಬಹುದಾದ ಪ್ರಶ್ನೆ. ‘ನನ್ನ ಮಗನ ವಿದ್ಯಾಭ್ಯಾಸಕ್ಕಾಗಿ, ಅವನ ಅಭ್ಯುದಯಕ್ಕಾಗಿ, ಅವನ ಮದುವೆಗಾಗಿ ನಮ್ಮಲ್ಲಿರುವ ಹಣವನ್ನೆಲ್ಲಾ ವ್ಯಯ ಮಾಡಿದ್ದೇವೆ. ಆದರೆ ಅವರು ನಮಗೆ ವೃದ್ಧಾಪ್ಯದಲ್ಲಿ ಮೊಮ್ಮಗು ಬೇಕೆನ್ನುವ ಕೋರಿಕೆಯನ್ನು ಪೂರೈಸುತ್ತಿಲ್ಲ. ಇದರಿಂದ ತುಂಬ ನೊಂದಿದ್ದೇವೆ, ಮಾನಸಿಕವಾಗಿ ಕುಗ್ಗಿದ್ದೇವೆ. ನಮ್ಮ ಆಕಾಂಕ್ಷೆಯನ್ನು ಮಗ, ಸೊಸೆ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ’ ಎಂಬುದು ಅವರ ಆರೋಪ.

ಭಾರತೀಯರ ಮನೋವೃತ್ತಿಯ ಹಿನ್ನೆಲೆಯಿಂದ ನೋಡಿದಾಗ, ಅವರ ಬಯಕೆ ಅತ್ಯಂತ ಸಹಜವಾದುದು ಎಂಬುದೇ ಬಹುಜನರ ಅಭಿಪ್ರಾಯವಾಗಿರುತ್ತದೆ. ಆದರೆ, ಸಮಾನತೆಯ ಈ ಯುಗದಲ್ಲಿ, ಹೆಣ್ಣು ಮಕ್ಕಳನ್ನೂ ಗಂಡುಮಕ್ಕಳಿಗೆ ಸರಿಸಮನಾಗಿ ಬೆಳೆಸಿ, ‘ನೀನು ಯಾವ ಗಂಡು ಮಗನಿಗೂ ಕಡಿಮೆಯಿಲ್ಲ’ ಎಂದು ಹೆಮ್ಮೆಪಡುವ ತಂದೆತಾಯಿಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಇದು, ಬದಲಾಗುತ್ತಿರುವ ಸಮಾಜ ಹಾಗೂ ಬದಲಾಗುತ್ತಿರುವ ದೃಷ್ಟಿಕೋನದ ದ್ಯೋತಕವೂ ಹೌದು. ಇದು, ಗಂಡು ಮಕ್ಕಳಿಗೆ ಇರುವ ಆಯ್ಕೆಯ ಸ್ವಾತಂತ್ರ್ಯವನ್ನು ಹೆಣ್ಣು ಮಕ್ಕಳಿಗೂ ನೀಡುತ್ತದೆ. ಅದನ್ನು ಗೌರವಿಸಬೇಕಾದದ್ದು ಇತರರ ಕರ್ತವ್ಯವೂ ಆಗಿರುತ್ತದೆ.

ಸಮಾನತೆಯನ್ನು ಗೌರವಿಸುವ ಸಮಾಜವು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕು. ಆದರೆ ದೀರ್ಘ ಹೋರಾಟಗಳಿಲ್ಲದೆ ಈ ಹಕ್ಕುಗಳನ್ನು ನೀಡಿರುವ ಉದಾಹರಣೆಗಳೇ ಇಲ್ಲ. ಹಿಂಸೆಯಿಂದ ಮುಕ್ತರಾಗಲು ಒಂದು ಹೋರಾಟ, ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳಗಳಿಲ್ಲದೆ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಿಕೊಳ್ಳಲು ಒಂದು ಹೋರಾಟ, ಕುಟುಂಬದ ಜನರಿಂದಲೇ ನಡೆಯುವ ಹಿಂಸೆಯಿಂದ ರಕ್ಷಣೆ ಪಡೆಯಲು ಒಂದು ಹೋರಾಟ, ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳಲು ನ್ಯಾಯಾಲಯಗಳಿಗೆ ಅಲೆದಾಟ, ಹೀಗೆ ಮುಗಿಯದ ಬವಣೆಗಳ ನಡುವೆ, ತನ್ನ ದೇಹ ತನ್ನದು, ಅದರ ಮೇಲೆ ತನ್ನದೇ ಸಂಪೂರ್ಣ ಹಕ್ಕು ಎಂದು ಹೇಳಿಕೊಳ್ಳಲೂ ಒಂದು ಆಂದೋಲನದ ಅಗತ್ಯ ಉಂಟಾಗಿರುವುದೇ ವಿಪರ್ಯಾಸ.

ಎರಡು ದಶಕಗಳ ಹಿಂದೆ ‘ನನ್ನ ದೇಹ ನನ್ನ ಹಕ್ಕು’ಎಂಬ ಘೋಷವಾಕ್ಯದ ಅಡಿಯಲ್ಲಿ ಮಹಿಳಾ ಹಕ್ಕು ಹೋರಾಟಗಾರರು ಪ್ರಾರಂಭಿಸಿದ ಆಂದೋಲನ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿತು. ಪ್ರಜನನ ಹಕ್ಕುಗಳು ಮತ್ತು ಇತರ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹಿಳೆಯರು ತಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನವಾಗಿ ಹಮ್ಮಿಕೊಂಡ ಈ ಆಂದೋಲನ ಬರೀ ಭಾರತಕ್ಕೆ ಸೀಮಿತವಾದುದಲ್ಲ. ಮಹಿಳೆ ಒಳಗಾಗುವ ವಿವಿಧ ಬಗೆಯ ದೌರ್ಜನ್ಯಗಳ ಪೈಕಿ ಅತಿ ಹೆಚ್ಚಾಗಿ ಒಳಗಾಗುವುದು ಲೈಂಗಿಕ ದೌರ್ಜನ್ಯಕ್ಕೆ. ಆದರೆ, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅವಳ ದೇಹವನ್ನು ಬಳಸುವ, ಶೋಷಿಸುವ ಮತ್ತು ಲೈಂಗಿಕ ದೌರ್ಜನ್ಯ ಎಸಗುವ ಅಧಿಕಾರ ಯಾರಿಗೂ ಇಲ್ಲ. ಮಹಿಳಾ ಹೋರಾಟಗಾರರ ಈ ನಿಲುವು ಪಿತೃಪ್ರಧಾನ ಸಾಮಾಜಿಕ ಸಂರಚನೆಯನ್ನು ಬುಡದಿಂದಲೇ ಪ್ರಶ್ನಿಸುವಂಥದ್ದು, ಹಾಗಾಗಿ ಇದು ಅಪಥ್ಯ. ಈ ನಿಲುವನ್ನು ವಿರೋಧಿಸುವವರೆಲ್ಲರೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ದೈಹಿಕ ಹಿಂಸೆ, ಕೌಟುಂಬಿಕ ಹಿಂಸೆ, ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆ, ಜೀತ ಪದ್ಧತಿಯಂಥ ಅನಾಗರಿಕ ಪದ್ಧತಿಗಳನ್ನು ಬೆಂಬಲಿಸುವವರು ಎಂದೇ ಅರ್ಥೈಸಬೇಕಾಗುತ್ತದೆ ಎಂಬುದು ಈ ಆಂದೋಲನದ ವಕ್ತಾರರು ಹೇಳುವ ಮಾತು. ಆದರೆ, ವಿವಾಹವಾದ ಒಂದೆರಡು ವರ್ಷದೊಳಗೆ ಒಂದು ಮಗುವನ್ನು ಹೆರದಿದ್ದರೆ, ‘ಬಂಜೆಂಬ ಶಬುದ ಹೊರಲಾರೆ’ ಎಂದು ಇಂದಿಗೂ ಹೆಣ್ಣನ್ನು ಕನಲುವಂತೆ ಮಾಡುವ ನಮ್ಮ ಸಮಾಜ, ಆಧುನಿಕ ಮಹಿಳೆಯು ಈ ನಿಲುವನ್ನು ಒಪ್ಪಬೇಕು ಎಂದು ನಿರೀಕ್ಷಿಸುವುದಾದರೂ ಹೇಗೆ? ಮದುವೆಯ ಮೂಲ ಉದ್ದೇಶವೇ ಸಂತತಿಯನ್ನು ಮುಂದುವರಿಸುವುದು ಎಂಬ ನಂಬಿಕೆ ಈಗಲೂ ನಮ್ಮ ಸಮಾಜದಲ್ಲಿ ಬಲವಾಗಿ ಬೇರೂರಿದೆ. ಬದಲಾದ ಕಾಲಕ್ಕೆ ಅನುಗುಣವಾಗಿ ಕುಟುಂಬದ ಸ್ವರೂಪ ಬದಲಾಗುತ್ತಿದ್ದರೂ, ಕುಟುಂಬದ ಸದಸ್ಯರ ಮನೋಭಾವ ಬದಲಾಗದೇ ಇರುವುದು ಅನೇಕ ಸಂಘರ್ಷಗಳಿಗೆಎಡೆಮಾಡಿಕೊಡುತ್ತಿದೆ.

‘ಮಕ್ಕಳಿರಲವ್ವ ಮನೆತುಂಬ’ ಎಂಬ ಮಾತು ಈಗಿನ ಮಹಿಳೆಯರಿಗೆ ತಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮಾತಾಗಿ ಅವರ ಅಸಹನೆಗೆ ಕಾರಣವಾಗುತ್ತಿದೆ. ಇವರ ನಡುವೆಯೇ, ಸಹಜವಾಗಿ ಮಕ್ಕಳಾಗದಿದ್ದಾಗ ಹತಾಶರಾಗಿ ಕಂಡ ಕಂಡ ದೇವರುಗಳನ್ನು ಬೇಡುವ, ಫರ್ಟಿಲಿಟಿ ಕ್ಲಿನಿಕ್ಕುಗಳನ್ನು ಹುಡುಕಿಕೊಂಡು ಹೊರಡುವ ದಂಪತಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ.

ತಾಯ್ತನದ ಈಗಿನ ಪರಿಕಲ್ಪನೆಯು ಹೆಣ್ಣಿನ ಬಗ್ಗೆ ಕಾಳಜಿಯಿಲ್ಲದ, ತಾಯ್ತನದ ಬಗ್ಗೆ ಮಾತ್ರ ಕಾಳಜಿ ಇರುವ ಸಾಮಾಜಿಕ ಒತ್ತಡವಾಗಿ, ಹೆಣ್ಣಿನ ಮೇಲೆ ಹೇರುವ ನಿರೀಕ್ಷೆಯಾಗಿ ಪರಿಣಮಿಸಿದೆ. ಎಲ್ಲ ಕ್ಷೇತ್ರಗಳಲ್ಲೂ ಗಂಡಿಗೆ ಸರಿಸಮನಾಗಿ ಗುರುತಿಸಿಕೊಳ್ಳಬಲ್ಲ ಮಹಿಳೆಗೆ ಕುಟುಂಬದ ಬೆಂಬಲ ದೊರೆಯುವ ಬಗ್ಗೆ ಖಾತರಿ ಇರುವುದಿಲ್ಲ. ಅಂಥ ಸಂದರ್ಭಗಳಲ್ಲಿ ತನ್ನ ಅಭಿವೃದ್ಧಿಗೆ ಮಗು ಅಡ್ಡಿಯಾಗಬಹುದು ಎನ್ನಿಸಬಹುದು.

ಹುಟ್ಟುವ ಮಕ್ಕಳಿಗೆ ಸೂಕ್ತವಾದ ಸ್ವಚ್ಛ ಪರಿಸರವನ್ನು, ಮೌಲ್ಯಯುತ ಜೀವನವನ್ನು, ಅನುಕೂಲಕರವಾತಾವರಣವನ್ನು ಕೊಡಲು ಸಾಧ್ಯವಿಲ್ಲದಿರುವಾಗ ಮಕ್ಕಳಿಗೆ ಜನ್ಮ ನೀಡುವುದು ನೈತಿಕವಾಗಿ ಸರಿಯೇ? ಯಾಕೆ ಜನ್ಮ ನೀಡಬೇಕು ಎಂಬ ಪ್ರಶ್ನೆಗಳಿಗೆ ನಿರುತ್ತರರಾಗಬೇಕಾಗುತ್ತದೆ. ಹಾಗಾಗಿ, ಮಗುವನ್ನು ಪಡೆಯದಿರುವ ಹಕ್ಕೂ ಅವಳಿಗಿರುತ್ತದೆ. ಈ ಹಿನ್ನೆಲೆಯಲ್ಲಿ, ‘ಮಗು ಬೇಡ’ ಎಂಬ ನಿರ್ಧಾರವು ಭಾರತದಲ್ಲಿ 2019ರಲ್ಲಿ ‘ಆ್ಯಂಟಿ ನೇಟಲಿಸ್ಟ್’ ಆಂದೋಲನವಾಗಿ ರೂಪುಗೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ಈಗ ಜಗತ್ತಿನಾದ್ಯಂತ ಹಬ್ಬಿದೆ.

ಮಗುವನ್ನು ಪಡೆಯುವ ಅಥವಾ ಪಡೆಯದಿರುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮಹಿಳೆಗಿರುವ ಸ್ವಾತಂತ್ರ್ಯಕ್ಕೆ ಭಾರತದಲ್ಲಿ ಕಾನೂನಿನ ಬೆಂಬಲವಂತೂ ದೊರೆತೇ ದೊರೆಯುತ್ತದೆ. ಭಾರತದ ಸಂವಿಧಾನ ಅವರಿಗೆ ಸಮಾನತೆಯ ಹಕ್ಕನ್ನು ನೀಡಿದೆ, ಘನತೆಯಿಂದ ಜೀವಿಸುವ ಹಕ್ಕನ್ನು ನೀಡಿದೆ. ಹಾಗೆಯೇ ಖಾಸಗಿತನದ ಹಕ್ಕನ್ನೂ ನೀಡಿದೆ. ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಕೊಟ್ಟ ಒಂದು ತೀರ್ಪಿನಲ್ಲಿ ಇದೇ ಅಭಿಪ್ರಾಯವನ್ನುಪುನರುಚ್ಚರಿಸಿದೆ. ಮಹಿಳೆಗಿರುವ ಪ್ರಜನನ ಹಕ್ಕು ಅವಳಿಗಿರುವ ವೈಯಕ್ತಿಕ ಸ್ವಾತಂತ್ರ್ಯದ ಮತ್ತೊಂದು ಆಯಾಮ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್‌ ಸಹ ಅನೇಕ ಪ್ರಕರಣಗಳಲ್ಲಿ ಇದನ್ನು ಸ್ಪಷ್ಟಪಡಿಸಿದೆ.

ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಜೀವಿಸುವ ಹಕ್ಕಿದೆ. ಇದೇ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಮಗುವನ್ನು ಹೆರಲು ಅಥವಾ ಹೆರದಿರಲು ನಿರ್ಧರಿಸುವ ಹಕ್ಕನ್ನೂ ನೀಡುತ್ತದೆ. ಪ್ರತಿಯೊಬ್ಬ ಮಹಿಳೆಗೆ ಇರುವ ಈ ಹಕ್ಕು, ನಮ್ಮ ಸಂವಿಧಾನವು ಘನತೆಯಿಂದ ಬಾಳಲು ನೀಡಿರುವ ಮೂಲಭೂತ ಹಕ್ಕಿನ ವಿಸ್ತರಣೆಯೇ ಆಗಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಬೇಡದಿರುವ ಮಗುವನ್ನು ಹೆರುವಂತೆ ಅವಳನ್ನು ಒತ್ತಾಯಿಸುವುದು ಈ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯೇ ಆಗುತ್ತದೆ.

ಮಹಿಳೆಯರ ಮೇಲೆ ಧಾರ್ಮಿಕ ಕಟ್ಟುಕಟ್ಟಲೆಗಳು, ಸಂಪ್ರದಾಯಗಳು ಹಾಗೂ ನಿರೀಕ್ಷೆಗಳು ವಿಧಿಸುವ ಕಟ್ಟುಪಾಡುಗಳು ಮತ್ತು ಸಂವಿಧಾನಾತ್ಮಕವಾಗಿ ಆಕೆಗೆ ದೊರೆತಿರುವ ಸ್ವಾತಂತ್ರ್ಯ ಹಾಗೂ ಹಕ್ಕುಗಳ ನಡುವೆ ಇಂಥ ಸಂಘರ್ಷಗಳು ಉಂಟಾಗುವುದು ನಿರೀಕ್ಷಿತವೇ. ಆದರೆ ಸ್ತ್ರೀಯರ ಬದಲಾದ ಪಾತ್ರವನ್ನು ಒಪ್ಪಿಕೊಂಡು, ಅವರ ವೈಯಕ್ತಿಕ ಹಕ್ಕುಗಳು ಮತ್ತು ಭಾವನೆಗಳನ್ನು ಗೌರವಿಸಿದಲ್ಲಿ ಮಾತ್ರವೇ ವೈಯಕ್ತಿಕ ನೆಲೆಯಲ್ಲಿ ಉಂಟಾಗುವ ಇಂಥ ಸಂಘರ್ಷಗಳನ್ನು ನ್ಯಾಯಾಲಯದ ಮೆಟ್ಟಿಲೇರದೆಯೇ ಬಗೆಹರಿಸಿಕೊಳ್ಳುವುದು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT