ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಲಿ: ನನ್ನ ನೆನಪಿನ ಬುತ್ತಿಯಿಂದ...

ಮೋಹನ್‌ ವಿ. ಕಾತರಕಿ
Published 23 ಫೆಬ್ರುವರಿ 2024, 14:03 IST
Last Updated 23 ಫೆಬ್ರುವರಿ 2024, 14:03 IST
ಅಕ್ಷರ ಗಾತ್ರ

‘ಫಾಲಿ ಅವರು ತೀರಿಹೋದರಂತೆ ನಿಜವೇ?’ ಬೆಳಿಗ್ಗೆ ಎದ್ದ ಕೂಡಲೇ ಓದಿದ ಸಂದೇಶವಿದು. ಫಾಲಿ ನರೀಮನ್‌ ಅವರನ್ನು ನಾವು ಪ್ರೀತಿಯಿಂದ ಫಾಲಿ ಎಂದೇ ಕರೆಯುತ್ತಿದ್ದೆವು. ತಕ್ಷಣದಲ್ಲಿಯೇ ಫಾಲಿ ಅವರ ಕಾರ್ಯದರ್ಶಿಗೆ ಕರೆ ಮಾಡಿದರೆ: ‘ಸರ್‌ ಅವರು ಮಧ್ಯರಾತ್ರಿಯೇ ತೀರಿಕೊಂಡರು’ ಎಂದರು. ಚಹಾ ಹೀರುತ್ತಾ, ಭಾರತದ ಅತ್ಯುತ್ತಮ ನ್ಯಾಯಶಾಸ್ತ್ರಜ್ಞ ಫಾಲಿ ಅವರೊಂದಿಗೆ ಕಳೆದ ದಿನಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಸಾಗಿದವು.

ಫಾಲಿ ಅವರ ಕುರಿತು ಸಾಲು ಸಾಲು ಲೇಖನಗಳು ಬರುತ್ತಿವೆ. ನಿಸ್ಸಂದೇಹವಾಗಿ ಅವರೊಬ್ಬ ಸ್ವಾತಂತ್ರ್ಯೋತ್ತರ ಭಾರತದ ಅಪರಿಮಿತ ಪ್ರತಿಭೆಯ ವಕೀಲ. ಇದ್ದದ್ದನ್ನು ಇದ್ದ ಹಾಗೇ ಹೇಳಲು ಅವರು ಎಂದಿಗೂ ಭಯಪಡುತ್ತಿರಲಿಲ್ಲ. ಅದು ನ್ಯಾಯಾಲಯದಲ್ಲೇ ಆಗಲಿ, ಸಾರ್ವಜನಿಕವಾಗಿಯೇ ಆಗಲಿ. ಅವರೊಬ್ಬ ಅತ್ಯುತ್ತಮ ಕಾನೂನು ವಿದ್ಯಾರ್ಥಿ. ಅವರ ತತ್ವಜ್ಞಾನದ ಆಳ, ಸಾಹಿತ್ಯ ಕುರಿತ ಅವರ ಜ್ಞಾನ ಅಗಾಧವಾದುದು. ಅವರೊಬ್ಬರು ಉತ್ತಮ ಸಂವಿಧಾನತಜ್ಞ ಮತ್ತು ಅಪ್ಪಟ ಉದಾರವಾದಿ.

ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ಫಾಲಿ ಅವರು ತಮ್ಮ ಕಕ್ಷಿದಾರನೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಅದು 1987ರ ಕಾಲಘಟ್ಟ. ಇದೇ ಚರ್ಚೆಯ ಘಟನೆಯೊಂದಿಗೆ ನನ್ನ ಹಾಗೂ ಫಾಲಿ ಅವರ ಮೊದಲ ಭೇಟಿಯಾದದ್ದು. ‘ನಾವು ಈ ಕೇಸನ್ನು ಗೆಲ್ಲಬಹುದು ಅಥವಾ ಸೋಲಬಹುದು. ಆದರೆ, ಒಂದು ಕೇಸಿನ ವಿವರಣೆಯನ್ನು ನಿರರ್ಗಳವಾದ ಇಂಗ್ಲಿಷ್‌ನಲ್ಲಿ ಕೇಳಿಸಿಕೊಂಡೆ!’ ಎಂದು ಕಕ್ಷಿದಾರನಾಗಿದ್ದ ಆ ಸರ್ಕಾರಿ ಅಧಿಕಾರಿ ಹೇಳಿದ್ದು, ಇಂದು ಮತ್ತೆ ನೆನಪಿಗೆ ಸಿಕ್ಕಿತು. 

ನಂತರದ ಫಾಲಿ ಅವರೊಂದಿಗಿನ ಒಡನಾಟ ಶುರುವಾದದ್ದು 1990ರ ಜುಲೈನಲ್ಲಿ. ಹಿರಿಯ ವಕೀಲ ಶರತ್‌ ಜವಳಿ ಅವರು ಐತಿಹಾಸಿಕವಾಗಿರುವ ಕಾವೇರಿ ವಿವಾದಕ್ಕೆ ನನ್ನನ್ನು ದೂಡಿದರು! ನಂತರ ಕೃಷ್ಣ, ಮಹಾದಾಯಿ... ಹೀಗೆ ಒಂದೊಂದಾಗಿಯೇ ಎಲ್ಲವೂ ಸೇರುತ್ತಾ ಹೋದವು. ಅಂತರರಾಜ್ಯ ಜಲ ವಿವಾದವೊಂದಕ್ಕೆ ರಾಜಕೀಯ ಸ್ಥಿತ್ಯಂತರಗಳು ಎಂದಿಗೂ ಇರುತ್ತವೆ. ದಶಕಗಳ ಕಾಲ ಇಂಥ ಕೇಸುಗಳು ಹಲವು ಮಜಲುಗಳನ್ನೂ ಪಡೆದುಕೊಳ್ಳುತ್ತವೆ. ಇದಕ್ಕಾಗಿಯೇ, ಅಮೆರಿಕದವರು ಒಂದು ಮಾತು ಹೇಳುತ್ತಾರೆ: ‘ಅಂತರರಾಜ್ಯ ಜಲ ವಿವಾದಕ್ಕೆ ಒಂದು ತೀರ್ಮಾನ ಎಂದಿರುವುದಿಲ್ಲ. ಸಮಸ್ಯೆಯನ್ನು ನಿರ್ವಹಿಸಬೇಕಷ್ಟೆ’.

ಫಾಲಿ ಅವರೊಂದಿಗೆ ಕೆಲಸ ಮಾಡುವುದು ಎಂದರೆ ಅದೊಂದು ರೀತಿ ವಿಶ್ವವಿದ್ಯಾಲಯದೊಂದಿಗೆ ಇದ್ದಂಥ ಅನುಭವ. ವೃತ್ತಿಪರ ವಕೀಲನಾಗಿ ಅವರು ಸೋಲಿಗೆ ಕುಗ್ಗುತ್ತಲೂ ಇರಲಿಲ್ಲ ಗೆಲುವಿಗೆ ಬೀಗುತ್ತಲೂ ಇರಲಿಲ್ಲ. ಅವರ ವೃತ್ತಿಪರತೆಯು ಪ್ರಶ್ನಾತೀತವಾದುದು. ಅಂತೆಯೇ ಅವರ ಪ್ರಾಮಾಣಿಕತೆ ಕೂಡ.

ತಮ್ಮ ಜೂನಿಯರ್‌ಗಳೊಂದಿಗೆ ಹಾಗೂ ತಮ್ಮ ತಂಡದೊಂದಿಗೆ ಅವರು ಚರ್ಚೆ ಮಾಡುತ್ತಿದ್ದ ‘ಟೇಬಲ್‌’ ಯಾವುದೇ ಬಾಕ್ಸಿಂಗ್‌ ರಿಂಗ್‌ಗಿಂತ ಕಡಿಮೆಯೇನು ಇರುತ್ತಿರಲಿಲ್ಲ. ಕಾಯ್ದೆಗಳ ಯಾವುದೋ ವಾಕ್ಯವನ್ನೋ ನ್ಯಾಯಾಲಯಗಳ ಯಾವುದೋ ತೀರ್ಪನ್ನೋ ಆದೇಶವನ್ನೋ ತಕ್ಷಣದಲ್ಲಿಯೇ ತಮ್ಮ ಮುಂದಿಡುವಂತೆ ಅವರು ಅರಚುತ್ತಿದ್ದರು. ಆ ಟೇಬಲ್ಲಿನ ಮೇಲೆ ಸಾವಿರಾರು ಪೇಪರಿನ ಹಾಳೆಗಳು ಬಿದ್ದಿರುತ್ತಿದ್ದವು. ಅಲ್ಲಿಂದ ಅವರಿಗೆ ಬೇಕಾದುದನ್ನು ಹೆಕ್ಕಿ ಕೊಡಬೇಕಿತ್ತು. ಈಗಿನಂತೆ ಬೇಕಾದದನ್ನು ತಕ್ಷಣದಲ್ಲಿ ಕೊಡುವ ಕೃತಕಬುದ್ಧಿಮತ್ತೆ ಆ ಕಾಲದಲ್ಲಿ ಇರಲಿಲ್ಲ. ಆದ್ದರಿಂದ, ವಕೀಲರು ಹಾಗೂ ತಾಂತ್ರಿಕ ತಜ್ಞರು ಫಾಲಿ ಅವರಿಗೆ ಬೇಕಾದದ್ದನ್ನು ಕೊಡಲು ತಮ್ಮ ತುದಿಗಾಲಿನಲ್ಲಿಯೇ ನಿಲ್ಲಬೇಕಿತ್ತು.

ಮೊದಮೊದಲು ಅವರು ನಡೆಸುತ್ತಿದ್ದ ಕಾನ್ಫರೆನ್ಸ್‌ಗಳಲ್ಲಿ ನಮಗೆ ಅವಮಾನವಾದಂತೆ  ಭಾಸವಾಗುತ್ತಿತ್ತು. ‘ಕಾನ್ಫರೆನ್ಸ್‌ಗಳಲ್ಲಿ ಅವರಿಂದ ಬೈಗುಳ ತಿನ್ನುವುದಕ್ಕಾಗಿಯೇ ನಾವು ಅವರಿಗೆ ಹಣ ನೀಡುತ್ತೇವಾ?’ ಎಂದು ಒಮ್ಮೆ ಒಬ್ಬ ಸರ್ಕಾರದ ಅಧಿಕಾರಿ ಕೇಳಿದ್ದರು. ಅದೇನೇ ಇದ್ದರೂ ಫಾಲಿ ಅವರ ಕಾರ್ಯವಿಧಾನವನ್ನು ನಾವು ನಿಧಾನವಾಗಿಯೇ ಅರ್ಥ ಮಾಡಿಕೊಂಡೆವು. ಫಾಲಿ ಅವರ ಬಳಿ ಕಾನೂನಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವ ತಂಡವೊಂದಿತ್ತು. ಈ ತಂಡವು ನೀಡುವ ಉದ್ದುದ್ದ ವಿವರಣೆಗಳನ್ನು ಕೇಳಿಸಿಕೊಳ್ಳುವುದು ಫಾಲಿ ಅವರಿಗೆ ಸಹ್ಯವಾಗುತ್ತಿರಲಿಲ್ಲ. ಆದರೆ, ತಮಗೆ ಏನು ಬೇಕೋ ಅದರ ಕುರಿತ ಮಾಹಿತಿಗಳನ್ನು ಆ ತಂಡ ನೀಡಬೇಕು ಎಂದು ಅವರು ಬಯಸುತ್ತಿದ್ದರು. ಆದರೆ, ಮಾಹಿತಿ ಒದಗಿಸಲು ಆ ತಂಡ ಮಾತ್ರ ಹೈರಾಣಾಗುತ್ತಿತ್ತು.

ಕಳೆದ ಮೂರು ದಶಕಗಳಲ್ಲಿ ಫಾಲಿ ಅವರೊಂದಿಗೆ 5 ಸಾವಿರಕ್ಕೂ ಹೆಚ್ಚಿನ ಗಂಟೆಗಳನ್ನು ಕಳೆದಿದ್ದೇನೆ. ಈ ಎಲ್ಲಾ ಗಂಟೆಗಳಲ್ಲೂ ಅವರೊಂದಿಗೆ ಕಳೆದ ನೆನಪುಗಳಿವೆ. ತಮ್ಮ ಜೂನಿಯರ್‌ಗಳನ್ನು ಅವರ ನಿಕ್‌ನೇಮ್‌ಗಳಿಂದಲೇ ಅವರು ಕರೆಯುತ್ತಿದ್ದರು. ಒಬ್ಬರನ್ನು ಫ್ಯಾಟಿ ಅನ್ನುತ್ತಿದ್ದರು. ಇನ್ನೊಬ್ಬರಿಗೆ ಗುರು ಅಂತ ಕರೆಯುತ್ತಿದ್ದರು. ತಮ್ಮ ಪ್ರಶ್ನೆಗಳಿಗೆ ತಮ್ಮ ಜೂನಿಯರ್‌ಗಳು ಉತ್ತರಿಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಅವರನ್ನು ನಿಲ್ಲಿಸಿ, ‘ತಡಬಡಾಯಿಸಬೇಡ’ ಎಂದುಬಿಡುತ್ತಿದ್ದರು. ತಾಂತ್ರಿಕ ತಜ್ಞರು ಹಾಗೂ ಎಂಜಿನಿಯರ್‌ಗಳತ್ತ ಬೊಟ್ಟು ತೋರಿಸಿ, ‘ನಿಮ್ಮ ಲೆಕ್ಕಾಚಾರಗಳು ನೆಟ್ಟಗಿದ್ದಾವಾ ನೋಡಿಕೊಳ್ಳಿ’ ಎನ್ನುತ್ತಿದ್ದರು. ತಮ್ಮ ತಂಡದ ಸದಸ್ಯರಿಗೆ ಒಂದಿಲ್ಲೊಂದು ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದರು. ಕೆಲವೊಮ್ಮೆ, ಸರಿಯಾಗಿ ಸಂವಹನ ನಡೆಸುವಂತೆ ಚುಚ್ಚುತ್ತಿದ್ದರು.  

ಕಾವೇರಿ ವಿವಾದಕ್ಕೆ ಸಂಬಂಧಿಸಿದ ನ್ಯಾಯಮಂಡಳಿಯ ಮಧ್ಯಂತರ ಆದೇಶವೊಂದನ್ನು ರದ್ದುಪಡಿಸುವ ಉದ್ದೇಶದ ಸುಗ್ರೀವಾಜ್ಞೆಯ ಕರಡನ್ನು ಫಾಲಿ ಅವರು ಬರೆಯುತ್ತಿದ್ದರು. ಆಗ ಸಚಿವರೊಬ್ಬರು, ‘ಮಧ್ಯಂತರ ಆದೇಶವನ್ನಲ್ಲ ನ್ಯಾಯಮಂಡಳಿಯ ತೀರ್ಪನ್ನೇ ರದ್ದು ಮಾಡುವಂತಾಗಬೇಕು ಎನ್ನುವುದನ್ನು ನಮ್ಮ ಶಾಸಕರು ಬಯಸುತ್ತಿದ್ದಾರೆ’ ಎಂದರು. ಕರಡು ಬರೆಯುತ್ತಿದ್ದ ಫಾಲಿ ಅವರು ಸಚಿವರತ್ತ ತಲೆ ಎತ್ತಿ, ‘ನಿಮ್ಮ ಶಾಸಕರಿಗೆ ಹೋಗಿ ಹೇಳಿ. ಅವರ ಸ್ಥಾನವಷ್ಟೇ ಅಲ್ಲ, ಸರ್ಕಾರವೇ ಉಳಿಯುವುದಿಲ್ಲವೆಂದು...’ ಎಂದಿದ್ದರು. ನ್ಯಾಯಮಂಡಳಿ ನೀಡಿದ್ದ ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿತು. ಈ ವೇಳೆ ಹಾಸ್ಯವಾಡಿದ ಫಾಲಿ, ‘ಸಾವಧಾನದಿಂದ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಇದೇ ಕಾಲುವೆಯಲ್ಲಿ ಮೂರು ಅಡಿ ಆಳದಲ್ಲಿ ಅಥವಾ ಕಾಲುವೆಯಿಂದ ಮೂರು ಅಡಿ ಆಚೆ ಹೂಳುತ್ತಾರೆ’ ಎಂದಿದ್ದರು.

ಕಾವೇರಿ ವಿವಾದ ಪ್ರಕರಣದಲ್ಲಿ ತಮ್ಮ ಬಹುಕಾಲದ ಸ್ನೇಹಿತ ಸ್ವಾಮಿನಾಥನ್‌ ಅವರನ್ನು ಪಾಟಿಸವಾಲು ಮಾಡಿದ ಆ ಎರಡು ದಿನಗಳು ಫಾಲಿ ಅವರು ಎದುರಿಸಿದ ಕಷ್ಟದ ದಿನಗಳು. ಅದು ಇಬ್ಬರು ದಿಗ್ಗಜರ ಸಮರವಾಗಿತ್ತು. ಎರಡು ದಿನಗಳವರೆಗೆ ಸ್ವಾಮಿನಾಥನ್‌ ಅವರ ಮೇಲೆ ಫಾಲಿ ಅವರು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದರು. ‘ನೀವು ಹೆಚ್ಚು ಗಮನ ಕೊಟ್ಟು ಉತ್ತರಿಸಲೇ ಇ ಲ್ಲ’ ಎಂದು ಫಾಲಿ ಅವರು ಬಹಳ ಸಂಯಮದಿಂದಲೇ ಸ್ವಾಮಿನಾಥನ್‌ ಅವರಿಗೆ ಹೇಳಿದ್ದರು. ಇದಕ್ಕೆ ಸ್ವಾಮಿನಾಥನ್‌ ಅವರು ಬಹಳ ವಿನಯದಿಂದಲೇ ನಕ್ಕು, ಅವರ ಮಾತನ್ನು ಅಲ್ಲಗಳೆದಿದ್ದರು.

ಕರ್ನಾಟಕದ ಮುಖ್ಯಮಂತ್ರಿ, ನೀರಾವರಿ ಹಾಗೂ ಕಾನೂನು ಸಚಿವರು ಫಾಲಿ ಅವರನ್ನು ಭೇಟಿ ಮಾಡಲು ಬರುವುದು ನಿತ್ಯದ ಕೆಲಸವಾಗಿತ್ತು. ಇವರೊಂದಿಗೆ ಮಾಧ್ಯಮದವರೂ ಬರುತ್ತಿದ್ದರು. ದೇವೇಗೌಡರು ಎಂದರೆ ಫಾಲಿ ಅವರಿಗೆ ಬಲು ಪ್ರೀತಿ. ಬಂಗಾರಪ್ಪ ಅವರ ಬಣ್ಣ ಬಣ್ಣದ ಬಟ್ಟೆ, ಆಕರ್ಷಕ ವ್ಯಕ್ತಿತ್ವವನ್ನೂ ಅವರು ಇಷ್ಟಪಡುತ್ತಿದ್ದರು. ಪ್ರಕರಣದ ಕುರಿತು ವೀರಪ್ಪ ಮೊಯಿಲಿ ಅವರು ತೋರಿಸುತ್ತಿದ್ದ ಆಸಕ್ತಿಯನ್ನು ಫಾಲಿ ಅವರು ಮೆಚ್ಚಿಕೊಂಡಿದ್ದರು. ಕೃಷ್ಣ ಅವರ ವ್ಯಕ್ತಿತ್ವದಿಂದ ಅವರು ಪ್ರಭಾವಿತರಾಗಿದ್ದರು. ಸಂಕಷ್ಟದ ಕಾಲವನ್ನು ಎದುರಿಸುತ್ತಿದ್ದ ಸಿದ್ದರಾಮಯ್ಯ ಅವರ ಛಾತಿಯನ್ನೂ ಪ್ರಶಂಸಿಸಿದ್ದರು. ತಮ್ಮ ಸ್ನೇಹಿತ ಎಸ್‌.ಆರ್‌. ಬೊಮ್ಮಾಯಿ ಅವರ ಮಗ ಎಂದು ಬಸವರಾಜ ಬೊಮ್ಮಾಯಿ ಅವರನ್ನು ಪ್ರೀತಿಸುತ್ತಿದ್ದರು. ಎಂ.ಸಿ. ನಾಣಯ್ಯ ಅವರ ಮಾತುಗಾರಿಕೆ, ಆಲಮಟ್ಟಿ ಪ್ರಕರಣದ ಕುರಿತು ಎಚ್.ಕೆ. ಪಾಟೀಲರು ತೋರಿದ ಆಸಕ್ತಿ, ಕಾನೂನು ಹೋರಾಟ ನಡೆಸುವ ಎಂ.ಬಿ.ಪಾಟೀಲರ ಉತ್ಸಾಹದ ಕುರಿತೂ ಫಾಲಿ ಅವರಿಗೆ ಮೆಚ್ಚುಗೆ ಇತ್ತು. 

ಫಾಲಿ ಅವರ ಯುಗ ಮುಗಿದಿದೆ. ಅವರು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದ್ದಾರೆ. ರಾಜ್ಯಕ್ಕಾದ ಅನ್ಯಾಯವನ್ನು ಅವರು ಸರಿಪಡಿಸಿದ್ದರು. ರಾಜ್ಯದ ಸಂಕಷ್ಟದ ಘಳಿಗೆಗಳಲ್ಲಿ ಫಾಲಿ ಅವರು ಸಮರ್ಥವಾಗಿ ಮಾರ್ಗದರ್ಶ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದ ಒಪ್ಪಂದದಂತೆ ವರ್ಷಕ್ಕೆ 320 ಟಿಎಂಸಿ ಅಡಿ ಕಾವೇರಿ ನೀರನ್ನು ಕರ್ನಾಟಕ ಬಿಡಬೇಕಿತ್ತು. ಫಾಲಿ ಅವರು ಈ ಪ್ರಮಾಣವನ್ನು 177.25 ಟಿಎಂಸಿ ಅಡಿಗೆ ಇಳಿಸಿದರು. ಆಲಮಟ್ಟಿ ಅಣೆಕಟ್ಟೆಯನ್ನು 524.256 ಮೀಟರ್‌ಗೆ ಏರಿಸಲು ಒಪ್ಪಿಗೆ ಸಿಕ್ಕಿತು. ಹುಬ್ಬಳ್ಳಿ–ಧಾರವಾಡಕ್ಕೆ ಮಹಾದಾಯಿ ನೀರು ಸಿಕ್ಕಿತು. ಎಚ್‌.ಕೆ. ಪಾಟೀಲ ಅವರು ವಿಧಾನಸಭೆ ಅಧಿವೇಶನದಲ್ಲಿ ಫಾಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಆ ವೇಳೆ ಅವರು, ‘ಫಾಲಿ ನರೀಮನ್‌ ಅವರು ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ರಾಜ್ಯದ ಕಾಲುವೆಯೊಂದಕ್ಕೆ ಅವರ ಹೆಸರಿಡಬೇಕು’ ಎಂದಿದ್ದರು. ಪಾಟೀಲರು ಸರಿಯಾದುದ್ದನ್ನೇ ಹೇಳಿದ್ದಾರೆ.

ಲೇಖಕ: ಹಿರಿಯ ವಕೀಲ, ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT