ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಾತ್ತ ವ್ಯಕ್ತಿ ಹಾಗೂ ಶ್ರೇಷ್ಠ ವಕೀಲರಾಗಿದ್ದ ಫಾಲಿ ನರೀಮನ್

ಪ್ರೊ. ಬಿ.ಕೆ.ಚಂದ್ರಶೇಖರ್
Published 23 ಫೆಬ್ರುವರಿ 2024, 9:43 IST
Last Updated 23 ಫೆಬ್ರುವರಿ 2024, 9:43 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ವಕೀಲರು ಮತ್ತು ನ್ಯಾಯಶಾಸ್ತ್ರಜ್ಞರು ಆಗಿದ್ದ ದಿವಂಗತ ಫಾಲಿ ನರೀಮನ್ ಅವರು ನನಗೆ ವೈಯಕ್ತಿಕವಾಗಿ ಚಿರಪರಿಚಿತರಾಗಿದ್ದು, ವಿಶೇಷವಾಗಿದೆ. ಈ ಸಂಬಂಧ ನಾನು ಎರಡು ಘಟನೆಗಳನ್ನು ನೆನಪಿಸಿಕೊಳ್ಳುತ್ತೇನೆ - ಒಂದು ವಿಧಾನ ಪರಿಷತ್ತಿನ ಸ್ಥಾನಮಾನಕ್ಕೆ ಸಂಬಂಧಿಸಿದ ಘಟನೆ ಹಾಗೂ ಮತ್ತೊಂದು ನನ್ನ ವೈಯಕ್ತಿಕ ಬದುಕಿನದ್ದು.

ನಾನು ವಿಧಾನ ಪರಿಷತ್‍ನ ಸಭಾಪತಿಯಾಗಿದ್ದಾಗ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ಅದರ ಸಾಂವಿಧಾನಿಕ ಸ್ಥಾನಮಾನದ ಬಗ್ಗೆ ನಿರ್ಣಾಯಕ ಅಂಶವನ್ನು ಉದ್ದೇಶಿಸಿ ಮಾತನಾಡಲು ಮತ್ತು ಸಂವಿಧಾನದ ಅಡಿಯಲ್ಲಿ ವಿಧಿಸಲಾದ ರಾಷ್ಟ್ರಪತಿ ಆಳ್ವಿಕೆಯ ಸಮಯದಲ್ಲಿ ವಿಧಾನ ಪರಿಷತ್ತಿನ ಪಾತ್ರದ ಬಗ್ಗೆ ಅವರ ಒಳನೋಟ ಮತ್ತು ವಿಶ್ಲೇಷಣೆಗಳನ್ನು ಬೆಂಗಳೂರಿಗೆ ಬಂದು ತಿಳಿಸುವಂತೆ ನರೀಮನ್ ಅವರಿಗೆ ವಿನಂತಿಸಿದ್ದೆ.

ರಾಷ್ಟ್ರಪತಿ ಆಳ್ವಿಕೆಯ ಹೇರಿಕೆಯಿಂದಾಗಿ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿಲ್ಲದಿದ್ದರೂ, ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷನಾಗಿದ್ದ ನಾನು, ವಿಧಾನ ಪರಿಷತ್ತಿನ ವಿವಿಧ ಸಮಿತಿಗಳ ಸಭೆಗಳನ್ನು ನಡೆಸಲು ನಮಗೆ ಸಂವಿಧಾನದತ್ತ ಅಧಿಕಾರ ನೀಡಲಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೆ.

ಹಿರಿಯ ವಕೀಲರಾಗಿದ್ದ ನರೀಮನ್ ಅವರು ಅಧಿಕ ಕಾರ್ಯದೊತ್ತಡದ ನಡುವೆಯೂ, ನನ್ನ ಆಹ್ವಾನವನ್ನು ತಕ್ಷಣವೇ ಒಪ್ಪಿಕೊಂಡರು. ಅವರು ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಲವಾರು ನ್ಯಾಯಾಧೀಶರು ಸೇರಿದಂತೆ ವಿಧಾನಸೌಧದಲ್ಲಿ ತುಂಬಿದ್ದ ಸದನವನ್ನುದ್ದೇಶಿಸಿ ಮಾತನಾಡಿದರು.

‘ಇದುವರೆಗೆ ಭಾರತದ ಯಾವುದೇ ವೇದಿಕೆಯಲ್ಲಿ ಪ್ರಸ್ತಾಪಿಸದೇ ಇರುವ ಒಂದು ಮಹತ್ವದ ಸಾಂವಿಧಾನಿಕ ವಿಷಯವನ್ನು ಪ್ರಸ್ತಾಪಿಸಲು ದೆಹಲಿಯಿಂದ ನಾನು ಇಲ್ಲಿಗೆ ಬಂದಿದ್ದೇನೆ‘ ಎಂದು ನರೀಮನ್ ಅವರು ತಮ್ಮ ಭಾಷಣವನ್ನು ಆರಂಭಿಸಿದರು.

‘ರಾಷ್ಟ್ರಪತಿಗಳ ಆಳ್ವಿಕೆಯಿಂದಾಗಿ ವಿಧಾನ ಪರಿಷತ್ತಿನ ಸಮಿತಿಗಳ ಕಾರ್ಯಚಟುವಟಿಕೆಗೆ ಯಾವುದೇ ಸಾಂವಿಧಾನಿಕ ನಿರ್ಬಂಧವಿಲ್ಲ, ಏಕೆಂದರೆ ಪರಿಷತ್ತನ್ನು ರದ್ದುಗೊಳಿಸಿರುವುದಿಲ್ಲ‘ ಎಂಬುದು ನರೀಮನ್ ಅವರ ವಿಶ್ಲೇಷಣೆಯಾಗಿತ್ತು.

ಸಂವಿಧಾನದ ಅನ್ವಯ, ಯಾವುದೇ ಪ್ರಾಮಾಣಿಕ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯು ‘ಮೇಲ್ಮನೆ ಶಾಶ್ವತತೆ’ಯನ್ನು ಪ್ರಸ್ತಾಪಿಸುತ್ತದೆ. ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ (ಎಂಎಲ್‍ಸಿ) ಸಮಿತಿಗಳು ರಾಷ್ಟ್ರಪತಿ ಆಳ್ವಿಕೆಯಂತಹ ಸಂದರ್ಭದಲ್ಲೂ ಹಾಗೂ ಯಾವುದೇ ಸರ್ಕಾರ ಅಸ್ತಿತ್ವದಲ್ಲಿಲ್ಲದೇ ಇದ್ದರೂ ಯಾವುದೇ ಅಡೆತಡೆಯಿಲ್ಲದೆ ಕಾರ್ಯ ನಿರ್ವಹಿಸಬಹುದು. ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ, ಈ ಸಮಿತಿಗಳು ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಬಹುದು. ಇದಕ್ಕೆ ಪೂರಕವಾಗಿ ನರೀಮನ್ ಅವರು ಹಲವು ಪ್ರಜಾಸತ್ತಾತ್ಮಕ ಸಂವಿಧಾನಗಳಲ್ಲಿರುವ ನಿಬಂಧನೆಗಳೂ ಹಾಗೂ ಕಾನೂನಿನ ಪರಿಕಲ್ಪನೆಗಳನ್ನು ಉಲ್ಲೇಖಿಸಿದ್ದರು.

ಇದೇ ವೇಳೆ, ರಾಷ್ಟ್ರಪತಿ ಆಳ್ವಿಕೆಯ ಭಾಗವಾಗಿ ರಾಜ್ಯಪಾಲರ ಸಲಹೆಗಾರರಾಗಿ ನೇಮಕಗೊಂಡ ಹಿರಿಯ ಐಎಎಸ್ ಅಧಿಕಾರಿಗಳು ಸಮಿತಿಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಬಾರದು ಎಂದು ಆಗಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸಲಹೆ ನೀಡಿದ್ದರು. ಇದು ಫಾಲಿ ನರೀಮನ್ ಅವರು ವಿಧಾನ ಪರಿಷತ್‍ನ ಸ್ಥಾನಮಾನ ಹಾಗೂ ಅದರ ಅಸ್ತಿತ್ವಕ್ಕೆ ನೀಡಿರುವ ಮಹತ್ತರ ಕೊಡುಗೆಯಾಗಿದೆ.

ಪ್ರೊ. ಬಿ.ಕೆ.ಚಂದ್ರಶೇಖರ್

ಪ್ರೊ. ಬಿ.ಕೆ.ಚಂದ್ರಶೇಖರ್

ನರೀಮನ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ

ನರೀಮನ್, ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ. ತಮಗೆ ಪರಿಚಿತ ವ್ಯಕ್ತಿಗಳ ವಿಷಯಕ್ಕೆ ಸಂಬಂಧಿಸಿದಂತೆ ಭಾವನಾತ್ಮಕವಾಗಿ ಸ್ಪಂಧಿಸುತ್ತಿದ್ದರು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ನನ್ನ ಮಗ ಮಾನಸ್, ದೆಹಲಿಯ ನರೀಮನ್ ಅವರ ಕಚೇರಿಯಲ್ಲಿ ಇಂಟರ್ನ್‍ಶಿಪ್ ಪೂರೈಸುತ್ತಿದ್ದರಿಂದ ನನಗೆ ಅವರ ಪರಿಚಯವಾಯಿತು. ನಮ್ಮ ಮನೆಯಲ್ಲಿ ಏರ್ಪಡಿಸಿದ್ದ ಭೋಜನಕೂಟಕ್ಕೆ ತಮ್ಮ ಪತ್ನಿ ಸಮೇತ ನರೀಮನ್ ಅವರು ಹಾಜರಾಗಿದ್ದರು. ಈ ಭೋಜನಕೂಟದಲ್ಲಿ ನನ್ನ ಸ್ನೇಹಿತರೂ ಮತ್ತು ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಕರ್ನಾಟಕದ ಅಡ್ವೋಕೇಟ್ ಜನರಲ್ ಆಗಿದ್ದ ಎ.ಎನ್.ಜಯರಾಮ್ ಮತ್ತು ಆರ್.ಎನ್.ನರಸಿಂಹಮೂರ್ತಿ, ಹಿರಿಯ ವಕೀಲರೂ ಹಾಗೂ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‍ನ ಕೆಲವು ವಿದ್ಯಾರ್ಥಿಗಳು ಹಾಜರಿದ್ದರು.

ನರೀಮನ್ ಅವರ ಹಾಸ್ಯ ಮಿಶ್ರಿತ ಮಾತುಗಳು, ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ನಡೆದಿದ್ದ ಹಲವು ಆನಂದದಾಯಕ ಸನ್ನಿವೇಶಗಳು ಮತ್ತು ಹಾಸ್ಯಮಯ ಘಟನೆಗಳನ್ನು ನೆನಪಿಸಿಕೊಂಡ ರೀತಿಯಿಂದಾಗಿ ಇಡೀ ಭೋಜನಕೂಟ ಸ್ಮರಣೀಯವಾಗಿತ್ತು. ಬೆಂಚ್ ಮತ್ತು ಬಾರ್‌ನಲ್ಲಿರುವ ಅವರ ಕೆಲವು ಸ್ನೇಹಿತರನ್ನು ಅವರು ಹಾಸ್ಯದ ಮೂಲಕ ಅನುಕರಣೆ ಮಾಡಿದಾಗ ಜನರು ನಗುತ್ತಿದ್ದರು.

ಅವರ ಎಲ್ಲಾ ಆಲೋಚನೆ ಹಾಗೂ ಅವಲೋಕನಗಳು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಆಳವಾದ ನಂಬಿಕೆಯಿಂದ ಸ್ಪಷ್ಟವಾಗಿ ಗುರುತಿಸಲ್ಪಟ್ಟಿವೆ. ನರೀಮನ್ ಅವರ ಅಗಲಿಕೆಯಿಂದಾಗಿ, ನಾವು ಒಬ್ಬ ಉದಾತ್ತ ವ್ಯಕ್ತಿ ಮತ್ತು ಒಬ್ಬ ಶ್ರೇಷ್ಠ ವಕೀಲರನ್ನು ಕಳೆದುಕೊಂಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT