ಶಾಂತಿ–ಸೌಹಾರ್ದದ ರಾಯಭಾರಿಯ ರೂಪದಲ್ಲಿ ವಿಶ್ವವೇ ಗೌರವಿಸುವ ಗಾಂಧೀಜಿ ವಿಚಾರಧಾರೆ, ದ್ವೇಷ ಭಾಷಣಗಳಿಂದ ಗಾಸಿಗೊಳ್ಳುತ್ತಿರುವ ಮನಸ್ಸುಗಳನ್ನು ಅರಳಿಸುವ ಅಮೃತಸಿಂಚನ. ಸಮಾಜದ ನ್ಯಾಯಮಾರ್ಗವನ್ನು ಎತ್ತಿಹಿಡಿಯಲು ಹಂಬಲಿಸುವವರಿಗೆ ಗಾಂಧಿಮಾರ್ಗವೇ ಅಮೃತಪಥ.

ಇಡೀ ವಿಶ್ವವೇ ಗಾಂಧಿ ಅವರನ್ನು ಶಾಂತಿದೂತ ಎಂದು ಗುರುತಿಸಿದೆ. ಅಹಿಂಸೆ ಹಾಗೂ ಶಾಂತಿಯ ಜಾಗತಿಕ ಪ್ರತಿಪಾದಕ ಎಂದೇ ಗಾಂಧಿ ಒಟ್ಟು 102 ದೇಶಗಳಲ್ಲಿ ಬಣ್ಣನೆಗೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ಆ ದೇಶಗಳಲ್ಲಿ ಗಾಂಧಿ ಪ್ರತಿಮೆಗಳೂ ಇವೆ. ಕಳೆದ ಎರಡು ಸಹಸ್ರಮಾನಗಳಲ್ಲಿ ಜನಿಸಿದ 10 ಶ್ರೇಷ್ಠ ವ್ಯಕ್ತಿಗಳಲ್ಲಿ ಗಾಂಧಿ ಅವರೂ ಒಬ್ಬರಾಗಿದ್ದು, ಈ ದಿಗ್ಗಜನ ಕುರಿತು ಪ್ರಕಟವಾದಷ್ಟು ಬರಹಗಳು ಬೇರೆ ಯಾರ ಬಗೆಗೂ ಬಂದಿಲ್ಲ.

ನಮ್ಮ ದೇಶದ ಪ್ರಧಾನಿ ಕೂಡ ‘ಗಾಂಧಿ ಜಾಗತಿಕ ಮೂರ್ತಿ’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಅಹಮದಾಬಾದ್ನ ಸಾಬರಮತಿ ಆಶ್ರಮದಲ್ಲಿರುವ ಗಾಂಧಿ ಸ್ಮಾರಕವನ್ನು ವಿಶ್ವದರ್ಜೆಗೆ ಪರಿವರ್ತಿಸುವುದಾಗಿಯೂ ಹೇಳಿದ್ದರು. ₹1,200 ಕೋಟಿಯ ಈ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿ ಈಗ ನಡೆಯುತ್ತಿದೆ. ಭಾರತದ ಯಾರೇ ಪ್ರಮುಖ ನಾಯಕರಾಗಲಿ, ಗಾಂಧಿ ಅವರನ್ನು ಕೈಬಿಡುವುದು ಸಾಧ್ಯವೇ ಇಲ್ಲ. ಗಾಂಧಿ ಅವರು ಭಾರತದ ಜಾಗತಿಕ ಚಹರೆ ಎನ್ನುವುದು ಸೂರ್ಯ ಸ್ಪಷ್ಟ. ಹೀಗಾಗಿಯೇ ಅವರ ಸ್ಮರಣೆ ನಿರಂತರ.

2014ರ ನವೆಂಬರ್ನಿಂದ 2025ರ ಸೆಪ್ಟೆಂಬರ್ವರೆಗೆ ವಿದೇಶಿ ಸಂಸತ್ಗಳಲ್ಲಿ ನಮ್ಮ ಪ್ರಧಾನಿ ಮಾಡಿದ 17 ಭಾಷಣಗಳಲ್ಲಿ 6ರಲ್ಲಿ ಗಾಂಧಿ ಕುರಿತು ಪ್ರಸ್ತಾಪಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಅಂತರರಾಷ್ಟ್ರೀಯ ‘ಬ್ರ್ಯಾಂಡಿಂಗ್’ ಉದ್ದೇಶದಿಂದ ಗಾಂಧಿ ಹೆಸರನ್ನು ಪರೋಕ್ಷವಾಗಿಯಾದರೂ ಬಳಸಿಕೊಂಡಿದ್ದಾರೆ. ಸುಸ್ಥಿರ ಪ್ರಗತಿ ಹಾಗೂ ಸಮಾನತೆಯ ಬಗ್ಗೆ ಮಾತನಾಡುವಾಗಲೆಲ್ಲ ಅವರು ಗಾಂಧಿ ಮೂಲತತ್ತ್ವಗಳನ್ನು ಉಲ್ಲೇಖಿಸಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವಾಗ ಗಾಂಧಿ ಅವರ ‘ವಸುಧೈವ ಕುಟುಂಬಕಂ’ ಸಂದೇಶವನ್ನು ಪದೇ ಪದೇ ಅರುಹಿದ್ದಾರೆ. ರಾಜತಾಂತ್ರಿಕ ಉದ್ದೇಶದ ದೃಷ್ಟಿಯಿಂದ ಇದು ಪ್ರಧಾನಿ ಅವರಿಗೆ ಗಿಟ್ಟುವ ವರಸೆಯೂ ಆಗಿದೆ.

ದೇಶದಲ್ಲಿಯೂ ಅವರು ‘ಗಾಂಧಿ’ ನಾಮಬಲವನ್ನು ಜಪಿಸುತ್ತಲೇ ಬಂದಿದ್ದಾರೆ. 2014ರ ಅಕ್ಟೋಬರ್ 2ರಂದು ‘ಸ್ವಚ್ಛ ಭಾರತ ಅಭಿಯಾನ’ ಪ್ರಾರಂಭಿಸಿದ್ದಾಗ, ಇತ್ತೀಚೆಗೆ ಸ್ವದೇಶಿ ಮಂತ್ರ ಪಠಿಸಿದಾಗ ಗಾಂಧಿ ತತ್ತ್ವದ ಸಂಕೇತಗಳು ಅವರ ಮಾತಿನಲ್ಲಿ ಎದ್ದುಕಂಡಿದ್ದವು. ದೆಹಲಿ ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್ನಲ್ಲಿ ಚೆಕ್–ಇನ್ ವಿಭಾಗ ಪ್ರವೇಶಿಸುವಾಗ ಬೃಹತ್ ಚರಕವೊಂದು ಆಕರ್ಷಿಸುತ್ತದೆ. ಜನರು ಅದನ್ನು ನೋಡದೇ ಸಾಗಲು ಸಾಧ್ಯವೇ ಇಲ್ಲ. ಬರ್ಮಾ ಟೀಕ್ನಲ್ಲಿ ಮಾಡಿದ ಆ ಚರಕದ ತೂಕ ನಾಲ್ಕು ಟನ್. ಆ ಚರಕವನ್ನು ಅನಾವರಣಗೊಳಿಸಿದ ಸಮಾರಂಭದಲ್ಲಿ ಪ್ರಧಾನಿ ಆಡಿದ ಮಾತಿನಲ್ಲಿ, ‘ಸುಸ್ಥಿರತೆ ಹಾಗೂ ಸಾಮರಸ್ಯದ ಮೌಲ್ಯಗಳು ಹಾಗೂ ಕಾಲಾತೀತವಾದ ಪರಂಪರೆಯನ್ನು ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಸಾಗುವ ಪ್ರಯಾಣಿಕರಿಗೆಲ್ಲ ಈ ಚರಕ ನೆನಪಿಸಲಿದೆ’ ಎಂದಿದ್ದರು. ದೇಶದ ನಾಗರಿಕರು ಖಾದಿಗೆ ಉತ್ತೇಜನ ನೀಡಬೇಕೆಂದು ಕರೆ ನೀಡಿದ್ದರು. ಅಹಮದಾಬಾದ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ‘ಗಾಂಧಿ–ಜಿ ಕೆ ಪದ್ ಚಿಹ್ನಾ’ (ಗಾಂಧೀಜಿಯ ಹೆಜ್ಜೆಗುರುತು) ಎಂಬ ಪ್ರದರ್ಶನವೊಂದನ್ನು ನೋಡದೇ ಸಾಗುವ ಪ್ರಯಾಣಿಕರೂ ವಿರಳ.

ಇಷ್ಟೆಲ್ಲ ಇದ್ದರೂ, ಗಾಂಧಿ ತಾವು ಯಾವ ದೇಶಕ್ಕಾಗಿ ಹುಟ್ಟಿ, ಯಾವುದಕ್ಕಾಗಿ ಮೃತಪಟ್ಟರೋ ಅಲ್ಲಿ ಕಳೆದ 25 ವರ್ಷಗಳಿಂದ ಅವರನ್ನು ಕುರಿತ ದ್ವೇಷ ಪ್ರಚಾರವನ್ನು ಹರಿತಗೊಳಿಸಲಾಗುತ್ತಿದೆ. ಮುಸ್ಲಿಂ ಪಕ್ಷಪಾತಿ ಎಂದು ಆರೋಪಿಸಿ ಅವರನ್ನು ಟೀಕಿಸುತ್ತಿದ್ದಾರೆ. ಅಸ್ಪೃಶ್ಯತೆಯನ್ನು ಹೋಗಲಾಡಿಸಲು 15 ವರ್ಷ ಅವರು ಪಟ್ಟುಬಿಡದೆ ಮಾಡಿದ ಹೋರಾಟವನ್ನೂ ಇಂದು ಗೇಲಿ ಮಾಡುವವರಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್, ನೇತಾಜಿ ಸುಭಾಷ್ ಚಂದ್ರ ಬೋಸ್ ಇಬ್ಬರನ್ನೂ ನಿರ್ಲಕ್ಷಿಸಿದರು ಎಂಬ ಕಾರಣ ನೀಡಿ, ಗಾಂಧೀಜಿಯನ್ನು ಖಂಡಿಸುತ್ತಿದ್ದಾರೆ. ಭಗತ್ ಸಿಂಗ್ ನೇಣುಹಾಕಿಕೊಳ್ಳಲು ಗಾಂಧಿ ಅವರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿದ ಕೊಡುಗೆಯನ್ನು ಮೂಲೆಗುಂಪು ಮಾಡಲಾಗಿದೆ. ‘ರಾಷ್ಟ್ರಪಿತ’ ಎಂದು ಬೋಸ್ ಅವರೇ ನೀಡಿದ್ದ ಗುಣವಿಶೇಷಣವೇ ಅಪಹಾಸ್ಯಕ್ಕೀಡಾಗುತ್ತಿದೆ. ಸಾಮಾಜಿಕ ಮಾಧ್ಯಮವಂತೂ ಗಾಂಧಿ ಕುರಿತು ಎಷ್ಟೆಲ್ಲ ಸಾಧ್ಯವೋ ಅಷ್ಟೂ ವಿನಾಶಕಾರಿ ಸಂಗತಿಗಳನ್ನು ನಮ್ಮ ಮನಸ್ಸಿಗೆ ತುರುಕುತ್ತಿದೆ.

‘ಗಾಂಧಿಯ ಗುಜರಾತ್’ ಎಂಬ ಜನಪ್ರಿಯ ನಾಣ್ಣುಡಿಯೊಂದು ಇತ್ತು. ಅದೀಗ ಕಳಪೆ ನುಡಿಗಟ್ಟಾಗಿ ಬದಲಾಗಿದೆ. ಉತ್ಪಾದಿತ ಕ್ರೌರ್ಯವೊಂದನ್ನು ದ್ವೇಷದ ಪೊರೆಯೊಳಗೆ ಇರಿಸಿ, ಜನರ ಮಿದುಳು–ಹೃದಯದೊಳಗೆ ಇಳಿಬಿಡಲಾಗಿದೆ. ಹಿಂದುತ್ವ ತೀವ್ರವಾದಿಗಳು ಕಾನೂನು ಸಂರಕ್ಷಕರ ಅಂಕೆಗೂ ಅಂಜದೆ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ನವರಾತ್ರಿಯ ಗರ್ಬಾ ಉತ್ಸವದ ಟಿಕೆಟ್ ಹಾಗೂ ಪಾಸ್ಗಳಲ್ಲಿ ಮುಸ್ಲಿಮರಿಗೆ ಎಷ್ಟನ್ನು ನೀಡಲಾಗಿದೆ ಎಂದು ಆಯೋಜಕರನ್ನು ಈ ಹಿಂದುತ್ವದ ತೀವ್ರವಾದಿಗಳು ವಿಚಾರಣೆಗೆ ಒಳಪಡಿಸಿರುವ ಆತಂಕಕಾರಿ ವಿದ್ಯಮಾನವೊಂದನ್ನು ಕಂಡಿದ್ದೇವೆ.

ಈ ವರ್ಷದ ಆರಂಭದಲ್ಲಿ ದ್ವೇಷ ಭಾಷಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂಬ ಸಂಗತಿ ವರದಿಯಾಗಿತ್ತು. 2024ರಲ್ಲಿ 1,165 ದ್ವೇಷ ಭಾಷಣಗಳನ್ನು ಮಾಡಿದ್ದರು. ಅದಕ್ಕೂ ಹಿಂದಿನ ವರ್ಷ ವರದಿಯಾಗಿದ್ದ ದ್ವೇಷ ಭಾಷಣಗಳ ಸಂಖ್ಯೆ 668. ರಾಜಕೀಯ ರ್ಯಾಲಿಗಳು, ಧಾರ್ಮಿಕ ಮೆರವಣಿಗೆಗಳು, ಪ್ರತಿಭಟನಾ ಮೆರವಣಿಗೆಗಳು, ಸಾಂಸ್ಕೃತಿಕ ಸಮಾರಂಭಗಳಲ್ಲಿ ಇಂತಹ ದ್ವೇಷ ಭಾಷಣಗಳನ್ನು ಕೇಳಿದ್ದೇವೆ. ಕಳೆದ ವರ್ಷ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದ್ವೇಷ ಭಾಷಣಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಉಂಟಾಯಿತು.

ಹಗೆತನದ ವಾತಾವರಣ, ಜಾತಿ–ಆಧಾರಿತ ಹಿಂಸೆಯ ವಿರುದ್ಧದ ಹೋರಾಟಕ್ಕೆ ಗಾಂಧಿ ತಮ್ಮ ಜೀವಿತದ ಬಹುಕಾಲವನ್ನು ವ್ಯಯಿಸಿದ್ದರು. ದಲಿತರಿಗೆ ಸಾಂವಿಧಾನಿಕ ಹಕ್ಕು ಒದಗಿಸುವ ಹೋರಾಟದ ನೇತೃತ್ವ ವಹಿಸಿದ್ದ ಬಿ.ಆರ್. ಅಂಬೇಡ್ಕರ್ ಅವರೊಟ್ಟಿಗೆ ಇದ್ದ ತೀಕ್ಷ್ಣ ಭಿನ್ನಾಭಿಪ್ರಾಯದ ಹೊರತಾಗಿಯೂ ಗಾಂಧಿ ಅಸ್ಪೃಶ್ಯತೆ ಹೋಗಲಾಡಿಸುವ ಹೋರಾಟವನ್ನು ಮುಂದುವರಿಸಿದ್ದರು. ನಾವು ಭಾರತೀಯರು ಅಂಬೇಡ್ಕರ್, ಗಾಂಧಿ ಇಬ್ಬರೂ ಪ್ರತಿಪಾದಿಸಿದ ವಿಚಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸೋತಿದ್ದೇವಲ್ಲವೆ? ತಥಾಕಥಿತ ಪ್ರಬಲ ಜಾತಿಗಳು ದಲಿತರನ್ನು ಅವಮಾನಿಸುವ, ಹೀಗಳೆಯುವ, ಅವರ ಮೇಲೆ ದೌರ್ಜನ್ಯ–ಅತ್ಯಾಚಾರ ಮಾಡುವ ಹಾಗೂ ಕೊಲ್ಲುವ ಯಾವ ಅವಕಾಶಗಳನ್ನೂ ಬಿಟ್ಟಿಲ್ಲವಲ್ಲ.

ದ್ವೇಷ ಭಾಷಣವು ಪೂರ್ವಯೋಜಿತ ಹಾಗೂ ರಾಜಕೀಯ ಪ್ರೇರಿತ. ಇಂತಹ ಆಂದೋಲನವನ್ನು ರೂಪಿಸುವ ಮಿದುಳುಗಳು, ಸಮಾಜದ ಅಂಚಿನಲ್ಲಿ ಇರುವವರು ಸದಾ ಅದೇ ಸ್ಥಿತಿಯಲ್ಲಿ ಇರಬೇಕು ಎಂದೇ ಬಯಸುತ್ತಿರುತ್ತವೆ. ದ್ವೇಷ ಹರಡುವುದು, ನೋಯಿಸುವುದು, ಭೇದ–ಭಾವ ಮಾಡುವುದು, ಹಗೆತನ ಸಾಧಿಸುವುದು... ಇಂತಹ ವಾತಾವರಣದಿಂದ ಆಗಬಹುದಾದ ಪರಿಣಾಮ ಎಂಥದೆಂಬ ಅರಿವು ಭಾರತದ ನಾಗರಿಕರಲ್ಲಿ ಇನ್ನೂ ಮೂಡಿಲ್ಲ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಜನರು ಹಾಗೂ ನೇರವಾಗಿ ಸರ್ಕಾರವು ವಂಚನೆಯ ಆಟವಾಡಿದರೆ, ಆ ಸಮುದಾಯದವರು ಗೋಡೆಯ ಮೂಲೆಗೆ ಸಿಲುಕಿದ ಸ್ಥಿತಿ ತಲುಪುತ್ತಾರೆ. ಆ ಸಮುದಾಯಗಳಲ್ಲಿ ದುಡಿಯುವ ಕೈಗಳಿಗೆ ಸರಿಯಾದ ಅವಕಾಶ ಸಿಗದಿದ್ದಲ್ಲಿ ಮೊದಲೇ ಹತಾಶೆ ಮನೆಮಾಡಿರುತ್ತದೆ. ಹೀಗಿರುವಾಗ ಮೂಲೆಗುಂಪು ಮಾಡುವ ಹುನ್ನಾರ ನಡೆದರೆ, ಅವರೆಲ್ಲ ದಂಗೆ ಏಳುವ ದಿನ ಬಂದೇ ಬರಲಿದೆ. ದ್ವೇಷ ಹಾಗೂ ಹಿಂಸೆಯ ಚಕ್ರ ಯಾವಾಗ ಬೇಕಾದರೂ ಹೀಗೆ ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಬರಬಲ್ಲದು. ಹೀಗಾದಲ್ಲಿ ಇಡೀ ದೇಶವನ್ನೇ ಅದು ನುಂಗಿಹಾಕುತ್ತದೆ.

ಮಹಾತ್ಮ ಗಾಂಧಿ ತಮ್ಮ ಇಡೀ ಬದುಕಿನಲ್ಲಿ ಜಾತಿ ಆಧಾರಿತ ಹಿಂಸೆಯನ್ನು ಕೊನೆಗಾಣಿಸಲು ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಹಿಂದೂ–ಮುಸ್ಲಿಂ ಏಕತೆಯನ್ನೂ ಪ್ರತಿಪಾದಿಸಿದರು. ಹಾಗಿದ್ದೂ ಅವರ ಶ್ರೇಷ್ಠ ವ್ಯಕ್ತಿತ್ವವನ್ನೇ ಮುಕ್ಕಾಗಿಸುವ ವ್ಯವಸ್ಥಿತ ಪ್ರಚಾರಗಳು ಭಾರತದಲ್ಲಿ ನಡೆಯುತ್ತಿವೆ. ಅಸ್ಪೃಶ್ಯತೆ ಹೋಗಲಾಡಿಸಿ, ಸಮಾನತೆ ಸ್ಥಾಪಿಸಬೇಕು ಎಂದು ಅವರು ಅಷ್ಟೆಲ್ಲ ಪ್ರಯತ್ನಗಳನ್ನು ನಡೆಸಿದ್ದರೂ ಇಂದಿಗೂ ದಲಿತರು, ಮುಸ್ಲಿಮರನ್ನು ಭೇದ–ಭಾವದಿಂದ ನೋಡಲಾಗುತ್ತಿದೆ. 2025ರಲ್ಲೂ ಅವರ ಮೇಲೆ ದೌರ್ಜನ್ಯ–ಹಿಂಸೆ ನಡೆಯುತ್ತಿದೆ. ಗಾಂಧಿ ಹಾಗೂ ಅಂಬೇಡ್ಕರ್ ತತ್ತ್ವಗಳನ್ನು ತುಳಿದುಹಾಕಿದ ನಡೆ ಇದು.

ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳು ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡುತ್ತಿವೆ. ‘ಕೆಳ ಜಾತಿ’ ಎನ್ನುತ್ತಾ ಮೂದಲಿಸಿ, ಬಹಿಷ್ಕಾರ ಹಾಕುತ್ತಿವೆ. ಹೀಗೆ ಮಾಡುವುದರಿಂದ, ಘರ್ಷಣೆ, ಪ್ರತೀಕಾರದ ಪೋಷಣೆ ಮಾಡಿದಂತಾಗುತ್ತಿದೆ. ಗಾಂಧಿತತ್ತ್ವಗಳಾದ ಸತ್ಯಾಗ್ರಹ, ಸತ್ಯಾನ್ವೇಷಣೆ, ಅಹಿಂಸೆ, ಜಾಗತಿಕ ಏಕತೆ ವಿಶ್ವದ ಅನೇಕ ಚಳವಳಿಗಳಿಗೆ ಸ್ಫೂರ್ತಿ ನೀಡಿದವು. ಆದರೆ, ಭಾರತದಲ್ಲಿ ಕೆಲವರು ಕ್ಷುಲ್ಲಕ ಅನುಕೂಲಸಿಂಧುತ್ವಕ್ಕಾಗಿ ಇತಿಹಾಸವನ್ನು ತಿರುಚುತ್ತಿರುವುದರಿಂದ ಗಾಂಧಿತತ್ತ್ವಗಳಿಗೇ ಅಪಾಯ ಉಂಟಾಗಿದೆ. ಗಾಂಧಿ ಅವರ 156ನೇ ಜನ್ಮ ದಿನಾಚರಣೆಯ ಸಂದರ್ಭಕ್ಕೆ ಅರ್ಥ ಬರಬೇಕೆಂದರೆ, ಭಾರತವು ದ್ವೇಷವನ್ನು ಬಿಡಬೇಕು. ಪರಸ್ಪರ ಸಂವಾದದಲ್ಲಿ ನಂಬಿಕೆ ಇರಿಸಬೇಕು. ಸಮಾಜದ ಒಡಕನ್ನು ಮುಚ್ಚುವ ನ್ಯಾಯಮಾರ್ಗವನ್ನು ಎತ್ತಿಹಿಡಿಯಬೇಕು. ಆಗಷ್ಟೇ ಶಾಂತಿಯುತ ಭವಿಷ್ಯ ನಮ್ಮದಾದೀತು.

(ಲೇಖಕರು, 1920ರಲ್ಲಿ ಗಾಂಧೀಜಿ ಸ್ಥಾಪಿಸಿದ ಗುಜರಾತ್ ವಿದ್ಯಾಪೀಠದ ಮಾಜಿ ವೈಸ್ ಚಾನ್ಸಲರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.