ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ: ದುಬೈ ಶೃಂಗಸಭೆ, ಬರೀ ಶೃಂಗಾರಸಭೆ!

ಬಿಸಿಪ್ರಳಯ ಕುರಿತ ಜನಜಾಗೃತಿಗೆಂದು ಈಗ ವಿಜ್ಞಾನಿಗಳೇ ಬಂಡಾಯಕ್ಕಿಳಿದಿದ್ದಾರೆ: ನಾಗೇಶ ಹೆಗಡೆ ಅವರ ಲೇಖನ
Published 13 ಡಿಸೆಂಬರ್ 2023, 19:25 IST
Last Updated 13 ಡಿಸೆಂಬರ್ 2023, 19:25 IST
ಅಕ್ಷರ ಗಾತ್ರ

ದುಬೈ ಎಂದರೆ ಭೋಗಲಾಲಸೆಗಳ ಸಾಮ್ರಾಜ್ಯ; ಕೊಳ್ಳುಬಾಕರ ಸ್ವರ್ಗ. ಅಲ್ಲಿನ ಮರಳುಗಾಡಿನಲ್ಲಿ ನಗರ ನಿರ್ಮಾಣಕ್ಕೆ 12 ಸಾವಿರ ಕಿ.ಮೀ. ದೂರದ ಆಸ್ಟ್ರೇಲಿಯಾದಿಂದ ಮರಳನ್ನು ಸಾಗಿಸಿ ತಂದಿದ್ದಿದೆ. ಅಲ್ಲಿ ಮೋಜಿನ ಹಿಮಕ್ರೀಡೆಗೆಂದು ಮಂಜುಗಡ್ಡೆಗಳ ಕೃತಕ ಬೆಟ್ಟವನ್ನೇ ಸೃಷ್ಟಿಸಿದ್ದಿದೆ. 62 ಪಂಚತಾರಾ ಹೋಟೆಲ್‌ಗಳು ಅಲ್ಲಿವೆ. ದುಬೈ ಸೃಷ್ಟಿಯಾಗಿದ್ದೇ ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲೊಂದಾದ ಯ.ಎ.ಇ. (ಸಂಯುಕ್ತ ಅರಬ್‌ ಎಮಿರೇಟ್ಸ್‌) ಎಂಬ ದೇಶದಲ್ಲಿ. ಮನುಷ್ಯರ ವಾಸಕ್ಕೇ ಯೋಗ್ಯವಲ್ಲದ ನೆಲವನ್ನು ತೈಲಶಕ್ತಿಯಿಂದಾಗಿಯೇ ಕಳೆದ ಎಂಟು ವರ್ಷಗಳಲ್ಲಿ ಅತಿಭೋಗದ ನೆಲೆಯನ್ನಾಗಿ ಪರಿವರ್ತಿಸಲಾಗಿದೆ.

ಅಂಥ ದುಬೈಯಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲೆಂದು ಈ ಬಾರಿ 28ನೇ ಜಾಗತಿಕ ಶೃಂಗಸಭೆ (ಕಾಪ್‌28) ಏರ್ಪಾಡಾಗಿತ್ತು. ತೈಲಶಕ್ತಿಗೆ ವಿದಾಯ ಹೇಳಲೇಬೇಕೆಂದು ಒತ್ತಾಯಿಸಬೇಕಿದ್ದ ಈ ಶೃಂಗಸಭೆಗೆ ಅಧ್ಯಕ್ಷರಾಗಿ ಯುಎಇಯ ಅತಿದೊಡ್ಡ ತೈಲ ಕಂಪನಿಯ ಮುಖ್ಯಸ್ಥ ಡಾ. ಸುಲ್ತಾನ್‌ ಅಹ್ಮದ್‌ ಅಲ್‌ ಜೇಬರ್‌ ನಿಯುಕ್ತಿಗೊಂಡಿದ್ದರು. ತೈಲಶಕ್ತಿಯ ಪರಮೋಚ್ಚ ಉದಾಹರಣೆಯಾಗಿ ಇದು ಇದುವರೆಗಿನ ಅತ್ಯಂತ ವೈಭವದ ಶೃಂಗಸಭೆ ಎಂಬುದು ದಾಖಲಾಯಿತು. ನವೆಂಬರ್‌ 30ರಿಂದ ಆರಂಭವಾದ ಸಭೆಗೆ 2,848 ವಿಮಾನಗಳು ಬಂದಿಳಿದವು. ಸುಮಾರು ಇನ್ನೂರು ದೇಶಗಳ 84 ಸಾವಿರ ಪ್ರತಿನಿಧಿಗಳ ಮಹಾಮೇಳ ಅದಾಗಿತ್ತು. ಇಥಿಯೋಪಿಯಾದಿಂದ ಜೀವಂತ ಮರಗಳನ್ನೇ ತಂದು ಕಾಡನ್ನಾಗಿ ಪರಿವರ್ತಿಸಿ ಪ್ರದರ್ಶನಕ್ಕಿಡಲಾಗಿತ್ತು.

ತಾಪಮಾನ ಏರಿಕೆಯಿಂದ ಜೀವಮಂಡಲವನ್ನು ಉಳಿಸಲೆಂದು ಈ ವಾರ್ಷಿಕ ಕಾಪ್‌ ಸಭೆಯಲ್ಲಿ ಸರ್ಕಾರಗಳ ಮುಖ್ಯಸ್ಥರು, ಖಾಸಗಿ ಕಂಪನಿಗಳು, ಪರಿಸರವಾದಿಗಳು, ವಿಜ್ಞಾನಿಗಳು, ಉದ್ಯಮಿಗಳು, ಚಿಂತಕರು ಮತ್ತು ಸರ್ಕಾರೇತರ ಸಂಘಟನೆಗಳ ವಕ್ತಾರರು ಪಾಲ್ಗೊಳ್ಳುತ್ತಾರೆ. ಇವರೆಲ್ಲರ ಮೇಲೆ ಒತ್ತಡ ಹೇರಬಯಸುವ ಪ್ರತಿಭಟನಕಾರರ ಸಮೂಹಕ್ಕೂ ಅಲ್ಲಿ ಜಾಗವನ್ನು ಕಲ್ಪಿಸಲಾಗುತ್ತದೆ. ಒಳಗೆ ವಿವಿಧ ವೇದಿಕೆಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗಲೇ ಹೊರಗಡೆ ಬೀದಿಭಾಷಣ, ಘೋಷಣೆ, ಹಾಡು, ಕುಣಿತ, ಅಣಕುನಾಟಕ, ಛದ್ಮನೃತ್ಯ ಹಾಗೂ ಆದಿವಾಸಿಗಳ ಅಸಲಿ ವೇಷಗಳು ಮಾಧ್ಯಮಗಳಿಗೆ ರಂಜನೆಯನ್ನೂ ಒದಗಿಸುತ್ತವೆ. ಯುಎಇಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಅವಕಾಶ ಇಲ್ಲದ ಕಾರಣ, ಪ್ರತಿಭಟನಾ ಪ್ರತಿನಿಧಿಗಳಿಗೆಂದೇ ಒಂದು ಪ್ರತ್ಯೇಕ ಕ್ಷೇತ್ರವನ್ನು ವಿಶ್ವಸಂಸ್ಥೆಯೇ ಅಲ್ಲಿ ಮೀಸಲಿಟ್ಟಿತ್ತು. ಅಲ್ಲೂ ಅರಬ್‌ ದೊರೆಗಳ ಹೆಸರು, ಚಿತ್ರಗಳಿಗೆ ನಿಷೇಧವಿತ್ತು. ‘ಖಾಸಗಿ ವಿಮಾನಗಳ ಸಂಚಾರವನ್ನು ನಿಷೇಧಿಸಿ’ ಎಂದು ಹಿಂದಿನ ಹತ್ತಾರು ಶೃಂಗಸಭೆಗಳಲ್ಲಿ ಇವರು ಒತ್ತಾಯಿಸಿದ್ದರೂ ಈ ಬಾರಿ ಅವುಗಳ ಸಂತೆಯೇ ಅಲ್ಲಿ ನೆರೆದಿತ್ತು. ಬ್ರಿಟನ್‌ ಒಂದರಿಂದಲೇ ಪ್ರಧಾನಿ ರಿಷಿ ಸುನಕ್‌, ಕಿಂಗ್‌ ಚಾರ್ಲ್ಸ್‌, ಡೇವಿಡ್‌ ಕ್ಯಾಮರೂನ್‌ ಮೂವರೂ ಮೂರು ಖಾಸಗಿ ವಿಮಾನಗಳಲ್ಲಿ ಬಂದಿಳಿದಿದ್ದರು.

ಮುತ್ಸದ್ದಿಗಳ ಸಭೆಯಲ್ಲಿ ತೈಲದ್ದೇ ಜಟಾಪಟಿ. ಭೂತಾಪ ಏರಿಕೆಗೆ ಕಾರಣವಾದ ಇಂಗಾಲವನ್ನು ಮತ್ತೆ ನೆಲದೊಳಕ್ಕೆ ತೂರಿಸುವ ತಂತ್ರಜ್ಞಾನಕ್ಕೆ ಎಲ್ಲ ತೈಲರಾಷ್ಟ್ರಗಳ (ಒಪೆಕ್‌) ಒತ್ತು ಇತ್ತೇ ಹೊರತು ಇಂಧನ ತೈಲದ ಬಳಕೆಯನ್ನು ತಗ್ಗಿಸಲು ಯಾರೂ ಒಪ್ಪುತ್ತಿಲ್ಲ. ಆ ತಂತ್ರಜ್ಞಾನ ಈಗಿನ್ನೂ ಸಿದ್ಧಿಸಿಲ್ಲ. ಅಷ್ಟೊಂದು ಇಂಗಾಲವನ್ನು ಭೂಗರ್ಭಕ್ಕೆ ತೂರಿಸಿದರೆ ಅಡ್ಡ ಪರಿಣಾಮ ಏನೆಂದು ಗೊತ್ತಿಲ್ಲ. ಮೇಲಾಗಿ ತೀರ ದುಬಾರಿ. ಅದರಿಂದ ಬಳಕೆದಾರರಿಗೆ ಹೊರೆ ಬೀಳುತ್ತದೆ ವಿನಾ ತೈಲ ಉತ್ಪಾದಕರಿಗೆ ಚಿಂತೆ ಇಲ್ಲ; ಅದಕ್ಕೇ ಅಧ್ಯಕ್ಷರು ‘ವಿಜ್ಞಾನದಲ್ಲಿ ನಮಗೆ ನಂಬಿಕೆ ಇದೆ’ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ತೈಲ ಬಳಕೆಯನ್ನು ತಗ್ಗಿಸುವ ಪ್ರಸ್ತಾವಗಳಿಗೆಲ್ಲ ಅಡ್ಡಗಾಲು ಹಾಕಲೆಂದೇ 2,400ಕ್ಕೂ ಹೆಚ್ಚು ತೈಲಾಧಿಪತಿಗಳು ಅಲ್ಲಿ ನೆರೆದಿದ್ದರು. ಡಿಸೆಂಬರ್‌ 12ರಂದೇ ಸಭೆ ಮುಗಿಯಬೇಕಿದ್ದರೂ ನಿನ್ನೆ ಮಧ್ಯಾಹ್ನದವರೆಗೂ ಅವರು ತಮ್ಮ ಪಟ್ಟನ್ನು ಸಡಿಲಿಸಿಲ್ಲ. ಇತರ ಚಿಕ್ಕಪುಟ್ಟ ಹಳೇ ಪ್ರಸ್ತಾವಗಳಿಗೆ ಸಹಿ ಬಿತ್ತು. ಬಡರಾಷ್ಟ್ರಗಳ ಬರ-ನೆರೆ-ಬೆಂಕಿಯ ಪರಿಹಾರಕ್ಕೆಂದು ಶ್ರೀಮಂತ ದೇಶಗಳು100 ಶತಕೋಟಿ ಡಾಲರ್‌ ಕೊಡಬೇಕೆಂಬ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂತು (ಇದುವರೆಗೆ ಸಂಗ್ರಹವಾಗಿದ್ದು ಬರಿ $ 70 ಕೋಟಿ). ಬಡದೇಶಗಳ ಪ್ರತಿನಿಧಿಗಳಂತೂ ಕಂಗೆಟ್ಟಿದ್ದರು. ‘ನಮ್ಮದೇ ಮೃತ್ಯುದಂಡಕ್ಕೆ ಸಹಿ ಹಾಕಲು ನಾವಿಲ್ಲಿ ಬಂದಂತಾಯ್ತೆ?’ ಎಂದಳು, ಸಮೋವಾ ದ್ವೀಪದೇಶದ ಪ್ರತಿನಿಧಿ ಬ್ರಿಯಾನಾ ಫೀಯಮ್‌.

ಈ ಬಾರಿಯ ವಿಶೇಷ ಏನೆಂದರೆ ವಿಜ್ಞಾನಿಗಳೇ ಪ್ರತಿಭಟನೆಗೆ ಇಳಿದಿದ್ದು. ದುಬೈಯಲ್ಲಲ್ಲ, ವಿವಿಧ ರಾಷ್ಟ್ರಗಳ ರಾಜಧಾನಿಗಳಲ್ಲಿ ಅವರು ಬೀದಿಗೆ ಬಂದಿದ್ದರು. ಇದಕ್ಕೆಂದೇ ಅವರು ‘ಬಂಡಾಯ ವಿಜ್ಞಾನಿಗಳು’ ಎಂಬ ಸಂಘಟನೆಯನ್ನು 2021ರಲ್ಲೇ ಆರಂಭಿಸಿದ್ದಾರೆ (ನೋಡಿ: scientistrebellion.org). ಅವರ ಪ್ರಕಾರ ಪಟ್ಟಭದ್ರ ರಾಜಕಾರಣಿಗಳು, ಉದ್ಯಮಪತಿಗಳು ಮತ್ತು ಧವಳಕೀರ್ತಿಯ ವಿಜ್ಞಾನಿಗಳು ಬರೀ ಮಾತಾಡುತ್ತಿದ್ದಾರೆ. ಕಾಲ ಮಿಂಚುತ್ತಿದೆ. ಭೂತಾಪ ನಿಯಂತ್ರಣಕ್ಕೆ ತುರ್ತಾಗಿ ಉಗ್ರಕ್ರಮ ಕೈಗೊಳ್ಳದಿದ್ದರೆ ಜೀವಮಂಡಲಕ್ಕೆ ಉಳಿಗಾಲವಿಲ್ಲ. ‘ತುರ್ತು ಕ್ರಮ ಬೇಕಿದೆ. ಆದರೆ ಕಳೆದ 30 ವರ್ಷಗಳಿಂದ ಶೃಂಗಸಭೆ, ಆಶ್ವಾಸನೆ, ಪೊಳ್ಳುಘೋಷಣೆಗಳೇ ಆಗುತ್ತಿವೆ, ಕಾರ್ಬನ್‌ ಮಟ್ಟ ಏರುತ್ತಲೇ ಇದೆ. ವಿಜ್ಞಾನಿಗಳಾಗಿ ನಾವು ಈ ವೈಫಲ್ಯವನ್ನು ನೋಡುತ್ತ ಕೂತಿರಬೇಕೆ?’ ಎಂದು ಕೇಳುತ್ತಾರೆ, ನಾರ್ವೆಯ ಜೀವವಿಜ್ಞಾನಿ ಫರ್ನಾಂಡೊ ರಾಸಿಮೊ.

ವಿಜ್ಞಾನಿಗಳೆಂದರೆ ಸತ್ಯಶೋಧನೆ ಮಾಡುತ್ತ ನಿರ್ಲಿಪ್ತರಾಗಿರಬೇಕು ಎಂಬ ಶಿಷ್ಟಾಚಾರವನ್ನು ಈ ಬಂಡಾಯಗಾರರು ಧಿಕ್ಕರಿಸುತ್ತಾರೆ. ‘ಅದೆಷ್ಟೊಂದು ವರ್ಷಗಳಿಂದ ನಾವು ವೈಜ್ಞಾನಿಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. ಸರ್ಕಾರಕ್ಕೆ ವರದಿ, ಶಿಫಾರಸು ನೀಡುತ್ತಿದ್ದೇವೆ. ಮಾಧ್ಯಮಗಳಿಗೆ ತಿಳಿಸುತ್ತಿದ್ದೇವೆ. ಎಲ್ಲವೂ ವಿಫಲವಾಗಿವೆ. ಜೀವಲೋಕದ ಉಳಿವಿಗಾಗಿ ಈಗ ಅಹಿಂಸಾತ್ಮಕ ಹೋರಾಟಕ್ಕೆ ಇಳಿಯಲೇಬೇಕಾಗಿದೆ’ ಎಂದು ಇವರು ಹೇಳುತ್ತಿದ್ದಾರೆ. ಗ್ರೀನ್‌ಪೀಸ್‌ ಯೋಧರ ಮಾದರಿಯಲ್ಲಿ ಇವರು ಕಲ್ಲಿದ್ದಲನ್ನು ಸಾಗಿಸುವ ರೈಲಿನ ಹಳಿಗಳ ಮೇಲೆ ಹಠಾತ್ತಾಗಿ ಕೂರುತ್ತಾರೆ. ವಸ್ತುಸಂಗ್ರಹಾಲಯಕ್ಕೆ ನುಸುಳಿ ಪ್ರೇಕ್ಷಕರಿಗೆ ಬಿಸಿಪ್ರಳಯದ ಕುರಿತು ದಿಢೀರ್‌ ಲೆಕ್ಚರ್‌ಶೋ ಕೊಡುತ್ತಾರೆ. ಸಿನಿಮಾ ಫಲಕಗಳ ಮೇಲೆ ವೈಜ್ಞಾನಿಕ ಪ್ರಬಂಧಗಳ ದೊಡ್ಡ ಹೆಡ್‌ಲೈನ್‌ಗಳನ್ನು ಅಂಟಿಸುತ್ತಾರೆ. ಇಂಥ ಪ್ರತಿಭಟನೆಗಳಲ್ಲಿ ತೊಡಗಿ ದಂಡ ತೆತ್ತವರ ಹಾಗೂ ಶಿಕ್ಷೆ ಅನುಭವಿಸುತ್ತಿರುವ ವಿಜ್ಞಾನಿಗಳ ಉದ್ದ ಪಟ್ಟಿಯೇ ಅವರ ವೆಬ್‌ಸೈಟಿನಲ್ಲಿದೆ.

ಈ ಬಾರಿ ಬಂಡಾಯ ವಿಜ್ಞಾನಿಗಳು ದುಬೈ ಶೃಂಗಸಭೆಗೆ ಮುನ್ನ ಒಂದು ಸಾಮೂಹಿಕ ಹೇಳಿಕೆಯನ್ನು ನೀಡಿದ್ದರು: ‘ನಾವು ನಿಜಕ್ಕೂ ಕಂಗಾಲಾಗಿದ್ದೇವೆ; ನಮಗೆ ನಿಮ್ಮ ಸಹಾಯ ಬೇಕಿದೆ. ನೀವು ಯಾರೇ ಆಗಿರಿ, ಎಲ್ಲೇ ಇರಿ, ಕ್ಲೈಮೇಟ್‌ ಚಳವಳಿಗೆ ಧುಮುಕಿ. ಸಂಘಟನೆಯನ್ನು ಆರಂಭಿಸಿ ಅಥವಾ ಸಂಘಟನೆಗೆ ಸೇರಿಕೊಳ್ಳಿ. ಕ್ಲೈಮೇಟ್‌ ಕುರಿತು ಎಲ್ಲೇ ಸಭೆ ನಡೆದರೂ ಸೇರಿಕೊಳ್ಳಿ’ ಎಂದು ಈ ಪತ್ರಕ್ಕೆ 1,447 ವಿಜ್ಞಾನಿಗಳು ಸಹಿ ಹಾಕಿದ್ದಾರೆ. ವಿಶ್ವಸಂಸ್ಥೆಯ ಆದೇಶದ ಮೇರೆಗೆ ತಾಪಮಾನ ಏರಿಕೆಯ ಗತಿಯನ್ನು ದಾಖಲಿಸುತ್ತಿರುವ 33 ವಿಜ್ಞಾನಿಗಳೂ ಇದಕ್ಕೆ ಸಹಿ ಹಾಕಿದ್ದಾರೆ. (‘ನಾವೆಲ್ಲ ಉತ್ತಮ ಪೂರ್ವಜರಾಗೋಣ’ ಎಂದು ಹಿಂದಿನ ಈಜಿಪ್ಟ್‌ ಶೃಂಗಸಭೆಯಲ್ಲಿ ಇವರು ಹೇಳಿದ್ದು ಈ ಅಂಕಣದ ಹೆಡ್‌ಲೈನ್‌ ಆಗಿತ್ತು).

ಅಹ್ಮದಾಬಾದ್‌ ವಿಶ್ವವಿದ್ಯಾಲಯದ ‘ಜಾಗತಿಕ ಪರಿಸರ ಅಧ್ಯಯನ ಕೇಂದ್ರ’ದ ಮಹಿಳಾ ವಿಜ್ಞಾನಿ ಡಾ. ಮಿನಾಲ್‌ ಪಾಠಕ್‌ ಕೂಡ ಈಗಿನ ಪತ್ರಕ್ಕೆ ಸಹಿ ಹಾಕಿದ್ದಾರೆ. ‘ನನಗಂತೂ ಸಿಟ್ಟೇ ಬರುತ್ತಿದೆ. ಎಂಥದೇ ವೈಜ್ಞಾನಿಕ ಸಾಕ್ಷ್ಯವನ್ನು ಮುಂದಿಟ್ಟು ನಾವು ಸಂಶೋಧನ ಪ್ರಬಂಧವನ್ನು ಬರೆದರೂ ಎಷ್ಟೇ ಮಹತ್ವದ ವೇದಿಕೆಯಲ್ಲಿ ಘಂಟಾಘೋಷ ಹೇಳಿದರೂ ನಿರೀಕ್ಷಿತ ಪ್ರತಿಕ್ರಿಯೆ ಸಿಗುತ್ತಿಲ್ಲ. ವಿಶ್ವನಾಯಕರಿಗೆ ಯಾಕಿದು ಅರ್ಥವಾಗುತ್ತಿಲ್ಲವೊ?’ ಎಂದು ಅವರು ಹೇಳುತ್ತಾರೆ.

ಅಂಥ ವಿಶ್ವನಾಯಕರ ವಿರುದ್ಧ ಶೃಂಗಸಭೆಯ ಆವರಣದಲ್ಲಿ ಮೊಳಗುತ್ತಿದ್ದ ಘೋಷಣೆಗಳನ್ನು ಹತ್ತಿಕ್ಕುವ ಯತ್ನ ಈ ಬಾರಿ ಜಾಸ್ತಿಯೇ ಇತ್ತು. ಆದರೆ, ಸಭೆಯ ಒಳಗೇ ವೇದಿಕೆ ಏರಿ 12 ವರ್ಷದ ಮಣಿಪುರದ ಬಾಲಕಿ ಲಿಸಿಪ್ರಿಯಾ ಕಂಗುಜಮ್‌ ಎಂಬಾಕೆ ಕೂಗಿದ ಘೋಷಣೆ ಮಾತ್ರ ನೂರಾರು ದೇಶಗಳಲ್ಲಿ ಮೊಳಗಿತು. ‘ಫಾಸಿಲ್‌ ಇಂಧನಗಳಿಗೆ ಬಹಿಷ್ಕಾರ ಹಾಕಿ’ ಎಂದು ಅವಳು ಕೂಗಿದಾಗ ಸಭಾಂಗಣದಲ್ಲಿ ಭರ್ಜರಿ ಚಪ್ಪಾಳೆ ಬಿತ್ತು. ಆದರೆ ಅವಳಿಗೇ ಶೃಂಗಸಭೆಯಿಂದ ಬಹಿಷ್ಕಾರ ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT