ಭಾರತ ಕಥೆಗಳ ದೇಶ. ಯಾರೋ ಎಂದೋ ಹೇಳಿರುವ ಮತ್ತು ಕೆಲವರು ಈಗ ಹೇಳುತ್ತಿರುವ ಕಥೆಗಳು ನಮ್ಮನ್ನು ಆಳುತ್ತಿವೆ. ನಮಗೊಂದು ಸಂವಿಧಾನ ಇದೆ; ಅದು ನಮ್ಮನ್ನು ನಿಯಂತ್ರಿಸುತ್ತಿದೆ ಎಂಬುದು ನಮ್ಮ ಸಾಮಾನ್ಯ ನಂಬುಗೆ. ಆದರೆ ನಮ್ಮನ್ನು ನಿಯಂತ್ರಿಸುತ್ತಿರುವ ಮತ್ತೊಂದು ಸಾಂಸ್ಕೃತಿಕ ಸಂವಿಧಾನವೂ ಇದೆ. ಅದು ನಮ್ಮೆದುರಿಗೆ ಕೆಲವು ಕಥೆಗಳನ್ನು ಇಟ್ಟು ನಮ್ಮನ್ನು ನಿಯಂತ್ರಿಸುತ್ತದೆ. ರಾಮಾಯಣ, ಮಹಾಭಾರತ, ಸ್ವರ್ಗ ನರಕದ ಕಥೆಗಳು, ರಾಜಮಹಾರಾಜರ ಕಥೆಗಳು, ಪಾಪಪುಣ್ಯದ ನೂರಾರು ಕಥೆಗಳು, ಒಂದಷ್ಟು ಭಕ್ತಿಯ ಕಥೆಗಳು– ಇವುಗಳ ಮೂಲಕ ನಮ್ಮನ್ನು ಆಳುತ್ತದೆ.

ಈ ದೇಶದಲ್ಲಿ ಯಾರನ್ನು ಕೇಳಿದರೂ ಕಥೆ ಹೇಳುತ್ತಾರೆ. ಅದೂ ಆ ಕಥೆ ನಡೆಯುವಾಗ ತಾನೇ ಎದುರಿಗೆ ಇದ್ದೆ ಅನ್ನುವಂತೆ ಹೇಳುತ್ತಾರೆ. ನಮಗೆ ಕಥೆ ಮತ್ತು ವಾಸ್ತವ, ಪುರಾಣ ಮತ್ತು ಚರಿತ್ರೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹಾಗಾಗಿ ಕೆಲವು ಕಥೆಗಳು ಸಂವಿಧಾನದ ಜಾಗ ಆಕ್ರಮಿಸಿಕೊಳ್ಳುತ್ತಿವೆ. ಸಂವಿಧಾನ ಉಳಿಯಬೇಕಾದರೆ ಕಥೆಗಳನ್ನು ಅನುಮಾನದಿಂದ ನೋಡಬೇಕಾಗಿದೆ.

ಕಥೆಗಳನ್ನು ಕೇಳುತ್ತ ಕೇಳುತ್ತ ಮನುಷ್ಯ ನಿಜವನ್ನು ಕಳೆದುಕೊಳ್ಳುತ್ತಾನೆ. ಕಥೆಗಳಿದ್ದರೆ ಸಾಕು, ನಿಜವೇ ಬೇಡ ಎನ್ನುವಂತಾಗುತ್ತದೆ. ಮಂಡಲ ಪಂಚಾಯಿತಿ ಯಿಂದ ಲೋಕಸಭೆಯವರೆಗೆ ಕಥೆಗಳು ತಮ್ಮ ಜಾಲವನ್ನು ಹರಡಿವೆ. ಅವೀಗ ಬೀದಿಬೀದಿಯಲ್ಲಿ ಮೆರವಣಿಗೆ ಹೊರಟಿವೆ. ಭಾರತದ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಹೊಡೆದಾಟಗಳು, ಕಗ್ಗೊಲೆಗಳು, ದುಷ್ಕೃತ್ಯಗಳು, ಧರ್ಮದ ವ್ಯಾಪಾರಗಳ ಹಿಂದೆ ಇಂತಹ ಅನೇಕ ಕಥೆಗಳಿವೆ!

ಕಥೆಗಳು ಕೇವಲ ಕಥೆಗಳಲ್ಲ. ಪ್ರತಿ ಕಥೆಯ ಹಿಂದೆ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ
ಎರಡೂ ಇರುತ್ತವೆ. ಯಾರೂ ಸುಮ್ಮಸುಮ್ಮನೆ ಕಥೆ ಹೇಳುವುದಿಲ್ಲ. ಯಾವ ಕಥೆಯನ್ನು ಯಾರಿಗೆ ಯಾವಾಗ ಹೇಳಬೇಕು ಎನ್ನುವ ತೀರ್ಮಾನ ದೊಡನೆಯೇ ಹೇಳುತ್ತಾರೆ. ಈ ನೆಲದಲ್ಲಿ ಕಥೆಗಳನ್ನು ಹುಟ್ಟಿಸಿ, ಸಾಕಿ, ಅವು ಬಲಿಷ್ಠವಾದ ಮೇಲೆ ಸಾಮಾನ್ಯರ ಮೇಲೆ ಛೂಬಿಡುವ ತಂಡಗಳೇ ಇವೆ. ತಾವು ಹೇಳಿದ ಕಥೆಯನ್ನು ಕೇಳಿಸಿಕೊಂಡವರು ಏನಾಗುತ್ತಾರೆ ಎಂದು ಅವರಿಗೆ ಗೊತ್ತಿರುತ್ತದೆ. ಅಂತಿಮವಾಗಿ ಕಥೆ ಪರಿಣಮಿಸುವುದು ಕೇಳುಗರಲ್ಲಿ, ಹೇಳಿದವರಲ್ಲಿ ಅಲ್ಲ! ಹಾಗಾಗಿ ಅದರ ಪರಿಣಾಮ ವೇನಿದ್ದರೂ ಕೇಳುಗರ ಮೇಲೆ ಆಗುತ್ತದೆಯೇ ಹೊರತು ಹೇಳಿದವರಿಗೆ ಆಗುವುದಿಲ್ಲ. ಹಾಗಾದರೆ ಕಥೆ ಕೇಳುವ ಸಾಮಾನ್ಯರ ಪಾಡೇನು? ಒಂದೇ ಪರಿಹಾರ: ವಾಸ್ತವವನ್ನು ಕಂಡುಕೊಳ್ಳಲು ಒಂದೋ ಕಥೆಗಳನ್ನು ತಿರಸ್ಕರಿಸಿ ಅಥವಾ ಕಥೆಗಳನ್ನು ಕಥೆಗಳೆಂದು ಮಾತ್ರವೇ ಕೇಳಿಸಿಕೊಳ್ಳಿ. ಪ್ರತಿಕ್ರಿಯಿಸಬೇಡಿ.

ಭಾರತದ ಸಂದರ್ಭದಲ್ಲಿ ಕಥೆಯ ರಾಜಕಾರಣವನ್ನು ಬಲ್ಲವರು ಅದನ್ನು ತುಂಬಾ ಎಚ್ಚರದಿಂದ ನಿರ್ವಹಿಸಿದ್ದಾರೆ. ಬುದ್ಧ ಕಥೆ ಹೇಳಲಿಲ್ಲ, (ಬುದ್ಧನನ್ನು ಕುರಿತು ನಂತರ ಸಾವಿರಾರು ಕಥೆಗಳು ಸೃಷ್ಟಿಯಾದವು!), ಬಸವಣ್ಣನಾಗಲೀ ಬೇರೆ ವಚನಕಾರರಾಗಲೀ ಕಥೆ ಹೇಳಲಿಲ್ಲ, ವಚನಗಳಲ್ಲಿ ರಾಮಾಯಣ ಮಹಾಭಾರತಗಳ ಸೊಲ್ಲಿಲ್ಲ, ತತ್ವಪದಕಾರರು ಕಥೆ ಹೇಳಲಿಲ್ಲ, ಅಂಬೇಡ್ಕರ್ ಕಥೆ ಹೇಳಲಿಲ್ಲ; ವಿಜ್ಞಾನ ಕಥೆ ಹೇಳುವುದಿಲ್ಲ; ಸಂವಿಧಾನ ಕಥೆ ಹೇಳುವುದಿಲ್ಲ. ಹಾಗಾದರೆ ಕಥೆ ಹೇಳುವವರು ಯಾರು? ಯಾವ ಕಥೆಗಳನ್ನು, ಯಾಕೆ ಯಾರಿಗೆ, ಯಾವಾಗ ಹೇಳುತ್ತಾರೆ? ಇವೆಲ್ಲ ಕಥೆಯ ಹಿಂದಿನ ರಾಜಕಾರಣವನ್ನು ನಿರ್ಧರಿಸುತ್ತವೆ. ಹಾಗಾದರೆ ಕಥೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು?

‘ಲೋಕವನ್ನು ಅದು ಇರುವಂತೆ ನೋಡಿ. ಆಗ ಮಾತ್ರ ನಿಮ್ಮ ಮತ್ತು ಲೋಕದ ಸಂಬಂಧವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ತಪ್ಪಾಗಿ ಅರ್ಥಮಾಡಿಕೊಂಡು ನಡೆದುಕೊಂಡರೆ ಅದು ದುಃಖಕ್ಕೆ ಕಾರಣವಾಗುತ್ತದೆ’ ಇದು ಬುದ್ಧ ತಿಳಿಸಿದ ದುಃಖಕಾರಣ. ಮಹಾಮೌನವೇ ಅವನು ಕಥೆಗಳಿಗೆ ನೀಡಿದ ಪ್ರತಿಕ್ರಿಯೆ. ಲೋಕವನ್ನು ಕಥೆಗಳ ಮೂಲಕ ವಿವರಿಸಿಕೊಡುವ ಧರ್ಮಗಳ ಹಿಡಿತದಲ್ಲಿ ಲೋಕ ನರಳುತ್ತಿದೆ. ಭಾರತವೂ ಅದಕ್ಕೆ ಹೊರತಲ್ಲ. ಸಾವಿರಾರು ವರ್ಷಗಳಿಂದ ಈ ನೆಲವನ್ನು ಕೆಲವೇ ಕೆಲವು ಕಥೆಗಳು ಆಳುತ್ತ ಬಂದಿವೆ. ಅಂತಹ ಕಥೆಗಳಿಗೆ ಪ್ರತಿ ಕಥೆಗಳನ್ನು ಕಟ್ಟಿ ಹೇಳುವ ಇನ್ನೊಂದು ತುದಿಯ ರಾಜಕಾರಣ ಕೂಡಾ ನಮ್ಮ ನಡುವೆ ಇದೆ. ಇದೊಂದು ದುರ್ಬಲ ಸಾಂಸ್ಕೃತಿಕ ರಾಜಕಾರಣ. ಈ ಎರಡೂ ತುದಿಗಳು ನಮ್ಮನ್ನು ನಿಜದಿಂದ ಆಚೆಗೆ ಕರೆದುಕೊಂಡು ಹೋಗುತ್ತವೆ. ಹಾಗಾಗಿ ಲೋಕವನ್ನು ಅದು ಇರುವಂತೆಯೇ ನೋಡಲು ಕಥೆಗಳನ್ನು ನಿವಾರಿಸಿಕೊಳ್ಳದೆ ಬೇರೆ ದಾರಿಯಿಲ್ಲ.

ಕಥೆಗಳಿಗೆ ಜನರೇಕೆ ಮರುಳಾಗುತ್ತಾರೆ? ಮನುಷ್ಯನಿಗೆ ಬಂದಿರುವ ಹುಟ್ಟಾ ಕುತೂಹಲ ಹಾಗೆ ಮಾಡುತ್ತದೆ. ಅದೊಂದು ಸಹಜ ನಡೆ. ನಿಜವನ್ನು ಅರಿತುಕೊಳ್ಳಲೂ ಅದೇ ಬೇಕು. ಆದರೆ ಕಥೆಗಳು ಆ ಕುತೂಹಲವನ್ನೇ ಬಳಸಿಕೊಂಡು ನಿಜದ ಮೇಲೆ ಕವುಚಿಕೊಳ್ಳುವ ಗುಡಾರಗಳಾಗುತ್ತವೆ. ಮಹಾ ಮರೆವಿನ ಆವರಣಗಳಾಗುತ್ತವೆ. ನಮ್ಮೊಳಗಿನ ಪ್ರಜ್ಞೆ ಯನ್ನು ನಿಷ್ಕ್ರಿಯಗೊಳಿಸುತ್ತವೆ. ಕಳೆದುಕೊಂಡ ಮೇಲೆ ಕೆಲವರಲ್ಲಿ ಮಾತ್ರ ನಮ್ಮನ್ನು ನಾವು ಕಂಡುಕೊಳ್ಳುವ ಹೋರಾಟ ಶುರುವಾಗುತ್ತದೆ. ಅಂತಹ ಹೋರಾಟ ಗಳನ್ನು ಮುನ್ನಡೆಸುವ ಚಿಂತನಾಧಾರೆಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಇದು ನಾವಾಗಿ ಗುಹೆಯ ಒಳಗೆ ಹೋಗಿ ಸಿಲುಕಿ ನಂತರ ಹೊರಬರುವ ಹೋರಾಟವಾಗುತ್ತದೆ. ಇದಕ್ಕೆ ಬುದ್ಧ ನೀಡಿದ ಅತ್ಯಂತ ಸೂಕ್ತ ಪರಿಹಾರವೆಂದರೆ: ‘ಗುಹೆಯ ಒಳಕ್ಕೆ ಹೋಗಬೇಡಿ!’ ಕೋಟ್ಯಂತರ ಜನ ಹೋಗುತ್ತಲೇ ಇದ್ದಾರಲ್ಲ ಎನ್ನುವುದು ಸಮಜಾಯಿಷಿ ಅಲ್ಲ!

ಚಾರಿತ್ರಿಕ ಸಂದರ್ಭದ ಕಾರಣದಿಂದಾಗಿ ನಾವೀಗ ವಿಜ್ಞಾನದ ನಟ್ಟನಡುವೆ ಬದುಕುತ್ತಿದ್ದೇವೆ. ಆದರೂ ವಿವೇಕ ಮತ್ತು ಮೌಢ್ಯಗಳ ನಡುವೆ ನಡೆಯುತ್ತಿರುವ ತೀವ್ರ ಸಂಘರ್ಷಕ್ಕೂ ಸಾಕ್ಷಿಯಾಗಿದ್ದೇವೆ. ಸುಳ್ಳು–ನಿಜಗಳನ್ನು ಬೇರ್ಪಡಿಸಿಕೊಳ್ಳಲು ಅಷ್ಟೇನೂ ಪರದಾಡಬೇಕಿಲ್ಲ. ಆದರೆ ಕಥೆಗಳು ನಮ್ಮನ್ನು ನಿಜದ ಜೊತೆಗೆ ಬದುಕಲು ಬಿಡುತ್ತಿಲ್ಲ. ಸುಳ್ಳು–ಸತ್ಯ ಎರಡನ್ನೂ ಸೇರಿಸಿ ನುಣ್ಣಗೆ ಅಗಿದು ದವಡೆಗೆ ವತ್ತರಿಸಿಕೊಂಡು ಬದುಕುವ ಇಬ್ಬಂದಿಯನ್ನು ರೂಢಿಸಿಕೊಂಡಿದ್ದೇವೆ. ನಮ್ಮ ನಡುವಿನ ಎಷ್ಟೋ ವಿಜ್ಞಾನಿಗಳೂ ಪೊಳ್ಳು ಕಥೆಗಾರರಾಗಿದ್ದಾರೆ! ಕಥೆಗಳು ವಿಜ್ಞಾನವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಭಾಯಿಸಬಲ್ಲ ಚಾಲಾಕಿತನವನ್ನು ರೂಢಿಸಿಕೊಂಡಿವೆ; ವಿಜ್ಞಾನವೂ ನಾವು ಕಟ್ಟಿದ ಕಥೆಯೇ ಎನ್ನುತ್ತವೆ! ವಾಸ್ತವವನ್ನು ಇದಿರಾಗಿ, ಕಥೆಗಳನ್ನಲ್ಲ ಎಂದ ಬುದ್ಧನ ಬಗೆಗೂ ಕಥೆ ಕಟ್ಟುತ್ತವೆ; ಅಂಬೇಡ್ಕರ್ ಅವರ ಸರದಿಯೂ ಮುಂದಿದೆ!

ಕಥೆಗಳಿಗೆ ಈ ಶಕ್ತಿ ಎಲ್ಲಿಂದ ಬರುತ್ತದೆ? ಎಲ್ಲ ಕಥೆಗಳೂ ಹೀಗೆ ನಮ್ಮನ್ನು ನಿಯಂತ್ರಿಸಬಲ್ಲವೆ? ಜಗತ್ತಿನ ಅನೇಕ ಮಹಾನ್ ಕಥೆಗಾರರು ನೂರಾರು ಕಥೆಗಳ ಮೂಲಕ ತಮ್ಮ ತಾತ್ವಿಕತೆಯನ್ನು ಮುಂದಿಟ್ಟಿದ್ದಾರಲ್ಲವೆ? ಮುಂತಾದ ಪ್ರಶ್ನೆಗಳು ಇದಿರಾಗುತ್ತವೆ. ಯಾವ ಕಥೆಗಳು ಧಾರ್ಮಿಕತೆಯ ಭಾಗವಾಗುತ್ತವೆಯೋ ಅವುಗಳಿಗೆ ಆಯಾ ಧರ್ಮಗಳು ಇಂತಹ ರಾಕ್ಷಸ ಶಕ್ತಿಯನ್ನು ಒದಗಿಸುತ್ತವೆ. ರಾಕ್ಷಸ ಎನ್ನುವುದು ಕೂಡ ಕಥೆಯೆ! ಅವೆಲ್ಲ ಮಹಾನಿರೂಪಣೆಗಳಾಗಿ ರೂಪಾಂತರ ಪಡೆದುಕೊಳ್ಳುತ್ತವೆ. ಕಥೆಗಳು ಯಾವುದಾದರೂ ಒಂದು ಧರ್ಮಕ್ಕೆ ಲಗತ್ತಾದ ತಕ್ಷಣವೇ ಪ್ರಶ್ನಾತೀತ ಪ್ರಮಾಣಗಳಾಗಿ ಅಧಿಕಾರ ನಡೆಸಲಾರಂಭಿಸುತ್ತವೆ. ಮಹಾನ್ ನಿರೂಪಣೆಗಳೆಂದು ಕರೆಯುವ ಇಂತಹ ಕಥೆಗಳ ಆಕರಗಳು ವಿಶ್ವದಾದ್ಯಂತ ಇವೆ. ಎಲ್ಲ ಧರ್ಮಗಳೂ ತಮ್ಮ ತಾತ್ವಿಕತೆಯ ಜೊತೆಗೆ ಇಂತಹ ಕಥೆಗಳ ಆಕರಗಳನ್ನು ಸೃಷ್ಟಿಸಿಕೊಳ್ಳುತ್ತವೆ. ಒಮ್ಮೆ ಧರ್ಮಕ್ಕೆ ಲಗತ್ತಾದರೆ ನಂತರ ಕಥೆಗಳದ್ದೇ ಯಜಮಾನಿಕೆ. ತಾತ್ವಿಕತೆ ಮೂಲೆಗುಂಪಾಗುತ್ತದೆ! ಇನ್ನು ಹಿಂದೂ ಧರ್ಮ ಎಂದು ಕರೆದುಕೊಂಡಿರುವ ನಮ್ಮ ಧರ್ಮದ ಪಾಡು ಇನ್ನೂ ವಿಚಿತ್ರವಾಗಿದೆ. ನಮಗೆ ಇದು ನಮ್ಮ ಧರ್ಮದ ತಾತ್ವಿಕ ಆಕರ ಎಂದು ಹೇಳಿಕೊಳ್ಳುವ ಆಕರವೇ ಇಲ್ಲ! ಬರೀ ಕಥೆಗಳಿವೆ! ಮತ್ತೂ ಕೇಳಿದರೆ ನಮ್ಮನ್ನು ಒಳಕ್ಕೇ ಬಿಟ್ಟುಕೊಳ್ಳದ ವೈದಿಕ ಆಕರಗಳನ್ನು ಹೇಳುತ್ತಾರೆ.

ಇನ್ನು ಈ ಮಹಾನಿರೂಪಣೆಗಳಿಗೆ ಪ್ರತಿನಿರೂಪಣೆಗಳನ್ನು ಕಟ್ಟಿ ನಿರ್ವಹಿಸುವ ಸಾಂಸ್ಕೃತಿಕ ಪ್ರತಿರಾಜಕಾರಣ ಆಗಾಗ್ಗೆ ಬಂಡೇಳುತ್ತ ತನ್ನ ಸಿಟ್ಟನ್ನು ತೋರಿಸುತ್ತಿರುತ್ತದೆ. ಇಲ್ಲೂ ಕಥೆಗಳಿಗೆ ಪ್ರತಿಕಥೆಗಳು ಹುಟ್ಟಿಕೊಳ್ಳುತ್ತವೆ. ಇವುಗಳಿಗೆ ಕಾಲುದಾರಿ ಕಥನಗಳು ಎನ್ನುವ ದೇಸಿ ದೈನೇಸಿ ಅವಸ್ಥೆ ಪ್ರಾಪ್ತವಾಗುತ್ತದೆ. ಒಟ್ಟಿ ನಲ್ಲಿ ಇರುವ ಕಥೆಗಳಿಗೆ ಮತ್ತಷ್ಟು ಸೇರಿಕೊಳ್ಳುತ್ತವೆ. ಅಂಚಿನಲ್ಲೇ, ಕಾಲುದಾರಿಗಳಲ್ಲೇ ನಡೆದಾಡುವ ಈ ಪ್ರತಿಕಥೆಗಳನ್ನು ಮಹಾನಿರೂಪಣೆಗಳು ತಮ್ಮ ಮೇಲಿನ ಪ್ರತಿರೋಧವನ್ನು ತಡೆಯುವ ತಡೆಗೋಡೆಗಳಂತೆ ಕಾಪಾಡಿಕೊಳ್ಳುತ್ತವೆ! ಬೇಡವೆನ್ನಿಸಿದಾಗ ನುಂಗಿ ನೊಣೆಯುತ್ತವೆ!

ಕಥೆಗಳ ಪರಿಣಾಮವನ್ನು ಕುರಿತಾದ ಮೀಮಾಂಸೆಯ ನಿಲುವುಗಳು ಏನೇ ಇದ್ದರೂ, ಅವು ನಮ್ಮನ್ನು ವಾಸ್ತವದಿಂದ ದೂರ ಕರೆದುಕೊಂಡು ಹೋಗುತ್ತವೆ ಎನ್ನುವುದನ್ನು ನಿರಾಕರಿಸಲಾಗದು. ಹಾಗಾಗಿ ಕಥೆಗಳನ್ನು ನಿರಾಕರಿಸಿ. ಕಥೆಗಳಿಲ್ಲದ ಭಾರತ ವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ನಿಜವಾದ ಭಾರತವನ್ನು ಕಂಡುಕೊಳ್ಳಲು ಕಥೆಗಳನ್ನು ದಾಟಿ ನೋಡಬೇಕಾದ ಅಗತ್ಯವಿದೆ ಮತ್ತು ಕಥೆಗಳನ್ನು ನಂಬಿಕೊಂಡು ಅವುಗಳ ಮೂಲಕ ರಾಜಕಾರಣ ಮಾಡುವವರಿಗೆ ತಕ್ಕುದಾದ ಪ್ರತಿಕ್ರಿಯೆ ನೀಡಬೇಕಾಗಿದೆ. ಕಥೆಗಳು ನಮ್ಮನ್ನು ಮಾತ್ರ ವಾಸ್ತವದಿಂದ ದೂರ ಮಾಡಿಲ್ಲ; ವಿಶ್ವದ ಬಹುಪಾಲು ದೇಶಗಳ ಸ್ಥಿತಿಯೂ ಅದೇ ಆಗಿದೆ. ಯಾರೋ ಎಂದೋ ಹೇಳಿದ ಕಥೆಗಳನ್ನು ನಂಬಿ ಬದುಕುವವರ ಪಾಡೆಲ್ಲ ಸಂಕಟದಲ್ಲಿ ಮುಳುಗಿದೆ. ಆದುದರಿಂದ ಕಥೆಗಳನ್ನು ತಿರಸ್ಕರಿಸಿ! ವಾಸ್ತವ ಬದುಕಲಿ, ಕಥೆ ಅಳಿಯಲಿ. ವಿಜ್ಞಾನ ಬೆಳೆಯಲಿ; ಸಂವಿಧಾನ ಉಳಿಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.