ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅವನತಿಯತ್ತ ಪಕ್ಷಿ ಸಂಕುಲ

ವೈವಿಧ್ಯಮಯ ಪಕ್ಷಿ ಪಭೇದಗಳನ್ನು ರಕ್ಷಿಸಲು ಬೇಕು ತೀವ್ರ ಪ್ರಯತ್ನ
Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಭಾರತದ ಪಕ್ಷಿ ಸಂತತಿಯ ಸ್ಥಿತಿ ಕುರಿತಾದ ಅಧ್ಯಯನ ವರದಿ ಆಗಸ್ಟ್ ಅಂತ್ಯದಲ್ಲಿ ಬಿಡುಗಡೆಯಾಗಿದೆ. ಮೌಲ್ಯಮಾಪನ ಮಾಡಲಾದ ದೇಶದ ಒಟ್ಟು 942 ಪಕ್ಷಿ ಪ್ರಭೇದಗಳ ಪೈಕಿ ದೀರ್ಘಾವಧಿ ಬದಲಾವಣೆಯ ಅಧ್ಯಯನಕ್ಕೆ ಒಳಪಡಿಸಿದ 338 ಪಕ್ಷಿ ಪ್ರಭೇದಗಳ ಸಂಖ್ಯೆಯು ಶೇ 60ರಷ್ಟು ಕಡಿಮೆಯಾಗಿದೆ ಎಂಬ ಆತಂಕಕಾರಿ ಅಂಶ ವರದಿಯಲ್ಲಿದೆ. ಭಾರತದಲ್ಲಿ ದಾಖಲಾಗಿರುವ 1,350 ಪಕ್ಷಿಪ್ರಭೇದಗಳಲ್ಲಿ ಬಹಳಷ್ಟು ಪ್ರಭೇದಗಳು ಹಾಗೂ ಅವುಗಳ ಸಂಖ್ಯೆಯು ತೀವ್ರಗತಿಯಲ್ಲಿ ಇಳಿಮುಖವಾಗುತ್ತಿವೆ. ಇಡೀ ದೇಶದಲ್ಲಿ ಪಕ್ಷಿಗಳ ಸ್ಥಿತಿ ಗಂಭೀರ ಮಟ್ಟ ತಲುಪಿದೆಯೆಂದು ವರದಿ ಹೇಳಿದೆ.

ಉತ್ತರ ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದ, ಕೋಟ್ಯಂತರ ಸಂಖ್ಯೆಯಲ್ಲಿದ್ದ ಪ್ಯಾಸೆಂಜರ್ ಪಿಜನ್ ಅಳಿದುಹೋಗಲು ಮುಖ್ಯ ಕಾರಣ ಮಾನವ ಬೇಟೆ. ಹಾಗೆಯೇ ಮಾರಿಷಸ್‌ ದ್ವೀಪದ ಡೋಡೋ ಪಕ್ಷಿಗಳು ಅಳಿಯಲು ನೇರವಾಗಿ ಮಾನವನೇ ಕಾರಣವೆಂದು ಇತಿಹಾಸದಲ್ಲಿ ದಾಖಲಾಗಿದೆ. ಹೀಗೆ ಒಂದರ ಹಿಂದೆ ಒಂದು ಪಕ್ಷಿ ಸಂತತಿ ಸಂಖ್ಯೆ ಕಡಿಮೆಯಾಗುವುದು ಅಥವಾ ಅಳಿದುಹೋಗುತ್ತಿರುವುದು ತೀವ್ರ ಕಳವಳಕಾರಿ.

ನವಿಲಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ವರದಿ ಗುರುತಿಸಿದೆ. ಆದರೆ ಇದು ಸಂತಸದ ವಿಷಯವೇನಲ್ಲ. ರಾಷ್ಟ್ರಪಕ್ಷಿ ಎಂಬ ಕಾರಣಕ್ಕೆ ಅವುಗಳನ್ನು ಬೇಟೆಯಾಡುವುದು ಗಣನೀಯವಾಗಿ ಕಡಿಮೆಯಾಗಿದೆ ಎಂಬ ಅಂಶವೊಂದೇ ಅವುಗಳ ಹೆಚ್ಚಳಕ್ಕೆ ಕಾರಣವಾಗಿಲ್ಲ. ಮಲೆನಾಡಿನಲ್ಲಿ ಹೆಚ್ಚುತ್ತಿರುವ ನವಿಲಿನ ಸಂಖ್ಯೆಯು ಅರಣ್ಯವು ವ್ಯಾಪಕವಾಗಿ ನಾಶ ಆಗುತ್ತಿರುವುದನ್ನು ಸೂಚಿಸುತ್ತದೆ. ಅರಣ್ಯದಲ್ಲಿನ ನವಿಲುಗಳು ತಮ್ಮ ಅಗಲವಾದ ರೆಕ್ಕೆಯ ಕಾರಣಕ್ಕೆ ಸುಲಭವಾಗಿ ಬೇಟೆಪ್ರಾಣಿಗಳಿಗೆ ಬಲಿಯಾಗುತ್ತವೆ. ಮರಗಳ ದಟ್ಟಣೆ ಕಾಣೆಯಾದಂತೆ, ಬೇಟೆಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಈ ಪ್ರಕ್ರಿಯೆ ಸ್ವಾಭಾವಿಕವಾಗಿ ನವಿಲಿನ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪೂರಕ ಪಾತ್ರ ವಹಿಸುತ್ತದೆ.

ರಾಷ್ಟ್ರಪಕ್ಷಿಯ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದರೆ, ಮುಂದೆ ಅದು ಆಹಾರಭದ್ರತೆಗೆ ಧಕ್ಕೆ ತರಬಹುದಾದ ಅಪಾಯವಿದೆ. ಹೇಗೆಂದರೆ, ನವಿಲುಗಳು ಮಿಶ್ರಾಹಾರಿಗಳಾದ್ದರಿಂದ, ರೈತನ ಬೆಳೆಗಳಾದ ಭತ್ತ, ಬಾಳೆಯಂತಹವುಗಳ ಜೊತೆಯಲ್ಲಿ ಇಲಿಗಳನ್ನು ಭಕ್ಷಿಸುವ ಉರಗ ಸಂತತಿಯನ್ನೂ ಇಲ್ಲವಾಗಿಸುತ್ತವೆ. ಇಲಿಗಳಿಗೆ ನೈಸರ್ಗಿಕ ಶತ್ರುಗಳಾದ ಉರಗಗಳ ಸಂತತಿ ಕುಂಠಿತವಾದಲ್ಲಿ, ಮತ್ತೆ ಇಲಿಗಳ ಸಂಖ್ಯೆ ದಿಢೀರಾಗಿ ಹೆಚ್ಚುತ್ತದೆ. ಭಾರತದ ಹೊಲಗಳಲ್ಲಿ ಅತಿಹೆಚ್ಚು ಬೆಳೆನಾಶ ಮಾಡುವ ಪ್ರಭೇದಗಳಲ್ಲಿ ಇಲಿ, ಹೆಗ್ಗಣಗಳಿಗೆ ಪ್ರಥಮ ಸ್ಥಾನವಿದೆ. ಹೆಚ್ಚಾಗಿ ಇಲಿ, ಹೆಗ್ಗಣಗಳನ್ನೇ ಅವಲಂಬಿಸಿ ಬದುಕುವ ನಿಶಾಚರ ಪಕ್ಷಿಯಾದ ಗೂಬೆಗಳ ಸಂಖ್ಯೆಯೂ ಕಡಿಮೆಯಾಗಿದೆ.

ಅಧ್ಯಯನ ವರದಿಯು ಪಕ್ಷಿಗಳ ಸಂಖ್ಯೆ ಕುಸಿತದ ಕಾರಣಗಳಿಗೆ ಹೆಚ್ಚು ಒತ್ತು ನೀಡಿಲ್ಲವಾದರೂ, ಕೆಲವು ಅಂಶಗಳನ್ನು ಗುರುತಿಸಿದೆ. ಅದರಲ್ಲಿ ಮುಖ್ಯವಾಗಿ, ಪಕ್ಷಿಗಳ ಆವಾಸಸ್ಥಾನ ನಾಶ, ನಗರೀಕರಣ, ಕೃಷಿಭೂಮಿ ವಿಸ್ತರಣೆ, ಅರಣ್ಯ ನಾಶ, ಹೆದ್ದಾರಿ, ರೈಲುಮಾರ್ಗಗಳ ವಿಸ್ತರಣೆ, ಹೊಸ ರಸ್ತೆ ನಿರ್ಮಾಣದಂತಹ ಕಾರಣಗಳಿಂದ ಜಾಗತಿಕ ಮಟ್ಟದಲ್ಲಷ್ಟೇ ಅಲ್ಲ ಸ್ಥಳೀಯವಾಗಿಯೂ ಪಕ್ಷಿಗಳ ಆವಾಸಸ್ಥಾನಗಳು ನಾಶವಾಗುತ್ತಿವೆ. ಹವಾಗುಣ ಬದಲಾವಣೆಯಿಂದಾಗಿ, ಪಕ್ಷಿಗಳಿಗೆ ಲಭ್ಯವಾಗುವ ಆಹಾರದಲ್ಲಿ ವ್ಯತ್ಯಯವಾಗುತ್ತಿದ್ದು, ಹಕ್ಕಿಗಳ ವಲಸೆ ಮಾದರಿಯಲ್ಲಿಯೂ ಏರುಪೇರಾಗಿದೆ. ಜೊತೆಗೆ ಇದೇ ಕಾರಣವು ವಲಸೆ ಪಕ್ಷಿಗಳ ಸಂತಾನೋತ್ಪತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಭೂಬಿಸಿ ಏರಿಕೆ ಹಾಗೂ ಹವಾಮಾನ ವೈಪರೀತ್ಯವು ಪಕ್ಷಿಗಳ ಜೀವನಕ್ರಮಕ್ಕೆ ತೀವ್ರವಾದ ಹಾನಿಯುಂಟು ಮಾಡುತ್ತಿವೆ. ಕೀಟನಾಶಕಗಳ ಬಳಕೆಯಿಂದಾಗಿ, ಕೀಟಗಳನ್ನೇ ಅವಲಂಬಿಸಿ ಬದುಕುವ ಪಕ್ಷಿಪ್ರಭೇದ
ಗಳಿಗೆ ನೈಸರ್ಗಿಕ ಆಹಾರದ ಅಭಾವವಾಗುತ್ತಿದೆ. ಇದೇ ಕೀಟನಾಶಕಗಳು ನದಿ, ಕೆರೆ, ಕುಂಟೆಗಳಿಗೆ ಸೇರಿ, ಅವು ರಾಸಾಯನಿಕ ಮಾಲಿನ್ಯದ ಮಡುಗಳಾಗುತ್ತಿದ್ದು, ಜಲಚರ ಪಕ್ಷಿಗಳಿಗೆ ಮುಳುವಾಗಿವೆ. ದೇಶದ ಕೆಲವು ಭಾಗಗಳಲ್ಲಿ ಪಕ್ಷಿಗಳ ಬೇಟೆ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ವನ್ಯಪಕ್ಷಿಗಳನ್ನು ಸಾಕುವ ಉದ್ದೇಶಕ್ಕಾಗಿ ಹಿಡಿದು ಮಾರುವ ಪ್ರಕ್ರಿಯೆಯಿಂದಾಗಿ ಕೆಲವು ಪ್ರಭೇದಗಳು ವಿನಾಶದಂಚಿಗೆ ತಲುಪಿವೆ. ದೊಡ್ಡ ಕಟ್ಟಡಗಳಲ್ಲಿ ಅಳವಡಿಸುವ ಬೃಹತ್ ಗಾಜುಗಳು ನಿತ್ಯ ಸಾವಿರಾರು ಪಕ್ಷಿಗಳಿಗೆ ಅದರಲ್ಲೂ ವಲಸೆ ಪಕ್ಷಿಗಳಿಗೆ ಮಾರಕವಾಗಿವೆ.

ಹಕ್ಕಿಜ್ವರದಂತಹ ವೇಗವಾಗಿ ಹರಡುವ ರೋಗಗಳು ಹಲವು ಪಕ್ಷಿ ಪ್ರಭೇದಗಳ ವಿನಾಶಕ್ಕೆ ಕಾರಣವಾಗಿವೆ. ಪಕ್ಷಿಗಳ ಆವಾಸಸ್ಥಾನದ ಸೂಕ್ಷ್ಮಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ದಾಂದಲೆ ಮಾಡುವುದರಿಂದಾಗಿ ಮರಿಗಳಿಗೆ ಆಹಾರ ನೀಡುವ ಕ್ರಮದಲ್ಲಿ ವ್ಯತ್ಯಾಸವಾಗುತ್ತಿರುವುದು ಕೂಡ ಸಂತತಿ ಕಡಿಮೆಯಾಗಲು ಕಾರಣವಾಗುತ್ತಿದೆ. ಉದಾಹರಣೆಗೆ, ವಿಶ್ವಪ್ರಸಿದ್ಧ ಜೋಗವು ಬಹಳ ಅಪೂರ್ವವಾದ ಕಣಿವೆಯಾಗಿದ್ದು, ಈ ಕಣಿವೆಗೆ ಮಾತ್ರ ಸೀಮಿತವಾಗಿರುವ ಅನೇಕ ಪಕ್ಷಿ ಸಂತತಿಗಳಿವೆ.

ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಈಗ ಜೋಗದ ಕಣಿವೆಯಲ್ಲಿ ಸಾಹಸ ಕ್ರೀಡೆಯಾದ ಝಿಪ್ ಲೈನ್ ಅಳವಡಿಸಿದ್ದರಿಂದ, ಕಣಿವೆಯ ವಾಸಿಗಳಾದ, ಗಿಡುಗ ಮತ್ತು ಅದರ ಆಹಾರವಾದ ಕಾಡುಪಾರಿವಾಳ, ಆಕಾಶಗುಬ್ಬಿ, ಬಾವಲಿಗಳ ನೆಲೆ ನಾಶವಾಗಿದೆ. ಜೋಗದ ಕಣಿವೆಗೆ ಅಡ್ಡಲಾಗಿ ಕೇಬಲ್ ಕಾರು ಅಳವಡಿಸಲು ಸರ್ಕಾರ ಮುಂದಾಗಿದ್ದು, ಈ ಕ್ರಮ ಇಲ್ಲಿನ ಅಪರೂಪದ ಪಕ್ಷಿಪ್ರಭೇದಗಳ ಅಳಿವಿಗೆ ಕಾರಣವಾಗಲಿದೆ. ಪಕ್ಷಿಗಳ ಮಾರ್ಗದಲ್ಲಿ ಅದರಲ್ಲೂ ವಲಸೆ ಪಕ್ಷಿಗಳ ಮಾರ್ಗದಲ್ಲಿ ಹೆಚ್ಚಾದ ಬೆಳಕಿನ ಮಾಲಿನ್ಯವು ಅವುಗಳ ದಿಕ್ಕುತಪ್ಪುವಂತೆ ಮಾಡುತ್ತಿದ್ದು, ಸಂತಾನೋತ್ಪತ್ತಿ ಗಮ್ಯವನ್ನು ತಲುಪಲು ಪಕ್ಷಿಗಳಿಗೆ ಸಾಧ್ಯವಾಗುತ್ತಿಲ್ಲ.

ಚಿಟ್ಟೆಗಿಂತ ಕೊಂಚ ಚಿಕ್ಕದಾದ ನಾಲ್ಕು ಜಾತಿಯ ಹೂಹಕ್ಕಿಗಳು ಮಲೆನಾಡಿನಲ್ಲಿವೆ. ದೊಡ್ಡ ಬೇಟೆ ಪಕ್ಷಿಗಳಿಂದ ಬಚಾವಾಗಿ ಉಳಿಯಲು ಈ ಚಿಕ್ಕ ಹಕ್ಕಿಗಳು ಜನವಸತಿ ಪ್ರದೇಶದ ಗಿಡಗಳೆಡೆಯಲ್ಲಿ ಜೇಡರಬಲೆ, ಹತ್ತಿ, ಮನುಷ್ಯರ ಕೂದಲು, ಒಣಗಿದ ಪಾಚಿ, ತೊಗಟೆ ಚೂರಿನಂತಹವನ್ನು ಬಳಸಿ ಚಿಕ್ಕ ಗಾತ್ರದ ಗೂಡನ್ನು ಕಟ್ಟುತ್ತವೆ. ಆದರೆ, ಇತ್ತೀಚಿನ ವಿದ್ಯಮಾನದಲ್ಲಿ ಈ ಚಿಕ್ಕ ಹಕ್ಕಿಗಳಿಗೆ ಗೂಡು ಕಟ್ಟುವ ಕಚ್ಚಾ ಸಾಮಗ್ರಿಗಳು ಲಭ್ಯವಾಗುತ್ತಿಲ್ಲ. ಅವು ಅನಿವಾರ್ಯವಾಗಿ ಮೆತ್ತನೆಯ ನೈಸರ್ಗಿಕ ವಸ್ತುಗಳ ಬದಲಿಗೆ ಪ್ಲಾಸ್ಟಿಕ್ ಚೂರುಗಳನ್ನು ಬಳಸಿ ಗೂಡು ಕಟ್ಟುತ್ತಿವೆ. ಈ ಗೂಡುಗಳಲ್ಲಿ ಮೊಟ್ಟೆಗಳು ನಿಲ್ಲದೇ ಜಾರಿ ಬಿದ್ದು ಒಡೆದು ಹೋಗುತ್ತಿದ್ದು, ಈ ಚಿಕ್ಕ ಹಕ್ಕಿಗಳು ತಮ್ಮ ಸಂತತಿಯನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿವೆ.

ಭತ್ತದ ಗದ್ದೆಗೆ ಬೆಂಕಿರೋಗದಂತಹ ರೋಗಗಳ ನಿವಾರಣೆಗಾಗಿ ಫಾಲಿಡಾಲ್ ಎಂಬ ವಿಷವನ್ನು ಈ ಹಿಂದೆ ಬಳಸಲು ಪ್ರಾರಂಭಿಸಿದ್ದರಿಂದ ಹಾಗೂ ಮಲೆನಾಡಿನಲ್ಲಿ ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳಿಗೆ ವಿಪರೀತ ಬೆಲೆ ಬಂದ ಕಾರಣಕ್ಕೆ, ಭತ್ತ, ಕಬ್ಬು ಬೆಳೆಯುವುದನ್ನು ಬಿಟ್ಟ ಕಾರಣಕ್ಕೆ, ಗೀಜಗಗಳು ಆಹಾರ ಹಾಗೂ ಗೂಡು ಕಟ್ಟುವ ಕಚ್ಚಾ ಸಾಮಗ್ರಿಗಳ ಅಭಾವಕ್ಕೆ ಸಿಲುಕಿ ಸ್ಥಳೀಯವಾಗಿ ವಿನಾಶಗೊಂಡವು. ಮನುಷ್ಯರ ಹೊರತಾಗಿ ಬಾಳಲಾರದ ಇನ್ನೊಂದು ಪುಟ್ಟ ಪಕ್ಷಿಯೆಂದರೆ ಅದು ಮನೆಗುಬ್ಬಿ. ಇಪ್ಪತ್ತೈದು ವರ್ಷಗಳಲ್ಲಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊಬೈಲ್ ಟವರ್‌ಗಳಿಂದ ಹೊರಸೂಸುವ ವಿಕಿರಣದ ಪ್ರಭಾವಕ್ಕೆ ಅವುಗಳ ಸಂತತಿ ಕಡಿಮೆಯಾಗಿದೆ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆಯಿಲ್ಲದಿದ್ದರೂ ಆಧುನಿಕ ಮಾನವನ ಮನೆ ಕಟ್ಟುವ ವಿನ್ಯಾಸ ಬದಲಾಗಿದ್ದರಿಂದ, ಅವುಗಳ ನೆಲೆ ವ್ಯಾಪಕವಾಗಿ ನಾಶವಾಯಿತು.

ಕಾಡಿನ ಮರಗಳ ಕಾಂಡವನ್ನು ಕೊರೆಯುವ ಪೀಡೆಕೀಟಗಳನ್ನು ಭಕ್ಷಿಸುವ ಅನೇಕ ಜಾತಿಯ ಮರಕುಟಿಕ ಹಕ್ಕಿಗಳು ತಮ್ಮ ವಂಶಾಭಿವೃದ್ಧಿಗಾಗಿ ಒಣಗಿದ ಮರದಲ್ಲಿ ಪೊಟರೆ ಕೊರೆದು, ಗೂಡು ಕಟ್ಟಿ ಮರಿ ಮಾಡುತ್ತವೆ. ಸಾಮಾನ್ಯರು ಹಾಗೂ ಅರಣ್ಯ ಇಲಾಖೆಯ ಲೆಕ್ಕದಲ್ಲಿ ಒಣಗಿದ ಮರಗಳು ನಿರುಪಯುಕ್ತವೆಂದು ಉರುವಲಿಗಾಗಿ ಕಡಿದು ಸಾಗಿಸುವ ಪ್ರಕ್ರಿಯೆಯಿಂದಾಗಿ ಮರಕುಟಿಕಗಳಿಗೆ ವಂಶಾಭಿವೃದ್ದಿ ಮಾಡಲು ಸೂಕ್ತ ಒಣಗಿದ ಮರಗಳು ಕಾಡಿನಲ್ಲಿ ಲಭ್ಯವಿಲ್ಲ.

ಪಕ್ಷಿಗಳಿಲ್ಲದ ಪ್ರಪಂಚವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಪ್ರಪಂಚದಲ್ಲಿ ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ಪ್ರಭೇದಗಳ 4 ಸಾವಿರ ಕೋಟಿಗೂ ಹೆಚ್ಚಿನ ಸಂಖ್ಯೆಯ ಪಕ್ಷಿಗಳಿವೆ ಎಂದು ಪಕ್ಷಿವಿಜ್ಞಾನಿಗಳು ಅಂದಾಜಿಸಿದ್ದಾರೆ. ಪರಾಗಸ್ಪರ್ಶ, ಬೀಜ ಪ್ರಸರಣ, ಪೀಡೆಕೀಟ ನಿಯಂತ್ರಣದಂತಹ ಹತ್ತಾರು ಬಗೆಯ ನೈಸರ್ಗಿಕ ಸೇವೆಗಳನ್ನು ನೀಡುವ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದೆಯೆಂದರೆ, ಅದು ಪಾರಿಸರಿಕ ಅಸಮತೋಲನದ ಅಪಾಯಕಾರಿ ದಿಕ್ಸೂಚಿ ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT