ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಸಪ್ತ ಸಾಗರದಾಚೆ ಕೈಗೂಡಿದ ಕನಸು

ಅಮೆರಿಕದ ಕ್ರಿಕೆಟ್ ಅಂಗಳದಲ್ಲಿ ಭಾರತೀಯ ಪ್ರತಿಭೆಗಳ ಪಾರಮ್ಯ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಸೌರಭ್ ನೇತ್ರಾವಳ್ಕರ್, ನಾಸ್ತುಷ್ ಕೆಂಜಿಗೆ, ಮೊನಾಂಕ್ ಪಟೇಲ್, ಹರ್ಮಿತ್ ಸಿಂಗ್, ಮಿಲಿಂದ್ ಕುಮಾರ್, ನಿತೀಶ್ ಕುಮಾರ್...

ಹದಿನೈದು ದಿನಗಳಿಂದ ಕ್ರಿಕೆಟ್‌ ವಲಯದಲ್ಲಿ ಪ್ರತಿಧ್ವನಿಸುತ್ತಿರುವ ಹೆಸರುಗಳು ಇವು. ಸದ್ಯ ಅಮೆರಿಕ –ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗಮನಸೆಳೆದಿರುವ
ಆಟಗಾರರು ಇವರು. ಭಾರತ ಮೂಲದ ಈ ಆಟಗಾರರಿಂದಾಗಿ ಅಮೆರಿಕದಲ್ಲಿಯೂ ಕ್ರಿಕೆಟ್ ಕಲರವ ಹೆಚ್ಚುತ್ತಿದೆ. ಬೇಸ್‌ಬಾಲ್, ಬ್ಯಾಸ್ಕೆಟ್‌ಬಾಲ್ ಪ್ರಿಯರೂ ಕ್ರಿಕೆಟ್‌ನತ್ತ ನೋಡುತ್ತಿದ್ದಾರೆ.

ಅದಕ್ಕೆ ಕಾರಣ ಹತ್ತು ದಿನಗಳ ಹಿಂದೆ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕ ತಂಡವು ಬಲಾಢ್ಯ ಪಾಕಿಸ್ತಾನ ತಂಡದ ಎದುರು ಜಯಿಸಿ ದೊಡ್ಡ ಸುದ್ದಿಯಾಗಿದ್ದು. ಪಾಕ್ ಎದುರಿನ ಸೂಪರ್‌ ಓವರ್‌ನಲ್ಲಿ ಮಿಂಚಿದ ಎಡಗೈ ವೇಗಿ ನೇತ್ರಾವಳ್ಕರ್ ರಾತ್ರಿ ಬೆಳಗಾಗುವುದರೊಳಗೆ ಹೀರೊ ಆಗಿಬಿಟ್ಟರು. ಅವರು ಭಾರತ ತಂಡದ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರ ವಿಕೆಟ್ ಕೂಡ ಗಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿರುವ ಅವರ ಖಾತೆಗಳಿಗೆ ಸಾವಿರಾರು ಜನರು ಲಗ್ಗೆ ಹಾಕಿದರು. ಒರಾಕಲ್ ಕಂಪನಿಯ ಉದ್ಯೋಗಿಯೂ ಆಗಿರುವ ಅವರ ಕ್ರಿಕೆಟ್‌ ಪ್ರೀತಿ ಗಮನಸೆಳೆಯಿತು.

ಅದೇ ರೀತಿ ಕನ್ನಡಿಗ, ಸ್ಪಿನ್ನರ್ ನಾಸ್ತುಷ್ ಕೆಂಜಿಗೆ ಕೂಡ ಗಮನ ಸೆಳೆದರು. ತಂಡದ ನಾಯಕ ಮೊನಾಂಕ್ ಪಟೇಲ್ ಸೇರಿದಂತೆ ಅಮೆರಿಕ ತಂಡವೊಂದರಲ್ಲಿಯೇ ಇರುವ ಭಾರತ ಮೂಲದ ಒಂಬತ್ತು
ಆಟಗಾರರ ಹೆಸರುಗಳೂ ನಲಿದಾಡ ತೊಡಗಿದವು. ಕೆನಡಾ ತಂಡದಲ್ಲಿರುವ ದಾವಣಗೆರೆ ಹುಡುಗ ಶ್ರೇಯಸ್ ಮೊವಾ ಕೂಡ ಗಮನಸೆಳೆದರು. ಈ ತಂಡದಲ್ಲಿರುವ ರವೀಂದರ್ ಪಾಲ್ ಸಿಂಗ್, ದಿಲ್‌ಪ್ರೀತ್ ಬಜ್ವಾ, ರಿಶಿವ್ ಜೋಶಿ ಹಾಗೂ ಪರ್ಗತ್ ಸಿಂಗ್ ಕೂಡ ಭಾರತ ಮೂಲದವರು.

ಇವರೆಲ್ಲ ಇಷ್ಟು ದಿನ ಎಲ್ಲಿದ್ದರು? ಒಂದೊಮ್ಮೆ ಅಮೆರಿಕದಲ್ಲಿ ವಿಶ್ವಕಪ್ ಟೂರ್ನಿ ನಡೆಯದೇ ಹೋಗಿದ್ದರೆ ಇವರೆಲ್ಲ ಅಜ್ಞಾತರಾಗಿಯೇ ಇರುತ್ತಿದ್ದರಲ್ಲವೆ?

ಭಾರತದಲ್ಲಿ ಇವತ್ತು ಕ್ರಿಕೆಟ್ ತಾರೆಯರಾಗಬೇಕೆಂದು ಕನವರಿಸುವ ಸಾವಿರಾರು ಮಕ್ಕಳು ಕ್ರಿಕೆಟ್ ಅಂಗಳದಲ್ಲಿ ಬೆವರು ಹರಿಸುತ್ತಿದ್ದಾರೆ. ಇಷ್ಟು ದೊಡ್ಡ ಸಮೂಹದಲ್ಲಿ ಭಾರತ ತಂಡ, ರಾಜ್ಯ ತಂಡಗಳು ಮತ್ತು ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಇಂತಹ ಕಡುಕಠಿಣ ಪೈಪೋಟಿಯಲ್ಲಿ (ಆಡಳಿತ ವ್ಯವಸ್ಥೆಯೊಳಗಿನ ರಾಜಕೀಯ, ಸ್ವಜನಪಕ್ಷಪಾತ ಹಾಗೂ ಆಯ್ಕೆ ಪ್ರಕ್ರಿಯೆಯ ಲೋಪಗಳೂ ಸೇರಿರಬಹುದು) ನಿರೀಕ್ಷಿತ ಯಶಸ್ಸು ಸಿಗದೇ ಕ್ರಿಕೆಟ್‌ ಕಿಟ್‌ ಪಕ್ಕಕ್ಕಿಟ್ಟವರ ಸಂಖ್ಯೆಯೇ ದೊಡ್ಡದು. ಇವರೆಲ್ಲಾ ಕ್ರಿಕೆಟ್‌ನಲ್ಲಿ ಸಿಗದ ಭವಿಷ್ಯವನ್ನು ವೃತ್ತಿ, ಉದ್ಯೋಗದಲ್ಲಿ ರೂಪಿಸಿಕೊಳ್ಳುವತ್ತ ಮುಖಮಾಡಿದ ಹುಡುಗರು. ಉದ್ಯೋಗ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕ, ಕೆನಡಾ ಸೇರಿದ ಹುಡುಗರೇ ಈಗ ಅಲ್ಲಿಯ ಕ್ರಿಕೆಟ್‌ ತಾರೆಗಳಾಗಿದ್ದಾರೆ. ತಮ್ಮ ಎದೆಗಳಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದ ಕ್ರಿಕೆಟ್‌ ಪ್ರೀತಿ ಅವರೆಲ್ಲರನ್ನೂ ಇವತ್ತು ಪ್ರಸಿದ್ಧಿಯ ಹಾದಿಗೆ ತಂದು ನಿಲ್ಲಿಸಿದೆ. 

ಅವರೆಲ್ಲರೂ ಬಹುಶಃ ಭಾರತದಲ್ಲಿಯೇ ಉಳಿದು ಐಟಿ ಉದ್ಯೋಗಿಗಳಾಗಿದ್ದರೂ ಕೈತುಂಬ ಹಣ
ಸಂಪಾದಿಸುತ್ತಿದ್ದರು. ಆದರೆ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುತ್ತಿರಲಿಲ್ಲ. ಅಮೆರಿಕಕ್ಕೆ ಉದ್ಯೋಗ, ಉನ್ನತ ವ್ಯಾಸಂಗಕ್ಕೆ ಹೋಗಿ ಕ್ರಿಕೆಟಿಗರಾಗುವ ಕನಸನ್ನೂ ನನಸು ಮಾಡಿಕೊಂಡಿದ್ದಾರೆ. 

ನೇತ್ರಾವಳ್ಕರ್ ಅವರ ಉದಾಹರಣೆಯನ್ನೇ ನೋಡಿ. ಅವರು ಮೂಲತಃ ಮುಂಬೈನವರು. ಕಂಪ್ಯೂಟರ್ ಎಂಜಿನಿಯರ್. ಮುಂಬೈನ 16 ವರ್ಷ, 19 ವರ್ಷ ವಯೋಮಿತಿಯ ತಂಡಗಳಲ್ಲಿ ಆಡಿದ್ದರು. ಆಗ ಅವರೊಂದಿಗೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಆಡಿದ್ದರು. 2010ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ನೇತ್ರಾವಳ್ಕರ್ ಅವರು ಆಡಿದ್ದ ಭಾರತ ತಂಡದಲ್ಲಿ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಹಾಗೂ ಜಯದೇವ್ ಉನದ್ಕತ್ ಕೂಡ ಆಡಿದ್ದರು. ಆದರೆ ಆ ದಿನಗಳಲ್ಲಿ ಮುಂಬೈ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯಲು ಅಪಾರ ಪೈಪೋಟಿಯಿತ್ತು. ಅವರಿಗೆ ಸ್ಥಾನ ಸಿಗಲಿಲ್ಲ. ಆದ್ದರಿಂದ ಓದಿನ ಕಡೆಯೇ ಗಮನ ನೀಡಿದರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮುಗಿಸಿ ಒಂಬತ್ತು ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ಹೋದವರು ಅಲ್ಲಿಯೇ ಉಳಿದರು. ಇತ್ತೀಚೆಗೆ ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದ ಸಂದರ್ಭದಲ್ಲಿ ಹಳೆಯ ಗೆಳೆಯರಾದ ರೋಹಿತ್ ಮತ್ತು ಸೂರ್ಯ ಅವರನ್ನು ಭೇಟಿಯಾಗಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

ನೇತ್ರಾವಳ್ಕರ್ ಅವರು ವಿಶ್ವಕಪ್ ಆಡುತ್ತಿರುವ ಈ ಹೊತ್ತಿನಲ್ಲಿಯೂ ಕಚೇರಿ ಕೆಲಸಕ್ಕೆ ಬಿಡುವು ಪಡೆದಿಲ್ಲ. ಪಂದ್ಯ ಮುಗಿದ ಕೂಡಲೇ ತಮ್ಮ ಕೋಣೆ ಸೇರಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರಂತೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಾಸ್ತುಷ್ ಪ್ರದೀಪ್ ಕೆಂಜಿಗೆ ಅವರು ಕರ್ನಾಟಕ ವಯೋಮಿತಿಯ ತಂಡಗಳಲ್ಲಿ ಆಡಿದವರು. ಬೆಂಗಳೂರಿನಲ್ಲಿಯೇ ಎಂಜಿನಿಯರಿಂಗ್ ಪದವಿ ಗಳಿಸಿದವರು. ಆ ಸಂದರ್ಭದಲ್ಲಿ ಕ್ರಿಕೆಟ್‌ನಲ್ಲಿ ಉನ್ನತ ಭವಿಷ್ಯ ಸಿಗದು ಎಂದು ಅನ್ನಿಸಿದಾಗ ಸ್ಕ್ವಾಷ್  ಆಡಲು ಆರಂಭಿಸಿದ್ದರು. ಅವರು ವೃತ್ತಿಗಾಗಿ ಅಮೆರಿಕಕ್ಕೆ ಹೋಗುವಾಗ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು ಸ್ಕ್ವಾಷ್ ರೆಕೆಟ್‌ ಅನ್ನೇ, ಕ್ರಿಕೆಟ್‌ ಕಿಟ್ಟನ್ನಲ್ಲ!

ಅಮೆರಿಕದಲ್ಲಿ ಪರಿಚಯವಾದ ವೆಸ್ಟ್ ಇಂಡೀಸ್‌ನ ಆಟಗಾರರೊಬ್ಬರು ನಾಸ್ತುಷ್ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಬರಲು ಕಾರಣರಾದರು. ಅಮೆರಿಕ ತಂಡ ಸೇರಲು ನೌಕರಿಯನ್ನೂ ಬಿಟ್ಟು ಅಭ್ಯಾಸ ಮಾಡಿದರು. ಅದರ ಫಲ ಈಗ ಸಿಗುತ್ತಿದೆ. ಪಾಕ್ ಎದುರಿನ ಪಂದ್ಯದಲ್ಲಿ ಅವರಿಗೆ ಮೊದಲ ಓವರ್‌ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು. ಒಟ್ಟು 3 ವಿಕೆಟ್ ಕೂಡ ಗಳಿಸಿದರು.

ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್ ಗುಜರಾತಿನವರು. ತಮ್ಮ ರಾಜ್ಯದ 16 ಮತ್ತು 18 ವರ್ಷದೊಳಗಿನವರ ತಂಡಗಳಲ್ಲಿ ಆಡಿದವರು. ಆದರೆ ಅದೃಷ್ಟ ಒಲಿಯಲಿಲ್ಲ. 2010ರಲ್ಲಿ ಅಮೆರಿಕದ ಗ್ರೀನ್ ಕಾರ್ಡ್ ಪಡೆದರು. ಎಂಟು ವರ್ಷಗಳ ಹಿಂದೆ ನ್ಯೂಜೆರ್ಸಿಯಲ್ಲಿ ಹೋಟೆಲ್ ಆರಂಭಿಸಿ ಅಲ್ಲಿಯೇ ನೆಲಸಿದರು. 2018ರಲ್ಲಿ ಸ್ಥಳೀಯ ಕ್ರಿಕೆಟ್‌ ಕ್ಲಬ್‌ನಲ್ಲಿ ಆಡಲು ಆರಂಭಿಸಿದರು. ತಮ್ಮ ಬಿರುಸಾದ ಬ್ಯಾಟಿಂಗ್ ಮತ್ತು ಚುರುಕಾದ ಕೀಪಿಂಗ್ ಮೂಲಕ ಗಮನ ಸೆಳೆದರು. ಫ್ರ್ಯಾಂಚೈಸಿ ಲೀಗ್‌ನಲ್ಲಿಯೂ ಅವಕಾಶ ಪಡೆದರು. ರುಚಿಕಟ್ಟಾದ ಅಡುಗೆ ಮಾಡಬಲ್ಲ ಮೊನಾಂಕ್ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅಚ್ಚುಕಟ್ಟಾದ ಅರ್ಧಶತಕ ಗಳಿಸಿದರು. ಆದರೆ ಭಾರತದ ಎದುರಿನ ಪಂದ್ಯದಲ್ಲಿ ಗಾಯದಿಂದಾಗಿ ಅವರು ಕಣಕ್ಕಿಳಿಯಲಿಲ್ಲ.

ಅಮೆರಿಕ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೆನಡಾ ತಂಡದಲ್ಲಿ ಆಡಿದ್ದರು. ನಂತರ ಅಮೆರಿಕಕ್ಕೆ ಬಂದರು. ಅಲ್ಲಿಯ ತಂಡದಲ್ಲಿ ಆಡುತ್ತಿದ್ದಾರೆ. ಕ್ರಿಕೆಟಿಗನಾಗಿ ಬೆಳೆಯಲು ಹಲವಾರು ಸ್ಥಳೀಯ ತಂಡಗಳಲ್ಲಿ ಆಡಿ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಂಡವರು. ಇದೇ ತಂಡದ ಮಿಲಿಂದ್ ಕುಮಾರ್ ದೆಹಲಿ, ಸಿಕ್ಕಿಂ ತಂಡಗಳಿಗೆ ಆಡಿದ್ದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು. 33 ವರ್ಷದ ಮಿಲಿಂದ್ ಅಮೆರಿಕಕ್ಕೆ ವಲಸೆ ಹೋಗಿ ವೃತ್ತಿಜೀವನದ ‘ಎರಡನೇ ಇನಿಂಗ್ಸ್’ ಆಡುತ್ತಿದ್ದಾರೆ. 

ಭಾರತ ಮೂಲದ ಆಟಗಾರರು ಬೇರೆ ದೇಶಗಳಲ್ಲಿ ಆಡುವುದು ಹೊಸದೇನಲ್ಲ. ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳಲ್ಲಿ ಆಡಿದ್ದಾರೆ. ಈಗಲೂ ಆಡುತ್ತಿದ್ದಾರೆ. ಆದರೆ ಅವರಲ್ಲಿ ಬಹುತೇಕರು ತಮ್ಮ ಪೂರ್ವಜರೊಂದಿಗೆ ಹೋಗಿ ಅಲ್ಲಿಯ ಪ್ರಜೆಗಳಾದವರು. ಆದರೆ ಇದೀಗ ಅಮೆರಿಕ, ಕೆನಡಾ ದೇಶಗಳಲ್ಲಿ ಆಡುತ್ತಿರುವವರದ್ದು ವಿಭಿನ್ನ ಕತೆ. ಸ್ವದೇಶದಲ್ಲಿ ಕಮರಿದ ಕನಸನ್ನು ಅಲ್ಲಿ ನನಸುಗೊಳಿಸಿಕೊಂಡವರ ಯಶೋಗಾಥೆ. ಅವರಿಂದಾಗಿ ಅಮೆರಿಕ ಸೂಪರ್ 8 ಪ್ರವೇಶಿಸಿದೆ. ಈ ಹಂತದಲ್ಲಿರುವ ಅನುಭವಿ ತಂಡಗಳ ಎದುರು ಅಚ್ಚರಿಯ ಗೆಲುವು ಸಾಧಿಸಿದರೆ ಸಪ್ತ ಸಾಗರದಾಚೆಯೂ ಭಾರತೀಯ ಕ್ರಿಕೆಟಿಗರ ಹಿರಿಮೆ ಮತ್ತಷ್ಟು ಎತ್ತರಕ್ಕೇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT