ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ರಾಜ್ಯಪಾಲರು ನ್ಯಾಯಪಾಲರಾಗುವ ಅಗತ್ಯ- ಬರಗೂರು ರಾಮಚಂದ್ರಪ್ಪ ಲೇಖನ

ಅನೇಕ ರಾಜ್ಯಪಾಲರ ವಿವೇಚನಾಧಿಕಾರದ ನಡೆಗಳು ಅನುಮಾನಾತೀತವಾಗಿಲ್ಲ
Published 3 ಸೆಪ್ಟೆಂಬರ್ 2024, 20:20 IST
Last Updated 3 ಸೆಪ್ಟೆಂಬರ್ 2024, 20:20 IST
ಅಕ್ಷರ ಗಾತ್ರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನಗಳನ್ನು ನೀಡಿದ ವಿಷಯವು ಮುನ್ನೆಲೆಗೆ ಬಂದ ನಂತರ ನಡೆಯುತ್ತಿರುವ ವಿದ್ಯಮಾನಗಳು ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತಿವೆ. ವೈಯಕ್ತಿಕ ಜಿದ್ದಾಜಿದ್ದಿ, ಜಾತಿ ಪ್ರಸ್ತಾಪ, ಭ್ರಷ್ಟಾಚಾರ, ಬೈಗುಳಾತ್ಮಕ ಆರೋಪದಂತಹ ಅಂಶಗಳ ನಡುವೆ ಬಹುಮುಖ್ಯವಾಗಿ ಸಂಸದೀಯ ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರ ಪಾತ್ರ ಕುರಿತಂತೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಮೊದಲಿಗೆ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ನೋಟಿಸ್ ನೀಡಿದ್ದೇ ದೊಡ್ಡ ವಿವಾದವಾಯಿತು. ದೂರು ಸ್ವೀಕಾರಗೊಂಡ ಕೆಲವೇ ಗಂಟೆಗಳಲ್ಲಿ ಈ ನೋಟಿಸ್ ಜಾರಿಯಾದ ತರಾತುರಿಯ ಕ್ರಮವು ಸಹಜವಾಗಿಯೇ ಅನುಮಾನಗಳನ್ನು ಆಹ್ವಾನಿಸಿತು.

ಒಂದು ಕಡೆ, ರಾಜ್ಯಪಾಲರು ತೀವ್ರ ತರಾತುರಿಯಲ್ಲಿ ನೋಟಿಸ್ ನೀಡಿದರೆ, ಇನ್ನೊಂದು ಕಡೆ, ಕಾಂಗ್ರೆಸ್ಸಿನವರು ವಿರೋಧ ಪಕ್ಷದವರಿಗೆ ಸಂಬಂಧಿಸಿದಂತೆ ವರ್ಷದ ಹಿಂದೆ ರಾಜಭವನ ತಲುಪಿರುವ ಪ್ರಕರಣಗಳನ್ನು ದಿಢೀರ್ ಜ್ಞಾನೋದಯವಾದಂತೆ ಜ್ಞಾಪಿಸಿಕೊಂಡರು. ಈ ಎರಡೂ ನಮ್ಮ ಸಮಕಾಲೀನ ‘ಶಕ್ತಿರಾಜಕೀಯ’ದ ವಿಪರ್ಯಾಸ!

ಸಿದ್ದರಾಮಯ್ಯನವರು ಮುಡಾ ಪ್ರಕರಣದ ನೇರ ಪಾಲುದಾರರಲ್ಲ. ಅದು ಅವರ ಪತ್ನಿಯವರಿಗೆ ಸಂಬಂಧಿಸಿದ್ದು. ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ನಿವೇಶನಗಳು ಮಂಜೂರಾದದ್ದು. ಮುಡಾದ ಅಂದಿನ ಅಧ್ಯಕ್ಷರೇ ಎಲ್ಲವೂ ನಿಯಮಾನುಸಾರ ನಡೆದಿವೆಯೆಂದೂ, ಅದರಲ್ಲೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಶಾಸಕರಿದ್ದ ಸಭೆಯಲ್ಲೇ ನಿಯಾಮಾನುಸಾರ ಮಂಜೂರು ಮಾಡಲಾಗಿದೆಯೆಂದೂ ಹೇಳಿದ್ದಾರೆ. ನಿಯಮ ಮತ್ತು ನೈತಿಕ ನೆಲೆಗಳು ಪ್ರತ್ಯೇಕವಾಗಿರುವ ನಮ್ಮ ಸಂದರ್ಭದಲ್ಲಿ ನಿಯಮಗಳೇ ಮುಖ್ಯವಾಗುವುದು ಅನಿವಾರ್ಯವಾಗಿದೆ. ಇಷ್ಟಾಗಿಯೂ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದು ಯಾಕೆ?

‘ಹಿಂದುಳಿದ ವರ್ಗ’ಕ್ಕೆ ಸೇರಿದ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸುವ ಪ್ರಯತ್ನ ಎನ್ನುವುದು ಒಂದು ಆಪಾದನೆ. ಇದಕ್ಕೆ ಪೂರಕವಾಗಿ ಬಲಾಢ್ಯ ಜಾತಿಗಳ ನೇತಾರರ ವಿರುದ್ಧ ತನಿಖೆ ಅಥವಾ ವಿಚಾರಣೆಗೆ ಅನುಮತಿ ಕೋರಿದ ಪ್ರಸ್ತಾವಗಳ ವಿಚಾರದಲ್ಲಿ ಕ್ರಮ ಕೈಗೊಳ್ಳದೆ, ಹಿಂದುಳಿದ ಜಾತಿಯ ನಾಯಕರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆಂಬ ತರ್ಕವನ್ನು ಮಂಡಿಸಲಾಗುತ್ತಿದೆ. ಹೀಗೆ ಜಾತಿಪ್ರಧಾನ ಮಂಡನೆ ಮಾಡುವಾಗ ರಾಜ್ಯಪಾಲರು ಪರಿಶಿಷ್ಟ ಜಾತಿಯವರು ಎಂಬುದನ್ನು ಮರೆಯಬಾರದು. ಯಾಕೆಂದರೆ, ಜಾತಿ ಕಾರಣಕ್ಕೆ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆಯೆಂಬ ವಾದಕ್ಕೂ ಅವಕಾಶವಿದೆಯಲ್ಲ? ಆದ್ದರಿಂದ ನನಗನ್ನಿಸಿದಂತೆ, ಸಿದ್ದರಾಮಯ್ಯ ಅವರನ್ನು ಗುರಿಯಾಗಿ ಇರಿಸಿಕೊಂಡು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಫಲವೇ ಈ ಪ್ರಾಸಿಕ್ಯೂಷನ್ ಕ್ರಮ. ಇಲ್ಲಿ ಜಾತಿಗಿಂತ ‘ಪಕ್ಷ’ ಕೆಲಸ ಮಾಡಿದೆ. ಕೇಂದ್ರದಲ್ಲಿರುವ ಸರ್ಕಾರ ಮತ್ತು ಆ ಸರ್ಕಾರವನ್ನು ಮುನ್ನಡೆಸುವ ಪಕ್ಷದ ಅಜೆಂಡಾವೇ ರಾಜ್ಯಪಾಲರಿಗೆ ಆದ್ಯತೆಯಾಗುವುದು ಇಂದಿನ ರಾಜಕೀಯ ವಾಸ್ತವ. ಸರ್ಕಾರವನ್ನು ಅಸ್ಥಿರಗೊಳಿಸುವ ‘ಪಕ್ಷ’ಪಾತದ ಕ್ರಮಗಳು ಹಿಂದಿನಿಂದಲೇ ರಾಜಭವನದ ಮೂಲಕ ಜಾರಿಯಾಗುತ್ತ ಬಂದಿವೆ. ಇಲ್ಲಿ ಮುಖ್ಯಮಂತ್ರಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ಇಡೀ ಸರ್ಕಾರವೇ ಆಸ್ಥಿರಗೊಳ್ಳುತ್ತದೆ ಎಂಬ ತಂತ್ರವೇ ಮುಖ್ಯ ಕಾರ್ಯಸೂಚಿ ಎನ್ನಿಸುತ್ತದೆ.

ಈ ಹಿನ್ನೆಲೆಯಲ್ಲಿ ಪರ ಮತ್ತು ವಿರೋಧದ ಪ್ರತಿಭಟನೆಗಳು ನಡೆಯುತ್ತಿವೆ. ವಿಶೇಷವಾಗಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಗರು ಆಕ್ರೋಶಭರಿತರಾಗಿದ್ದಾರೆ. ಆದರೆ ಆಕ್ರೋಶ ಹೊರಹಾಕುವ ಭರದಲ್ಲಿ ಅನುಚಿತ ಪದ ಪ್ರಯೋಗವಾಗುವುದು ಸಭ್ಯತೆಯಲ್ಲ. ಅಂತೆಯೇ ಪಾದಯಾತ್ರೆ ಸಂದರ್ಭದಲ್ಲಿ ವಿಜೃಂಭಿಸಿದ ಪರಸ್ಪರ ಏಕವಚನದ ಪ್ರಯೋಗ ಪ್ರಜಾಸತ್ತಾತ್ಮಕ ಪರಿಭಾಷೆಯಲ್ಲ. ಪ್ರತಿಭಟನೆಯ ಹಕ್ಕಿಗೆ ಶಕ್ತಿ ತುಂಬಲು ಸಂಯಮ ಮತ್ತು ಸಂಸದೀಯ ಭಾಷೆ ಅಗತ್ಯ. ಆದರೆ ಈ ಪ್ರಕರಣದಲ್ಲಿ ಬೈಗುಳದ ಭಾಷೆ ವಿಜೃಂಭಿಸುತ್ತಿದೆ. ಜೊತೆಗೆ, ಸಂಸದೀಯ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗೆ ರಾಜಕಾರಣಿಗಳಷ್ಟೇ ಅಲ್ಲ ರಾಜಭವನಗಳೂ ಕಾರಣವಾಗುತ್ತಿವೆ.

ರಾಜಭವನಗಳು ಈಗ ಮಾತ್ರವೇ ‘ಪಕ್ಷ’ಪಾತದಿಂದ ವರ್ತಿಸುತ್ತಿವೆಯೆಂದರೆ ತಪ್ಪಾಗುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗಲೂ ರಾಜಭವನಗಳ ದುರ್ಬಳಕೆಯಾಗಿದೆ. ಆಗ ರಾಜ್ಯಪಾಲರ ವರದಿಯನ್ನು ಆಧರಿಸಿ, ಸಂವಿಧಾನದ 356ನೇ ವಿಧಿಯನ್ನು ಬಳಸಿ, ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು ವಜಾ ಮಾಡಿದ ಅನೇಕ ನಿದರ್ಶನಗಳಿವೆ. ಮೊದಲ ಬಾರಿಗೆ 1951ರ ಜೂನ್ 20ರಂದು ಪಂಜಾಬ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. 1959ರ ಜುಲೈ 31ರಂದು ಇದೇ ರೀತಿ ಕೇರಳದ ಎಡಪಕ್ಷಗಳ ನೇತೃತ್ವದ ಸರ್ಕಾರವನ್ನು ವಜಾ ಮಾಡಲಾಯಿತು. ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ 39 ಬಾರಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಲಾಯಿತು.

ಇಂಥ ಕ್ರಮಗಳ ಕಾರಣದಿಂದ ‘ರಾಜ್ಯಪಾಲರು ಕೇಂದ್ರದ ಕೈಗೊಂಬೆ’ ಎಂಬ (ಕು)ಖ್ಯಾತಿ ಜಾಹೀರಾಯಿತು. ಹಾಗೆಂದು ಇದು ಕಾಂಗ್ರೆಸ್ಸಿಗರಿಗೆ ಮಾತ್ರ ಸೀಮಿತವಾಗಲಿಲ್ಲ. ತುರ್ತು ಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಜನತಾ ಪಕ್ಷ ನೇತೃತ್ವದ ಸರ್ಕಾರವು ಅಲ್ಪಾವಧಿಯಲ್ಲೇ 9 ರಾಜ್ಯಗಳಲ್ಲಿ ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರಿತು. ಇದರಿಂದ ಒಂದಂತೂ ಸ್ಪಷ್ಟ: ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಸರ್ಕಾರಗಳು ರಾಜ್ಯಪಾಲರನ್ನು ತಮ್ಮ ಕಾರ್ಯಸೂಚಿಗೆ ಅಧೀನವಾಗಿಸಿಕೊಂಡು ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳಿಗೆ ಕಿರುಕುಳ ನೀಡುತ್ತ ಬಂದಿವೆ. ಇದು ಪಕ್ಷಗಳ ಪ್ರವೃತ್ತಿ ಮಾತ್ರವಲ್ಲ. ಆಡಳಿತ ಪಕ್ಷ ಯಾವುದೇ ಆಗಿದ್ದರೂ ಒಟ್ಟಾರೆ ಆಳುವ ವರ್ಗದ ಸ್ವಹಿತಾಸಕ್ತ ಪ್ರವೃತ್ತಿಯೇ ಇಲ್ಲಿ ಪ್ರಧಾನವಾಗಿದೆ.

ಹಿಂದೆಂದಿಗಿಂತ ಹೆಚ್ಚು ಅತಾರ್ಕಿಕವಾಗಿ ರಾಜ್ಯಪಾಲರು ವರ್ತಿಸುತ್ತಿರುವುದಕ್ಕೆ ಬೇರೆ ರಾಜ್ಯಗಳಲ್ಲಿ ಬಹಳಷ್ಟು ನಿದರ್ಶನಗಳನ್ನು ಕಾಣಬಹುದಾಗಿದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರವು ಪರಸ್ಪರ ಎಷ್ಟೆಲ್ಲಾ ರಾಡಿ ಮಾಡಿಕೊಳ್ಳಬಹುದು ಎಂಬುದಕ್ಕೆ ಪಶ್ಚಿಮ ಬಂಗಾಳದ ಕೆಲವು ಪ್ರಕರಣಗಳು ಸಾಕ್ಷಿಯಾಗಿವೆ. ಜಗದೀಪ್ ಧನಕರ್ ಅವರು ರಾಜ್ಯಪಾಲರಾಗಿದ್ದಾಗ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ನಡೆದ ‘ಜಗಳಗಳು’ ಈಗಿನ ರಾಜ್ಯಪಾಲ ಆನಂದ ಬೋಸ್ ಅವರ ಅವಧಿಯಲ್ಲೂ ಯಥೋಚಿತವಾಗಿ ಮುಂದುವರಿದಿವೆ.

ತಮಿಳುನಾಡಿನದು ಇನ್ನೊಂದು ಪ್ರಹಸನ! ಅಲ್ಲಿನ ರಾಜ್ಯಪಾಲ ಆರ್.ಎನ್.ರವಿ ಅವರು 2023ರಲ್ಲಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ, ಸಚಿವ ಸಂಪುಟ ಅನುಮೋದಿಸಿದ್ದ ಭಾಷಣದ ಕೆಲವು ಭಾಗಗಳನ್ನು ಓದಲು ನಿರಾಕರಿಸಿದರು. 2024ರಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿದ್ದಷ್ಟೇ ಅಲ್ಲ, ಒಂದು ಹಂತದಲ್ಲಿ ಸಭಾತ್ಯಾಗವನ್ನೂ ಮಾಡಿದರು. ವಿಧಾನಮಂಡಲದಲ್ಲಿ ಅಂಗೀಕೃತಗೊಂಡ ಅನೇಕ ಮಸೂದೆಗಳಿಗೆ ದೀರ್ಘಕಾಲ ಸಹಿಯನ್ನೇ ಮಾಡದೆ ಸತಾಯಿಸಿದರು. ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರೂ ಅಲ್ಲಿನ ಅನೇಕ ಮಸೂದೆಗಳಿಗೆ ಸಹಿ ಮಾಡಲಿಲ್ಲ. ವಿಶ್ವವಿದ್ಯಾಲಯಗಳ ಕುಲಪತಿಗಳ ವಿಷಯದಲ್ಲೂ ವಿವಾದವುಂಟು ಮಾಡಿಕೊಂಡರು. ಪಂಜಾಬ್ ರಾಜ್ಯಪಾಲರಾಗಿದ್ದ ಬನ್ವರಿಲಾಲ್ ಪುರೋಹಿತ್ ಅವರೂ ಇದೇ ರೀತಿ ವರ್ತಿಸಿದರು. ಸ್ಪೀಕರ್ ಕರೆದಿದ್ದ ಅಧಿವೇಶನವನ್ನು ಅವರು ರದ್ದು ಮಾಡಿದ್ದೂ ವಿವಾದವಾಯಿತು. 2015ರಲ್ಲಿ ಅರುಣಾಚಲ ಪ್ರದೇಶದ ರಾಜ್ಯಪಾಲರು ಕಾಂಗ್ರೆಸ್‍ನಿಂದ ಹೊರಬಂದವರಿಗೆ ಸರ್ಕಾರವನ್ನು ರಚಿಸುವ ಅವಕಾಶ ನೀಡಿದರು. ಇದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

ತಮಿಳುನಾಡು ಮತ್ತು ಕೇರಳ ಸರ್ಕಾರಗಳು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸು‍ಪ್ರೀಂ ಕೋರ್ಟ್‍ನಲ್ಲಿ ನ್ಯಾಯ ಕೇಳಿದವು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತನ್ನ ತೀರ್ಪಿನಲ್ಲಿ ‘ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರ ಪ್ರತಿನಿಧಿಯಾದ ಸರ್ಕಾರಗಳ ಅಧಿಕಾರಕ್ಕೆ’ ಮಾನ್ಯತೆ ನೀಡಿತು. ಸಂವಿಧಾನವು ನೇರವಾಗಿ ವಿವೇಚನಾಧಿಕಾರ ಕೊಟ್ಟಿರುವ ವಿಷಯಗಳನ್ನು ಹೊರತುಪಡಿಸಿ, ರಾಜ್ಯಪಾಲರು ರಾಜ್ಯ ಸರ್ಕಾರದ ಶಿಫಾರಸುಗಳಂತೆ ನಡೆದುಕೊಳ್ಳಬೇಕೆಂದು ನಿರ್ದೇಶಿಸಿತು. ಆದರೂ ಅನೇಕ ರಾಜ್ಯಪಾಲರ ವಿವೇಚನಾಧಿಕಾರದ ನಡೆಗಳು ಅನುಮಾನಾತೀತವಾಗಿಲ್ಲ. ಕರ್ನಾಟಕದ್ದು ಇತ್ತೀಚಿನ ಉದಾಹರಣೆ.

ಎಲ್ಲಾ ರಾಜ್ಯಪಾಲರು ನ್ಯಾಯಪಾಲರಾಗಬೇಕಾದದ್ದು ಇಂದಿನ ಅಗತ್ಯ. ಇದು ಸರ್ಕಾರಗಳಿಗೂ ಅನ್ವಯಿಸುತ್ತದೆ. ಕೊನೆಗೊಂದು ಮಾತು: ಸಿದ್ದರಾಮಯ್ಯ ಅವರ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪವು ಕಾಂಗ್ರೆಸ್ಸಿನಲ್ಲಿ ‘ಅನಿವಾರ್ಯ’ ಒಗ್ಗಟ್ಟನ್ನು ರೂಪಿಸಿದೆ. ಈ ಒಗ್ಗಟ್ಟು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿನಲ್ಲಿ ಮತ್ತಷ್ಟು ಬಲಾಢ್ಯರನ್ನಾಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT