‘ಆ ‘ವ್ಯಕ್ತಿ’ ಸರಿ ಇಲ್ಲ ಎಂದು ಆರು ವರ್ಷದ ಮಗುವಿಗೇ ಗೊತ್ತಿದೆ. ಆದರೆ ದೊಡ್ಡವರಾದ ನಮಗೆ ಗೊತ್ತಿಲ್ಲ’ ಎಂದು, ತಾವು ಯಾರನ್ನು ಮೂದಲಿಸಬೇಕಾಗಿದೆಯೋ ಅವರನ್ನು ಮೂದಲಿಸಲು ಮಕ್ಕಳನ್ನು ಬಳಸಿಕೊಳ್ಳುವವರನ್ನು ಕಾಣಬಹುದು. ಆದರೆ ಆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಬಲ್ಲ ಶಕ್ತಿ ಆರು ವರ್ಷದ ಮಗುವಿಗೆ ಬಂದಿರುತ್ತದೆಯೇ ಎಂದು ಕೇಳುವವರ ಕೊರತೆ ಇದೆ. ಆ ವ್ಯಕ್ತಿ ಕುರಿತು ಮಗು ಹೊಂದಿರುವ ಈ ಅಭಿಪ್ರಾಯವು ವಿಮರ್ಶಾತ್ಮಕವಾದ ಯಾವ ಹೊಳಹನ್ನೂ ನೀಡಲಾರದು ಎಂದು ಹೇಳುವವರು ಬೇಕಾಗಿದ್ದಾರೆ.

ಮಕ್ಕಳನ್ನು ವೈಚಾರಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ಕ್ರಮಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಮಗುವಿನ ತಾಯಿ– ತಂದೆಯ ‘ಮನ್ನಣೆಯ ದಾಹ’ವನ್ನು ತಣಿಸುವ ರೂಪದಲ್ಲಿಯೂ ಇರುತ್ತವೆ. ಮನರಂಜನಾ ಮಾಧ್ಯಮಗಳಲ್ಲಿ ಬರುವ ಮಕ್ಕಳ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸಿದರೆ, ಅಲ್ಲಿ ಸರ್ಕಸ್ ನಡೆಯುತ್ತಿರುವಂತೆ
ಕಾಣಿಸುತ್ತದೆ. ಮೇಲಿನಿಂದ ಹಾರುವುದು, ಹಾರಿ ಬೀಳುವಾಗ ಹಿಡಿದುಕೊಳ್ಳುವಂತಹ ರೀತಿಯ ಪ್ರದರ್ಶನ ಗಳು ‘ನೃತ್ಯ’ ಎನ್ನುವ ವ್ಯಾಪ್ತಿಯ ಒಳಗೆ ನಿಲ್ಲಬಲ್ಲವುಗಳಲ್ಲ. ಆಗ ಮಗುವಿನಲ್ಲಿ ಉಂಟಾಗುವ ಕಲಿಕೆ ಎಂತಹದು? ನೃತ್ಯ ಎಂದರೆ ಸರ್ಕಸ್ ಮಾಡುವುದು ಎಂಬ ಕಲಿಕೆಯೇ ನಡೆಯಬೇಕಲ್ಲವೆ? ಅಂದರೆ, ಈ ಬಗೆಯ ಪ್ರದರ್ಶನ ಕಲೆಗಳನ್ನು ಕಲಿಕೆಯ ಹಂತದಲ್ಲೇ ಮಗುವಿಗೆ ತಪ್ಪಾಗಿ ಅರ್ಥ ಮಾಡಿಸುತ್ತೇವೆ. ಇವು ಬಹುಮಟ್ಟಿಗೆ ಪಾಲಕರ ಮನ್ನಣೆಯ ದಾಹಕ್ಕೆ ಸಾಂತ್ವನವನ್ನು ನೀಡುವ ರೂಪದ್ದಾಗಿರುತ್ತವೆ.

ಇದೇ ಮಾದರಿಯ ಇನ್ನೊಂದು ಪ್ರತಿಭಾ ವಿಡಂಬನೆ ಎಂದರೆ, ದಾಖಲೆಗಳನ್ನು ಮಾಡುವುದು ಮತ್ತು ಸ್ಪರ್ಧಾ ವಿಜೇತರಾಗುವುದು. ಗಿನ್ನಿಸ್ ಪುಸ್ತಕ ದಾಖಲೆ, ಲಿಮ್ಕಾ ಪುಸ್ತಕ ದಾಖಲೆಯ ಪದ್ಧತಿ ಮೊದಲಿನಿಂದಲೂ ಇತ್ತು, ಈಗಲೂ ಇದೆ. ಇತ್ತೀಚೆಗೆ ಈ ಮಾದರಿಯ ಅನೇಕ ‘ಪುಸ್ತಕ ದಾಖಲೆ’ಗಳು ಬಂದಿವೆ. ‘ಮೂರು ವರ್ಷ ವಯಸ್ಸಿನ ಮಗು ಈ ಪುಸ್ತಕ ದಾಖಲೆ ಮಾಡಿದೆ’ ಎಂದೆಲ್ಲ ಸುದ್ದಿಗಳು ಕಾಣಿಸಿಕೊಳ್ಳುತ್ತವೆ. ಆಮೇಲೆ ಒಂದೆರಡು ವರ್ಷಗಳಲ್ಲಿ ಆ ಪುಸ್ತಕವೇ ಇರುವುದಿಲ್ಲ! ದಾಖಲೆಯನ್ನು ದಾಖಲು ಮಾಡಿರುವ ಪುಸ್ತಕವೇ ಅಸ್ತಿತ್ವವನ್ನು ಹೊಂದಿಲ್ಲದ ಮೇಲೆ ಆ ದಾಖಲೆಗಿರುವ ಮಹತ್ವ ಏನು? ಮೇಲಾಗಿ ಮೂರು ವರ್ಷ, ಆರು ವರ್ಷ, ಎಂಟು ವರ್ಷದ ಮಕ್ಕಳು ಸ್ಥಾಪಿಸಿದ್ದಾರೆ ಎನ್ನಲಾಗುವ ದಾಖಲೆಯ ಸಾರ್ವತ್ರಿಕ ಉಪಯೋಗ ಏನು? ಇಂತಹ ದಾಖಲೆಗಳಿಗಾಗಿ ಅಥವಾ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಎಂದು ಎಡೆಬಿಡದೆ ನಡೆಸಲಾಗುವ ಸ್ಪರ್ಧೆಗಳ ಹಿಂದಿರುವ ಶೈಕ್ಷಣಿಕ ಕಲ್ಪನೆ ಏನು? ಇದಕ್ಕೆಲ್ಲ ಮಕ್ಕಳನ್ನು ಸಿದ್ಧಪಡಿಸಲು ಅವರ ಮೇಲೆ ಎಷ್ಟೊಂದು ಭಾವನಾತ್ಮಕ ಒತ್ತಡವನ್ನು ಹೇರಲಾಗುತ್ತದೆ, ಅವು ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮ ಏನು ಎಂಬುದನ್ನು ಪಾಲಕರು ಯೋಚಿಸಲು ಹೋಗುವುದಿಲ್ಲ.

ತಮ್ಮ ರಾಜಕೀಯ ಸಿದ್ಧಾಂತವನ್ನು ಮಕ್ಕಳ ಮೂಲಕ ಅನುಷ್ಠಾನಕ್ಕೆ ತರುವಲ್ಲಿಂದ ತೊಡಗಿ ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಮಕ್ಕಳನ್ನು ಬಳಕೆ ಮಾಡಿಕೊಳ್ಳುವವರೆಗೆ ಎಲ್ಲವೂ ಬಾಲ್ಯವನ್ನು ಕಸಿಯುವ ವ್ಯವಸ್ಥೆಗಳೇ ಆಗಿವೆ. ಆದರೆ ಶೈಕ್ಷಣಿಕ ಮನೋವಿಜ್ಞಾನದ ಆಧಾರದಲ್ಲಿ, ಮಕ್ಕಳ ವಿಕಾಸಕ್ಕೊಂದು ವಿನ್ಯಾಸವಿದೆ. ಲಾರೆನ್ಸ್ ಕೊಹಲ್ಬರ್ಗ್ ನೈತಿಕತೆಯ ವಿಕಾಸದ ಸಿದ್ಧಾಂತ, ಜೀನ್ ಪಿಯಾಜೆಯವರ ಸಾಮಾಜಿಕ ವಿಕಾಸದ ಸಿದ್ಧಾಂತ, ಹೆವ್ವಿಗ್ ಹರ್ಸ್ಟ್ ಅವರ ವಿಕಾಸ ಕಾರ್ಯದ ಪರಿಕಲ್ಪನೆ ಗಳೆಲ್ಲವೂ ಪ್ರಯೋಗದ ಮೂಲಕ ಕಂಡುಕೊಂಡ ಸತ್ಯಗಳು. ಮಗು ಶೈಶವದಲ್ಲಿ ತಾಯಿಯ ಮೂಲಕ, ನಂತರ ಕುಟುಂಬದ ಮೂಲಕ, ಬಳಿಕ ಶಾಲೆ, ಆಮೇಲೆ ಸಮುದಾಯದಲ್ಲಿ ಒಳಗೊಳ್ಳುತ್ತಾ ತನ್ನ ಸಾಮಾಜೀಕರಣವನ್ನು ಸಾಧಿಸುತ್ತದೆ. ಸಮಗ್ರದೊಳಗೆ ತನಗೆ ಸೂಕ್ತವೆನಿಸಿದ ಆಯ್ಕೆಗಳೊಂದಿಗೆ ಕ್ರಿಯೆ- ಪ್ರತಿಕ್ರಿಯೆ ನಡೆಸುತ್ತಾ ನಿಲುವುಗಳನ್ನು ರೂಪಿಸಿಕೊಳ್ಳುತ್ತದೆ. ತನ್ನ ಅರಿವಿನ ಪರಿಣಾಮವಾಗಿ ಮಗುವಿನ ಚಟುವಟಿಕೆ ನಡೆಯತೊಡಗಿ ದಾಗ ಅದು ಆ ಮಗುವಿಗೆ ‘ವರ’ವಾಗಿ ಬರುತ್ತದೆ. ಬದಲು ‘ಅರಿವು’ ಇಲ್ಲದೆ ನಡೆಸಿದ ಚಟುವಟಿಕೆಯಿಂದ ಬರುವ ಫಲಿತಾಂಶಗಳು ಮಗುವಿಗೆ ‘ಶಾಪ’ವಾಗಿ ಪರಿಣಮಿಸುತ್ತವೆ. ‘ದಾಖಲೆ ಮಾಡುವುದು’ ಎಂದರೆ ಏನು ಎಂಬ ಅರಿವೇ ಇಲ್ಲದ ವಯಸ್ಸಿನಲ್ಲಿ ಮಗುವಿನ ಬಳಿ ದಾಖಲೆ ಮಾಡಿಸಿದರೆ, ಮಗು ಬೆಳೆಯುತ್ತಾ ಹೋದ ಹಾಗೆ, ಆ ದಾಖಲೆಗೆ ಯಾವ ಮಹತ್ವವೂ ಇಲ್ಲ ಎಂದು ಕಂಡುಕೊಂಡಂತೆಲ್ಲ ತನ್ನನ್ನು ತಾನು ಸ್ವೀಕರಿಸಿಕೊಳ್ಳಲು ಸಾಧ್ಯವಾಗದ ಮನಃಸ್ಥಿತಿ ಗಟ್ಟಿಯಾಗುತ್ತದೆ.

ಎರಡು ದಶಕಗಳಿಂದಲೂ ಟಿ.ವಿ. ವಾಹಿನಿಗಳಲ್ಲಿ ಮಕ್ಕಳನ್ನು ಕುಣಿಸುವ ಕಾರ್ಯಕ್ರಮಗಳು ನಡೆಯುತ್ತಾ ಇವೆ. ಹಾಗೆ ಕುಣಿದು ಪ್ರಥಮ, ದ್ವಿತೀಯ ಎಂದೆಲ್ಲ ಸ್ಥಾನ ಪಡೆದು, ಹಲವು ಕಡೆ ಸನ್ಮಾನವೆಲ್ಲ ಆದ ಮಗು ಈಗ ಎಲ್ಲಿದೆ ಎಂದು ಕೇಳಿದರೆ ಬಹುತೇಕ ನಿರಾಶಾದಾಯಕ ಉತ್ತರವೇ ಬರುವುದು. ಏಕೆಂದರೆ ಆ ಮಗು ಪಡೆದ ಯಶಸ್ಸಿನಲ್ಲಿ ಕೌಶಲ, ದಕ್ಷತೆಗಿಂತ ಹೆಚ್ಚಾಗಿ ಅದು ಅತಿ ಚಿಕ್ಕ ವಯಸ್ಸಿನ ದ್ದಾಗಿದ್ದುದೇ ಪ್ರಮುಖ ಕಾರಣವಾಗಿಬಿಟ್ಟಿರುತ್ತದೆ.
ತನ್ನ ಯಶಸ್ಸನ್ನು ಮಗು ನಿರಂತರವಾಗಿ ಉಳಿಸಿಕೊಳ್ಳ ಬೇಕಾದರೆ ಕೌಶಲದಲ್ಲಿ ವೃದ್ಧಿ ಆಗಬೇಕು. ಸಂಗೀತ ಕ್ಷೇತ್ರದ ವ್ಯಾಪ್ತಿ ಎಷ್ಟು ಎಂಬ ಅರಿವು ಬರುವ ಮೊದಲೇ ‘ಸಂಗೀತ ವಿಶಾರದ’ ಪ್ರಶಸ್ತಿಯೆಲ್ಲ ಬಂದು, ತನ್ನ ಬದುಕಿನ ಸಾಧನೆ ಮುಗಿಯಿತು ಎನಿಸಿದರೆ ಮಗು ಮತ್ತೆ ಸಂಗೀತದಲ್ಲಿ
ತೊಡಗಿಕೊಳ್ಳುವುದು ಹೇಗೆ?

ಮಕ್ಕಳನ್ನು ಅಕಾಲ ಹಿರಿಯರನ್ನಾಗಿಸುವ ಈ ಬೃಹತ್ ಮಾರುಕಟ್ಟೆ ಆರ್ಥಿಕತೆ ವ್ಯವಸ್ಥೆಯ ಬಗ್ಗೆ ಪಾಲಕರು ಒಂದಷ್ಟು ಯೋಚಿಸಬೇಕು. ತಮ್ಮ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದು ಪಾಲಕರಿಗೆ ಅನಿಸುವುದು ಸರಿಯಾದ ವಿಚಾರ. ಆದರೆ ಅದು ಮಗುವಾಗಿರುವಾಗಲೇ ಆಗಬೇಕಾದ್ದಲ್ಲ ಎಂಬ ಅರಿವು ಇರಬೇಕು. ಮಗುವಿನದ್ದು ಕಲಿಕೆಯ ವಯಸ್ಸೇ ವಿನಾ ಸಾಧನೆಯ ವಯಸ್ಸಲ್ಲ ಅಥವಾ ತೀರ್ಮಾನ ತೆಗೆದುಕೊಳ್ಳುವ ವಯಸ್ಸಲ್ಲ. ತಮ್ಮ ಮಕ್ಕಳಲ್ಲಿ ಕಲಿಕೆಯನ್ನು ಹೇಗೆ ಸಮೃದ್ಧಗೊಳಿಸಬಹುದು ಎಂಬ ಬಗ್ಗೆ ಪಾಲಕರು ಯೋಚಿಸಬೇಕೆ ವಿನಾ ‘ಪ್ರಶಸ್ತಿ’, ‘ದಾಖಲೆ’ಗಳಂತಹ ಫಲಿತಾಂಶವನ್ನು ಹೇಗೆ ಪಡೆಯುವುದು ಎಂಬ ಬಗ್ಗೆ ಅಲ್ಲ.

ಜಗತ್ತು ಬಹುಬೇಗ ಸನ್ಮಾನ, ಪ್ರಶಸ್ತಿ, ದಾಖಲೆಗಳಿಂದ ಬಂದ ಗುರುತಿಸುವಿಕೆಯನ್ನು ಮರೆತುಬಿಡುತ್ತದೆ. ಕೆಲವು ತಂದೆ– ತಾಯಿಯರಲ್ಲಿ ಹತ್ತು ಲಕ್ಷ ರೂಪಾಯಿ ತೆತ್ತು ಮಗುವನ್ನು ಕೆ.ಜಿ. ತರಗತಿಗೆ ಸೇರಿಸುವುದೇ ಪಾಲಕತ್ವದ ಸಾರ್ಥಕತೆ ಎನಿಸುತ್ತದೆ. ತಾಯಿ– ತಂದೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಎಷ್ಟು ಖರ್ಚು ಮಾಡಿದ್ದಾರೆ ಎನ್ನುವುದಕ್ಕಿಂತ ಹೇಗೆ ಖರ್ಚು ಮಾಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.

ಮಕ್ಕಳ ಭವಿಷ್ಯದ ಸಾಧನೆಗಳು ಅವರಲ್ಲಿ ಕಲಿಕೆಯಾಗಿ ಬೆಳೆದ ಮೌಲ್ಯ ಪ್ರಜ್ಞೆ, ಕೌಶಲ, ಸಾಮರ್ಥ್ಯ, ಕಾರ್ಯ ನಿರ್ವಹಣಾ ದಕ್ಷತೆ, ವರ್ತನೆಯಲ್ಲಿ ಸಮರ್ಪಕತೆ, ಸೂಕ್ತ ಆಲೋಚನಾ ಕ್ರಮದಂತಹವುಗಳಿಂದ ನಿರ್ಧಾರ ವಾಗುತ್ತವೆಯೇ ವಿನಾ ಯಾಂತ್ರಿಕ ಚಟುವಟಿಕೆಗಳಿಂದಲ್ಲ. ಮಕ್ಕಳಲ್ಲಿ ರಾಜಕೀಯ ಅರಿವನ್ನು ಅವಶ್ಯವಾಗಿ ಬೆಳೆಸಬೇಕು. ಆದರೆ ರಾಜಕೀಯ ತೀರ್ಮಾನಗಳನ್ನಲ್ಲ. ಸಂಗೀತ, ನೃತ್ಯ, ಕಲೆಗಳು, ಕ್ರೀಡೆಯಂತಹ ಎಲ್ಲ ಕಲಿಕೆಗಳೂ ಮಕ್ಕಳಿಗೆ ಸಿಗಬೇಕು. ಆದರೆ ಅವು ಕಲಿಕೆಗಾಗಿಯೇ ವಿನಾ ಪ್ರಶಸ್ತಿ, ದಾಖಲೆಗಳಿಗಾಗಿಯಲ್ಲ.

ಈಗ ನಡೆಯುತ್ತಿರುವ ಚಟುವಟಿಕೆಗಳನ್ನೇ ಕೊಂಚ ಮರು ಹೊಂದಾಣಿಕೆ ಮಾಡಿಕೊಂಡರೆ, ಸೃಜನಶೀಲ ಕಾರ್ಯಕ್ರಮಗಳು ಮಕ್ಕಳ ವಿಕಾಸಕ್ಕೆ ಪೂರಕವಾಗಬಲ್ಲವು. ಟಿ.ವಿ. ವಾಹಿನಿಗಳಲ್ಲಿ ಮಕ್ಕಳು ಕಾಣಿಸಲೇಬೇಕು ಎಂದಾದರೆ, ಅಂತಹ ಚಟುವಟಿಕೆಗಳನ್ನು ಮಕ್ಕಳ ಮೇಳಗಳ ರೀತಿಯಲ್ಲಿ ಮಾಡಬೇಕು, ಸ್ಪರ್ಧೆಗಳಾಗಿ ಅಲ್ಲ. ಮಕ್ಕಳು ತೊಡಗಿಕೊಳ್ಳಲು ವೇದಿಕೆಯನ್ನು ಒದಗಿಸಿಯೂ ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸಿ ಕಳಿಸುವ ಕ್ರಮವನ್ನು ಜಾರಿಗೊಳಿಸಬಹುದು. ಇದರಿಂದ ಮಾರುಕಟ್ಟೆ ಆರ್ಥಿಕತೆಯ ಅಗತ್ಯವೂ ಈಡೇರುತ್ತದೆ, ಮಕ್ಕಳ ವಿಕಾಸದ ವಿನ್ಯಾಸಗಳಿಗೆ ಅಡೆತಡೆಯೂ ಆಗುವುದಿಲ್ಲ.

ಒಟ್ಟಿನಲ್ಲಿ ಮಕ್ಕಳಲ್ಲಿ ಫಲಿತಾಂಶದ ಒತ್ತಡ ಉಂಟಾಗದ ಹಾಗೆ, ಕಲಿಕೆಯ ಹಂಬಲ ಹೆಚ್ಚುವ ಹಾಗೆ ಕಾರ್ಯಕ್ರಮಗಳನ್ನು ಮಾಡಬಹುದು. ಸ್ಪರ್ಧೆಗಳು ಬೇಕೇ ಬೇಕು ಎನ್ನುವುದಾದರೆ ಶಾಲಾ ಮಟ್ಟದ ಸ್ಪರ್ಧೆಗಳು ಫಲಿತಾಂಶವನ್ನೇ ಪ್ರಧಾನ ಗುರಿಯಾಗಿ ಹೊಂದಿರುವ ಸ್ಪರ್ಧೆಗಳಾಗಿರುವುದಿಲ್ಲ. ಮಕ್ಕಳ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುತ್ತವೆ. ಆದ್ದರಿಂದ ಶಾಲಾ ಮಟ್ಟದ ಸ್ಪರ್ಧೆಗಳು ಸಾಕಾಗುತ್ತವೆ.

ವಿಕಾಸದ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಬಹುಕೋನೀಯವಾಗಿ ಬಂಧಿಸಿ ಅಕಾಲ ವಯಸ್ಕರಾಗಿಸುವ
ಮನೋಧರ್ಮವನ್ನು ಕಾನೂನಿನ ಮೂಲಕ ಪರಿಹರಿಸಲು ಬರುವುದಿಲ್ಲ. ಸಾಮಾಜಿಕ ಶಿಕ್ಷಣದ ಮೂಲಕವೇ ಅದು ಆಗಬೇಕಾಗಿದೆ. ಈ ದಿಸೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.