ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವ್ಯಾಪಾರ ನಿರಂತರ: ಸಬಿತಾ ಬನ್ನಾಡಿ ಅವರ ವಿಶ್ಲೇಷಣೆ

ಯುದ್ಧವು ಉದ್ದಿಮೆಯಾದಾಗ ಶಸ್ತ್ರಗಳ ಜೊತೆಗೆ ಉನ್ಮಾದವನ್ನೂ ಉತ್ಪಾದಿಸಲಾಗುತ್ತದೆ
Published 29 ಅಕ್ಟೋಬರ್ 2023, 19:30 IST
Last Updated 30 ಅಕ್ಟೋಬರ್ 2023, 3:16 IST
ಅಕ್ಷರ ಗಾತ್ರ

‘ಯುದ್ಧದಲ್ಲಿ ತೊಡಗಿದ ಇರಾಕ್ ಮತ್ತು ಇರಾನ್ ಎರಡು ದೇಶಗಳಿಗೂ ನೀನೇ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದೆಯಲ್ಲವೇ?’ ಎಂದು ಸೈಮನ್ ವೀಜ್ಹ್‌ಗೆ ಕೇಳುವ ಯೂರಿ ಓರ್‍ಲೋವ್, ತಾನು ಕೂಡಾ ಇಸ್ರೇಲ್- ಲೆಬನಾನ್ ಯುದ್ಧವಾದಾಗ ಎರಡೂ ದೇಶಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಾನೆ. ‘ಅದು ನನಗೆ ಸಂಬಂಧಿಸಿದ ಸಂಗತಿಯಲ್ಲ. ನಾನು ಮಾಡುತ್ತಿರುವುದು ವ್ಯಾಪಾರ ಮಾತ್ರ’ ಎಂದು ತಣ್ಣಗೆ ಹೇಳಬಲ್ಲ ಅವನು ಹೇಳುವ ಮಾತೊಂದು ಹೀಗಿದೆ: ‘ವಿಶ್ವದೆಲ್ಲೆಡೆ ವ್ಯಾಪಾರ ಆಗಿರುವ ಒಟ್ಟು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ವಿಭಾಗಿಸಿದಾಗ, ಪ್ರತಿ ಹನ್ನೆರಡು ಜನರಲ್ಲಿ ಒಬ್ಬರ ಬಳಿ ಶಸ್ತ್ರ ಇದೆ. ಈಗ ಪ್ರಶ್ನೆ ಇರುವುದು, ಉಳಿದ ಹನ್ನೊಂದು ಜನರೂ ಗನ್ ಹಿಡಿಯುವಂತೆ ಮಾಡುವುದು ಹೇಗೆ?’ ಇದು, ಭೂಮಿ ಮೇಲಿನ ಅತಿದೊಡ್ಡ ಶಸ್ತ್ರಾಸ್ತ್ರ ಡೀಲರ್‌ಗಳ ಕತೆಯಿಂದ ಪ್ರೇರಿತವಾದ ‘ಲಾರ್ಡ್ ಆಫ್ ವಾರ್’ ಸಿನಿಮಾದ ಸ್ವಗತದ ಮಾತು.

ಜಗತ್ತಿನಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರ ಉತ್ಪಾದನೆಯನ್ನು ಮಾಡುವ ಮೊದಲ ಐದು ದೇಶಗಳಾದ ಅಮೆರಿಕ, ಬ್ರಿಟನ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ರಾಷ್ಟ್ರಗಳೂ ಆಗಿರುವುದನ್ನು ವ್ಯಂಗ್ಯ ಎನ್ನಬೇಕೋ ವಿಪರ್ಯಾಸ ಎನ್ನಬೇಕೋ ದುರಂತ ಎನ್ನಬೇಕೋ ಗೊತ್ತಿಲ್ಲ. ಈ ಐದರಲ್ಲಿ ರಷ್ಯಾ, ಚೀನಾ ಒಂದು ಕಡೆಗೆ ಇದ್ದರೆ, ಉಳಿದವುಗಳ ಜೊತೆಗೆ ಇತರ ಕೆಲವು ದೇಶಗಳೂ ಸೇರಿಕೊಂಡು, ಜಗತ್ತಿನಲ್ಲಿ ಎಲ್ಲೇ ಯುದ್ಧವಾಗಲಿ ಅಲ್ಲಿ ತಮ್ಮ ಮೂಗು ತೂರಿಸುತ್ತವೆ. ಶಸ್ತ್ರಾಸ್ತ್ರ ಸರಬರಾಜು ತಕ್ಷಣ ಶುರುವಾಗಿಬಿಡುತ್ತದೆ. ಆದರೆ ತಮ್ಮನ್ನು ತಾವು ‘ಶಾಂತಿದೂತರು’ ಎಂದು ಬಿಂಬಿಸಿಕೊಳ್ಳುತ್ತವೆ. ಇವು ಯಾರನ್ನು ಖಳನಾಯಕರು ಎಂದು ಚಿತ್ರಿಸುತ್ತವೋ ಅದನ್ನು ಇತರರು ನಂಬುವಂತೆ ಮಾಡುತ್ತವೆ. ಒಟ್ಟಿನಲ್ಲಿ ಮುಖ್ಯವಾಗಿ ಆಗಬೇಕಿರುವುದು ಏನೆಂದರೆ ಯುದ್ಧ!

ಅದಕ್ಕೆ ಪ್ರಜಾಪ್ರಭುತ್ವದ ಮುಖವಾಡವಿದೆ. ನಾಗರಿಕತೆಯ ನಾಜೂಕು ಇದೆ. ತಮ್ಮ ಜೊತೆಗೆ ಕೈಜೋಡಿಸದವರು, ತಮ್ಮ ಹಿಂಬಾಲಕರಾಗದವರು ಅನಾಗರಿಕರೂ ಪಾಶವಿ ಸೈದ್ಧಾಂತಿಕತೆಯವರೂ ಆಗಿಬಿಡುತ್ತಾರೆ! ಹಾಗೆ ಮಾಡುವುದಕ್ಕೆ ಸದಾ ಸನ್ನದ್ಧ. ಅಫ್ಗನ್‍ನ ತಾಲಿಬಾನೀಯರನ್ನಾಗಲೀ ಒಸಾಮ ಬಿನ್ ಲಾಡೆನ್‍ನನ್ನಾಗಲೀ ಹಮಾಸ್ ಬಂಡುಕೋರರನ್ನಾಗಲೀ ಪಾಕಿಸ್ತಾನದ ಭಯೋತ್ಪಾದಕರನ್ನಾಗಲೀ ಮೂಲದಲ್ಲಿ ಹುಟ್ಟುಹಾಕಿದವರು ಯಾರು? ಅಮೆರಿಕದಂತಹ ದೇಶಗಳ ಆರ್ಥಿಕ ಸಹಾಯ ಇಲ್ಲದೇ ಇವರೆಲ್ಲ ತಮ್ಮಷ್ಟಕ್ಕೆ ತಾವೇ ಬೆಳೆದರೇ?

ತನ್ನನ್ನು ತಾನು ‘ದಿವಾಳಿಯಾಗಿದ್ದೇನೆ’ ಎಂದು ಘೋಷಿಸಿಕೊಂಡಿದ್ದ ಪಾಕಿಸ್ತಾನ, ಇದ್ದಕ್ಕಿದ್ದಂತೆ ಭಾರತದ ಕಾರ್ಗಿಲ್ ಮೇಲೆ ದಾಳಿ ಮಾಡಿದ್ದು ಹೇಗೆ? ಇದೆಲ್ಲವನ್ನೂ ಕಣ್ಣಾರೆ ಕಂಡೂ ನಾವು ಆ ದೇಶಗಳನ್ನೇ ಆರಾಧಿಸುತ್ತಾ ಮಾರುಹೋಗುವುದು ಮತ್ತು ಅವರು ನಮಗಾಗಿ ಸೃಷ್ಟಿಸಿಕೊಟ್ಟ ಶತ್ರುಗಳೆಡೆಗೆ ಮಾತ್ರ ಗುರಿಯಿಡುವುದು ನಡೆಯುತ್ತಲೇ ಇದೆ. ತಮ್ಮದೇ ಶ್ರೀಮಂತ ಸಂಸ್ಕೃತಿ, ಪ್ರಕೃತಿ, ಜೀವನಕ್ರಮಗಳಿಂದ ಬದುಕುತ್ತಿದ್ದ ದೇಶಗಳನ್ನು ವಸಾಹತುಗಳನ್ನಾಗಿ ಆಕ್ರಮಿಸಿ, ಅಲ್ಲಿನ ಸಂಪತ್ತನ್ನು ದೋಚಿ, ಅಲ್ಲಿನ ಜನರಲ್ಲಿ ಕೀಳರಿಮೆ ತುಂಬಿ, ಇಂದಿಗೂ ತಾನೇ ಶ್ರೇಷ್ಠ ಎಂದು ಬೀಗುವ ಬ್ರಿಟನ್ ಮತ್ತಿತರ ಯುರೋಪಿಯನ್ ದೇಶಗಳು, ಮೂಲ ರೆಡ್ ಇಂಡಿಯನ್ನ ರನ್ನು ನಿರ್ನಾಮ ಮಾಡಿ ಆಕ್ರಮಿಸಿಕೊಂಡು ಹುಟ್ಟಿದ ಅಮೆರಿಕ ಇಂದಿಗೂ ತನ್ನ ಸಂಪತ್ತು ಹೆಚ್ಚಿಸಿಕೊಳ್ಳಲು, ಉಳಿಸಿಕೊಳ್ಳಲು ಮಾಡುತ್ತಿರುವುದು ಇದೇ ತಣ್ಣಗಿನ ಕ್ರೌರ್ಯವನ್ನೇ. ಇದಕ್ಕಾಗಿ ಇವು ಜಗತ್ತನ್ನು ಧರ್ಮದ ಆಧಾರದಲ್ಲಿ ವಿಭಜಿಸ ಹೊರಟಿವೆ.

ಮೇಲಿನ ಸಿನಿಮಾದಲ್ಲಿ ಇನ್ನೊಂದು ಮಾತು ಬರುತ್ತದೆ. ಅಮೆರಿಕ ಮತ್ತು ಸೋವಿಯತ್ ನಡುವಣ ಶೀತಲಯುದ್ಧವು ಕೊನೆಗೊಂಡಾದ ಮೇಲೆ ‘ಇನ್ನೇನಿದ್ದರೂ ದೇಶದೊಳಗಿನ ಜನರನ್ನು ಎಡ, ಬಲ ಎಂದು ವಿಭಜಿಸಿ ಕದನಕ್ಕೆ ಅಣಿಗೊಳಿಸಬೇಕು’ ಎಂದು ಯೂರಿ ಹೇಳುತ್ತಾನೆ. ಈ ರಾಜಕಾರಣದ ಬಿಸಿ ಈಗ ನಮ್ಮ ದೇಶಕ್ಕೂ ವ್ಯಾಪಿಸಿದೆ. ಆದರೆ ನಾವು ಈ ಕದನಕ್ಕೆ ಬಹಳ ಉತ್ಸುಕರಾಗಿದ್ದೇವೆ. ಮನೆ ಮನೆಗಳಲ್ಲೂ ಮಾತಿನ ಕದನ ಈಗ ಸಾಮಾನ್ಯ ಸಂಗತಿಯೇ ಆಗಿದೆ. ಹಮಾಸ್ ಬಂಡುಕೋರರ ಮೂರ್ಖ ದಾಳಿಯನ್ನು ಮಧ್ಯಪ್ರಾಚ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಲು ಬಳಸಿಕೊಳ್ಳುವ ಅವಕಾಶ ಎಂಬ ಉಮೇದಿನಲ್ಲಿ ಇಸ್ರೇಲ್ ಪ್ರತಿದಾಳಿ ಆರಂಭಿಸಿತು. ನಮ್ಮ ದೇಶದ ಹಲವಾರು ಸಾಮಾನ್ಯ ಜನರೂ ಪ್ಯಾಲೆಸ್ಟೀನಿಯನ್ನರು ಸರ್ವನಾಶವಾಗಲಿ ಎಂದು ಹಪಹಪಿಸಿದರು. ಮೊದಲೆಲ್ಲಾ ‘ಛೇ, ಅಯ್ಯೋ ಪಾಪ, ಮಕ್ಕಳುಮರಿ ಎಲ್ಲ ಸಾಯ್ತಾರಲ್ಲಾ’ ಅಂತ ಮರುಗುವುದನ್ನು ನೋಡಿದ್ದೆವು. ಆದರೆ ಈಗ ಕರುಣೆಯ ಪಸೆ ಆರಿಹೋಗತೊಡಗಿದೆ. ಬದಲಿಗೆ, ಯುದ್ಧೋನ್ಮಾದದ ಶೌರ್ಯ ವಿಪರೀತ ಅಡರಿಕೊಂಡಿದೆ. ಇದು ‘ಅನ್ಯ’ರ ಬಗೆಗೆ ಮಾತ್ರ ಇರುವುದಲ್ಲ. ‘ತಮ್ಮವರೇ’ ಆಗಿದ್ದು ತಮ್ಮ ಸಿದ್ಧಾಂತ ಒಪ್ಪದವರು ಸತ್ತರೆ ಪಟಾಕಿ ಹಚ್ಚುವವರ ಸಂತತಿಯೂ ಬೆಳೆಯುತ್ತಿದೆ. ಹೀಗಾದ ಮೇಲೆ ಶತ್ರುಗಳೂ ಹೆಚ್ಚುತ್ತಲೇ ಹೋಗಬೇಕಲ್ಲವೇ?

ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಸೈನ್ಯವನ್ನು ಹೊಂದಿರುವ ಇಸ್ರೇಲ್ ತನ್ನ ಯಶಸ್ಸಿನಿಂದ ಎಷ್ಟು ಕೊಬ್ಬಿದೆಯೆಂದರೆ, ತನ್ನ ಪ್ರಜೆಗಳಿಗೆ ಬೇಕಾದ ಎಲ್ಲ ಸುರಕ್ಷತೆಯನ್ನೂ ತಾನು ಮಾಡಿಕೊಟ್ಟಿದ್ದೇನೆ ಎಂದು ಭ್ರಮಿಸಿದೆ. ಪ್ರತಿ ಕಟ್ಟಡದಲ್ಲೂ ಭೇದಿಸಲಾಗದ ಬಂಕರ್‌ಗಳನ್ನು ನಿರ್ಮಿಸಿದೆ. ಅಪಾಯದ ಸೈರನ್ ಮೊಳಗಿದ ಕೂಡಲೇ ಜನ ಬಂಕರ್‌ಗಳ ಒಳಗೆ ಸುರಕ್ಷಿತವಾಗಿ ಇರಬಹುದು ಎನ್ನುತ್ತದೆ. ಆದರೆ ಇನ್ನೊಬ್ಬರ ನೆಲವನ್ನು ಆಕ್ರಮಿಸಿ ದುರಾಚಾರ ಮಾಡಿದ ಮೇಲೆ ಅಪಾಯದ ಸೈರನ್‍ ಅನ್ನು ನಿಲ್ಲಿಸಲು ಸಾಧ್ಯವೇ?

ಯಾರಿಗೇ ಆದರೂ ಬೇಕಿರುವುದು ಬಲಿಷ್ಠ ಬಂಕರ್ ಅಲ್ಲ, ಸುರಕ್ಷಿತ ಬಯಲು. ಪ್ರತಿ ಪ್ರಜೆಗೂ ಸುರಕ್ಷಿತ ಬಯಲನ್ನು ಒದಗಿಸುವ ದೇಶವೇ ಅತಿ ಬಲಿಷ್ಠ ದೇಶವಾ ಗಿರುತ್ತದೆ. ಈ ಚಿಂತನೆಯೇ ಭಾರತದ ಮೂಲ ಸತ್ವ. ಭಾರತದಲ್ಲಿ ಹುಟ್ಟಿದ ಬೌದ್ಧ, ಜೈನ, ಶರಣ, ದಾಸ, ಸೂಫಿಯಂತಹ ಹಲವು ಸಂತ ಪರಂಪರೆಗಳು ಬಯಲನ್ನೇ ಆಲಯವಾಗಿಸಿಕೊಂಡವು. ಆಲಯವು ಬೃಹತ್ ಆಗಿ ಬೆಳೆದಾಗ ಅದರೊಳಗನ್ನು ಬಯಲು ಮಾಡಿದವು. ಹಾಗೆ ನೋಡಹೋದರೆ, ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಬಯಲಿಗೆ ತರುವ ಅಹಿಂಸಾ ಪಥವನ್ನು ಪ್ರಯೋಗಿಸದೇ ಹೋಗಿದ್ದರೆ, ಅವರನ್ನು ಇವತ್ತು ಯಾರೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಲೇ ಇರಲಿಲ್ಲ.

ಶಸ್ತ್ರವೇ ಇಲ್ಲದೆ ಬಯಲಿಗೆ ಬಂದ ಬೃಹತ್ ಜನಸಮೂಹದಿಂದಲೇ ಭಾರತವು ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು. ಇದನ್ನೇ ನಾವೀಗ ಜಗತ್ತಿಗೆ ಹೇಳ ಹೊರಡಬೇಕಿದೆ. ಆ ಅರ್ಥದಲ್ಲಿ ನಾವು ವಿಶ್ವನಾಯಕ ರಾಗಬೇಕಿದೆ. ಆದರೆ ನಾವದನ್ನು ಮರೆತು ಹಿಂಸೆಯ ಪ್ರೇರೇಪಕರೂ ಹಿಂಬಾಲಕರೂ ಸಮರ್ಥಕರೂ ಆಗುವುದಾದರೆ, ನಮ್ಮ ಮನೆಮನೆಯ ಶಾಂತಿಯನ್ನು ನಾಶ ಮಾಡಿಕೊಳ್ಳುವುದರ ಜೊತೆಗೆ, ನಮಗಿರುವ ನೈತಿಕ ಶಕ್ತಿಯ ಮೂಲಕ ಜಗತ್ತು ನಮಗೆ ತಲೆಬಾಗುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವು ದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.ಹಿಂಸೆಗೆ ಮುಖವೇ ಇರುವುದಿಲ್ಲ. ಅದು ಚಕ್ರಾಕಾರದಲ್ಲಿ ಸುತ್ತುತ್ತಲೇ ಇರುತ್ತದೆ ವಿನಾ ಕೊನೆಯೆಂಬುದಿಲ್ಲ.

‘ಲಾರ್ಡ್ ಆಫ್ ವಾರ್’ ಸಿನಿಮಾದ ಯೂರಿಯನ್ನು ಅತ್ಯಂತ ಪ್ರಾಮಾಣಿಕನಾದ ಇಂಟರ್‌ಪೋಲ್ ಅಧಿಕಾರಿ ವಾಲೆಂಟೈನ್ ಕೊನೆಗೂ ಬಂಧಿಸುತ್ತಾನೆ. ಆಗ ಯೂರಿ ಹೇಳುತ್ತಾನೆ: ‘ಇನ್ನೆರಡೇ ನಿಮಿಷಗಳಲ್ಲಿ ನಿನ್ನ ಮೇಲಧಿಕಾರಿ ಬಂದು ನನ್ನನ್ನು ಬಿಡುಗಡೆಗೊಳಿಸು ತ್ತಾನೆ. ನಿನ್ನ ಪ್ರಕಾರ ನಾನು ವಿಲನ್ ಆಗಿರಬಹುದು. ಆದರೆ ಜಗತ್ತಿನ ಭಯಾನಕ ವ್ಯಕ್ತಿಗಳ ಜೊತೆಗೆ ನಾನು ವ್ಯವಹರಿಸುವುದರಿಂದ ಅಮೆರಿಕ ಸರ್ಕಾರಕ್ಕೆ ನಾನೇ ಬೇಕಿರುವುದು’ ಎನ್ನುತ್ತಾನೆ. ತಮಾಷೆಯೆಂದರೆ, ಅವನು ತನ್ನ ಬಿಡುಗಡೆಗಾಗಿ ಸೂಟ್‍ಕೇಸ್ ತುಂಬಾ ಹಣವನ್ನೂ ಪಡೆಯುತ್ತಾನೆ. ಆತ ಕೊನೆಯಲ್ಲಿ ಹೇಳುವ ಮಾತು ಹೀಗಿದೆ: ‘ಶಸ್ತ್ರಾಸ್ತ್ರ ಮಾರುವವನು ಮಾತ್ರ ಅಂತಿಮವಾಗಿ ಉಳಿಯುವುದು. ಇನ್ನುಳಿದವರೆಲ್ಲಾ ಪರಸ್ಪರ ಕಾದಾಡು ವುದರಲ್ಲಿ ಬ್ಯುಸಿಯಾಗಿರ್ತಾರೆ’ ಜಗದ ಕಿವಿ ಇನ್ನೂ ಪೂರ್ತಿ ಕಿವುಡಾಗಿಲ್ಲ ಎಂದು ಆಶಿಸಲೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT