ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ | ಚುನಾವಣೆ: ಪ್ರಭಾವಿಸುವ ಅಂಶಗಳೇನು?

ಬಡವರು, ಮಧ್ಯಮ ವರ್ಗದವರ ಒಳಅರಿವು ಚುನಾವಣಾ ಅಲೆಯ ದಿಕ್ಕನ್ನು ಬದಲಿಸಬಹುದು
Published 19 ಮಾರ್ಚ್ 2024, 23:38 IST
Last Updated 19 ಮಾರ್ಚ್ 2024, 23:38 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮತ ದಾರರು ಏಪ್ರಿಲ್‌ ಕೊನೆಯ ವಾರದಲ್ಲಿ ಹಾಗೂ ಮೇ ತಿಂಗಳ ಆರಂಭದಲ್ಲಿ, ಒಟ್ಟು ಎರಡು ಹಂತಗಳಲ್ಲಿ ಮತ ಚಲಾಯಿಸಲಿದ್ದಾರೆ. ಈಗ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಚುನಾವಣೆಯ ಕಣದಲ್ಲಿ ಯಾರು ಇರುತ್ತಾರೆ ಎಂಬುದು ಮುಂದಿನ ಕೆಲವು ದಿನಗಳಲ್ಲಿ ಸ್ಪಷ್ಟವಾಗುವ ನಿರೀಕ್ಷೆ ಇದೆ. ಎರಡೂ ಕಡೆಯವರು ತಮ್ಮ ತಾಕತ್ತಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಎರಡೂ ಕಡೆಯವರಿಗೆ ತಮ್ಮವೇ ಆದ ಸವಾಲುಗಳೂ ಇವೆ. ಅಭ್ಯರ್ಥಿಗಳ ಆಯ್ಕೆಯು ಸೂಚಿಸುತ್ತಿರುವುದು ಏನನ್ನು? ಅದು ಪಕ್ಷಗಳ ಒಗ್ಗಟ್ಟಿನ ಮೇಲೆ ಏನಾದರೂ ಪರಿಣಾಮ ಉಂಟುಮಾಡಿದೆಯೇ? ರಾಜ್ಯದಲ್ಲಿ ಕಾಣುತ್ತಿರುವ ಚುನಾವಣಾ ಅಲೆ ಹೇಗಿದೆ?

ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸುವ ಸಂದರ್ಭದಲ್ಲಿ ಬಿಜೆಪಿಯು ಹಲವು ಸಮಸ್ಯೆಗಳನ್ನು ಪರಿಹರಿಸುವ ಯತ್ನ ನಡೆಸಿತು. ಮೊದಲನೆಯದಾಗಿ, ಅದು ಹಲವು ಅವಧಿಗಳಿಗೆ ಆಯ್ಕೆಯಾಗಿದ್ದ ಕೆಲವು ಹಾಲಿ ಸಂಸದರಿಗೆ ವಿಶ್ರಾಂತಿ ನೀಡುವ ಮೂಲಕ, ಅವರಲ್ಲಿನ ‘ಆಯಾಸ’ದ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿತು. ಎರಡನೆಯದಾಗಿ, ಜಯದ ಸಾಧ್ಯತೆಯ ಬಗ್ಗೆ ತಳಮಟ್ಟದಲ್ಲಿ ಪರಿಶೀಲನೆ ನಡೆಸಿ ಕೆಲವು ಹಾಲಿ ಸಂಸದರನ್ನು ಕಣದಲ್ಲಿ ಉಳಿಸಿಕೊಂಡಿತು. ಕೊನೆಯ ದಾಗಿ, ಪಕ್ಷದ ಕೆಲವು ಹಿರಿಯರನ್ನು ಹಾಗೂ ಕೆಲವು ಹೊಸ ಮುಖಗಳನ್ನು ಕಣಕ್ಕೆ ಇಳಿಸಿತು. ಪಕ್ಷವು ಇದುವರೆಗೆ 20 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಈ ಪೈಕಿ ಒಂಬತ್ತು ಮಂದಿ ಹಾಲಿ ಸಂಸದರು ತಾವು 2019ರಲ್ಲಿ ಚುನಾವಣೆ ಎದುರಿಸಿದ್ದ ಕ್ಷೇತ್ರಗಳಿಂದಲೇ ಮತ್ತೆ ಕಣಕ್ಕೆ ಇಳಿಯಲಿದ್ದಾರೆ. ಒಬ್ಬ ಹಾಲಿ ಸಂಸದರನ್ನು ಬೇರೊಂದು ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಒಂಬತ್ತು ಕ್ಷೇತ್ರ ಗಳಲ್ಲಿ ಹಾಲಿ ಸಂಸದರಿಗೆ ಮತ್ತೆ ಸ್ಪರ್ಧೆಗೆ ಅವಕಾಶ ನೀಡದಿರಲು ಪಕ್ಷ ತೀರ್ಮಾನಿಸಿದೆ. ಈಗ ಕಾಂಗ್ರೆಸ್ಸಿನ ತೆಕ್ಕೆಯಲ್ಲಿರುವ ಒಂದು ಕ್ಷೇತ್ರದಲ್ಲಿ ಬಿಜೆಪಿಯು ಹೊಸ ಅಭ್ಯರ್ಥಿ ಯೊಬ್ಬರನ್ನು ಕಣಕ್ಕೆ ಇಳಿಸುತ್ತಿದೆ. ಹಾಲಿ ಸಂಸದರೂ ಕೇಂದ್ರ ಸಚಿವರೂ ಆಗಿರುವ ಮೂವರನ್ನು ಪಕ್ಷವು ಮತ್ತೆ ಕಣಕ್ಕಿಳಿಸಲು ನಿರ್ಧರಿಸಿದೆ.

ಬಿಜೆಪಿ ನಡೆಸಿರುವ ಬದಲಾವಣೆಯ ಯತ್ನದ ಪರಿಣಾಮಗಳು ಬಹಳ. ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿರುವ ಕನಿಷ್ಠ ಒಂಬತ್ತು ಕ್ಷೇತ್ರಗಳಲ್ಲಿ ಪಕ್ಷದೊಳಗಿಂದಲೇ ಆಕ್ಷೇಪಗಳು ಬಂದಿವೆ. ಕೆಲವೆಡೆ (ಮೈಸೂರು–ಕೊಡಗು, ಕೊಪ್ಪಳ) ಹಾಲಿ ಸಂಸದರು ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಇತರ ಕೆಲವೆಡೆ (ಹಾವೇರಿ, ಉಡುಪಿ–ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ ಮತ್ತು ಬೆಂಗಳೂರು ಉತ್ತರ) ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಪಕ್ಷಕ್ಕೆ ಹಾನಿ ಮಾಡಬಹುದು. ಒಂದು ಕಡೆ (ಶಿವಮೊಗ್ಗ) ಬಂಡಾಯ ಅಭ್ಯರ್ಥಿ ಕಣಕ್ಕಿಳಿಯಬಹುದು. ಇನ್ನು ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಬಾಕಿ ಇದೆ. ಈ ಪೈಕಿ ಮೂರು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಎರಡು ಕಡೆಗಳಲ್ಲಿ (ಮಂಡ್ಯ ಮತ್ತು ಕೋಲಾರ) ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದ ತೀವ್ರ ವಿರೋಧ ಇದೆ. ಈ ಎರಡು ಕಡೆ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ವಶದಲ್ಲಿ ಇರುವ ಒಂದು (ಬೆಂಗಳೂರು ಗ್ರಾಮಾಂತರ) ಕ್ಷೇತ್ರದಲ್ಲಿ ಬಿಜೆಪಿಯು ಖ್ಯಾತ ಹೃದ್ರೋಗ ತಜ್ಞರನ್ನು ಕಣಕ್ಕೆ ಇಳಿಸಿದೆ. ಇವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಅಳಿಯ ಕೂಡ ಹೌದು. ವಿರೋಧಿಗಳ ವಶದಲ್ಲಿ ಇರುವ ಕ್ಷೇತ್ರಗಳನ್ನು ಗಮನದಲ್ಲಿ ಇರಿಸಿಕೊಂಡು ತನ್ನ ಅಭ್ಯರ್ಥಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವುದು ಬಿಜೆ‍ಪಿಯ ಕಾರ್ಯತಂತ್ರ.

ಆದರೆ, ಹಲವು ಕ್ಷೇತ್ರಗಳಲ್ಲಿ ಕಂಡುಬಂದಿರುವ ಅಸಮಾಧಾನವು ಕೊನೆಗೆ ಶಮನಗೊಳ್ಳುತ್ತದೆ, ಪಕ್ಷದ ಪ್ರಚಾರವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸುತ್ತ ಕೇಂದ್ರೀಕೃತವಾಗುತ್ತದೆ ಎಂದು ಬಿಜೆಪಿ ಆಶಿಸುತ್ತಿದೆ. 

ದಕ್ಷಿಣದ ರಾಜ್ಯಗಳಲ್ಲಿ ಮೋದಿ ಅಲೆಯ ಪ್ರಭಾವವು ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಬಿಜೆಪಿಗೆ ಮತ ಚಲಾಯಿಸಿದ ಪ್ರತಿ 10 ಮಂದಿಯಲ್ಲಿ ಆರು ಮಂದಿ ಬಿಜೆಪಿಗೆ ಮತ ಚಲಾಯಿಸಿದ್ದಕ್ಕೆ ಕಾರಣ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿರುವುದು ಎಂಬುದನ್ನು 2014ರಲ್ಲಿ ನಡೆದ ಲೋಕನೀತಿ–ಸಿಎಸ್‌ಡಿಎಸ್ ಮತದಾನೋತ್ತರ ಸಮೀಕ್ಷೆಯು ಕಂಡುಕೊಂಡಿತ್ತು. ಇದೇ ಬಗೆಯ, ಆದರೆ ತುಸು ಕಡಿಮೆ ತೀವ್ರತೆಯ ಪರಿಸ್ಥಿತಿಯು 2019ರಲ್ಲಿಯೂ ಕಂಡುಬಂದಿತ್ತು. ರಾಜ್ಯದಲ್ಲಿ ಒಂದು ವರ್ಷದ ಹಿಂದೆ ಬಿಜೆಪಿ ಅಧಿಕಾರ ಕಳೆದುಕೊಂಡಿತು. ರಾ‌ಜ್ಯದಲ್ಲಿನ ಬಿಜೆಪಿ ಆಡಳಿತದ ನಕಾರಾತ್ಮಕ ಪರಿಣಾಮ ಗಳನ್ನು ಮೋದಿ ಅಲೆಯು ಶಮನಗೊಳಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇರಬಹುದು.

ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷವು ತನ್ನದೇ ಆದ ಸವಾಲುಗಳೊಂದಿಗೆ ಗುದ್ದಾಟ ನಡೆಸುತ್ತಿದೆ. ಪಕ್ಷವು ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಯಾರೊಬ್ಬರೂ ಇಲ್ಲ. ರಾಜ್ಯ ಸರ್ಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವವರು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಾಗಲು ಹಿಂದೇಟು ಹಾಕುತ್ತಿದ್ದಾರೆ. ಪಕ್ಷವು ಕರ್ನಾಟಕ ದಲ್ಲಿ ಹೊಂದಿರುವ ಒಬ್ಬ ಸಂಸದರನ್ನು ಮತ್ತೆ ಕಣಕ್ಕೆ ಇಳಿಸಲಿದೆ. ಇತರ ಕ್ಷೇತ್ರಗಳಲ್ಲಿ ಪಕ್ಷವು 2019ರ ಲೋಕಸಭಾ ಚುನಾವಣೆಯಲ್ಲಿ ಸೋತವರನ್ನು ಕಣಕ್ಕೆ ಇಳಿಸಿದೆ ಹಾಗೂ ಕೆಲವೆಡೆ ಹೊಸ ಮುಖಗಳನ್ನು ಅಭ್ಯರ್ಥಿ ಗಳನ್ನಾಗಿ ಘೋಷಿಸಿದೆ. ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಹಲವರಿದ್ದಾರೆ ಎಂದು ಪಕ್ಷವು ಹೇಳಿಕೊಳ್ಳು ತ್ತಿದೆಯಾದರೂ, ಅಭ್ಯರ್ಥಿಗಳಾಗಲು ಹಿಂಜರಿಕೆ ಇರುವುದು ಗೋಚರಿಸುತ್ತಿದೆ. ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವರು ಹಾಗೂ ಹಿರಿಯ ಶಾಸಕರು ತಮ್ಮ ಸಂಬಂಧಿಕರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದ ಐದು ಗ್ಯಾರಂಟಿಗಳನ್ನು ನೆಚ್ಚಿಕೊಂಡಿರುವುದು ಸ್ಪಷ್ಟ. ಈ ಗ್ಯಾರಂಟಿಗಳ ಅನುಷ್ಠಾನದ ವಿಚಾರವಾಗಿ ಬಹುಜನರಲ್ಲಿ ಇರುವ ಅಭಿಪ್ರಾಯ ಹಾಗೂ ಗ್ಯಾರಂಟಿಗಳು ರಾಷ್ಟ್ರೀಯ ಚುನಾವಣೆಯಲ್ಲಿ ಪರಿಣಾಮ ಬೀರುತ್ತವೆ ಎಂದು ಜನ ಭಾವಿಸುವರೇ ಎಂಬುದು ಇಲ್ಲಿ ಪ್ರಮುಖ ಸಂಗತಿ.

ಇಲ್ಲಿ ಇನ್ನೂ ಎರಡು ಸಂಗತಿಗಳು ಪ್ರಮುಖವಾಗುತ್ತವೆ. ಮೊದಲನೆಯದು, ಬಿಜೆಪಿ ಹಾಗೂ ಕಾಂಗ್ರೆಸ್ಸಿನ ರಾಜ್ಯ ಘಟಕಗಳಲ್ಲಿ ಗಂಭೀರ ಸ್ವರೂಪದ ಆಂತರಿಕ ಭಿನ್ನಾಭಿಪ್ರಾಯ ಇದೆ. ಇದು ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಗಳನ್ನು ಘೋಷಿಸಿದ ನಂತರದಲ್ಲಿ ಪ್ರಕಟವಾಗುತ್ತದೆಯೇ? ಇದು ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಉಂಟುಮಾಡುತ್ತದೆಯೇ? ರಾಜ್ಯ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದ ಒಗ್ಗಟ್ಟನ್ನು ಪ್ರದರ್ಶಿಸುವ ಪಕ್ಷವು ನಿರ್ಣಾಯಕ ಮುನ್ನಡೆ ಸಾಧಿಸಬಲ್ಲದು ಎಂಬುದು ಸ್ಪಷ್ಟ. 

ಎರಡನೆಯದಾಗಿ, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹೊಂದಾಣಿಕೆಯು ತಳಮಟ್ಟದಲ್ಲಿ ಎಷ್ಟು ಸುಗಮವಾಗಿ ಇರಲಿದೆ ಎಂಬುದು ಮುಖ್ಯವಾಗುತ್ತದೆ. ಮೈತ್ರಿಯ ವಿಚಾರವಾಗಿ, ಕ್ಷೇತ್ರ ಬಿಟ್ಟುಕೊಡುವ ವಿಚಾರದಲ್ಲಿ ಹಾಗೂ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಈಗಾಗಲೇ ಗೊಣಗಾಟ ಶುರುವಾಗಿದೆ. ಇದು ತಳಮಟ್ಟದಲ್ಲಿ ಮತಗಳ ವರ್ಗಾವಣೆಯ ಮೇಲೆ ಪರಿಣಾಮ ಉಂಟುಮಾಡಲಿದೆಯೇ? ಇವೆಲ್ಲಕ್ಕಿಂತ ಹೆಚ್ಚಾಗಿ, ಮೈತ್ರಿಯು ರಾಜ್ಯದ ಜಾತಿ ಸಮೀಕರಣದ ಮೇಲೆ ಪರಿಣಾಮ ಬೀರಲಿದೆಯೇ? ಬಡವರು ಹಾಗೂ ಮಧ್ಯಮ ವರ್ಗದವರ ಒಳಅರಿವು ಚುನಾವಣಾ ಅಲೆಯ ದಿಕ್ಕನ್ನು ಬದಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT