ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ‘ನಿರ್ಭಯಾ’ ತರಲಿಲ್ಲವೇಕೆ ಅಭಯ?

ಅನುಭವಗಳಿಂದ ನಮ್ಮ ಸಮಾಜ ಪಾಠ ಕಲಿಯದು ಎಂಬ ಸತ್ಯವನ್ನು ಅತ್ಯಾಚಾರ ಪ್ರಕರಣಗಳು ಸಾಬೀತುಪಡಿಸುತ್ತಿವೆ..
Published : 1 ಸೆಪ್ಟೆಂಬರ್ 2024, 20:28 IST
Last Updated : 1 ಸೆಪ್ಟೆಂಬರ್ 2024, 20:28 IST
ಫಾಲೋ ಮಾಡಿ
Comments

2012ರ ಡಿಸೆಂಬರ್ 16ರಂದು ಯಾವ ಹೃದಯವಿದ್ರಾವಕ ಪ್ರಕರಣ ನಡೆಯಿತು? ನಮಗೆ ಥಟ್ಟೆಂದು ಉತ್ತರ ಹೊಳೆಯುವುದು ಕಷ್ಟ. ಅಂದು ರಾತ್ರಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ- ಕೊಲೆ ಅದೆಷ್ಟು ಭೀಕರವಾಗಿತ್ತೆಂದರೆ ದೇಶದ ಅಸಂಖ್ಯಾತ ಮಹಿಳೆಯರನ್ನು, ಹೆಣ್ಣುಮಕ್ಕಳ ತಂದೆ-ತಾಯಂದಿರನ್ನು ಬೆಚ್ಚಿ ಬೀಳಿಸಿತು. ಧೈರ್ಯವಾಗಿ ಹೊರಗೆ ಹೋಗಿ ಎಲ್ಲವನ್ನೂ ಸಾಧಿಸಬೇಕಾಗಿದ್ದ ಹೆಣ್ಣುಮಕ್ಕಳನ್ನು ‘ಎಚ್ಚರದಿಂದಿರು, ಬೇರೆ ಎಲ್ಲಕ್ಕಿಂತ ಸುರಕ್ಷತೆಯೇ ಆದ್ಯತೆ’ ಎಂದು ತಡೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಅಂತಹ ಪರಿಸ್ಥಿತಿ ಈಗಲೂ ಮರುಕಳಿಸುತ್ತಲೇ ಇದೆ!

ಹಿಂದಿನ ಅನುಭವಗಳಿಂದ ಒಂದು ಸಮಾಜವಾಗಿ ಯಾವ ಪಾಠವನ್ನೂ ಕಲಿತಿಲ್ಲ ಎಂಬ ಸತ್ಯವನ್ನು ಈ ಹನ್ನೆರಡು ವರ್ಷಗಳಲ್ಲಿ ನಡೆದಿರುವ ಬಹುಸಂಖ್ಯೆಯ ಅತ್ಯಾಚಾರಗಳು, ಅವೆಲ್ಲವನ್ನೂ ಮೀರಿಸುವ ಕ್ರೌರ್ಯದಿಂದ ಕೂಡಿದ ಕೋಲ್ಕತ್ತದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ– ಕೊಲೆಯ ಪ್ರಕರಣ ನಮಗೆ ತೋರಿಸಿವೆ.

ನಿರ್ಭಯಾ ಪ್ರಕರಣದ ಯುವತಿಯು ಅರೆವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿನಿಯಾಗಿದ್ದರೆ, ಕೋಲ್ಕತ್ತ ಪ್ರಕರಣದಲ್ಲಿ ಬಲಿಯಾದದ್ದು ವೈದ್ಯಕೀಯ ವಿದ್ಯಾರ್ಥಿನಿ. ಮಹಿಳೆಗೆ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ನೀಡುವ ಉದ್ಯೋಗವನ್ನು ನೀಡಿದರೆ ಆಕೆಯ ಸುರಕ್ಷತೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸಿದಂತೆ ಎಂಬ ನಮ್ಮ ನಂಬಿಕೆಯ ಬುಡವನ್ನೇ ಅಲುಗಾಡಿಸುವಂತೆ ಈ ಪ್ರಕರಣಗಳು ನಿಲ್ಲುತ್ತವೆ. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ಆಶಯ ನಮಗಿರುವುದು ಸಹಜವಾದ್ದರಿಂದ, ಅವು ನಡೆದ ಕೆಲ ದಿನಗಳು ಮಾತ್ರ ಗದ್ದಲ, ಚಳವಳಿ, ಮಾಧ್ಯಮಗಳಲ್ಲಿ ಭರಪೂರ ಗಲಾಟೆ ಎಬ್ಬಿಸುವ ತತ್‍ಕ್ಷಣದ ಪ್ರತಿಕ್ರಿಯೆಗಳನ್ನು ಪಕ್ಕಕ್ಕಿರಿಸಿ, ದೀರ್ಘಕಾಲಿಕವಾಗಿ ಉಪಯುಕ್ತವಾಗಬಲ್ಲ ವಿಶ್ಲೇಷಣೆ, ಸುಧಾರಣೆಯನ್ನು ಸಾಧ್ಯವಾಗಿಸುವ ಪರಿವರ್ತನೆಯತ್ತ ನಾವು ಸಾಗಬೇಕಿದೆ.

ಕೋಲ್ಕತ್ತದ ಪ್ರಕರಣ ಕೆಲವು ಮುಖ್ಯ ಪ್ರಶ್ನೆಗಳನ್ನು ನಮ್ಮೆದುರು ತರುತ್ತದೆ. ಅವುಗಳಲ್ಲಿ ಒಂದು, ಮಹಿಳೆಯ ಸುರಕ್ಷತೆ. ಮತ್ತೊಂದು, ವೈದ್ಯಕೀಯದಂತಹ ಕ್ಷೇತ್ರಗಳಲ್ಲಿ ಹಗಲು-ರಾತ್ರಿ ಎನ್ನದೆ ಡಾಕ್ಟರ್, ನರ್ಸ್ ಹೀಗೆ ಲಿಂಗಭೇದವಿಲ್ಲದೆ ದುಡಿಯಬೇಕಾದ ಅವಶ್ಯಕತೆ. ಇವುಗಳ ಜೊತೆಗಿರುವ ಮತ್ತೊಂದು ಚರ್ಚಾರ್ಹ ಅಂಶವೆಂದರೆ, ಇಡೀ ಸಮಾಜದಲ್ಲಿ ಇಂದಿನ ದಿನಗಳಲ್ಲಿ ನೈತಿಕತೆಯ ಮಟ್ಟ ಎಷ್ಟು ಕೆಳಗಿಳಿದಿದೆ ಎಂಬುದು.

2012ರ ಸಂದರ್ಭದಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದಲ್ಲಿ ವಾರ್ಷಿಕವಾಗಿ 25 ಸಾವಿರ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದವು. ಅಲ್ಲಿಂದ 2020ರ ಕೋವಿಡ್ ಸಮಯದವರೆಗೆ ಈ ಸಂಖ್ಯೆ  30,000ಕ್ಕೆ ಏರಿತು. ಕೋವಿಡ್ ಉಲ್ಬಣಿಸಿದ ಸಂದರ್ಭದಲ್ಲಿ ಅದು ಹಠಾತ್ತನೆ ಕೆಳಗಿಳಿಯಿತು. ಅದಾದ ಮೇಲೆ ಸತತವಾಗಿ ಅದು 30,000ದ ಆಸುಪಾಸಿನಲ್ಲೇ ಉಳಿದಿದೆ. 2018- 22ರವರೆಗಿನ ದಾಖಲೆಗಳಂತೆ, ಅತ್ಯಾಚಾರ ಅಪರಾಧದ ತೀರ್ಪು-ಶಿಕ್ಷೆ-ನ್ಯಾಯ ನಿರ್ಣಯದ ಪ್ರಮಾಣ ಶೇಕಡ 27-28ರಷ್ಟು ಮಾತ್ರ! 2012ರ ಪ್ರಕರಣದ ನಂತರ ಶಿಕ್ಷೆಯನ್ನು ಕಠಿಣವಾಗಿಸಲಾಯಿತು. ಆದರೆ, ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಹೆಚ್ಚಾಗಿಲ್ಲ. 

ಪ್ರಸ್ತುತ ಅಂಕಿ ಅಂಶಗಳು ಏನನ್ನು ಹೇಳುತ್ತವೆ? ಕಾನೂನು ಕಠಿಣವಾದರಷ್ಟೇ ಸಾಲದು, ನ್ಯಾಯಾಂಗವನ್ನು ಮುನ್ನಡೆಸುವ ಮಂದಿಯನ್ನೂ ಒಳಗೊಂಡಂತೆ ನಮ್ಮೆಲ್ಲರಲ್ಲಿ ಇರುವ ರೂಢಿಗತ ಧೋರಣೆಗಳು ಬದಲಾಗದೆ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗದು ಎನ್ನುವ ಸತ್ಯವನ್ನಲ್ಲವೇ? ಶಿಕ್ಷೆಯನ್ನು ಕಠಿಣವಾಗಿಸಿರುವುದರ ಬಗೆಗಿನ ಮಾಹಿತಿಯು ಜನರನ್ನು ವ್ಯಾಪಕವಾಗಿ ತಲುಪಿದ್ದರೆ, ಜನ ಈ ರೀತಿ ವರ್ತಿಸದಂತೆ ಅದು ಮಾಡಬೇಕಲ್ಲವೇ? ಹೆಣ್ಣುಮಕ್ಕಳನ್ನು ಹೊರಗೆ ಕಳಿಸಿದರೆ ಅವರಿಗೆ ಅಪಾಯ ಒದಗಬಹುದೆಂದು ನಾವು ಯೋಚಿಸುತ್ತೇವೆ. ಆದರೆ ನಮ್ಮ ಗಂಡುಮಕ್ಕಳು ಇತರರಿಗೆ ಅಪಾಯ ಉಂಟುಮಾಡುವುದನ್ನು ತಡೆಯಲು, ಆತ್ಮಸಾಕ್ಷಿ ಬಿಡಿ, ಕನಿಷ್ಠಪಕ್ಷ ಕಠಿಣ ಶಿಕ್ಷೆಯ ಬಗ್ಗೆ ಹೆದರುವುದನ್ನಾದರೂ ಅವರಿಗೆ ಕಲಿಸಲೇಬೇಕಲ್ಲವೇ?

ಈಗ ವೈದ್ಯಕೀಯ ಕ್ಷೇತ್ರಕ್ಕೆ ಬರೋಣ. ಆಸ್ಪತ್ರೆಗಳು ಸದಾ ಚಟುವಟಿಕೆಯ ತಾಣಗಳು. ‘ಡಾಕ್ಟರ್’ ಎಂಬ ಇಂಗ್ಲಿಷ್‌ ಪದ ಲಿಂಗನಿರಪೇಕ್ಷವಾಗಿದ್ದರೂ, ವೈದ್ಯಕೀಯ ಕ್ಷೇತ್ರದ ಎಲ್ಲೆಲ್ಲೂ ಲಿಂಗಸಮಾನತೆ ಬಂದಿದೆ ಎಂದು ಹೇಳುವಂತಿಲ್ಲ. ವೈದ್ಯೆಯರಿಗೆ ಸಾಮಾನ್ಯವಾಗಿ ‘ಪ್ರತ್ಯೇಕ ಕಾರ್ಯನಿರತ ವಿಶ್ರಾಂತಿಯ ಕೊಠಡಿ’ ಎನ್ನುವುದು ಕಷ್ಟಪಟ್ಟು, ಬೇಡಿಕೆಯಿತ್ತು ಪಡೆಯಬೇಕಾದಂತಹ ‘ಲಕ್ಸುರಿ’! ಇಲ್ಲಿ, ಸೌಲಭ್ಯಗಳಿಗಾಗಿ ಹೋರಾಡುವವರ ಸಂಖ್ಯೆ ಕಡಿಮೆ. ಈ ಕಾರಣದಿಂದಾಗಿಯೇ, ಒಂದೊಮ್ಮೆ ಆಸ್ಪತ್ರೆಗಳ ಆಡಳಿತ ವ್ಯವಸ್ಥೆ ಸೌಲಭ್ಯ ನೀಡಿದರೂ ಅವುಗಳ ಬಳಕೆಯ ಅವಕಾಶವನ್ನು ಇತರ ಸಿಬ್ಬಂದಿಗೂ ಬಿಟ್ಟುಕೊಡಬೇಕಾದ ಸಾಧ್ಯತೆಯೇ ಹೆಚ್ಚು. ಇಂತಹ ಸಮಸ್ಯೆಗಳ ಕಾರಣದಿಂದ, ಹೆಸರು ಮಾಡಿರುವ ಕೆಲವು ವೈದ್ಯಕೀಯ ಕಾಲೇಜು- ಆಸ್ಪತ್ರೆಗಳನ್ನು ಸಹ ತಮ್ಮ ಮಕ್ಕಳಿಗೆ ಆಯ್ದುಕೊಳ್ಳಲು ಎಷ್ಟೋ ಬಾರಿ ಅಪ್ಪ– ಅಮ್ಮ ಹಿಂದೆಮುಂದೆ ನೋಡುತ್ತಾರೆ. ಮತ್ತೆ ಕೆಲವೊಮ್ಮೆ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ದುಡಿಯುವ ಕೆಲಸವಾದರೆ ಸಾಕು, ರಾತ್ರಿ ಪಾಳಿ ಮಾಡುವ ಕೆಲಸ ಬೇಡ ಎಂದು ಭಾವಿಸಿ ವೈದ್ಯಕೀಯ ವೃತ್ತಿಯನ್ನೇ ಹೆಣ್ಣುಮಕ್ಕಳು ಆರಿಸಿಕೊಳ್ಳುವುದು ಬೇಡ ಎನ್ನುತ್ತಾರೆ. ಇವೆಲ್ಲವೂ ಹೆಣ್ಣುಮಕ್ಕಳ ಅರ್ಹತೆ, ಸಾಮರ್ಥ್ಯ, ಗಳಿಸಿದ ಅಂಕ, ಯಾವುದೇ ಕೆಲಸವನ್ನು ಮಾಡುವ ಧೈರ್ಯ ಇವ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ, ಬರೀ ಅವರ ಸುರಕ್ಷತೆಯನ್ನು ಕೇಂದ್ರವಾಗಿಟ್ಟು ಅಪ್ಪ-ಅಮ್ಮ ತೆಗೆದುಕೊಳ್ಳುವ ನಿರ್ಧಾರಗಳು ಎನ್ನುವುದು ಗಮನಾರ್ಹ.

2019ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಜಾಗತಿಕ ಆರೋಗ್ಯದಲ್ಲಿ ಮಹಿಳೆ ಎಂಬ ಸಂಘಟನೆಯು ‘ಸೇವೆ ನೀಡುವವರು ಮಹಿಳೆಯರು; ಮುಂದಾಳತ್ವ ಮಾತ್ರ ಪುರುಷರದು; ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಲಿಂಗ ಸಮಾನತೆಯ ವಿಶ್ಲೇಷಣೆ’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅದು ಹಲವು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದೆ. ಮುಂದಾಳತ್ವದಲ್ಲಿ, ಪ್ರಬಲ ಸ್ಥಾನಗಳಲ್ಲಿ ಮಹಿಳೆಯರ ಕೊರತೆಯನ್ನು ಸ್ಪಷ್ಟವಾಗಿ ಎತ್ತಿ ಹಿಡಿದಿದೆ. ಉದ್ಯೋಗ ಸ್ಥಳದಲ್ಲಿ ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ಎದುರಾಗುವ ಲೈಂಗಿಕ ಕಿರುಕುಳವನ್ನು ಪ್ರಮುಖವಾಗಿ ಗುರುತಿಸಿದೆ. ಪುರುಷ ಸಹೋದ್ಯೋಗಿಗಳು, ಪುರುಷ ರೋಗಿಗಳು ಮತ್ತು ಸಮಾಜದ ಇತರರು ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ನೀಡುವ ಹಿಂಸೆ, ಲೈಂಗಿಕ ಕಿರುಕುಳ ಪ್ರಮಾಣ ಕಡಿಮೆಯೇನೂ ಅಲ್ಲವಾದರೂ ತಮ್ಮ ಹೆಸರಿಗೆ ಕಳಂಕ ಅಂಟುತ್ತದೆ, ಹಿಂಸೆ ಮತ್ತಷ್ಟು ಹೆಚ್ಚಬಹುದು ಎಂಬ ಕಾರಣಗಳಿಂದ ಇವು ಹೊರಬರುವ ಸಾಧ್ಯತೆ ಕಡಿಮೆ ಎಂಬುದನ್ನೂ ಈ ವರದಿ ಗುರುತಿಸಿದೆ. ಹೆಚ್ಚಿನ ವೈದ್ಯಕೀಯ ಆಡಳಿತ ವ್ಯವಸ್ಥೆಗಳು ‘ಪುರುಷರಿಗಾಗಿ- ಪುರುಷರಿಂದ ಇರುವ ವ್ಯವಸ್ಥೆಗಳಲ್ಲಿ ಮಹಿಳೆಯರು ಹೇಗೋ ಹೊಂದಿಕೊಳ್ಳಬೇಕು’ ಎಂದೇ ನಿರೀಕ್ಷಿಸುತ್ತವೆ ಎಂಬುದನ್ನು ಇಲ್ಲಿ ಗಮನಿಸಲಾಗಿದೆ.

ಮತ್ತೊಂದು ಚರ್ಚಾರ್ಹ ಅಂಶವೆಂದರೆ, ಇಂದಿನ ಸಂದರ್ಭದಲ್ಲಿ ನಿರಂತರವಾಗಿ ಕುಸಿಯುತ್ತಿರುವಂತೆ ಭಾಸವಾಗುತ್ತಿರುವ ಸಮಾಜದ ನೈತಿಕತೆಯ ಮಟ್ಟ. ಕೋಲ್ಕತ್ತದ ಪ್ರಕರಣದಲ್ಲಿ ಹೊರಬರುತ್ತಿರುವ ಕೊಳೆಯನ್ನು ಗಮನಿಸುತ್ತಾ ಸಾಗಿದಂತೆ, ಆತ್ಮಸಾಕ್ಷಿಯನ್ನು ಪೂರ್ತಿಯಾಗಿ ಇಲ್ಲವಾಗಿಸಿಕೊಂಡ ನೈತಿಕ ಅಧಃಪತನ ಢಾಳಾಗಿ ಗೋಚರಿಸುತ್ತದೆ. ಇಂತಹ ಪರಿಸ್ಥಿತಿಯ ಚಿಕಿತ್ಸೆಗಾಗಿ ನಾವು ಒಂದು ಸಮುದಾಯವಾಗಿ ತುರ್ತು ಕ್ರಮಗಳನ್ನು ಮತ್ತು ದೀರ್ಘಾವಧಿಯಲ್ಲೂ ದುರ್ಬಲಗೊಳ್ಳದ, ನಿಷ್ಕ್ರಿಯಗೊಳ್ಳದ, ಆಗಾಗ ಮೌಲ್ಯಮಾಪನಕ್ಕೆ ಒಳಗಾಗುವಂತಹ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಬೇಕಾಗಿದೆ.

ಉನ್ನತ ಅಧಿಕಾರ ಸ್ಥಾನಗಳಲ್ಲಿರುವ ಮೂವರು ಮಹಿಳೆಯರನ್ನು ಒಳಗೊಂಡ ಕಾರ್ಯಪಡೆಯನ್ನೇನೋ ಸರ್ಕಾರ ರಚಿಸಿದೆ. ಕಾರ್ಯಪಡೆಯ ಪ್ರತಿ ಸದಸ್ಯರಿಗೂ 300- 400 ಸಲಹೆಗಳು ಸಮಾಜದ ವಿವಿಧ ವರ್ಗಗಳಿಂದ ಬಂದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂಥ ಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿ, ಮಹಿಳಾ ಸುರಕ್ಷತೆ ಎಂಬುದು ಕ್ರಿಯಾಶೀಲವಾಗಿ ರೂಪುಗೊಂಡು, ಭಯಮುಕ್ತವಾದ, ಹೆಣ್ಣುಮಕ್ಕಳು ಪ್ರಗತಿಯೆಡೆಗೆ ಸಾಗುವಂತಹ ದಾರಿ ನಿರ್ಮಾಣವಾಗಲಿ ಎಂದು ಈ ಹೊತ್ತು ಆಶಿಸೋಣ.

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT