ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಶಿಕ್ಷಣ ಮತ್ತು ಗುಣಾತ್ಮಕ ಪರಿಸರ

ಗುಣಮಟ್ಟದ ಕಲಿಕೆಗೆ ಅವಕಾಶ ಇಲ್ಲದಿರುವುದು, ಶಿಕ್ಷಣದಿಂದ ಹೊರಗುಳಿಸುವಷ್ಟೇ ದ್ರೋಹದ ಕೆಲಸ
Last Updated 28 ಜೂನ್ 2019, 20:00 IST
ಅಕ್ಷರ ಗಾತ್ರ

ಪದವಿ ಶಿಕ್ಷಣಕ್ಕಾಗಿ ಸರ್ಕಾರಿ ಕಾಲೇಜೊಂದಕ್ಕೆ ಸೇರಿದ್ದ ಓರ್ವ ಹುಡುಗಿ, ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ತೊರೆಯುವುದಾಗಿ ಒಂದು ದಿನ ಹೇಳಿದಳು.ಗ್ರಾಮೀಣ ಪ್ರದೇಶದಿಂದ ಬಂದ ಆಕೆ ಪ್ರತಿಭಾವಂತೆ, ಸೂಕ್ಷ್ಮಗ್ರಾಹಿ, ಕಲಿಯುವ ಶ್ರದ್ಧೆ ಇದ್ದವಳು. ಶಿಕ್ಷಣ ಮುಂದುವರಿಸುವಂತೆ ಸಲಹೆ ನೀಡಲು ಆಕೆಯನ್ನು ಕರೆದು ಮಾತನಾಡಿಸಿದೆ. ‘ಬರೀ ಪರೀಕ್ಷೆ ಬರೆಯೋಕೆ ನಾನೇಕೆ ಓದಬೇಕು? ಸಮಯ ಪೋಲು! ಕಾಲೇಜಿನಲ್ಲಿ ಸಿಗುತ್ತಿರುವ ಕಲಿಕೆಯ ಸವಲತ್ತುಗಳನ್ನು ನೋಡಿದರೆ ದೂರಶಿಕ್ಷಣವೇ ಉತ್ತಮ. ಮನೆಗೆ ಹಿಂದಿರುಗಿದರೆ ಕುಟುಂಬಕ್ಕೆ ನೆರವಾದರೂ ಆಗುತ್ತೆ’ ಎಂದು ನಿರಾಶೆಯಿಂದ ಹೇಳಿದಳು. ಈ ಅಭಿಪ್ರಾಯದ ಹಿಂದೆ, ಸ್ತ್ರೀ ಶಿಕ್ಷಣ ವ್ಯವಸ್ಥೆಯನ್ನು ಕಡೆಗಣಿಸಿದ್ದರ ಸುದೀರ್ಘ ಚರಿತ್ರೆಯೇ ಇದೆ.

1950ರಲ್ಲಿ ಸಂವಿಧಾನ ಜಾರಿಗೆ ಬಂದು, ಹದಿನಾಲ್ಕು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆಯ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿರಲಿಲ್ಲ. ಆರಂಭದ ದಶಕಗಳಲ್ಲಿ ಶಿಕ್ಷಣ ಪಡೆದ ದಲಿತ ಮಕ್ಕಳ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿತ್ತು. ಆ ದಿನಗಳಲ್ಲಿ, ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ಬಹುಪಾಲು ಹೆಣ್ಣುಮಕ್ಕಳು ಅಕ್ಷರದ ಮುಖವನ್ನೇ ಕಂಡಿರಲಿಲ್ಲ. ಆದರೆ ಸ್ವಾತಂತ್ರ್ಯೋತ್ತರ ಕರ್ನಾಟಕದ ಚರಿತ್ರೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಎರಡು ಮಹತ್ವದ ವಿದ್ಯಮಾನಗಳು ಶೈಕ್ಷಣಿಕ ಕ್ರಾಂತಿಗೆ ಕಾರಣವಾದವು. ಆದರೆ, ಈ ವಿದ್ಯಮಾನಗಳನ್ನು ಕರ್ನಾಟಕದ ಅಭಿವೃದ್ಧಿ ನಿರೂಪಕರು ಮುಖ್ಯ ಎಂದು ಪರಿಗಣಿಸದೇ ಇರುವುದು ಅಚ್ಚರಿಯ ಸಂಗತಿಯಾಗಿದೆ.

ಮೊದಲನೆಯದು ಸಂಭವಿಸಿದ್ದು ಎಪ್ಪತ್ತರ ದಶಕದಲ್ಲಿ. ಪ್ರಜಾಪ್ರಾತಿನಿಧ್ಯ ವ್ಯವಸ್ಥೆಯಡಿ ಹಾಗೂ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದ ಕಾಲಘಟ್ಟದಲ್ಲಿಯೂ ಪಾರಂಪರಿಕವಾದ ಜಾತಿಗಳ ಯಾಜಮಾನ್ಯವೇ ವಿಜೃಂಭಿಸುತ್ತಿದ್ದ ಕಾಲವದು. ಆಗ ಕರ್ನಾಟಕದಲ್ಲಿ ರಾಜಕೀಯ ಪಂಡಿತರ ಭವಿಷ್ಯವಾಣಿಯನ್ನು ಸುಳ್ಳಾಗಿಸಿ, ಪವಾಡ ಎಂಬಂತೆ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾದರು. ಪ್ರಬಲ ಸಮುದಾಯಗಳಂತೆಯೇ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳೂ ಘನತೆಯಿಂದ ಬದುಕಬೇಕು ಎಂಬ ಕಾಳಜಿಯಿಂದ ‘ಉಳುವವನಿಗೆ ಭೂಮಿ’, ‘ಋಣಮುಕ್ತಿ’ ಮುಂತಾದ ಹಲವು ಲೋಕೋದ್ಧಾರದ ಕಾರ್ಯಕ್ರಮ ಗಳನ್ನು ಅರಸು ಜಾರಿಗೆ ತಂದರು. ಶಿಕ್ಷಣದಿಂದ ವ್ಯಕ್ತಿಯು ಪಡೆಯುವ ಅವಕಾಶಗಳಿಗೆ ಬೇರಾವುದೂ ಸಮವಲ್ಲ ಎಂಬ ಸತ್ಯವನ್ನು ಮನಗಂಡಿದ್ದರು. ತುಳಿತಕ್ಕೆ ಒಳಗಾದ ಸಮುದಾಯಗಳ ಮಕ್ಕಳು ಕಲಿತು ವಿದ್ಯಾವಂತರಾಗಬೇಕು. ಆ ಮೂಲಕ ಅವರ ಪೋಷಕರೂ ಬಡತನ- ಅಪಮಾನಗಳ ವಿಷಚಕ್ರದಿಂದ ಬಿಡುಗಡೆ ಪಡೆಯಬೇಕು ಎಂದು ಕನಸು ಕಂಡರು. ಅದರ ಫಲವೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಪನೆ ಮತ್ತು ಸ್ಥಾಪನೆ.

ಸಮುದಾಯಗಳ ಹಿಂದುಳಿದಿರುವಿಕೆಗೆ ಅನಕ್ಷರತೆ ಬಹುಮುಖ್ಯ ಕಾರಣ ಎನ್ನುವುದನ್ನು ಅಭಿವೃದ್ಧಿ ಅಧ್ಯಯನ ನಿರೂಪಣೆಗಳು ಮತ್ತೆ ಮತ್ತೆ ಸಾರಿವೆ. ಅರಸು ಅವರ ಶೈಕ್ಷಣಿಕ ಕಾಳಜಿಯಿಂದ ರಾಜ್ಯದ ಎಲ್ಲೆಡೆ ಉಚಿತ ಬಿಸಿಎಂ ಹಾಸ್ಟೆಲ್‍ಗಳು ಪ್ರಾರಂಭವಾದವು. ಇದರ ಪರಿಣಾಮವಾಗಿ, ಎರಡು ಹೊತ್ತಿನ ಊಟದ ಕಾರಣಕ್ಕಾಗಿಯೇ ಮಕ್ಕಳನ್ನು ಉಳ್ಳವರ ಮನೆಗಳಲ್ಲಿ ಜೀತಕ್ಕಿಡುವ ಅಸಹಾಯಕತೆ ಇದ್ದ ದಲಿತ ಹಾಗೂ ಹಿಂದುಳಿದ ವರ್ಗಗಳ ಲಕ್ಷಾಂತರ ಮಕ್ಕಳು ಶಾಲಾ– ಕಾಲೇಜುಗಳಿಗೆ ಬಂದರು. ಜ್ಞಾನದ ಜತೆಗೆ ಅನ್ನವೂ ಸಿಕ್ಕಿದ್ದರಿಂದ ವಿದ್ಯಾಭ್ಯಾಸದ ದಾಖಲಾತಿ ಪ್ರಮಾಣ 1975ರ ನಂತರ ನಿರಂತರವಾಗಿ ಹೆಚ್ಚಾಗುತ್ತಾ ಬಂದಿತು. ಇಲ್ಲಿ ಗಮನಿಸಬೇಕಾದ ಅಂಶ, ಹೀಗೆ ದಾಖಲಾದವರು ಗಂಡುಮಕ್ಕಳಾಗಿದ್ದುದು. ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ನಗಣ್ಯವಾಗಿಯೇ ಇತ್ತು. ಜನಸಮುದಾಯ ಗಳಲ್ಲಿ ಹೆಣ್ಣಿನ ಕುರಿತಾದ ಮೌಢ್ಯ ಗಟ್ಟಿಯಾಗಿ ಕುಳಿತಿತ್ತು.

ಇಪ್ಪತ್ತನೇ ಶತಮಾನ ಉರುಳಿದರೂ, ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳಾದರೂ ಕರ್ನಾಟಕ ಸರ್ಕಾರ ಸ್ಥಾಪಿಸಿದ ಕಾಲೇಜುಗಳ ಸಂಖ್ಯೆ 180 ದಾಟಿರಲಿಲ್ಲ ಮತ್ತು ಈ ಕಾಲೇಜುಗಳು ದಕ್ಷಿಣ ಕರ್ನಾಟಕದಲ್ಲಿಯೇ ಹೆಚ್ಚು ಪ್ರಮಾಣದಲ್ಲಿದ್ದವು. ಆಗ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿದ್ದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1.20 ಲಕ್ಷ ಮಾತ್ರ. ಇವರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಹೆಣ್ಣುಮಕ್ಕಳು ಇದ್ದುದು ಹತ್ತು ಸಾವಿರ ಮಾತ್ರ. ಈ ಅಂಕಿ ಅಂಶಗಳನ್ನು ಕರ್ನಾಟಕದ ಒಟ್ಟು ಜನಸಂಖ್ಯಾ ಪ್ರಮಾಣದೊಟ್ಟಿಗೆ ಹೋಲಿಸಿ ನೋಡಿದರೆ ಸಾಕು, ಹೆಣ್ಣುಮಕ್ಕಳ ಶಿಕ್ಷಣವನ್ನು ನಮ್ಮ ಸರ್ಕಾರಗಳು ನಿರ್ಲಕ್ಷಿಸಿದ ಪರಿ ಅರಿವಿಗೆ ಬರುತ್ತದೆ.

ಶೈಕ್ಷಣಿಕವಾಗಿ ಎರಡನೆಯ ಮಹತ್ವದ ವಿದ್ಯಮಾನ ಸಂಭವಿಸಿದ್ದು 2007ರಲ್ಲಿ. ಆಗಲೂ ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರು. ಸುಮಾರು 170 ಸರ್ಕಾರಿ ಪದವಿ ಕಾಲೇಜುಗಳನ್ನು ರಾಜ್ಯದ ಹಿಂದುಳಿದ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಒಮ್ಮೆಗೇ ಪ್ರಾರಂಭಿಸಿದರು. ದೂರದ ಪಟ್ಟಣಗಳಿಗೆ ಪ್ರಯಾಣಿಸಬೇಕಾದ ಸ್ಥಿತಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕದ ಕಾರಣದಿಂದ ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿದ್ದ ಗ್ರಾಮಾಂತರ ಪ್ರದೇಶಗಳ ತಳ ಸಮುದಾಯಗಳ ಹೆಣ್ಣುಮಕ್ಕಳು ಇದರಿಂದ ಉನ್ನತ ಶಿಕ್ಷಣವನ್ನು ಮುಂದುವರಿಸುವ ಅವಕಾಶ ಪಡೆದರು. ಅಲ್ಲದೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಉಚಿತ ಬಸ್‌ಪಾಸ್‌ನಂತಹ ಲಿಂಗಸಂವೇದಿ ಕಾರ್ಯಕ್ರಮಗಳು ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣಕ್ಕೆ ಬರಲು ಕಾರಣವಾದವು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಸ್ತುತ ಶೇ 58ರಷ್ಟು ಹುಡುಗಿಯರು ಹಾಗೂ ಶೇ 42ರಷ್ಟು ಹುಡುಗರು ಕಲಿಯುತ್ತಿದ್ದಾರೆ. ಮಹತ್ವದ ಮಾಹಿತಿಯೆಂದರೆ, ಪರಿಶಿಷ್ಟ ಜಾತಿಯ ಒಟ್ಟು 70,162 ವಿದ್ಯಾರ್ಥಿಗಳು ದಾಖಲಾಗಿದ್ದರೆ ಅವರಲ್ಲಿ 37,185 ಮಂದಿ ಮಹಿಳೆಯರು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 25,956. ಇವರಲ್ಲಿ 13,433 ಮಹಿಳೆಯರು. ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 1,13,419 ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ಬಂದಿದ್ದಾರೆ.

ಈ ಮೇಲಿನ ಅಂಕಿ ಅಂಶಗಳನ್ನು ಆಧರಿಸಿ, ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯ ಕೊಡುತ್ತಿರುವ ಮುಂಚೂಣಿ ರಾಜ್ಯವೆಂದು ಕರ್ನಾಟಕ ಬಿಂಬಿತ ವಾಗುವುದೇನೋ ನಿಜ. ಆದರೆ ಮಹಿಳಾ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣದ ಹೆಚ್ಚಳವನ್ನು ಮಾತ್ರ ಶೈಕ್ಷಣಿಕ ಪ್ರಗತಿಯ ಮಾನದಂಡವಾಗಿ ಪರಿಗಣಿಸಬಹುದೇ? ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ವಿಚಾರದಲ್ಲಿ ತೋರುವ ಉತ್ಸಾಹವನ್ನು ಸರ್ಕಾರವು ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೋರುತ್ತಿಲ್ಲ. ನನೆಗುದಿಗೆ ಬಿದ್ದಿರುವ ಬೋಧಕರ ನೇಮಕಾತಿ, ಆಧುನೀಕರಣಗೊಳ್ಳದ ಗ್ರಂಥಾಲಯ, ಕ್ರೀಡಾಂಗಣ ಮತ್ತು ಕ್ರೀಡಾ ಸೌಲಭ್ಯಗಳಿಲ್ಲದ ದೈಹಿಕ ಶಿಕ್ಷಣ ಮುಂತಾದ ಸಮಸ್ಯೆಗಳು, ಏರಿಕೆಯಾಗುತ್ತಿರುವ ವಿದ್ಯಾರ್ಥಿಗಳ ಜೊತೆಜೊತೆಗೇ ಏರುತ್ತಿವೆ.

ಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದ ಶಿಕ್ಷಣವನ್ನು ಬಯಸಿಬಂದ ಹೆಣ್ಣುಮಕ್ಕಳಿಗೆ ಗುಣಮಟ್ಟದ ಕಲಿಕೆಗೆ ಅವಕಾಶ ಇಲ್ಲದಿರುವುದು ಅವರನ್ನು ಶಿಕ್ಷಣದಿಂದ ಹೊರಗುಳಿಸುವಷ್ಟೇ ದ್ರೋಹದ ಕೆಲಸವಲ್ಲವೇ? ಇಂದು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಲಿಯುತ್ತಿರುವ ತಳ ಸಮುದಾಯಗಳ 1,64,037 ಹೆಣ್ಣು ಮಕ್ಕಳು ಕೇವಲ ಪದವಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಆದರೆ ಉಳ್ಳವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆಧುನಿಕವಾದ ಸೌಲಭ್ಯಗಳ ಸಹಿತ ಜಾಗತಿಕ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಒದುಗಿಸುತ್ತಿವೆ. ಈ ಇಬ್ಬಗೆಯ ಶೈಕ್ಷಣಿಕ ಪರಿಸರ ನಮ್ಮ ಸಮಾಜದೊಳಗಿನ ಆರ್ಥಿಕ ಮತ್ತು ಸಾಮಾಜಿಕ ತಾರತಮ್ಯವನ್ನು ಮತ್ತಷ್ಟು ಹಿಗ್ಗಿಸುವ ಸಾಧ್ಯತೆ ಇದೆ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ತಾವೇ ಆರಂಭಿಸಿದ ಸರ್ಕಾರಿ ಪದವಿ ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ, ಕೊರತೆಗಳನ್ನು ನೀಗಿಸುವ ಅಪೂರ್ವ ಅವಕಾಶವನ್ನು ಕಾಲವು ಕುಮಾರಸ್ವಾಮಿ ಅವರಿಗೆ ನೀಡಿದೆ. ಆದರೆ, ಅವರ ನೇತೃತ್ವದ ಸರ್ಕಾರದ ಶಿಕ್ಷಣಪರ ಕಾಳಜಿ ಹಿಂದಿನಂತೆಯೇ ಇರುವ ಪುರಾವೆ ಮಾತ್ರ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT