ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ವಿಕೇಂದ್ರೀಕರಣದತ್ತ ದೊಡ್ಡ ಹೆಜ್ಜೆ

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

ಪಂಚಾಯತ್‌ ರಾಜ್‌ ವ್ಯವಸ್ಥೆ ಸುಧಾರಣೆಗಾಗಿ ರಚಿಸಿದ್ದ ರಮೇಶ್ ಕುಮಾರ್ ಸಮಿತಿಯ ಕೆಲವು ಶಿಫಾರಸುಗಳನ್ನು ಜಾರಿಗೆ ತರುವ ಉದ್ದೇಶದ ತಿದ್ದುಪಡಿ ಮಸೂದೆಯೊಂದನ್ನು ಸದನದಲ್ಲಿ ರಾಜ್ಯ ಸರ್ಕಾರ ಮಂಡಿಸಿದೆ. ಇದರಿಂದಾಗಿ ಬಹಳ ಕಾಲದಿಂದ ಎದುರು ನೋಡುತ್ತಿರುವ ರಮೇಶ್ ಕುಮಾರ್ ಸಮಿತಿಯ ಹಲವು ಶಿಫಾರಸುಗಳು ಜಾರಿಗೆ ಬರಲಿವೆ.

ಈ ಮೂಲಕ, ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಮಾಡುವ ಪಯಣದಲ್ಲಿ ಕರ್ನಾಟಕ ಸರ್ಕಾರ ಭಾರಿ ದೊಡ್ಡ ಹೆಜ್ಜೆಯನ್ನು ಇರಿಸಿದೆ. ರಮೇಶ್ ಕುಮಾರ್ ಸಮಿತಿಯ ಹಲವು ಶಿಫಾರಸುಗಳನ್ನು ಸ್ವೀಕರಿಸಿರುವುದೇ ಬಹಳ ದೊಡ್ಡ ಹೆಜ್ಜೆ.

ಮಸೂದೆಗೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಮಸೂದೆ– 2015’ ಎಂದು ಮರುನಾಮಕರಣ ಮಾಡಲಾಗಿದೆ. ಪಂಚಾಯಿತಿಗಳು ಸ್ವಾಯತ್ತ ಸ್ಥಳೀಯ ಸರ್ಕಾರಗಳು ಎಂಬ ಮಹಾತ್ಮ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ದರ್ಶನಗಳನ್ನು ಕನಿಷ್ಠ ಪಕ್ಷ ಈ ಮರು ನಾಮಕರಣ ಪ್ರತಿಬಿಂಬಿಸುತ್ತದೆ.

ಮಸೂದೆಯಲ್ಲಿ ಸೇರಿಸಲಾಗಿರುವ ಸಮಿತಿಯ ಕೆಲವು ಪ್ರಮುಖ ಶಿಫಾರಸುಗಳು ಹೀಗಿವೆ: ಜನವಸತಿ ಸಭಾಗಳಿಗೆ ಮನ್ನಣೆ ನೀಡಿರುವುದು ಮಹತ್ವದ ಅಂಶವಾಗಿದೆ. ಇದು, ಮೂಲೆಗೆ ತಳ್ಳಲಾಗಿರುವ ಲಂಬಾಣಿ ತಾಂಡಾಗಳಂತಹ ಪ್ರದೇಶಗಳಿಗೆ ನಿಜಕ್ಕೂ ಧ್ವನಿ ನೀಡುತ್ತದೆ. ಜೊತೆಗೆ ಪ್ರಜಾತಂತ್ರದಲ್ಲಿ ತಳಮಟ್ಟದ ಜನರ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ; ಹೊಣೆಗಾರಿಕೆ ಅಥವಾ ಕಾರ್ಯಚಟುವಟಿಕೆ ನಕ್ಷೆಯು ಪಂಚಾಯಿತಿಯ ಪ್ರತಿಯೊಂದು ಸ್ತರದ ಪಾತ್ರ, ಜವಾಬ್ದಾರಿ ಮತ್ತು ಕೆಲಸಗಳನ್ನು ವಿವರಿಸುತ್ತದೆ.

ಜನರಿಗೆ ಅತ್ಯಂತ ನಿಕಟವಾಗಿರುವ ಗ್ರಾಮ ಪಂಚಾಯಿತಿಗಳು ಯಾವ ಹೊಣೆಯನ್ನು ನಿರ್ವಹಿಸಬೇಕು ಮತ್ತು ಅಂಗನವಾಡಿಗಳಿಗೆ ಆಹಾರ ಪೂರೈಕೆಯಂತಹ ವಿಚಾರಗಳು ಗ್ರಾಮ ಸಭಾದ ಮೂಲಕ ಹೇಗೆ ವಿನ್ಯಾಸಗೊಳ್ಳಬೇಕು ಮತ್ತು ಅನುಷ್ಠಾನಗೊಳ್ಳಬೇಕು ಎಂಬುದನ್ನು ತಿಳಿಸುತ್ತದೆ.

ಗ್ರಾಮಸಭೆಯ ಸದಸ್ಯರ ಅಗತ್ಯಗಳ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗುವ ಯೋಜನೆಗಳನ್ನು ಮತ್ತೆ ಬದಲಾಯಿಸಲು ಅವಕಾಶ ಇಲ್ಲ ಎಂಬುದು ಇದರಲ್ಲಿ ಸ್ಪಷ್ಟವಾಗಿದೆ. ತಳಮಟ್ಟದಿಂದಲೇ ಯೋಜನೆ ರೂಪುಗೊಳ್ಳುವುದಕ್ಕೆ ಅವಕಾಶ ನೀಡುವ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳ ಸ್ಥಾಪನೆಯ ಪ್ರಸ್ತಾವ, ಅದರಲ್ಲಿ ಗ್ರಾಮಸಭಾದ ಅಧ್ಯಕ್ಷರು ಸದಸ್ಯರಾಗಿ ಸೇರ್ಪಡೆ ಮತ್ತು ಜಿಲ್ಲಾ ಯೋಜನಾ ಸಮಿತಿಯಲ್ಲಿಯೂ ಅವರಿಗೆ ಸದಸ್ಯತ್ವ ಮತ್ತು ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸ್ಥಾಪನೆ ಇತರ ಅಂಶಗಳು.

ಅಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಸದಸ್ಯರ ಖರೀದಿಯಂತಹ ವಿವಾದಾತ್ಮಕ ವಿಷಯಗಳಿಗೂ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸಲಾಗಿದೆ ಮತ್ತು ಅಧ್ಯಕ್ಷರ ಅಧಿಕಾರಾವಧಿಯ 30 ತಿಂಗಳ ಅವಧಿಯಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೂ ಅವಕಾಶ ಇಲ್ಲ. ಆಡಳಿತದ ಎಲ್ಲ ಹಂತಗಳಲ್ಲಿಯೂ ಒಂದು ಮಟ್ಟದ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಮಸೂದೆಯು ಖಾತರಿಪಡಿಸುತ್ತದೆ. ಸದಸ್ಯರು ತಮ್ಮ ಆಸ್ತಿ ಮತ್ತು ಸಾಲದ ವಿವರಗಳನ್ನು ಘೋಷಿಸುವುದನ್ನು ಮಸೂದೆ ಕಡ್ಡಾಯಗೊಳಿಸುತ್ತದೆ.

ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುಂದುಕೊರತೆ ಪರಿಹಾರ ಪ್ರಾಧಿಕಾರದ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ ಪಂಚಾಯತ್‌ ರಾಜ್ ಕಮಿಷನರೇಟ್ ಮತ್ತು ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್) ಮಾದರಿಯಲ್ಲಿ ಕರ್ನಾಟಕ ಪಂಚಾಯತ್ ಆಡಳಿತ ಸೇವೆಗಳ ಸ್ಥಾಪನೆಯ ಪ್ರಸ್ತಾವವನ್ನು ಆರ್ಥಿಕ ತೊಡಕುಗಳ ಕಾರಣಕ್ಕೆ ಸದ್ಯಕ್ಕೆ ಕೈಬಿಡಲಾಗಿದೆ.

ಮಹಿಳೆಯರನ್ನು ಸಶಕ್ತಗೊಳಿಸುವ ಮತ್ತು ಅವರು ಭಾಗವಹಿಸಲು ಸಾಧ್ಯವಾಗುವಂತಹ ಪೂರಕ ವಾತಾವರಣ ಸೃಷ್ಟಿಯ ಅಗತ್ಯವನ್ನು ಗುರುತಿಸಲಾಗಿದೆ. ಎಲ್ಲ ಪಂಚಾಯಿತಿಗಳ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ವರದಿ ಮಾಡುವುದಕ್ಕೆ ಮತ್ತು ಇಂತಹ ಅಪರಾಧಗಳನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಭೀತಿಮುಕ್ತ ವಾತಾವರಣ ಸೃಷ್ಟಿ ಮತ್ತು ಕೋಮು ಸೌಹಾರ್ದ ಕಾಪಾಡುವುದಕ್ಕೆ ಪ್ರಯತ್ನಗಳನ್ನು ಮಾಡಲಾಗಿದೆ. ಈಗಿನ ಭಯೋತ್ಪಾದನೆ ಮತ್ತು ವಿಭಜಕ ರಾಜಕಾರಣದ ಸಂದರ್ಭದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಗೌರವ ಮತ್ತು ರಕ್ಷಣೆ ಅತ್ಯಗತ್ಯವಾಗಿದ್ದು, ಅದಕ್ಕಾಗಿ ಪ್ರಯತ್ನ ನಡೆಸಲಾಗಿದೆ.

ನಿಜ ಅರ್ಥದಲ್ಲಿ ಗ್ರಾಮ ಸ್ವರಾಜ್ಯ ಸ್ಥಾಪನೆಯಾಗಬೇಕಾದರೆ ಮಸೂದೆ ಇನ್ನಷ್ಟು ದೂರ ಕ್ರಮಿಸುವ ಅಗತ್ಯ ಇದೆ. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಬಯಸಿದಂತೆ ಅಭೂತಪೂರ್ವ ಬದಲಾವಣೆ ತರುವಲ್ಲಿ ಮಸೂದೆಯು ಯಶಸ್ವಿಯಾಗಿಲ್ಲ ಅನಿಸುತ್ತದೆ. ಪಂಚಾಯಿತಿಗಳಿಗೆ ಸಂಪೂರ್ಣ ಸ್ವಾಯತ್ತೆ ನೀಡುವ ಸಮಿತಿಯ ಶಿಫಾರಸನ್ನು ದುರ್ಬಲಗೊಳಿಸಲಾಗಿದೆ. ಪದಗಳನ್ನು ಬದಲಾಯಿಸುವ ಮೂಲಕ ಇದನ್ನು ಅತ್ಯಂತ ಜಾಣ್ಮೆಯಿಂದ ಮಾಡಲಾಗಿದೆ.

ಉದಾಹರಣೆಗೆ, ಅನುಷ್ಠಾನ ಎಂಬ ಪದವನ್ನು ಮೇಲ್ವಿಚಾರಣೆ ಎಂದು ಬದಲಾಯಿಸಲಾಗಿದೆ. ಗ್ರಾಮಸಭೆಯಲ್ಲಿ ನಿರ್ಧರಿಸಲಾದ ಆದ್ಯತೆಗಳನ್ನು ಸಾಮಾನ್ಯವಾಗಿ ಬದಲಾಯಿಸುವುದಕ್ಕೆ ಅವಕಾಶ ಇಲ್ಲ ಎಂಬುದನ್ನು ಅಧ್ಯಕ್ಷರು ಗ್ರಾಮಸಭಾದ ವಿಶೇಷ ಸಭೆ ಕರೆಯಬಹುದು ಎಂದು ಬದಲಾಯಿಸಲಾಗಿದೆ. ಇಂತಹ ಬದಲಾವಣೆಗಳು ಸ್ವಾಯತ್ತ ಅಧಿಕಾರದ ಸ್ವರೂಪವನ್ನೇ ಬದಲಾಯಿಸುತ್ತವೆ.

ಏಕಸದಸ್ಯ ಕ್ಷೇತ್ರ,  ವಾರ್ಡ್ ಸಭಾದ ಪ್ರಾಥಮಿಕ ಪಾತ್ರ- ಅಂದರೆ ಚುನಾಯಿತ ಸದಸ್ಯರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸದಸ್ಯರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದರೆ ಅವರ ಸದಸ್ಯತ್ವವನ್ನು ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡುವ ವಾರ್ಡ್ ಸಭೆಯ ಅಧಿಕಾರದ ಶಿಫಾರಸುಗಳನ್ನು ಕೈಬಿಡಲಾಗಿದೆ. ವ್ಯಂಗ್ಯ ಎಂದರೆ, ದುರ್ನಡತೆ, ಹಣ ದುರುಪಯೋಗ, ಭ್ರಷ್ಟಾಚಾರ ಅಥವಾ ಸ್ವಜನ ಪಕ್ಷಪಾತ ನಡೆಸಿದ್ದಾರೆ ಎಂಬುದು ಕಂಡು ಬಂದರೆ ಸದಸ್ಯತ್ವವನ್ನು ರದ್ದುಪಡಿಸುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಮಸೂದೆ ಹೇಳುತ್ತದೆ.

ಪಂಚಾಯಿತಿಗಳಿಗೆ ಶೇಕಡ 50ರಷ್ಟು ಮುಕ್ತ ನಿಧಿ ನೀಡಬೇಕು ಎಂದು ಸಮಿತಿಯು ಶಿಫಾರಸು ಮಾಡಿತ್ತು. ಆದರೆ ಶೇ 20ರಷ್ಟು ಮುಕ್ತ ನಿಧಿ ನೀಡಿಕೆಯ ಪ್ರಸ್ತಾವ ಮಾತ್ರ ಮಸೂದೆಯಲ್ಲಿ ಇದೆ. ಈಗ ಪಂಚಾಯಿತಿಗಳಿಗೆ ಮುಕ್ತ ನಿಧಿ ನೀಡುವುದಕ್ಕೆ ಅವಕಾಶವೇ ಇಲ್ಲ. ಹಾಗಾಗಿ ಅದಕ್ಕೆ ಹೋಲಿಸಿದರೆ ಈ ನಿಟ್ಟಿನಲ್ಲಿ ದೊಡ್ಡ ಬದಲಾವಣೆಯೇ ಆಗಿದೆ ಎನ್ನಬಹುದು.

ಭೂಸುಧಾರಣೆ, ಲೆಕ್ಕಪರಿಶೋಧನೆ, ಜಮಾಬಂಧಿಯಂತಹ ವಿಷಯಗಳಲ್ಲಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಅಧಿಕಾರಗಳಿಗೆ ಸಂಬಂಧಿಸಿ ಸಮಿತಿಯ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಮಹಿಳೆಯರು, ಮಕ್ಕಳು  ಮತ್ತು ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಕಡ್ಡಾಯ ಗ್ರಾಮ ಸಭೆಗಳನ್ನು ನಡೆಸಿ ಯೋಜನೆಗಳು ಮತ್ತು ಬಜೆಟ್ ನಿರ್ಧರಿಸುವ ಶಿಫಾರಸನ್ನು ಕೂಡ ಕೈಬಿಡಲಾಗಿದೆ.

ಶೋಷಣೆಯಿಂದ ಕೂಡಿದ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಅಕ್ರಮ ಸಾಗಣೆಗಳಂತಹ ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಯುವಲ್ಲಿ ಜನವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮಸಭೆಯ ಪಾತ್ರದ ಬಗೆಗಿನ ಶಿಫಾರಸು ಮಸೂದೆಯಲ್ಲಿ ಸೇರ್ಪಡೆ ಆಗಿಲ್ಲ. ಇದಲ್ಲದೆ, ಎಲ್ಲಿ ಮದ್ಯ ಮಾರಾಟ ಮಾಡಲು ಪರವಾನಗಿ ನೀಡಬೇಕು ಮತ್ತು ಎಲ್ಲಿ ಜೂಜಾಟ ನಡೆಸಲು ಅವಕಾಶ ನೀಡಬಹುದು ಎಂಬುದನ್ನು ನಿರ್ಧರಿಸುವ ಪಂಚಾಯಿತಿಯ ಅಧಿಕಾರದ ಬಗೆಗಿನ ಶಿಫಾರಸನ್ನು ಕೈಬಿಡಲಾಗಿದೆ.

ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಸಾಮರ್ಥ್ಯವೃದ್ಧಿ ಮತ್ತು ಕುಂದುಕೊರತೆ ನಿವಾರಣೆ ವ್ಯವಸ್ಥೆಗೆ ಜಿಲ್ಲಾಮಟ್ಟದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಣ್ಣ ವಿವಾದಗಳನ್ನು ಪರಿಹರಿಸುವ ವ್ಯವಸ್ಥೆಯ ಬಗೆಗಿನ ಶಿಫಾರಸು ಮಸೂದೆಯಲ್ಲಿ ಸೇರ್ಪಡೆ ಆಗಿಲ್ಲ. ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ತುರ್ತು ನಿಧಿ ನೀಡಿಕೆ, ಅಧ್ಯಕ್ಷರಿಗೆ ಆಪ್ತ ಕಾರ್ಯದರ್ಶಿ ನೇಮಕಕ್ಕೆ ಅವಕಾಶ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣದ ಶಿಫಾರಸುಗಳನ್ನು ಕೈಬಿಡಲಾಗಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ಮತ್ತು ಸೌಲಭ್ಯಗಳ ಪ್ರಸ್ತಾವ ಇದೆ. ಆದರೆ ಇತರ ಹಂತಗಳ ಪಂಚಾಯಿತಿ ವ್ಯವಸ್ಥೆಯ ಅಧ್ಯಕ್ಷರು ತಮ್ಮ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಲ್ಲ ಹಂತಗಳ ಪಂಚಾಯಿತಿ ಅಧ್ಯಕ್ಷರ ಸ್ಥಾನಮಾನ ಸಮಾನ ಎಂಬ ಶಿಫಾರಸನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ ಇದು ಪ್ರಜಾತಾಂತ್ರಿಕವಲ್ಲದ ಶ್ರೇಣೀಕರಣವನ್ನು ಸೃಷ್ಟಿಸಲಿದೆ. ಹಾಗೆಯೇ ಮೇಲಿರುವವರು ಹೆಚ್ಚು ಅಧಿಕಾರ ಹೊಂದಿರುವವರು ಎಂಬ ವ್ಯವಸ್ಥೆಯನ್ನೇ ಮರುಸ್ಥಾಪಿಸುತ್ತದೆ. ಇದು ಅಧಿಕಾರ ವಿಕೇಂದ್ರೀಕರಣದ ತತ್ವಕ್ಕೆ ವಿರುದ್ಧವಾದುದು.

ಮಸೂದೆ ಮಂಡನೆಯಾಗುವ ಹಂತಕ್ಕೆ ಬರುವುದರ ಹಿಂದೆ ದೀರ್ಘ ಮತ್ತು ಕಠಿಣ ಪರಿಶ್ರಮ ಇದೆ. ಹಣಕಾಸು, ಇತರ ಅಧಿಕಾರಗಳು ಮತ್ತು ಸ್ಥಳೀಯ ಆಡಳಿತದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಲು ಮನಸ್ಸಿಲ್ಲದ ಅಧಿಕಾರಶಾಹಿ ಈ ನಿಟ್ಟಿನಲ್ಲಿ ಇದ್ದ ದೊಡ್ಡ ತೊಡಕಾಗಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಅವರಿಂದ ಮಸೂದೆ ಅನುಷ್ಠಾನದ ಭರವಸೆ ಪಡೆದುಕೊಂಡದ್ದು ದೊಡ್ಡ ವರವಾಗಿ ಪರಿಣಮಿಸಿದಂತೆ ಕಾಣುತ್ತದೆ. ಇದು ಮಸೂದೆಯನ್ನು ಸದನದಲ್ಲಿ ಅಂಗೀಕರಿಸಿಕೊಳ್ಳುವುದಕ್ಕೆ ಅಗತ್ಯವಾದ ಶಕ್ತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಎಚ್.ಕೆ. ಪಾಟೀಲ ಅವರಿಗೆ ನೀಡಿದೆ.

ಮುಂದಿನ ದಿನಗಳಲ್ಲಿ ಸದನದಲ್ಲಿ ಮಸೂದೆ ಬಗ್ಗೆ ಮಾಹಿತಿಯುಕ್ತ ಮತ್ತು ಆಳವಾದ ಚರ್ಚೆ ನಡೆಯಲಿ ಎಂದು ಹಾರೈಸೋಣ. ಮಸೂದೆಯಲ್ಲಿ ಇರುವ ಲೋಪ, ಕುಂದುಕೊರತೆಗಳನ್ನು ಸರಿಪಡಿಸಲು ಇದು ನೆರವಾಗಲಿ. ಎಲ್ಲದರ ಪರಿಣಾಮವಾಗಿ ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವರು ಹೇಳುವಂತೆ ಮಸೂದೆಯು ಚಾರಿತ್ರಿಕ ಆಗಲಿ.

- ಲೇಖಕಿ ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ಸಂಚಾಲಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT