ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹದ ಮೊದಲ ದಿನಗಳು

Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮನುಷ್ಯನ ಹೃದಯಕ್ಕೆ ಭಗವಂತ ಬೇಕಾದಷ್ಟು ಕೊಡುಗೆ ಕೊಟ್ಟಿದ್ದಾನೆ. ಸಂತೋಷ, ನೆಮ್ಮದಿ, ನೋವು ಹೀಗೆ. ಇವೆಲ್ಲಕ್ಕಿಂತ ಮಿಗಿಲಾದ ಅಪೂರ್ವವಾದ ಸೆಲೆ ಸ್ನೇಹ. ಬದುಕಿನಲ್ಲಿ ಸ್ನೇಹಿತರು ತುಂಬಾ ಮುಖ್ಯ. ಸ್ನೇಹಿತರು ಇಲ್ಲದಿದ್ದರೆ ಮನುಷ್ಯ ತನ್ನ ನೋವು–ನಲಿವು, ಸುಖ, ಸಂತೋಷವನ್ನು ಯಾರ ಹತ್ತಿರ ಹಂಚಿಕೊಳ್ಳುತ್ತಿದ್ದ? ಸ್ನೇಹ ಇಲ್ಲದೇ ಇದ್ದರೆ ಮನುಷ್ಯ ಶಾಶ್ವತವಾಗಿ ಹುಚ್ಚಾಸ್ಪತ್ರೆಯಲ್ಲಿ ಇರುತ್ತಿದ್ದ.

ಸ್ನೇಹ ನಿಜಕ್ಕೂ ಭಗವಂತನ ಅದ್ಭುತವಾದ ಕಲ್ಪನೆ. ಪುರಾಣ, ಇತಿಹಾಸದಲ್ಲಿ ಸ್ನೇಹದ ಕಥನಗಳಿವೆ. ದೇಶ ದೇಶಗಳ ನಡುವೆ ಇರುವುದೂ ಬಾಂಧವ್ಯವೇ ಅಲ್ಲವೇ? ಸ್ನೇಹ ಎಂದಕೂಡಲೇ ಕೃಷ್ಣ-ಸುಧಾಮನ ಕಥೆ ಕಣ್ಣಮುಂದೆ ಬರುತ್ತದೆ.

ಜೀವನದಲ್ಲಿ ಒಳ್ಳೆಯ ಸ್ನೇಹ ಸಿಗುವುದು ಅಪರೂಪ. ಶಾಲೆಯಲ್ಲಿ, ಬೀದಿಯಲ್ಲಿ ಆಡುವಾಗ, ಕಾಲೇಜಿನಲ್ಲಿ ಹೀಗೆ ಹಲವು ಕಡೆ ಸ್ನೇಹ ಲಭ್ಯವಾಗುತ್ತದೆ. ನನಗೂ ಇಬ್ಬರು ಸ್ನೇಹಿತರು. ಒಬ್ಬ- ಆಪ್ತಮಿತ್ರ ವಿಷ್ಣುವರ್ಧನ್. ಇನ್ನೊಬ್ಬ- ಅಂಬರೀಷ್.

ವಿಷ್ಣುವರ್ಧನ್ ನನಗೆ ಮೊದಲು ಪರಿಚಿತನಾದದ್ದು ಕುಮಾರನಾಗಿ. ಮೈಸೂರಿನಲ್ಲಿ ಇದ್ದ ನಮ್ಮ ಮಹಾತ್ಮ ಪಿಕ್ಚರ್ಸ್‌ಗೆ ಆಗ ತನ್ನ ತಂದೆಯ ಜೊತೆ ಅವನು ಬರುತ್ತಿದ್ದ. ಅವನ ತಂದೆ ಎಚ್.ಎಲ್‌.ನಾರಾಯಣರಾವ್ ಆಗ ನಮ್ಮ ತಂದೆ ಶಂಕರ್‌ ಸಿಂಗ್‌ ಅವರ ಚಿತ್ರಗಳಿಗೆ ಹಾಡು, ಸಂಭಾಷಣೆಗಳನ್ನು ಬರೆಯುತ್ತಿದ್ದರು. ಕುಮಾರನ ಅಕ್ಕ ನಮ್ಮ ‘ಪ್ರಭುಲಿಂಗ ಲೀಲೆ’ ಚಿತ್ರದಲ್ಲಿ ಒಂದು ಹಾಡಿಗೆ ನೃತ್ಯ ಮಾಡಿದ್ದರು. ಆ ಹಾಡನ್ನು ಮೈಸೂರು ಅನಂತಸ್ವಾಮಿ ಹಾಡಿದ್ದರು.


ಕುಮಾರ್ ನಮ್ಮ ಮನೆಗೆ ಬರುತ್ತಿದ್ದಾಗ ಕಚೇರಿಯಲ್ಲಿ ಅಡುಗೆ ಡಿಪಾರ್ಟ್‌ಮೆಂಟ್ ಇತ್ತು. ಅಲ್ಲಿ ಮಸಾಲೆದೋಸೆ ತಿನ್ನುತ್ತಾ, ಸೈಕಲ್ ಸವಾರಿ ಮಾಡುತ್ತಾ ಕಾಲ ಕಳೆಯುತ್ತಿದ್ದೆವು. ನಮ್ಮ ಸ್ನೇಹದ ಮೊದಲ ಅಧ್ಯಾಯ ಶುರುವಾದದ್ದು ದೋಸೆ ಹಾಗೂ ಸೈಕಲ್ ಸವಾರಿಯಿಂದ. ಆಮೇಲೆ ಸೈಕಲ್ ಚಕ್ರದಂತೆಯೇ ನಮ್ಮ ಸ್ನೇಹ ಮುಂದೆ ಸಾಗುತ್ತಾ ಹೋಯಿತು.

ಮೈಸೂರಿನ ಜಗನ್‌ಮೋಹನ ಅರಮನೆ ರಸ್ತೆಯಲ್ಲಿ ನಮ್ಮ ತಂದೆಯವರ ಸ್ನೇಹಿತರಾದ ಎಂ.ಎಚ್.ರಾಮು ಅವರ ಸ್ಟುಡಿಯೊ ಇತ್ತು. ಆ ಕಾಲದಲ್ಲಿ ಅದು ಘಟಾನುಘಟಿ ನಟರು, ನಿರ್ದೇಶಕರ ಅಡ್ಡ. ಅಲ್ಲಿಗೆ ಉದಯಕುಮಾರ್, ರಾಜಾಶಂಕರ್, ಹರಿಣಿ, ವಿಷ್ಣುವರ್ಧನ್ ಅವರ ಸೋದರಿಯರು, ಅಣ್ಣ ರವಿ ಎಲ್ಲರೂ ಬರುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಎಲ್ಲರ ಫೋಟೊ ತೆಗೆಯುವುದು ರಾಮು ಅವರ ಹವ್ಯಾಸವಾಗಿತ್ತು. ಹಾಗೆ ತೆಗೆದ ಫೋಟೊಗಳನ್ನು ಸ್ಟುಡಿಯೊದಲ್ಲಿ ಹಾಕುತ್ತಿದ್ದರು. ಆ ಫೋಟೊಗಳನ್ನು ನೋಡಿ, ಅನೇಕ ಕಲಾವಿದರಿಗೆ ನಮ್ಮ ತಂದೆ ಮತ್ತು ಕೆಲವು ನಿರ್ಮಾಪಕರು ಅವಕಾಶ ನೀಡಿದ್ದುಂಟು. ವಿಷ್ಣುವಿನ ಒಂದು ಫೊಟೊವನ್ನೂ ರಾಮು ತೆಗೆದಿದ್ದು, ಅದು ಇಂದಿಗೂ ಲಭ್ಯ.

ಪುಟ್ಟಣ್ಣ ಕಣಗಾಲ್‌, ಅವರ ಅಣ್ಣ ಕಣಗಾಲ್‌ ಪ್ರಭಾಕರ ಶಾಸ್ತ್ರಿ ಇಬ್ಬರಿಗೂ ರಾಮು ಆತ್ಮೀಯರಾಗಿದ್ದರು. ಸಂಪತ್‌ಕುಮಾರ್‌, ವಿಷ್ಣುವರ್ಧನ್‌ ಆದದ್ದರಲ್ಲಿ ಮೈಸೂರಿನ ಎಂ.ಎಚ್‌. ರಾಮು ಅವರ ಶ್ರಮ ತುಂಬಾ ಇದೆ. ಯಾಕೆಂದರೆ, ಪುಟ್ಟಣ್ಣನವರಿಗೆ ರಾಮು ಅವರ ಮೇಲೆ ಬಹಳ ಗೌರವವಿತ್ತು. ವಿಷ್ಣುವಿಗೆ ಒಂದು ಅವಕಾಶ ಕೊಡುವಂತೆ ಪುಟ್ಟಣ್ಣನವರಲ್ಲಿ ರಾಮು ಕಳಕಳಿಯಿಂದ ಮನವಿ ಮಾಡಿದ್ದರು.

ನಾನು, ವಿಷ್ಣು ಚಿಕ್ಕಂದಿನಿಂದಲೂ ಹತ್ತಿರವಾಗಿದ್ದೆವು. ಅದೇ ಸಂದರ್ಭದಲ್ಲಿ ನಮ್ಮ ತಂದೆ ‘ಶಿವಶರಣೆ ನಂಬಿಯಕ್ಕ’ ಎಂಬ ಚಲನಚಿತ್ರವನ್ನು ಕೇವಲ 28 ದಿನಗಳಲ್ಲಿ ರೂಪಿಸಿ, ಬಿಡುಗಡೆ ಮಾಡಿದರು. ನಾನು ಆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ವಹಿಸಿದ್ದೆ. ಅದೇ ಕಥೆಯ ಸಿನಿಮಾ ಚಿತ್ರೀಕರಣವನ್ನು ಬಿ.ಆರ್‌.ಪಂತುಲು ಕೂಡ ಪ್ರಾರಂಭಿಸಿದರು. ಅಂದಿನ ಲೇಖಕರಾದ ಗುಂಡೂರಾವ್‌ ಒಂದು ಕಥೆಯನ್ನು ಇಬ್ಬರು ನಿರ್ಮಾಪಕರಿಗೆ ಮಾರಿದ್ದರಿಂದ ಆ ಪೈಪೋಟಿ ನಡೆಯಿತು.

ಬಿ.ಆರ್‌.ಪಂತುಲು ಚಿತ್ರೀಕರಿಸಿದ ‘ನಂಬಿಯಕ್ಕ’ ಚಿತ್ರದಲ್ಲಿ ವಿಷ್ಣು ಸಹೋದರ ರವಿ ಕೂಡ ನಟಿಸಿದ್ದ. ಆಗ ನಾನು, ವಿಷ್ಣು, ರವಿ ಮದ್ರಾಸಿನ ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಭೇಟಿ ಮಾಡುತ್ತಿದ್ದೆವು. ಅವರ ತಂದೆ ನಾರಾಯಣರಾವ್‌ ನಮ್ಮ ಸಂಸ್ಥೆಯದ್ದೇ ಇನ್ನೊಂದು ಚಿತ್ರಕ್ಕೆ ಆಗ ಸಂಭಾಷಣೆ ಬರೆಯುತ್ತಿದ್ದರು. ವುಡ್‌ಲ್ಯಾಂಡ್ಸ್‌ ಹೋಟೆಲ್‌ನ ಮಸಾಲೆದೋಸೆ ಎಂದರೆ ನಮಗೆಲ್ಲರಿಗೂ ಬಲು ಇಷ್ಟ.

ನಾನು ಮೈಸೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ವಿಷ್ಣು ಬೆಂಗಳೂರಿನಲ್ಲಿ ಮೆಡಿಕಲ್‌ ರೆಪ್ರೆಸೆಂಟೇಟಿವ್‌ ಕೆಲಸ ಮಾಡುತ್ತಿದ್ದ ಎಂಬುದು ಆಮೇಲೆ ನನಗೆ ತಿಳಿಯಿತು. ನಾನು ಮೈಸೂರಿನಲ್ಲಿ, ವಿಷ್ಣು ಬೆಂಗಳೂರಿನಲ್ಲಿ ಇದ್ದ ‘ಗ್ಯಾಪ್‌’ ಸಮಯದಲ್ಲಿ ಮೈಸೂರಿನಲ್ಲಿ ಶತ್ರುಘ್ನ ಸಿನ್ಹ ತರಹ ಒಬ್ಬ ಹುಡುಗ ಇದ್ದಾನೆಂಬ ವಿಷಯ ಕಿವಿಮೇಲೆ ಬಿತ್ತು. ಮೈಸೂರಿನ ಸರಸ್ವತಿಪುರದ ಕಟ್ಟೆ ಮೇಲೆ ಕುಳಿತು ಅವನು ಸಿಳ್ಳೆ ಹಾಕುತ್ತಾ ಇದ್ದ. ಆ ಸದ್ದು ಕೇಳಿದ ಕೂಡಲೇ ನನ್ನ ತಮ್ಮ ಸಂಗ್ರಾಮ ಸಿಂಗ್‌ ಮಹಡಿ ಮೇಲಿನ ನಮ್ಮ ಮನೆಯಿಂದ ಕೆಳಗಿಳಿದು ಹೋಗುತ್ತಿದ್ದ. ಹಾಗೆ ಸಿಳ್ಳೆ ಹೊಡೆಯುತ್ತಿದ್ದವನೇ ಅಂಬರೀಷ್‌. ಸರಸ್ವತಿಪುರದ ಅದೇ ಕಟ್ಟೆಯ ಮೇಲೆ ನನಗೆ ಅವನ ಪರಿಚಯವಾದದ್ದು. ಅವನು ನನಗೆ ಇನ್ನೊಬ್ಬ ಆಪ್ತಮಿತ್ರನಾದ.

ಅಂಬರೀಷ್‌ ನಮ್ಮ ಮನೆಗೆ ಆಗಾಗ ಬಂದು ಹೋಗತೊಡಗಿದ. ಹಬ್ಬದ ದಿನಗಳಲ್ಲಿ ನನ್ನ ತಂದೆಯ ಜೊತೆ ಇಸ್ಪೀಟ್‌ ಆಡುತ್ತಿದ್ದ. ಅಂದಿನ ಶಾಸಕ ಜಾರ್ಜ್‌ ಕೂಡ ಅಂಬರೀಷನ ಜೊತೆ ಬರುತ್ತಿದ್ದರು.
ನನ್ನ ಬಳಿ ಒಂದು ಜಾವಾ ಮೋಟಾರ್‌ ಬೈಕ್‌ ಇತ್ತು. ನಾನು ಬಹಳ ಇಷ್ಟಪಡುತ್ತಿದ್ದ ಆ ಬೈಕನ್ನು ಕಾರ್‌ ಶೆಡ್‌ನಲ್ಲಿ ಜೋಪಾನವಾಗಿ ನಿಲ್ಲಿಸುತ್ತಿದ್ದೆ. ನನ್ನ ತಮ್ಮ ಸಂಗ್ರಾಮ್‌ ಸಿಂಗ್‌ ಮತ್ತು ಅಂಬರೀಷ್‌ ರಾತ್ರಿ ಯಾರಿಗೂ ಗೊತ್ತಾಗದಂತೆ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು.

ಒಂದು ಮೊಳೆ ಬಳಸಿ ಅದನ್ನು ಸ್ಟಾರ್ಟ್‌ ಮಾಡುವ ಕಲೆ ಅಂಬರೀಷನಿಗೆ ಕರಗತವಾಗಿತ್ತು. ನನ್ನಿಷ್ಟದ ಬೈಕನ್ನು ಅವರಿಬ್ಬರೂ ಹಾಗೆ ತೆಗೆದುಕೊಂಡು ಹೋಗುತ್ತಿದ್ದುದನ್ನು ಸಹಿಸಿಕೊಳ್ಳಲು ಆಗಲಿಲ್ಲ. ತಂದೆಯ ಬಳಿ ದೂರು ಕೊಟ್ಟೆ. ಸಂಗ್ರಾಮ್‌ ಎಂದರೆ ನನ್ನ ತಂದೆಗೆ ಇಷ್ಟ.  ಹಾಗಾಗಿ ಅವರು ನಕ್ಕು ಸುಮ್ಮನಾಗುತ್ತಿದ್ದರು. ಅಂಬರೀಷ್‌ ನನ್ನ ಆಪ್ತಮಿತ್ರನಾದ್ದರಿಂದ ನಾನೂ ಸುಮ್ಮನಾಗಬೇಕಾಯಿತು.
ಅದೇ ಸಂದರ್ಭದಲ್ಲಿ ನನ್ನ ತಂದೆ ‘ಬಂಗಾರದ ಕಳ್ಳ’, ‘ಮಹದೇಶ್ವರ ಪೂಜಾಫಲ’, ‘ಶೃಂಗೇರಿ ಮಹಾತ್ಮೆ’ ಚಿತ್ರಗಳನ್ನು ತಯಾರಿಸಿದರು. ಅವುಗಳಲ್ಲಿ ಅಂಬರೀಷ್‌ ಅಭಿನಯಿಸಿದ್ದ.

ಒಮ್ಮೆ ತಂದೆಯ ಜೊತೆ ಗೋವಾಗೆ ಚಿತ್ರೀಕರಣಕ್ಕೆ ಹೋಗಿದ್ದೆವು. ತಂದೆಯ ಪಾಲಿಗೆ ಅದು ಪಿಕ್‌ನಿಕ್‌ ಕಮ್‌ ಚಿತ್ರೀಕರಣವಾಗಿತ್ತು. ‘ಬಂಗಾರದ ಕಳ್ಳ’ ಸಿನಿಮಾ ಚಿತ್ರೀಕರಣಕ್ಕೆಂದು ನಾವು ಹೊರಟಿದ್ದು. ಮೈಸೂರಿನಿಂದ ಗೋವಾವರೆಗೆ ಚಿತ್ರೀಕರಣ ಮಾಡಿಕೊಂಡು, ರಮಣೀಯ ಸ್ಥಳಗಳನ್ನು ನೋಡಿಕೊಂಡು ಸಾಗುತ್ತಿದ್ದೆವು. ಒಂದು ಕಡೆ ಇನ್ಸ್‌ಪೆಕ್ಟರ್‌ ಪಾತ್ರ ನಿರ್ವಹಿಸಲು ಒಬ್ಬರು ಬೇಕಾಗಿ ಬಂತು. ಮುರುಡೇಶ್ವರ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡುತ್ತಿದ್ದ ನನ್ನ ತಂದೆ ಆ ಪಾತ್ರಕ್ಕೆ ಬೇಕಾದ ವೇಷವನ್ನು ಅಂಬರೀಷ್‌ಗೆ ಹಾಕಿಸಿದರು. ಆ ದಿನ ಮೇಕಪ್‌ಮನ್‌ ಇರಲಿಲ್ಲ.

ನಮ್ಮ ಮನೆಯ ಗಾರೆಕೆಲಸ ಮಾಡುವ ಗೋವಿಂದು ಎಂಬುವನು ಅಲ್ಲಿಗೆ ಬಂದಿದ್ದ. ಅವನೇ ಅಂಬರೀಷನಿಗೆ ಪೌಡರ್‌ ಹಾಕಿ ಕ್ರಾಪ್‌ ಬಾಚಿ ಚಿತ್ರೀಕರಣಕ್ಕೆ ಅಣಿಗೊಳಿಸಿದ. ಇನ್ಸ್‌ಪೆಕ್ಟರ್‌ ವೇಷದಲ್ಲಿದ್ದ ಅಂಬರೀಷ್‌ಗೆ ನನ್ನ ಜಾವಾ ಮೋಟಾರ್‌ ಬೈಕನ್ನೇ ಕೊಟ್ಟರು. ಆ ಚಿತ್ರದಲ್ಲಿ ಅದೂ ಕಾಣಿಸಿಕೊಂಡಿತು.

ಅದು ಯಾವ ಗಳಿಗೆಯಲ್ಲಿ ಗೋವಿಂದು ನನ್ನ ಆಪ್ತಮಿತ್ರನಿಗೆ ಇನ್ಸ್‌ಪೆಕ್ಟರ್‌ ವೇಷ ಹಾಕಿಸಿ, ಮೇಕಪ್‌ ಮಾಡಿದನೋ ಅಂಬರೀಷ್‌ ತನ್ನ ವೃತ್ತಿಬದುಕಿನಲ್ಲಿ ಬೇಕಾದಷ್ಟು ಇನ್ಸ್‌ಪೆಕ್ಟರ್‌ ಪಾತ್ರಗಳನ್ನು ನಿರ್ವಹಿಸಿ ಒಳ್ಳೆಯ ಹೆಸರು ಗಳಿಸಿದ. ಮೋಟಾರ್‌ ಬೈಕ್‌ನಿಂದ ಶುರುವಾದ ನಮ್ಮ ಸ್ನೇಹ, ಗೋವಾ, ಕಾರವಾರ ಸುತ್ತಾಡುವಷ್ಟರಲ್ಲಿ ಗಾಢವಾಯಿತು. ನಮ್ಮ ಸ್ನೇಹದ ಬೆಸುಗೆ ಇಂದಿಗೂ ಗಟ್ಟಿಯಾಗಿದೆ.

ಮುಂದಿನ ವಾರ: ವಿಷ್ಣು ಮೇಕಪ್‌ ಟೆಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT