ಅಯೋಧ್ಯೆಯಲ್ಲಿ...

7

ಅಯೋಧ್ಯೆಯಲ್ಲಿ...

Published:
Updated:
Deccan Herald

ಹನಮ್ಯಾ ಅಯೋಧ್ಯೆಯ ಓಣ್ಯಾಗ ಕಣ್ ಕಣ್ ಬಿಟ್ಕೊಂಡ್ ಹೊಂಟಿದ್ದ.

‘ಏಯ್  ರಾಸ್ತಾ ಛೋಡೋ’ ಅಂತ ಖಾಕಿ ತೊಟಗೊಂಡ ಪೇದೆಗಳು ಹನಮ್ಯಾ ಬೀಳೂಹಂಗ್ ದೂಡಿ ಸಾಲಾಗಿ ನಿಂತ್ರು.

ಒಂದ್ ಬಿಳಿ ರಥದಾಗ ಕಾವಿ ಅಂಗಿ ತೊಟ್ಟ ಮನಷ್ಯಾ ಕೈಮುಕ್ಕೊಂತ ಹೊಂಟಿದ್ದಾ! ಅಕಳಂಕ ಸೀತಾರಮಣ ಶ್ರೀ ರಾಮಚಂದ್ರನ  ರಾಮರಾಜ್ಯಾದೊಳಗ ಈ ಕಾವಿ ಮನಷ್ಯಾ ಯಾಂವೋ ತಿಳಿಧಂಗಾತು ಹನಮ್ಯಾಗ.

ಇಡೀ ಅಯೋಧ್ಯಾ ಮಿಲಿಟರಿ ಕ್ಯಾಂಪಿನಂಗ ಕಾಣ್ತಿತ್ತು. ಎಲ್ಲಿ ನೋಡಿದ್ರೂ ಖಾಕಿ ಸಮವಸ್ತ್ರ ತೊಟಗೊಂಡ ಮಂದಿ. ಹನಮ್ಯಾ ಹೆದರಕೊಂತ ಒಬ್ಬಾಂವನ ಕೇಳಿದ.

‘ಇದ ಅಯೋಧ್ಯಾ ಹೌದಲ್ರೀ…’

‘ಹೌದಲೇ… ಮತ್ಯಾವೂರಂತ ತಿಳದೀ? ನೋಡಲಿಲ್ಲ ನಮ್ಮ ಸಿಯೆಮ್ಮ ಸಾಯೇಬ್ರನ್ನ…’

ಹನಮ್ಯಾ- ‘ಹೂಂ ರಿ…ಅದss ಬಿಳೇ ರಥದಾಗ ಹೋದರಲ್ರೀ’– ಅಂದ.

‘ರಥಾ ಅಲ್ಲಲೇ ಎಬರೇಶಿ… ಅಂಬಾಸೆಡರ್ ಕಾರು. ಅವರು ಈ ರಾಜ್ಯದ ಮುಖ್ಯಮಂತ್ರಿ...’

‘ಮುಖ್ಯಮಂತ್ರಿ ಸುಮಂತ ಸತ್ತೋದರೇನ್ರಿ’

‘ಯಾ ಸುಮಂತಲೇ! ತಲಿ ಕೆಟ್ತೇನ’.

ಹನಮ್ಯಾ ತಲಿಕೆರಕೊಂತ ‘ರಾಜಾ ಶ್ರೀ ರಾಮಚಂದ್ರ ಅಯೋಧ್ಯಾದಾಗ ಇಲ್ಲೇನ್ರೀ?’

‘ನೀ ಯಾವೂರಾಂವಲೇ... ಯಾ ಯುಗದಾಗ ಅದೀ ನೀನು. ಈ ಭ್ಹೂಮಿ ಆಕಾಸ ಎಲ್ಲಾ ರಾಮಂದss! ಇವತ್ತಿಂದ ಫೈಜಾಬಾದ್ ಹೆಸರು ‘ಅಯೋಧ್ಯಾ’ ಆತು. ರಾಮನ ಏರ್‌ಪೋರ್ಟ್ ಮತ್ತ ಅವರಪ್ಪ, ದಶರಥನ ಹೆಸರಿಲೇ ಒಂದ್ ಮೆಡಿಕಲ್ ಕಾಲೇಜೂ ಆಕ್ಕೇತಿ’. 

‘ಮತ್ತ ಅಷ್ಟೊಕೊಂದ ಕಲ್ಲು ಇಟ್ಟಂಗಿ ಬಿದ್ದಾವಲ್ರೀ, ಭೂಕಂಪ ಗಿಕಂಪ ಬಂದಿತ್ತೇನರಿ? ಊರ ತುಂಬ ಕಲ್ಲು... ಮಣ್ಣು… ಹಂಚಿಪಿಲ್ಲಿ ಕಸಾನ ತುಂಬೇತಿ...’

‘ಇಟ್ಟಂಗಿ ಮತ್ತ ಕಲ್ಲು ರಾಮ ಮಂದಿರ ನಿರ್ಮಾಣಕ್ಕ. ಮತ್ತ ಇದು ಕಸಾ ಅಲ್ಲ, ದೀಪಾವಳಿ ದಿನ ಉರಿದು ಮುರದು ಬುಕಣಿ
ಯಾದ ಎಡ್ಡ ಲಕ್ಷ ಮಣ್ಣಿನ ಪಣತಿಗೊಳು’ ಅಂತ ಒಂದ್ ಕುಂಡಿ ಮ್ಯಾಲ ಬಾರಿಸಿಯೇ ಬಿಟ್ಟ…

ಮೈಮ್ಯಾಲ ನೀರ್ ಸುರವಿಧಂಗ ಆಗಿ ಹನಮ್ಯಾ ಚೀರಿಕೊಂಡ… ಅಯ್ಯಯ್ಯಪ್ಪೋ…!

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !