ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಪ್ಪಕಾಣಿಕೆ

Published 24 ಮಾರ್ಚ್ 2024, 23:00 IST
Last Updated 24 ಮಾರ್ಚ್ 2024, 23:00 IST
ಅಕ್ಷರ ಗಾತ್ರ

ಬೆಕ್ಕಣ್ಣ ಸುದ್ದಿ ಓದುತ್ತ ಕಣ್ಣೊರೆಸಿಕೊಳ್ಳುತ್ತಿತ್ತು.

‘ಏನಾತಲೇ’ ನಾನು ಗಾಬರಿಯಿಂದ ಕೇಳಿದೆ.

‘ಸದ್ಗುರು ಐಸಿಯುದಲ್ಲಿ ಇದ್ದಿದ್ದನ್ನು ನೋಡಿ ನಮ್‌ ಕಂಗನಾಕ್ಕ ಭಯಂಕರ ಬೇಜಾರಾಗ್ಯಾಳ. ಸದ್ಗುರು ಮನುಷ್ಯರೇ ಅಲ್ಲ, ದೇವರು ಅಂದ್ಕಂಡಿದ್ದೆ. ಈಗ ದೇವರೇ ಕುಸಿದು ಬಿದ್ದಂಗೆ ಅನ್ನಿಸಿತು ಅಂತ ಹೇಳ್ಯಾಳ. ಛೇ... ಪಾಪ’ ಎಂದು ಲೊಚಗುಟ್ಟಿತು.

‘ಎಲ್ಲರ ಬಗ್ಗೆ ಬಾಯಿಗೆ ಬಂದಂಗೆ ಕಾಮೆಂಟ್‌ ಮಾಡೂ ಕಂಗನಾಕ್ಕನೂ ದೊಡ್ಡ ದೇವರೇ ಇರಬಕು ಅಂದ್ಕಂಡಿದ್ದೆ ನಾನು!’ ನನ್ನ ಉದ್ಗಾರ.

‘ನೀ ಏನರೇ ಒಂದ್‌ ಕೊಂಕು ತೆಗೀಬ್ಯಾಡ. ನೋಡಿಲ್ಲಿ... ಸದ್ಗುರು ಜೊತಿಗಿ ಫೋಟೊದಾಗೆ ಎಷ್ಟ್‌ ಚಂದ ಖರೇನೆ ದೇವರ ಜೊತಿಗಿ ಕುಂತಾಗೇ ಕಾಣತಾಳೆ’ ಎಂದು ಫೋಟೊ ತೋರಿಸಿತು.

‘ನಮ್‌ ದೇಶದಾಗೆ ದೇವರ ಥರಾ ಇರೂ ಮನಷ್ಯಾರು ಭಾಳ ಮಂದಿ ಇದ್ದಾರಲೇ’ ಎಂದೆ.

‘ಹೌದ್ಹೌದು... ಹಂಗ ನೋಡಿದರೆ ಜಾರಿ ನಿರ್ದೇಶನಾಲಯದವ್ರು, ಅಂದ್ರ ಇ.ಡಿ ಮಂದಿನೂ ಒಂಥರಾ ದೇವರ ಥರಾ ಇರೋ ಮನುಷ್ಯರೇ ಹೌದಿಲ್ಲೋ. ತಪ್ಪು ಮಾಡಿದವ್ರಿಗೆ ಬರೋಬ್ಬರಿ ಶಿಕ್ಷೆ ನೀಡತಾರೆ. ಉಪ್ಪು ತಿಂದ ಮ್ಯಾಗೆ ನೀರು ಕುಡೀಲೇಬೇಕು’ ಎಂದಿತು ಬೆಕ್ಕಣ್ಣ.

‘ಜಾರಿ ನಿರ್ದೇಶನಾಲಯದವ್ರು ಯಾರ ನಿರ್ದೇಶನ ಜಾರಿ ಮಾಡತಾರೆ ಅನ್ನದು ಮುಖ್ಯ. ಇ.ಡಿ ದಾಳಿಯಿಂದ ಬಚಾವಾಗಬೇಕು ಅಂದ್ರ ಕಮಲದಳ ಹಿಡೀಬಕು ಇಲ್ಲಾಂದ್ರೆ ಚುನಾವಣಾ ಬಾಂಡ್‌ ತಗಬಕು. ಈಗ ಬಾಂಡೂ ಇಲ್ಲ... ಬರೀ ಜೇಮ್ಸುಬಾಂಡುಗಳೇ ಇರದು!’

‘ನೋಡಾ... ನೀವು ಬ್ಯಾರೆಬ್ಯಾರೆ ದೇವರಿಗೆ ತಪ್ಪು ಕಾಣಿಕೆ ಒಪ್ಪಿಸತೀರಿ, ದುಡ್ಡು, ಬಂಗಾರ ವಜ್ರದ ಆಭರಣಗಳನ್ನು ಒಪ್ಪಿಸತೀರಿ. ಈಗ ಮಾಡಿರೋ ತಪ್ಪು ಮನ್ನಿಸಿ, ಮುಂದೆ ಇನ್ನೂ ದೊಡ್ಡ ತಪ್ಪು ಮಾಡಾಕೆ ಒಪ್ಪಿಗೆ ಕೇಳಿದಂತೆ ಹೌದಿಲ್ಲೋ. ಹಂಗೇ ಉದ್ದಿಮೆದಾರರು ರಾಜಕೀಯ ಪಕ್ಷಗಳಿಗೆ ಕಪ್ಪಕಾಣಿಕೆ ಒಪ್ಪಿಸಿ, ಹಳೆ ತಪ್ಪುಗಳ ತೊಳಕಂಡು, ಹೊಸ ತಪ್ಪು ಮಾಡಾಕೆ ಸಿದ್ಧರಾಗತಾರೆ. ಅದ್ರಾಗೇನು ತಪ್ಪೈತಿ?’ ಬೆಕ್ಕಣ್ಣ ಕಪ್ಪಕಾಣಿಕೆಯ ಹೊಸ ವಾದ ಮಂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT