ಭಾನುವಾರ, ಮೇ 29, 2022
31 °C

ಚುರುಮುರಿ: ಮನೆ, ಮೇಲ್ಮನೆ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಪಪ್ಪಾ... ನಾ ಬೇರೆ ಮನೆ ಮಾಡ್ತೀನಿ...’ ಮಗನ ಮಾತು ಕೇಳಿ ತೆಪರೇಸಿಗೆ ಗಾಬರಿಯಾಯಿತು. ‘ಏಯ್, ಯಾಕೋ? ಮದುವೆಗೆ ಮುಂಚೆನೇ ಬೇರೆ ಮನೆ ಬಗ್ಗೆ ಮಾತಾಡ್ತಿದೀಯ?’ ಎಂದ.

‘ಮತ್ತೆ? ನಂಗೂ ವಯಸ್ಸಾಗ್ತಿದೆ. ನಾನ್ಯಾವಾಗ ಮನೆ ಯಜಮಾನ ಅನ್ನಿಸ್ಕೊಳ್ಳೋದು?’

‘ಅದಕ್ಕೆಲ್ಲ ಸಮಯ ಸಂದರ್ಭ ಬರುತ್ತೆ. ಅಲ್ಲೀತಂಕ ತಡ್ಕೊಬೇಕು’.

‘ಅದೆಲ್ಲ ಆಗಲ್ಲ, ಅತ್ತ ಗಡಿನಾಡಲ್ಲಿ ಒಬ್ಬರು ಅವರಣ್ಣನ ಸಪೋರ್ಟ್‌ನಿಂದ ಈಗ ಮೇಲ್ಮನೆಗೆ ಆಯ್ಕೆಯಾಗಿದಾರೆ. ಇತ್ತ ಅರೆ ಮಲೆನಾಡಲ್ಲಿ ಒಬ್ಬರನ್ನು ಅವರ ತಾತ ಮೇಲ್ಮನೆಗೆ ಗೆಲ್ಲಿಸಿದ್ರಂತೆ. ಅದೇ ಥರ ತುಮಕೂರು, ಶಿವಮೊಗ್ಗ, ಧಾರವಾಡದಲ್ಲೂ ಅವರ ಅಪ್ಪಂದಿರ ಇಲ್ಲವೇ ಅಣ್ಣಂದಿರ ಬಲದಿಂದ ಮೇಲ್ಮನೆಗೆ ಹೋಗಿದಾರೆ. ಈಗ ಅವರದೇ ರಾಜ್ಯಭಾರ, ಯಜಮಾನಿಕೆ’.

‘ಲೇ... ಅಧಿಕಾರ ಅನ್ನೋದು ಅವರ ಪಿತ್ರಾರ್ಜಿತ ಆಸ್ತಿ ಕಣೋ... ನನ್ನತ್ರ ಪಿತ್ರಾರ್ಜಿತ ಏನೈತೆ? ಡಯಾಬಿಟೀಸು, ಬೀಪಿ. ಇರೋ ಆಸ್ತಿ ಎಲ್ಲ ನನ್ನ ಸ್ವಯಾರ್ಜಿತ...’

‘ಅದೆಲ್ಲ ಗೊತ್ತಿಲ್ಲ, ನಂಗೂ ಅಧಿಕಾರ ಬೇಕು. ಕೊನೇಪಕ್ಷ ಮನೆ ಯಜಮಾನ ಆದ್ರೂ ಆಗ್ಬೇಕು...’ ಮಗ ಪಟ್ಟು ಬಿಡಲಿಲ್ಲ.

ಅಷ್ಟರಲ್ಲಿ ಅಲ್ಲಿಗೆ ಬಂದ ಗುಡ್ಡೆ ಎಲ್ಲ ವಿಚಾರ ತಿಳಿದುಕೊಂಡು ‘ಏನಪ್ಪಾ... ನಿನಗೀಗ ಅಧಿಕಾರ ಬೇಕು ತಾನೆ? ಒಂದು ದಾರಿ ಐತೆ ನೋಡು’ ಎಂದ.

‘ದಾರಿನಾ? ಏನದು ಅಂಕಲ್?’

‘ನಿಮ್ಮಪ್ಪನ್ನ ಅರ್ಜೆಂಟ್ ‘ಮೇಲ್ಮನೆಗೆ’ ಕಳಿಸಬೇಕು, ಕಳಿಸ್ತೀಯ?’

ತೆಪರೇಸಿಗೆ ಗಾಬರಿಯಾಯಿತು, ‘ಲೇಯ್, ಏನು ಮನೆಹಾಳ ಐಡಿಯಾ ಹೇಳಿಕೊಡ್ತಿದೀಯೋ...’ ಎಂದ. ಗುಡ್ಡೆಗೆ ನಗು ತಡೆಯಲಾಗಲಿಲ್ಲ. ತೆಪರೇಸಿ ಮಗನೂ ತೆಪ್ಪಗಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು