ಶುಕ್ರವಾರ, ಜೂನ್ 5, 2020
27 °C

ಚುರುಮುರಿ| ಕೊರೊನಾ ಜಾತ್ರೆಯಲ್ಲಿ...

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಗೋದಾಮಿನಲ್ಲಿ ದೊಡ್ಡಿಲಿ, ಸಣ್ಣಿಲಿ, ಮೂಗಿಲಿ, ಸುಂಡಿಲಿಗಳು ಸಭೆ ಸೇರಿದ್ದವು. ಪೇಪರೋದುತ್ತಿದ್ದ ಸುಂಡಿಲಿ ಖುಷಿಯಿಂದ ಉದ್ಗರಿಸಿತು ‘ಹೇ... ನಾವು ಚೀನಾದವ್ರನ್ನ ಹಿಂದೆ ಹಾಕಿದ್ವಿ!’

ದೊಡ್ಡಿಲಿ ಗದರಿಸಿತು, ‘ಮಂಗ್ಯಾನಂಥವ್ನೆ... ಯಾವುದ್ರಲ್ಲಿ ಹಿಂದೆ ಹಾಕಿದ್ದಂತ ಸರಿಯಾಗಿ ನೋಡು...’

‘ಸಾರಿ... ಕೊರೊನಾಪೀಡಿತರ ಸಂಖ್ಯೆ ಅದು. ಅಷ್ಟೇ ಅಲ್ಲ, ಕೊರೊನಾ ವೈರಸ್‍ ಅಟ್ಯಾಕ್ ಮಾಡೋಕ್ಕಿಂತ ಮೊದಲೇ ಹಸಿವು, ಹೆದ್ದಾರಿ ಅಪಘಾತ, ರೈಲು ಅಪಘಾತದಲ್ಲಿ ಮಣ್ಣಾದ ವಲಸಿಗರ ಸಂಖ್ಯೆಯಲ್ಲಿಯೂ ನಮ್ಮದು ವಿಶ್ವಕ್ಕೇ ಮೊದಲ ಸ್ಥಾನ!’ ಹೆಮ್ಮೆಯಿಂದ ಉಲಿದ ಸುಂಡಿಲಿ ಮುಂದಿನ ಸುದ್ದಿ ಓದಿತು.

‘ಕೊರೊನಾ ಅಲ್ಲ, ಅವರಪ್ಪನಂತಹ ವೈರಸ್ಸು ಬಂದ್ರೂ ಇನ್ನೊಂದೆರಡು ವರ್ಷ ನಮಗೆ ಹೊಟ್ಟೆ ಚಿಂತೆ ಇಲ್ಲ. ಕೇಳ್ರಿಲ್ಲಿ... ಈ ವರ್ಷ ದಾಖಲೆ ಪ್ರಮಾಣದಲ್ಲಿ ಧಾನ್ಯ ಬೆಳದಾರಂತೆ ನಮ್ಮ ರೈತ್ರು... 29.56 ಕೋಟಿ ಟನ್ ಬೆಳೆ ಬಂದೈತಂತೆ’.

‘29.56 ಕೋಟಿ ಟನ್, ಅಂದರೆ 29ರ ಮುಂದೆ ಎಷ್ಟ್ ಸೊನ್ನೆ ಬರತೈತಿ’ ಸಣ್ಣಿಲಿ ಕೇಳಿತು.

‘ಎಷ್ಟರ ಸೊನ್ನೆ ಬರಲಿ, ನಮ್ಮ ಊಟಕ್ಕಂತೂ ಇನ್ನೊಂದೆರಡು ವರ್ಷ ಸೊನ್ನೆಯಾಗಲ್ಲ’ ಮೂಗಿಲಿ ಮೂಗರಳಿಸಿತು. ‘ರೈತ್ರು ಬೆಳೆದಿದ್ದರಲ್ಲಿ ಪಡಿತರಕ್ಕೆ ಅಂತನೇ ಅಷ್ಟೆಲ್ಲ ಕೂಡಿಡ್ತಾರೆ, ನಾವೂ ಒಳಗೆ ನುಸುಳಬಾರದಂತ ಅಷ್ಟ್ ಬಂದೋಬಸ್ತು ಮಾಡ್ತಾರೆ. ಆದರೂ ಎಷ್ಟೋ ಜನ ಹಸಿವಿನಿಂದ ಸಾಯ್ತಾರಂತೆ, ಹಂಗಾರೆ ಪಡಿತರ ಎಲ್ಲಿ ಹೋಗುತ್ತೆ...’ ಸಣ್ಣಿಲಿ ತಲೆಕೊಡವಿತು.  

ಸುಂಡಿಲಿಯು 20 ಲಕ್ಷ ಕೋಟಿಯ ನಿರ್ಮಲಕ್ಕನ ಪ್ಯಾಕೇಜಿನ ಸುದ್ದಿಯನ್ನು ಓದುತ್ತ, ಬಾಹ್ಯಾಕಾಶ, ಗಣಿಗಾರಿಕೆ, ವಿಮಾನಯಾನ ಎಂದೆಲ್ಲ ಬಣ್ಣಿಸಿ, ‘ಸರ್ಕಾರದ ಯೋಜನೆಗಳಿರೋದೆ ಕೆಲವು ಪ್ರಭಾವಿಗಳ ಅನುಕೂಲಕ್ಕೆ. ವಲಸೆ ಕೆಲಸಗಾರರಿಗೆ ರಸ್ತೆ ಮೇಲೆ ಬಸ್ ವ್ಯವಸ್ಥೆ ಸರಿಯಾಗಿ ಮಾಡದಿದ್ದರೇನಂತೆ, ಕೆಲವರಿಗೆ ಬಾಹ್ಯಾಕಾಶಕ್ಕೆ ಏಣಿ ಹಾಕಿಕೊಡಬೇಕು. ಗಣಿ ಕೆಲಸಗಾರರ ಬಾಯಿಗೆ ಮಣ್ಣು ಬಿದ್ರೇನಂತೆ, ಗಣಿಗಾರಿಕೆ ನಡೆಸೋವ್ರಿಗೆ ಹೂಹಾಸಿಗೆ ಹಾಸಬೇಕು. ಕೊರೊನಾ ಮಾರಿಜಾತ್ರೆಯಲ್ಲಿ ಉಂಡು ತೇಗಿದವನೇ ಜಾಣ!’ ಎಂದು ಕೊಂಕು ನಗೆ ಬೀರಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.