ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಫೋನ್ ಲೀಡರ್ಸ್!

Last Updated 10 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

‘ನೀನ್ ಗ್ರಾಮಾಫೋನು, ನಾನಲ್ಲ ನೀನು ಗ್ರಾಮಾಫೋನು’ ಎಂದು ರಾಷ್ಟ್ರನಾಯಕರು ಒಬ್ಬರಿಗೊಬ್ಬರು ಹೇಳ್ತಿರೋ ನ್ಯೂಸ್ ಓದುತ್ತಿದ್ದೆ.

ಮನೆಯ ಮೂಲೆಯಲ್ಲಿ ಆ್ಯಂಟಿಕ್ ಪೀಸ್‌ನಂತಿದ್ದ ಗ್ರಾಮಾಫೋನ್ ನೆನಪಾಯ್ತು. ಇದರ ವಿಶೇಷ ಏನೆಂದರೆ, ಎಲೆಕ್ಷನ್ ಸಂದರ್ಭದಲ್ಲಿ ಮಾತ್ರ ಹಾಡೋದು! ಕೆಳಗಿಟ್ಟು ಹ್ಯಾಂಡಲ್ ಹೊಡೆದು ಪ್ಲೇಟ್ ಹಾಕಿದೆ.

ನನ್ನ ಕಿವಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ‘ಮಿತ್ರೋಂ’ ಎಂದು ಶುರುವಿಟ್ಟುಕೊಂಡಿತು. ನಾಲ್ಕೂವರೆ ವರ್ಷಗಳಿಂದ ಇಂತಹ ಮಿಲಿಯನ್ ‘ಮಿತ್ರೋಂ’ ಕೇಳಿ ಸುಸ್ತಾಗಿದ್ದೇ ಸಾಕು ಅಂತಾ ಪ್ಲೇಟ್ ಬದಲಿಸಿದೆ. ‘ಗರೀಬಿ ಹಟಾದೇಂಗೇ ಹಮ್’... ನಾಲ್ಕು ತಲೆಮಾರುಗಳ ನಾಯಕರ ಆಣಿಮುತ್ತುಗಳು ಕೇಳಿಸತೊಡಗಿದವು!

ಥೋ ಎಂದು, ಕನ್ನಡದ ಪ್ಲೇಟ್ ಹುಡುಕಿ ಹಾಕಿದೆ. ‘ನಾನ್‌ಸೆನ್ಸ್... ಯಾವನ್ರೀ ಅವ್ನು, ಇದೇ ನನ್ ಲಾಸ್ಟ್ ಚುನಾವಣೆ, ಫೀನಿಕ್ಸ್‌ನಂತೆ ಎದ್ದು ಬರ್ತೀನಿ ನೋಡ್ತಿರಿ...’ ಡೈಲಾಗ್ ಕೇಳಿ ಪ್ಲೇಟ್ ಮೇಲಿನ ದೂಳು ಕಿತ್ಕೊಂಡ್ ಹೋಯ್ತು!

ಎದ್ದು ಹೋಗಿ ಡಿಸ್ಕ್ ಜೋರಾಗಿ ತಿರುಗಿಸಿದೆ. ‘ಮತ್ತೆ ನಾನೇ ಸಿ.ಎಂ. ಆಗ್ತೀನಿ ಕಣಯ್ಯ, ಅಷ್ಟೊಂದ್ ಭಾಗ್ಯ ಕೊಟ್ಟಿಲ್ವ...’ ಅಯ್ಯೋ ನನ್ ದೌರ್ಭಾಗ್ಯವೇ ಎಂದು ಬೇರೆ ಪ್ಲೇಟ್ ಹಾಕಿದೆ. ‘ಬಂಧುಗಳೇ, ಇವತ್ತಿನ ಸಂದರ್ಭದಲ್ಲಿ ಒಂದ್ ಮಾತ್ ಹೇಳೋಕೆ ಇಚ್ಚೆ ಪಡ್ತೀನಿ, ನಾನು ಸಂದರ್ಭದ ಶಿಶು’ ಎಂದು ಅಳತೊಡಗಿತು ಹೊಸ ಹಾಡು.

ಮುಂದುವರಿದಂತೆ, ನಾಲ್ಕೈದು ಧ್ವನಿಗಳು ಒಮ್ಮೆಲೇ ಕೇಳತೊಡಗಿದವು. ‘ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು...’ ಶಿವನೇ ಎಷ್ಟ್ ಸಲ ಈ ಮಾತುಗಳನ್ನೇ ಕೇಳಬೇಕಪ್ಪ ಎನ್ನುತ್ತಾ ಗ್ರಾಮಾಫೋನ್ ಹಾರ್ನ್ ತಲೆಗೆ ಕೋಪದಿಂದ ಕುಕ್ಕಿದೆ. ಜೀವ ಬಂದಂತಾದ ಗ್ರಾಮಾಫೋನು ನನಗೇ ಹೇಳತೊಡಗಿತು: ‘ಅಲ್ಲಯ್ಯ, ನಾನು ಹೇಳಿದ್ದನ್ನೇ ಹೇಳಿದ್ದಕ್ಕೆ ನಿಂಗಿಷ್ಟು ಕೋಪ ಬರುತ್ತೆ. ಇವರೆಲ್ಲ ಪದೇ ಪದೇ ಹೇಳಿದ್ದನ್ನು ಕೇಳಿಸಿಕೊಂಡು ನಾನು ಅದನ್ನೇ ಒದರಬೇಕಲ್ಲ. ನನ್ನ ಸ್ಥಿತಿ ಹೇಗಾಗಿರಬೇಡ?’ ಎನ್ನುತ್ತಾ ಮತ್ತೆ ‘ಮಿತ್ರೋಂ’ ಎಂದು ಶುರುಮಾಡಿತು.

ಕಿವಿಗೆ ಇನ್ಶುರೆನ್ಸ್‌ ಮಾಡಿಸಿಬಿಡೋಣಾಂತ ಹೊರನಡೆದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT