ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೀಸು ಹೊಲಿಗೆ

Last Updated 23 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

‘ಥೂ ಎಲ್ಲೋಗಿದ್ರಿ ಸಾ, ಇಷ್ಟು ದಿನ ನಿಮ್ಮ ನೋಡದೇ ಬಲು ಬೇಜಾರಾಗಿತ್ತು. ಬನ್ನಿ ಸಾ ಟೀ ಕುಡಿಮಾ’ ಅಂದೆ ತುರೇಮಣೆಯನ್ನ ನೋಡಿ. ಅವರು ‘ನಾನು ಡೆಲ್ಲಿಗೋಗಿದ್ದೆ ಕಲಾ, ಸಜೆಸನ್ ಕೊಡುಮಾ ಅಂತ’ ಅಂದ್ರು.

‘ಅದೇನು ಸರಿಯಾಗಿ ಬುಡುಸೇಳೀ ಸಾ’ ಅಂದೆ.

‘ತಡ್ಲಾ ಅದೇನು ನಲ್ಲಿ ಮೂಳೆನಾ ಬುಡುಸಾಕೆ. ಆರ್ಥಿಕತೆಯು ಕೊಳೆತ ಈರುಳ್ಳಿ ಆಗದೆ. ಜಿಎಸ್‍ಟಿ ಅನ್ನದು ಗಾಳಿಗೋಪುರ ಸಂಪಾದನಾ ತೆರಿಗೆಯಾಗದೆ. ಇಂತೇ ಗುಲ್ಬಣ ಸ್ಥಿತಿಯಲ್ಲಿ ದುಡ್ಡು ಕಾಸು ಇಚಾರನೆಲ್ಲಾ ಕುರಿತೇಟು ಮಾಡಿ ಮೋದಿ ದೊಡ್ಡಪ್ಪಾರಿಗೆ ಇಂಗಿಂಗೆ ಈತರಕೀತರಾ ಅಂತ ಏಳಿ ಬರುಮೆ ಅಂತ ಓದೆ, ಆದ್ರೇ ಒಳಿಕ್ಕೇ ಬುಡನಿಲ್ಲ’ ಅಂದ್ರು ತುರೇಮಣೆ.

‘ನೀವು ದೊಡ್ಡ ಬಳಂಗ್ ಅಂತ ಅಲ್ಲೂ ಗೊತ್ತಾಗೋಗದೆ ಸಾ! ವೋಗ್ಲಿ ಬುಡಿ ಪೌರತ್ವ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯವೇನು ಪಿತಾಮಹ’ ಅಂದೆ.

‘ನೋಡ್ಲಾ ರಾಜಕೀಯ ಅಂದ್ರೆ ವಸಾ ಮನೆ ಇದ್ದಂಗೆ ಕಟ್ಟದು ಕೆಡವದು ಇರತದೆ. ನಮ್ಮೂರಗೆ ಕಾಟಣ್ಣ-ಮೋಟಣ್ಣ ಅಂತ ಇಬ್ಬರು ಮೇಸ್ತ್ರಿಗಳಿ
ದ್ದರು. ಅವರು ಕಟ್ಟಿದ ಮನೆಗಳೆಲ್ಲಾ ವರ್ಸೊಪ್ಪ
ತ್ತಲ್ಲೇ ಬಿದ್ದೋಗವು. ಆಗ ಇವರು ಮೂರು ತಿಂಗಳು ಊರು ಬಿಟ್ಟೊಯ್ತಿದ್ರು. ವಾಪಸ್ ಬಂದಾಗ ಇವರ ಕಂಡೇಟಿಗೆ ಜನ ‘ಕಾಟಣ್ಣ–ಮೋಟಣ್ಣ ಸೇರಿ ಹೊಸತೊಂದು ಮನೆಯ ಕಟ್ಟಿದ್ರು, ಮನೆ ಕಿಸ್ಕಂಡ್‍ಬಿತ್ತಲ್ಲೋ ಕಾಟಣ್ಣ, ಕದ್ದೋಗನ ನಡಿಯೋ ಮೋಟಣ್ಣ’ ಅಂತ ಹಾಡಿಕ್ಯಂಡು ನಗತಿದ್ರು’ ಅಂದ್ರು.

‘ಕಾಟಣ್ಣ-ಮೋಟಣ್ಣ ಏನ್ಸಾರ್ ಎಲ್ಲಾ ಪಕ್ಷದಲ್ಲೂ ಅವ್ರೆ?’ ಅಂದೆ.

‘ನೋಡ್ಲಾ ಪೌರತ್ವ ಇದ್ದೋರಿಗೆ ಮಾತ್ರಾ ಮೊಬೈಲು ಅಂದ್ರೆ ಎಲ್ಲಾ ಬತ್ತರೆ, ಆಗ ಬಂದೋರ ಚರ್ಮದೊಳಿಕ್ಕೆ ಎಲೆಕ್ಟ್ರಾನಿಕ್ ಚಿಪ್ ಮಡಗಿ ಶಿಸ್ತಾಗಿ ಹೊಲೆದುಬುಟ್ಟಿದ್ರೆ ಆಗೋಗದಪ್ಪಾ’ ಅಂದ್ರು.

‘ಸರಿ ಸಾ ಚಿಪ್ಪು ಒಳಿಕ್ಕಾಕಿ ಹೊಲೆಯಕೆ ಡಾಕ್ರು ಬ್ಯಾಡವ್‍ರಾ?’ ಅಂದೆ ಅನುಮಾನದೇಲಿ. ಪಕ್ಕದಲ್ಲೇ ಚಪ್ಪಲಿ ಹೊಲಿತಿದ್ದ ಪೆಂಟಯ್ಯ ಅಂದ- ‘ಸಾಮೇ ನಾನು ಮಾಡ್ತೀನೇಳ್ರಿ. ಸಣ್ಣ ಹೋಲು ಮಾಡಿ ಚಿಪ್ಪು ಹಾಕಿ, ಗೊತ್ತಾಗದಂಗೆ ಇಂಗ್ಲೀಸು ಹೊಲಿಗೆ ಹಾಕಿಬುಡ್ತೀನಿ, ಮೇಲೇನೂ ಕಾಣಕಿಲ್ಲ. ಜಿಎಸ್‍ಟಿ ನೋಡಿದೀರಲ್ಲ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT