ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲಿ ಗೌಡಾ

Last Updated 6 ಏಪ್ರಿಲ್ 2020, 21:16 IST
ಅಕ್ಷರ ಗಾತ್ರ

ಪೀಸ್ ಪೀಸ್ ಫೌಂಡೇಶನ್ನಿನೋರು ತುರೇಮಣೆಗೆ ಆನ್‍ಲೈನ್ ಗೌರವ ಡಾಕ್ಟರೇಟ್ ಕೊಟ್ರೆ, ಇವಯ್ಯ ಮನೆ ಮುಂದೆ ಡಾ. ನಾರಾಯಣ ತುರೇಮಣೆ, ಎಂಡಿಪಿಎಸ್ ಅಂತ ದೊಡ್ಡ ಬೋರ್ಡ್ ಹಾಕ್ಯಳದಾ! ನಾನು ‘ಸಾ, ಎಂಡಿಪಿಎಸ್ ಅಂದ್ರೇನು?’ ಅಂತ ಕೇಳಿದ್ಕೆ ‘ಜನ ಯಾವುದೋ ದೊಡ್ಡ ಡಿಗ್ರಿ ಅಂದುಕತರೆ ಕನೋ. ಹಂಗಂದ್ರೆ ಮೆಂಬರ್ ಆಫ್‌ ದಂಡಪಿಂಡಂ ಸೊಸೈಟಿ’ ಅಂತ ವಿವರಣೇನೂ ಕೊಟ್ಟುದ್ರು.

ಇಷ್ಟೇ ಸಾಲದು ಅಂತ ಕಾರಿನ ಮ್ಯಾಲೆ ಪ್ಲಸ್ ಮಾರ್ಕು ಹಾಕಿದ್ರು. ಲಾಕ್‍ಡೌನ್ ಇದ್ದಾಗಲೂ ಡಾಕ್ಟರು ಅಂತೇಳಿ ಪೊಲೀಸಿನೋರ್ಗೆ ಎಪ್ಪೆಸ್ ಮಾಡಿ ನಿಕಾಲಾಗ್ತಿದ್ದರು. ಮನ್ನೆ ಹಿಂಗೇ ತಗಲಾಕ್ಕಂಡಿದ್ದ ಕಥೇನ ಅವರ ಬಾಯಲ್ಲೇ ಕೇಳಿ-

ಮಟನ್ ಮಾಂಸಕ್ಕೆ ಅಂತ ಪಾಪಣ್ಣನ ಅಂಗ್ಡಿಗೆ ಹೊಂಟಿದ್ದೆ ಕನೋ. ಪೊಲೀಸರು ಕಾರು ನಿಲ್ಲಿಸಿದಾಗ ‘ಕಾಣಕುಲ್ವೇ ಪ್ಲಸ್ ಮಾರ್ಕು! ನಾನು ಡಾಕ್ಟರ್. ನಾರಾಯಣ ತುರೇಮಣೆ’ ಅಂತ ಉಚಾಯಿಸಿ ಉತ್ತರ ಕೊಟ್ಟೆ. ಅವರ ಸಯಾಬ್ರು ಬಂದು ‘ಸಾ ನಿಮ್ಮತಾವು ವಸಿ ಜಂಬರ ಅದೆ ಬಲ್ಲಿ’ ಅಂತ ಜೀಪಗೆ ಗೌರವವಾಗಿ ಕರಕೋದ್ರು.

ಅಲ್ಲೊಂದ್ಕಡೆ ಡಾಕ್ಟರುಗಳು, ನರ್ಸುಗಳು ಕೊರೊನಾ ಕಿಟ್ ಹಿಡಕಂದು ತಯಾರಾಯ್ತಾ ಇದ್ರು. ನಾನು ಔಸದಿ ಡಾಕ್ಟ್ರಲ್ಲ ಗೌಡಾ ಅಂತ ಅನ್ನಕೂ ಬುಡದೇ ನನಗೂ ಮಕ್ಕೆ ಮಾಸ್ಕು, ಮೈಗೆ ಗೌನಾಕಿ ಸ್ಟೆತಾಸ್ಕೋಪು, ಡಿಜಿಟಲ್ ಥರ್ಮಾಮೀಟರು ಕೊಟ್ಟು, ಒಬ್ಬ ನರ್ಸಮ್ಮನ್ನ ಜೊತೆ ಮಾಡಿ ತಬ್ಲಿಗಳಿಗೆ ಕೊರೊನಾ ಟೆಸ್ಟ್ ಮಾಡಿಕ್ಯಬನ್ನಿ ಅಂತ ಕಳಿಸಿದ್ರು.

ಎಲ್ಲ್ಯದೆ ನಮ್ಮ ತಾವು ಕೊರೊನಾ! ತಬ್ಬಿಕ್ಯಳನ ಬನ್ನಿ ಅಂತ ಮುದ್ದಿನ ತಬ್ಲಿಗಳೆಲ್ಲಾ ತಬ್ಬುಗಾರಿಕೆ ಚಳವಳಿ ಮಾಡ್ತಿದ್ದೋ! ಅಲ್ಲಿಂದ ತಪ್ಪಿಸಿಕ್ಯಂಡು ಬರೊತ್ತಿಗೆ ಏಳು-ಹನ್ನೊಂದಾಯ್ತು ಕನೋ. ಪೊಲೀಸು, ಡಾಕ್ಟ್ರು- ನರ್ಸು, ಕಾರ್ಯಕರ್ತರ ಕೆಲಸ ಕಷ್ಟಾ ಕಯ್ಯಾ! ಅವರಿಗೆ ಕಾಲುಮುಗೀಬೇಕು! ಪಡಿಪಾಟಲು ಬಿದ್ದು ಸಂದೇಗೆ ಮನೆಗೆ ಬಂದ್ನಾ, ನನ್ನೆಂಡ್ರು 21 ದಿನ ಗ್ಯಾರೇಜಗೇ ಕ್ವಾರಂಟೈನು ಅಂತ ತಬ್ಲಿ ಮಾಡಿ, ತಟ್ಟೆ-ಲೋಟ, ಚಾಪೆ ಕೊಟ್ಟವಳೆ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT