ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆಯೇ ಮದ್ದು!

ಚುರುಮುರಿ
Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ಅಪರೂಪಕ್ಕೆ ಫೋನಾಯಿಸಿದ ಗೆಳತಿಯ ಮಗಳು ಕೇಳಿದಳು ‘ಏನ್ ಕಾರುಬಾರು ನಡೆಸೀರಿ ಆಂಟಿ?’

‘ಕಾರೂ ಇಲ್ಲ, ಬಾರೂ ಇಲ್ಲ... ಎಲ್ಲೀದ್ ಹಚ್ಚಿ ಹೋಗ್. ನೋಡೀಯಿಲ್ಲೋ... ಕೊರೊನಾ ರ್‍ಯಾಂಕಿಂಗ ವಳಗ ನಂಬರ್ ವನ್ ಸ್ಥಾನಕ್ಕೆ ನಾವು ಭಾರೀ ಪೈಪೋಟಿ ಕೊಡಾಕೆ ಹತ್ತೀವಿ, ಇನ್ನೇನು ಇಟಲಿ, ಅಮೆರಿಕಾನೂ ಹಿಂದ್ ಹಾಕ್ತೀವಿ ಬಿಡು. ಲಾಕ್‌ಡೌನ್‌, ಮೋಂಬತ್ತಿ, ಚಪ್ಪಾಳೆ, ಜಾಗಟೆ, ಹೂಮಳೆ ಯಾವುದರ ಆಟನೂ ಕೊರೊನಾ ಮುಂದೆ ನಡೀಲಿಲ್ಲ... ಸುದ್ದಿ ನೋಡಾಕ ಜೀಂವಾ ಝಲ್ ಅನ್ನತದ’ ಎಂದು ಉದ್ದಕ್ಕೆ ಕುಟ್ಟಿದೆ.

‘ಬರೀ ಸೋಂಕಿತರ ಸಂಖ್ಯೆ ಲೆಕ್ಕಕ್ಕೆ ಹಿಡಿಬ್ಯಾಡ್ರಿ, ಬ್ಯಾರೆ ದೇಶಕ್ಕಿಂತ ನಮ್ಮಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚೈತಿ, ಸತ್ತೋರ ಸಂಖ್ಯೆ ಎಷ್ಟ್ ಕಡಿಮಿ ಐತಿ. ಲಾಕ್‌ಡೌನ್‌ ಮಾಡಿದ್ದಕ್ಕೆ ಆತ್ರಿ, ಇಲ್ಲಾಂದ್ರೆ ಅಷ್ಟೆ ಕಥೆ’ ಎಂದಳು ಕೆಳಬಿದ್ದರೂ ಮೀಸೆ ಮಣ್ಣಾಗದ ಭಕ್ತೆ.

‘ತಮಿಳಿನಾಗೆ ಹೆಂಗ ಬರೀತಾರ ಹಂಗೇ ಇಂಗ್ಲಿಷ್ದಾಗೂ ಇರಬೇಕಂತ, ಸಾವಿರಾರು ಸ್ಥಳಗಳ ಹೆಸರನ್ನು ತಮಿಳುನಾಡು ಸರ್ಕಾರ ಬದಲಿ ಮಾಡಾಕಹತ್ಯಾದಂತ, ಛಲೋ ಮಾಡ್ಯಾರ್ರೀ’ ಎನ್ನುತ್ತ ನಕ್ಕಳು.

‘ನಮ್ಮ ಸರ್ಕಾರ ಏನ್ ಕಡಿಮಿ ಬಿಡು... ಕಾಯಿದೆನೆ ಬದಲಿ ಮಾಡಾಕ್ ಹತ್ಯಾರಲ್ಲ. ಉಳುವವನೇ ಹೊಲದೊಡೆಯ ಅನ್ನೋದರ ಬದಲಿಗೆ ಉಳಲಾರದ ಉಳ್ಳವನೇ ಹೊಲದೊಡೆಯ ಅಂತ ಮಾಡೀವಲ್ಲ ಈಗ’ ಎಂದೆ.

ಥಟ್ಟನೆ ಮಾತು ಬದಲಿಸಿದಳು. ‘ಅಮೆರಿಕದ ಸಂಸದೆ ತುಳಸಿ ಗಬ್ಬಾರ್ಡ್ ಮ್ಯಾಡಮ್ಮಾರು ಕೋವಿಡ್ಗೆ ತಿರುಮಂತ್ರ ಅಂದ್ರ ಭಗವದ್ಗೀತೆ ಪಠಿಸಿದರ ಶಾಂತಿ, ಶಕ್ತಿ ಸಿಗ್ತದ ಅಂದಾಳಂತ. ಅಲ್ಲೇ ಕ್ರೈಸ್ತಳಾಗಿ ಹುಟ್ಟಿ, ಬೆಳೆದು, ಆಮೇಲೆ ಹಿಂದೂ ಆದ್ರೂ ಸಹಿತ ಹೆಂಗ ನಮ್ಮ ಧರ್ಮನ ಅರೆದು, ಕುಡದಾಳ ನೋಡ್ರೀ...’ ಹೆಮ್ಮೆಯಿಂದ ಉಲಿದಳು.

‘ಅಲ್ಲಿ ಆಕಿ ಅಂದ್ರ ಹೆಮ್ಮೆ ಅನ್ನಿಸ್ತ, ಇಲ್ಲಿ ನಮ್ಮ ಸೋನಿಯಕ್ಕ ಏನರ ಬೈಬಲ್ ಪಠಣ ಮಾಡ್ರಿ ಅಂದಿದ್ದರ ಕೇಸರಿಪಡೆಗಳು ಆಕಿ ಮ್ಯಾಗ ಮುಗಿಬೀಳತಿದ್ದವು’ ಎಂದೆ.

‘ಸೋನಿಯಕ್ಕ ಇಲ್ಲಿ ಸೊಸೆ, ಅಲ್ಲೀದೆಲ್ಲ ಅಲ್ಲೇ ಬಿಡಬೇಕ್ರಿ’ ಆಸಾಮಿ ಫೋನ್ ಇಟ್ಟೇಬಿಟ್ಟಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT