ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುತಿ: ಮಾಸ್ಕ್‌ ಮಹಾತ್ಮೆ

Last Updated 14 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ತುರೇಮಣೆ ಮನೆ ಮುಂದೆ ಹುಣ್ಣಿಗೊರವನಂಗೆ ಕುಂತುದ್ದರು. ‘ಅವರೆಕಾಳು ತಿಂದು ವಾಯುದೇಗು ಬುಡ್ತಾ ಕುಂತಿದ್ದರಿಯಲ್ಲಾ
ಬಿರ್‍ರನೆ ಹೊಂಡಿ’ ಅಂತ ಒಳಗಿಂದ ಮಾತೃಪಕ್ಷದ ಆದೇಶ ಬಂತು.

‘ಮುಂದ್ಲಾರ ನೆಂಟರ ಮದುವಿಗೋಗ್ಬಕು ಕನೋ. ಈ ಸಾರಿ ನಮ್ಮೋಳು ಸೀರೆ ಕೇಳ್ತಿಲ್ಲ. ಸೀರೆಗೆ ತೇಟಾದ ಮಾಸ್ಕುಗಳು ಬೇಕಂತೆ. ಧಾರೆ ಮೋರ್ತಕ್ಕೊಂದು, ಮಾರನೇ ಕಿರಿಗಂಚಿ ದಿನಕ್ಕೆ, ಅದರ ಮಾರನೇ ಮರಿಗಂಚಿ ದಿನಕ್ಕೆ ಮೂರು ಮಾಸ್ಕು ಬೇಕು. ಬಾ ತರನೆ’ ಅಂದ್ರು.

‘ಕಣ್ಣಿಗೆ ಬೇಕಾದಂತಾ ಮಾಸ್ಕು ಎಲ್ಲಿ ಸಿಕ್ತದೆ ನನಗೆ ಗೊತ್ತದೆ ಕನಾ, ಬಲ್ದ್ರಿ ಸಾ’ ಅಂದೋನೆ ಸೇಠು ಅಂಗಡಿಗೋಗಿ ‘ಸೇಠು, ಸೀರೆಗಳಿಗೆ ಮ್ಯಾಚಿಂಗ್ ಮಾಸ್ಕು ಬೇಕು ತೋರಿಸು’ ಅಂದೆ.

‘ಅನುಷ್ಕಾ ಲೆಹಂಗಾ ಮಾಸ್ಕ್, ರಶ್ಮಿಕಾ ಕುರ್ತಾ-ಸೂಟ್ ಮಾಸ್ಕ್, ಬಾಲಿವುಡ್, ಸ್ಯಾಂಡಲ್‍ವುಡ್ ಡ್ರಗ್ ಮಾಸ್ಕ್ ಇದಾರೆ! ನಿಮಗೆ ಕುಮಾರ್ಸಾಮಿ ಕಣ್ಣೀರ್ ಮಾಸ್ಕ್, ಡಿಕೆಶಿ ಅಡರಗಾಲ್ ಮಾಸ್ಕ್, ರಾಜಾವುಲಿ ವೈಟ್ ಮಾಸ್ಕ್ ಇದಾರೆ, ನೋಡಿ ಅಣಾ’ ಅಂದ ಸೇಠು.

‘ನಮ್ಮೆಂಗುಸ್ರಿಗೆ ಚಿಕ್ಕ ಬಾರ್ಡರು, ಒಡಲಲ್ಲಿ ಬುಟ್ಟಾ ಕಡಮೆ ಇರೋ ಇಂಗ್ಲೀಷ್ ಕಲರ್ ಸಿಲ್ಕು ಮಾಸ್ಕ್ ಇಲ್ಲವಾ ಸೇಠು?’ ಕೇಳಿದ್ರು ತುರೇಮಣೆ.

‘ಮೈಸೂರು ಸಿಲ್ಕ್ ಮಾಸ್ಕ್, ಬನಾರಸ್ ಮಾಸ್ಕ್, ಚಂದೇರಿ ಮಾಸ್ಕ್, ಪೈಥನಿ ಮಾಸ್ಕ್, ಗಡ್ವಾಲ್ ಮಾಸ್ಕ್, ಇಳಕಲ್ ಮಾಸ್ಕ್, ಚಿಕನ್ ವರ್ಕ್ ಮಾಸ್ಕ್, ಕೇರಳ ಮುಂಡು ಮಾಸ್ಕ್, ಜರಿ ವರ್ಕ್ ಮಾಸ್ಕ್, ಜರ್ದೋಸಿ ಡಿಸೈನರ್ ಮಾಸ್ಕ್ ಸೀರೆ ಬಂದಿದಾರೆ ಅಣಾ’ ಸೇಠು ವಿವರಿಸಿದ.

‘ಸೇಠು ಮಾಸ್ಕು ಬೇಕಾದ್ರೆ ಸೀರೇನು ತಗಬೇಕಾ?’ ಅಂದೋ. ‘ಮೊದಲು ವಿತೌಟ್ ಬ್ಲೌಸ್ ಪೀಸ್‌, ವಿತೌಟ್ ಮಾಸ್ಕ್ ಬರ್ತಾ ಇದ್ರು. ಈಗ ವಿತ್ ಬ್ಲೌಸ್ ಪೀಸ್‌-ಮಾಸ್ಕ್ ಬರ್ತಾರೆ’ ಅಂದ ಸೇಠು. ಮಾಸ್ಕು ಯವಾರದಲ್ಲಿ ನಾನು, ಸಾರಿಗೆ ಮುಸ್ಕರದಲ್ಲಿ ಸಿಗಾಕ್ಕ್ಯಂಡ ಡಿಸಿಎಂ ಸವದಿ ಥರಾ ಆಗೋದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT