ಸೋಮವಾರ, ಮೇ 16, 2022
25 °C

ಭೀತೋಪದೇಶ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಸಂಪುಟ ಛದ್ಮವ್ಯೂಹದಲ್ಲಿ ಸಿಲುಕಿದ ರಾಜಾ ಹುಲಿ ವಿಧಾನಸೌಧದ ಕುರಿಕ್ಷೇತ್ರದಲ್ಲಿ ಶಸ್ತ್ರ ಕೆಳಗಿಟ್ಟು ‘ಕುರ್ಚಿ ಉಳಿಸಿಕೊಳ್ಳಲು ನನ್ನ ಮಿತ್ರ ಮಂಡಲಿಯ ವಿರುದ್ಧವೇ ಕತ್ತಿ ಎತ್ತಲಾರೆ ದೇವಾ. ಅಧಿಕಾರಕ್ಕಾಗಿ ನನ್ನ ಜನವನ್ನೇ ಹಣಿಯುವುದು ಪಾಪವಲ್ಲವೇ?’ ಅಂತ ವಿಷಾದ ಯೋಗದಲ್ಲಿ ಕಣ್ಣೀರ್ಗರೆದು ಕೂತನು.

‘ಸ್ವಾರ್ಥ ರಾಜಕೀಯದಲ್ಲಿ ಮಿತ್ರ-ಶತ್ರು, ನೆಂಟ-ಭಂಟ ಎಲ್ಲರೂ ಒಂದೇ. ಮೋದಿ ಮಹರ್ಷಿಗಳ ರೀತಿ ಮೂಗಿಗೆ ತುಪ್ಪ ಹಚ್ಚುವ ಶಾಣಕ್ಯ ತಂತ್ರವನ್ನು ನೋಡಿ ಕಲಿ. ನೀನು ಸ್ಥಿತಪ್ರಜ್ಞನಾಗಿ ನಿನ್ನ ಕರ್ಮವನ್ನು ಮಾಡು, ಫಲಾಫಲಗಳನ್ನು ನನಗೆ ಬಿಡು’ ಎಂದ ಹುಲಿಯ ಹತಾಶೆ ಮತ್ತು ಖಿನ್ನತೆಗಳನ್ನು ನೋಡಿದ ಭಗವಂತ.

‘ರಾಜಕೀಯ ಬದುಕಿನಲ್ಲಿ ಸುಖ-ದುಃಖಗಳಿಗೆ ಕಾರಣವೇನು ಗೋವಿಂದ? ತಂತ್ರ-ಕುತಂತ್ರಗಳು ಏಕಾಗುತ್ತವೆ?’ ರಾಜಾಹುಲಿ ಪ್ರಶ್ನಿಸಿದನು.

‘ನೋಡು ಹುಲಿಯೇ, ರಾಜಕೀಯ ಬದುಕಿ ನಲ್ಲಿ ಸೃಷ್ಟಿ, ಸ್ಥಿತಿ, ಲಯ ಶ್ರದ್ಧಾತ್ರಯಗಳು ನಿರಂತರವು. ಪ್ರಜೆಗಳ ಚೀರ್ತನೆಯನ್ನು ಮರೆತು ನೀನು ಇಲ್ಲಿ ನಿಮಿತ್ತ ಮಾತ್ರ ಎನ್ನುವುದನ್ನು ತಿಳಿ. ಕುರ್ಚಿಯೇ ರಾಜಕೀಯದ ಆತ್ಮ. ಕುರ್ಚಿ ಸಂಸ್ಥಾಪನಾರ್ಥಾಯ ದುಷ್ಕೃತಾಂ ಸಂಭವಾಮಿ ಯುಗೇಯುಗೇ!’

‘ಭಗವಂತ, ನನಗೆ ರಾಜಕೀಯ ವಿಶ್ವರೂಪ ದರ್ಶನ ಮಾಡಿಸು’ ರಾಜಾಹುಲಿ ಉವಾಚ.

‘ಕೇಳು ರಾಜಾಹುಲಿ, ರಾಜಕೀಯ ಕ್ಷೇತ್ರದಲ್ಲಿ ವಯಸ್ಸು, ದುಡ್ಡು, ಅಧಿಕಾರ ಎಂಬ ಮೂರು ಅಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಮೂರು ಅಂಶಗಳನ್ನೂ ಒಮ್ಮೆಗೇ ಹೊಂದಿದ್ದವನಿಗೆ ಉತ್ತರೋತ್ತರ ಶ್ರೇಯಸ್ಸು ಲಭಿಸುತ್ತದೆ. ರಾಜಕೀಯ ಪ್ರವೇಶದ ಪ್ರಥಮ ಹಂತದಲ್ಲಿ ವಯಸ್ಸು-ದುಡ್ಡು ಇರುತ್ತವೆ, ಅಧಿಕಾರವಿರುವುದಿಲ್ಲ. ಎರಡನೇ ಹಂತದಲ್ಲಿ ವಯಸ್ಸು-ಅಧಿಕಾರ ಇರುತ್ತವೆ, ದುಡ್ಡಿರುವುದಿಲ್ಲ. ಮೂರನೇ ಹಾಗೂ ಕೊನೆಯ ಹಂತದಲ್ಲಿ ದುಡ್ಡು-ಅಧಿಕಾರ ಇರುತ್ತವೆ, ಅವನ್ನು ಅನುಭವಿಸುವ ವಯಸ್ಸಿರುವುದಿಲ್ಲ. ಎರಡನೇ ಹಂತದಲ್ಲಿ, ನಿನ್ನ ಹಿತ ಶತ್ರುಗಳಿದ್ದಾರೆ. ನೀನು ಮೂರನೇ ಹಂತದಲ್ಲಿದ್ದೀಯೆ. ಈಗ ಹೂಡು ಬಾಣವನ್ನು!’ ಎಂದ ಪರಮಾತ್ಮನ ಮಾತಿನಂತೆ ರಾಜಾಹುಲಿಯು ಕೆಂಡಹಾಸದಿಂದ ಬಾಣ ಹೂಡಿದುದನ್ನು ನೋಡಿದ ಶತ್ರು ಪಡೆಗಳು ಪೇರಿವಾದ್ಯ ಬಾರಿಸಿಕೊಂಡು ಪಲಾಯನಗೈದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.