ಸೋಮವಾರ, ಡಿಸೆಂಬರ್ 5, 2022
18 °C

ಚುರುಮುರಿ: ಎಲ್ಲ ದೇವರಿಚ್ಛೆ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

ಪಂಚಾಯ್ತಿ ಮೆಂಬರ್ ಪರ್ಮೇಶಿ ಅಪರೂಪಕ್ಕೆ ಹರಟೆಕಟ್ಟೆಗೆ ಬಂದಿದ್ದ. ಚಾ ಸಮಾರಾಧನೆ ಎಲ್ಲ ಮುಗಿದ ಬಳಿಕ ತೆಪರೇಸಿ ‘ಅಲ್ಲಲೆ ಪರ್ಮಿ, ನಮ್ಮೂರು ಬಸ್‌ಸ್ಟ್ಯಾಂಡ್ ಟಾಯ್ಲೆಟ್ ನೋಡೀ ಏನ್ಲೆ? ಎಷ್ಟು ಗಬ್ಬು ನಾರ್ತತಿ, ಮುಕ್ಕಾಲು ಗ್ವಾಡಿನೇ ಬಿದ್ದು ಹೋಗೇತಿ. ರಿಪೇರಿ ಮಾಡ್ಸಲ್ಲೇನು?’ ಎಂದು ಕೇಳಿದ.

‘ಅದಾ? ಟೆಂಡರ್ ಆಗೇತಲೆ, ಅವನು ಕಾಂಟ್ರಾಕ್ಟ್ರು ಕೈಗೇ ಸಿಕ್ತಿಲ್ಲ...’ ಪರ್ಮೇಶಿ ತಲೆ ಕೊಡವಿದ.

‘ಯಾಕೆ? ನೀನು ಕಮಿಷನ್ ಜಾಸ್ತಿ ಕೇಳಿರಬೇಕು’ ಗುಡ್ಡೆ ನಕ್ಕ.

‘ಲೇಯ್ ಗುಡ್ಡೆ ನೆಟ್ಟಗೆ ಮಾತಾಡು, ನಮ್ ಪರ್ಮಿ ಟಾಯ್ಲೆಟ್‌ನಾಗೆಲ್ಲ ಕಮಿಷನ್ ತಿನ್ನೋನಲ್ಲ...’ ದುಬ್ಬೀರ ಇದ್ದವನು ಪರ್ಮೇಶಿ ಪರ ನಿಂತ.

‘ಆತುಬಿಡಪ, ಆದ್ರೆ ಟಾಯ್ಲೆಟ್ ಬಿದ್ದೋಗೇತಿ, ಹೆಣಮಕ್ಳಿಗೆ ತೊಂದ್ರಿ ಆಗಲ್ವ ಅಂತ ಅಷ್ಟೆ ನನ್ನ ಕಾಳಜಿ...’

‘ಲೇ ಗುಡ್ಡೆ, ದೇಶದಾಗೆ ಎಂತೆಂಥ ಸೇತುವೆಗಳೇ ಬಿದ್ದು ಹೋಗಿದಾವು. ಜುಜುಬಿ ಈ ಟಾಯ್ಲೆಟ್‌ದು ಹೇಳ್ತಿಯಲ್ಲಲೆ‌’ ಪರ್ಮೇಶಿ ಆಕ್ಷೇಪಿಸಿದ.

‘ಕರೆಕ್ಟ್, ಸೇತುವೆನೋ ಟಾಯ್ಲೆಟ್ಟೋ ಅವು ಬಿದ್ರೆ ಯಾರೇನ್ ಮಾಡಾಕಾಗ್ತತಿ? ಎಲ್ಲ ದೇವರಿಚ್ಛೆ!’ ತೆಪರೇಸಿ ಆಕಾಶ ನೋಡಿದ.

‘ಅಲ್ಲ ನನ್ ಪ್ರಶ್ನೆ ಏನಪ ಅಂದ್ರೆ, ನಮ್ ಮಿನಿಸ್ಟ್ರಿಗೆ ಇರೋ ಕಾಳಜಿ ನಿಂಗಿಲ್ವಲ್ಲ ಅಂತ’ ಗುಡ್ಡೆ ಮತ್ತೆ ರಾಗ ಎಳೆದ.

‘ಏನು ಹಂಗಂದ್ರೆ? ಏನು ಕಾಳಜಿ?’

‘ಪೇಪರ್ ನೋಡಿಲ್ವಾ? ನಮ್ಮ ಮಿನಿಸ್ಟ್ರು ಒಬ್ರು ಅದ್ಯಾವುದೋ ಕಾಲುವೆ ರಿಪೇರಿ ಆಗಿಲ್ಲ ಅಂತ ಸಿಟ್ಟಿಗೆದ್ದು ರಾತ್ರಿ ಎಲ್ಲ ಆ ಕಾಲುವೆ ಪಕ್ಕಾನೇ ಮಲಗಿದ್ರಂತೆ’.

‘ಅದ್ಕೆ? ನಾನೇನ್ ಮಾಡ್ಲಿ?’ ಪರ್ಮೇಶಿ ಪ್ರಶ್ನೆ.

‘ನೀನೂ ಮಲಗಬೇಕು’.

‘ಎಲ್ಲಿ?’

‘ಆ ಟಾಯ್ಲೆಟ್ ಪಕ್ಕದಲ್ಲಿ!’

ಗುಡ್ಡೆ ಮಾತಿಗೆ ಸಿಟ್ಟಿಗೆದ್ದ ಪರ್ಮೇಶಿ ಚಾ ಕಪ್ ಬಿಸಾಕಿ ತಿರುಗಿ ನೋಡದೆ ಎದ್ದು ಹೋದ. ಎಲ್ಲರೂ ಒಳಗೇ ನಕ್ಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.