ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ ‌| ಅವಮಾನ ವರದಿ!

Published 30 ಮೇ 2024, 23:19 IST
Last Updated 30 ಮೇ 2024, 23:19 IST
ಅಕ್ಷರ ಗಾತ್ರ

‘ಏನೋ ತೆಪರ, ಕೇರಳಕ್ಕೆ ಮುಂಗಾರು ಪ್ರವೇಶ ಆತಂತೆ, ಈ ಸಲನಾದ್ರು ಒಳ್ಳೆ ಮಳಿ ಬರ್ತತೋ ಇಲ್ಲೋ?’ ದುಬ್ಬೀರ ಕೇಳಿದ.

‘ಬರ್ತತಂತಪ, ಹವಾಮಾನ ತಜ್ಞರು ಹೇಳಿದಾರೆ...’

‘ಈ ಹವಾಮಾನ ವರದಿ ನಂಬಿಕೆಂಡ್ರೆ ಅಷ್ಟೆ, ಇಂದು ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ ಅಂತಾರೆ. ಆದರಾತು, ಇಲ್ಲದಿದ್ರೆ ಇಲ್ಲ’ ಗುಡ್ಡೆ ನಕ್ಕ.

‘ಇನ್ನೊಂದ್ ಗೊತ್ತಾ? ‘ಭಾರೀ ಮಳೆ, ತಗ್ಗು ಪ್ರದೇಶಗಳಿಗೆ ನೀರು’ ಅಂತ ಪೇಪರಲ್ಲಿ ಹಾಕ್ತಾರೆ. ತಗ್ಗಿಗಲ್ಲದೆ ಮತ್ತೇನು ಗುಡ್ಡ ಏರುತ್ತಾ ನೀರು?’ ತೆಪರೇಸಿಗೂ ನಗು.

‘ಅಲ್ಲ, ಮೊನ್ನಿ ಅದೆಂಥದೋ ರೀಮಲ್ ಚಂಡಮಾರುತ ಬರ್ತತಿ, ಅಲ್ಲೋಲ ಕಲ್ಲೋಲ ಆಗ್ತತಿ ಅಂತಿದ್ರು. ಎಲ್ಲದು ಬರ್ಲೇ ಇಲ್ಲ?’ ಮಂಜಮ್ಮ ಕೇಳಿದಳು.

‘ಅದು ಬರದಿದ್ರೇನಂತೆ, ನಿನ್ನಿ ರಾತ್ರಿ ಬೆಂಗಳೂರು ಏರ್‌ಪೋರ್ಟಿನಾಗೆ ಒಂದು ಚಂಡಮಾರುತ ಎದ್ದಿರಬೇಕು...’ ಗುಡ್ಡೆ ಒಗಟಿನ ಮಾತಾಡಿದ.

‘ಗೊತ್ತಾತು ಬಿಡೋ ಗುಡ್ಡೆ, ಅದೂ ಹವಾಮಾನ ವರದಿ ತರ ಠುಸ್ಸಾಗುತ್ತಾ ಅಂತ’.

‘ಇಲ್ಲ, ಠುಸ್ಸಾಗಲ್ಲ, ಇನ್ನೊಂದ್ ವಾರ ಟಿ.ವಿ. ತುಂಬ ಅದರದ್ದೇ ಹವಾ’.

‘ಆತು ಬಿಡಪ, ಆಮೇಲೆ ಪಾರ್ಲಿಮೆಂಟಲ್ಲಿ ಈ ಸಲ ಯಾರಿಗೆ ಮೆಜಾರಿಟಿ ಬರಬೋದು?’ ಕೊಟ್ರೇಶಿ ಕೇಳಿದ.

‘ಬಿಜೆಪಿಗೆ ಬರಬಹುದು, ಇಲ್ಲಾಂದ್ರೆ ಕಾಂಗ್ರೆಸ್ಸು’ ತೆಪರೇಸಿ ನಕ್ಕ.

‘ಇದು ಹೇಳಾಕೆ ನೀನೇ ಆಗ್ಬೇಕಾ? ಹೋಗ್ಲಿ, ಮಂಜಮ್ಮನ ಸಾಲನ ನಮ್ ಗುಡ್ಡೆ ಯಾವಾಗ ತೀರಿಸ್ಬೋದು?’ ದುಬ್ಬೀರ ಕೇಳಿದ.

‘ಅದಾ... ಹವಾಮಾನ ವರದಿ ಪ್ರಕಾರ ಅಂಥ ಯಾವ ಲಕ್ಷಣಾನು ಕಾಣ್ತಾ ಇಲ್ಲ’.

‘ಲೇಯ್, ಇದು ಹವಾಮಾನ ವರದಿ ಅಲ್ಲ, ಅವಮಾನ ವರದಿ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT