ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಾರ್ಜಾಲ ಸಮಿತಿ

Last Updated 20 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಳಗ್ಗೆ ಪೇಪರು ಓದಲೆಂದು ಕನ್ನಡಕ ಹುಡುಕಿದರೆ ಎಲ್ಲೂ ಕಾಣಲಿಲ್ಲ. ಬೆಕ್ಕಣ್ಣ ನನಗಿಂತ ಮೊದಲೇ ಅದನ್ನು ಹಾಕಿಕೊಂಡು ಪೇಪರು ಹಿಡಿದು ಕೂತಿತ್ತು.

‘ನಿನಗೆದಕ್ಕೆ ಬೇಕು’ ಎಂದರೆ ‘ಮಾಸ್ಕ್ ಜೊತಿಗೆ ಕನ್ನಡಕನೂ ಹಾಕ್ಕಂಡ್ರೆ ಕೊರೊನಾ ಬರಂಗಿಲ್ಲಂತೆ’ ಎಂದು ಸುದ್ದಿಯನ್ನು ತೋರಿಸಿತು. ‘ಏನೇ ಹೇಳು... ಕಂಗನಕ್ಕ ಅಗದಿ ಭಯಂಕರ ಶಾಣೇ ಆಗ್ಯಾಳ. ಯಾವಾಗ, ಏನು ಮಾತಾಡಬೇಕು ಅಂತ ಗೊತ್ತೈತಿ. ಮೋದಿಮಾಮಂಗ ಎಷ್ಟ್ ಛಂದ ಬರ್ತ್ ಡೇ ಶುಭಾಶಯ ಹೇಳ್ಯಾಳ. ಆಕಿ ನೆಪೊಟಿಸಂ, ಡ್ರಗ್ಸ್ ಮಾಫಿಯಾ, ಭಯೋತ್ಪಾದನೆಯಿಂದ ಹಿಡಿದು ಪೈರಸಿ ಭಯೋತ್ಪಾದನೆವರೆಗೆ ಒಟ್ಟು ಎಂಟು ಥರಾ ಭಯೋತ್ಪಾದನೆ ಐತಿ ಅಂತ ಪಟ್ಟಿ ಮಾಡ್ಯಾಳ. ಹಿಂಗ ಹೇಳೂ ಧೈರ್ಯ ಬ್ಯಾರೆಯವ್ರಿಗೆ ಐತೇನು’ ಎಂದು ಹಾಡಿ ಹೊಗಳಿತು. ಪೇಪರು ಓದಿ ಮುಗಿಸಿ, ಘನಂದಾರಿ ಕೆಲಸವಿದ್ದವರಂತೆ ಲ್ಯಾಪ್ಟಾಪಿನಲ್ಲಿ ಮುಖ ಹುದುಗಿಸಿತು.

‘ನಮ್ಮ ಸಾವಿರಾರು ವರ್ಷದ ಮಾರ್ಜಾಲ ಸಂಸ್ಕೃತಿ ಅಧ್ಯಯನ ಮಾಡಕ್ಕೆ ಒಂದ್ ಸಮಿತಿ ರಚನಾ ಮಾಡೀವಿ. ಅಧ್ಯಯನ ಹೆಂಗ್ ಮಾಡೂದಂತ ನಿರ್ದೇಶನ ಬರಿಯಾಕ ಹತ್ತೇನಿ’ ಎಂದಿತು.

‘ಸಮಿತಿವಳಗ ಯಾರ‍್ಯಾರ ಮನೆ ಬೆಕ್ಕುಗಳು ಅದಾವು?’ ನನಗೆ ಕುತೂಹಲವುಕ್ಕಿತು.

‘ಒಂದ್ ಮೂರು ಶರ್ಮಾ ಮನ್ಯಾನ ಬೆಕ್ಕುಗಳು; ಎರಡು ಶುಕ್ಲಾರ ಮನೆ ಬೆಕ್ಕು; ದೀಕ್ಷಿತರು, ಪಾಂಡೆ, ಶಾಸ್ತ್ರಿ, ಮಿಶ್ರಾ, ಶ್ರೀವಾಸ್ತವ ಮನೆ ಬೆಕ್ಕು ಒಂದೊಂದು... ಇವು ಹತ್ತಾದವು. ಇನ್ನೊಂದು ನಾಕು ವಳ್ಳೆ ಮನೆಯ ಬೆಕ್ಕು ಸೇರಿಸಿ, ಸಮಿತಿ ಮಾಡೀವಿ’ ಎಂದಿತು. ಪಟ್ಟಿ ನೋಡಿದರೆ ಎಲ್ಲವೂ ಮಾಳ ಬೆಕ್ಕುಗಳೇ.

‘ಏನಲೇ ಇದು... ಸಮಿತಿವಳಗೆ ಒಂದೇ ಒಂದು ಹೆಣ್ಣು ಬೆಕ್ಕಿಲ್ಲ, ಬ್ಯಾರೆದವ್ರ ಮನೆ ಬೆಕ್ಕೂ ಇಲ್ಲ’ ಎನ್ನುತ್ತಿದ್ದ ನನ್ನ ಬಾಯಿ ಮುಚ್ಚಿಸಿ, ‘ಅವಕ್ಕೆಲ್ಲ ಏನ್ ಸಂಸ್ಕೃತಿ ಐತಿ... ನಮ್ಮಂದಿ ಮನೆಗಳ ಮಾಳ ಬೆಕ್ಕುಗಳೆ ಇಡೀ ಮಾರ್ಜಾಲ ಸಂಸ್ಕೃತಿಯನ್ನು ಛಲೋತ್ನಾಗೆ ಅಧ್ಯಯನ ಮಾಡಿ ಬರಿತಾವು’ ಎಂದು ಬಡಿವಾರ ಮಾಡುತ್ತ ಲ್ಯಾಪ್ಟಾಪ್ ಮುಚ್ಚಿ ಹೊರಗೋಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT