ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಕ್ಕಳಿರಲವ್ವಾ...

Last Updated 3 ಜೂನ್ 2021, 18:49 IST
ಅಕ್ಷರ ಗಾತ್ರ

‘ನಿನ್ನಿಂದ ಒಂದು ಹೆಲ್ಪ್ ಆಗ್ಬೇಕಿತ್ತಲ್ಲಾ’ ಅಂದ ಮಹದೇವನಿಗೆ, ‘ಅಪ್ಪಣೆಯಾಗಲಿ’ ಎಂದೆ. ‘ನೀನು ಡಿಪಾರ್ಟ್‌ಮೆಂಟ್‍ಗೆ ಸೇರೋಕೂ ಬಹಳ ಹಿಂದೆ, ಕುಟುಂಬ ನಿಯಂತ್ರಣ ಇಲಾಖೆ ಅಂತ ಇತ್ತು, ನೆನಪಿದೆಯಾ?’ ಅಂದ.

‘ಗೊತ್ತು, ಆ ಇಲಾಖೆಯ ಕೆಂಪು ತ್ರಿಕೋನ ಗುರುತಿರೋ ಜಾಹೀರಾತುಗಳು ಬಸ್ಸುಗಳಲ್ಲಿರ್ತಿದ್ವು. ತುಂಟ ಹುಡುಗರು ‘ನಾವಿಬ್ಬರು, ನಮಗಿಬ್ಬರೇ ಮಕ್ಕಳು’ ಸ್ಲೋಗನ್ನಿನಲ್ಲಿ ‘ನಮಗಿ’ ಅಕ್ಷರಗಳನ್ನು ಮತ್ತು ‘ಬ’ ಒತ್ತಕ್ಷರವನ್ನು ಕೆರೆದು ಹಾಕಿ ‘ಬರೇ ಮಕ್ಕಳು’ ಎಂದು ತಿದ್ದುತ್ತಿದ್ದರು’ ಎಂದೆ.

‘ಅದು ಬರೋಕ್ಕೆ ಮುಂಚೆ ‘ಒಂದು, ಎರಡು ಬೇಕು, ಮೂರು ಸಾಕು’ ಅನ್ನೋ ಜಾಹೀರಾತು ಬರ್ತಿತ್ತು. ಅದರ ಬೋರ್ಡುಗಳು, ಪಾಂಪ್ಲೆಟ್‍ಗಳು ಗೋಡೌನಿನಲ್ಲಿರಬಹುದು. ಸ್ಯಾಂಪಲ್ ಸಿಕ್ಕರೆ ತಂದ್ಕೊಡು’ ಎಂದ.

‘ನಮ್ಮ ಡಿಪಾರ್ಟ್‌ಮೆಂಟ್‌ನ ಹಳೇ ಕಸ ಇವನಿಗೇಕೆ?’ ಅಂದ್ಕೊಂಡು, ‘ಏನಪ್ಪಾ, ಗುಜರಿ ವ್ಯಾಪಾರಕ್ಕೆ ಇಳಿದಿದ್ದೀಯಾ?’ ಎಂದೆ. ‘ಇಲ್ಲ, ಚೀನಾದಲ್ಲಿ ಕುಟುಂಬ ನಿಯಂತ್ರಣ ಇಲಾಖೆಗೆ ಬೀಗ ಜಡಿದು, ಹೊಸತಾಗಿ ಕುಟುಂಬ ವಿಸ್ತರಣಾ ಇಲಾಖೆ ಆರಂಭಿಸ್ತಿದ್ದಾರಂತೆ. ಮೂವರು ಮಕ್ಕಳು ಮಾಡ್ಕೊಳ್ಳಿ ಅನ್ನೋ ಸಂದೇಶವಿರುವ ಸ್ಲೋಗನ್ನುಗಳು, ಪ್ರಚಾರ ಸಾಮಗ್ರಿಗಳನ್ನು ಮಾಡಿಕೊಡುವವರಿಗೆ ಭಾರಿ ಮೊತ್ತದ ಪ್ರೋತ್ಸಾಹಧನ ನೀಡ್ತಾರಂತೆ’, ಬಿಸಿನೆಸ್‍ಮನ್‍ ಸ್ಟೈಲಲ್ಲಿ ಪ್ರೆಸೆಂಟೇಶನ್‍ ಕೊಟ್ಟ.

‘ಚೀನಾ ಅಂದ ಮೇಲೆ ಹುಷಾರಾಗಿರು. ಕೋವಿಡ್‍ ಟೈಮಲ್ಲಿ ಬೇಕಾದಷ್ಟು ಜನ ಬಿಸಿನೆಸ್‍ ಕೊಲಾಬರೇಶನ್ ಅಂತ ಟೋಪಿ ಹಾಕ್ತಿದಾರೆ’ ಎಂದು ಬುದ್ಧಿ ಹೇಳಿದೆ.

ನಮ್ಮ ಮಾತುಕತೆ ನಡೆಯುತ್ತಿರುವಾಗಲೇ ‘ಅತ್ತಾರೆ ಅಳಲಿ, ಈ ಕೂಸು ನಮಗಿರಲಿ... ಮಕ್ಕಳಿರಲವ್ವಾ ಮನೆ ತುಂಬಾ...’ ಜನಪದ ಗೀತೆ ರೇಡಿಯೊದಲ್ಲಿ ಬಿತ್ತರವಾಗುತ್ತಿತ್ತು. ‘ಈ ಹಾಡನ್ನು ಚೈನೀ ಭಾಷೆಗೆ ಅನುವಾದ ಮಾಡಿಸಿ, ಹಾಡಿಸಿದರೆ ಮಹದೇವನ ಬಿಸಿನೆಸ್‍ ಹೆಚ್ಚಾಗಬಹುದು’ ಎಂದೆ. ‘ಮೊದಲು ಅವರ ಮನೆಯಲ್ಲಿ ಕೂಸೊಂದು ಅಳಲಿ. ನಿಮ್ಮ ಫ್ರೆಂಡ್‍ಗೆ ಮದುವೆಯಾಗಿ ಆಗ್ಲೇ ಐದು ವರ್ಷವಾಯಿತು’ ಎಂದಳು ಮಡದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT