ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಂಬಲ ಬೆಲೆ..

ಚುರುಮುರಿ
Published 15 ಏಪ್ರಿಲ್ 2024, 19:01 IST
Last Updated 15 ಏಪ್ರಿಲ್ 2024, 19:01 IST
ಅಕ್ಷರ ಗಾತ್ರ

‘ನೋಡ್ರಿ ಸಾ, ನಮ್ಮ ರೈತರ ಕತೆಯಾ. ಮೈಮುರಿಯ ದುಡಿದ್ರೂ ಸರಿಯಾಗಿ ಪ್ರತಿಫಲ ಬತ್ತಿಲ್ಲ’ ಅಂತಂದೆ ಪೇಪರಿನಲ್ಲಿ ರೈತರ ಕಷ್ಟಗಳನ್ನು ಓದಿ.

‘ರೈತರಿಗೆ ಅನುಕೂಲ ಆಗ್ಲಿ ಅಂತಲೇ ಅವರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡ್ತಿರದು ಕಲಾ. ಅವರ ಬೆನ್ನಿಗೆ ಬಲ ಬರಲಿ ಅಂತ ಸರ್ಕಾರ ಕೊಡೋ ಗೌರವ ಬೆಲೆ ಇದು!’ ವಿವರಿಸಿದರು.

‘ಸಾ, ಬೆಂಬಲ ಬೆಲೆ ಅನ್ನೋದು ಇನ್ನೆಲ್ಲೆಲ್ಲಿ ಹ್ಯಂಗೆಂಗೆ ಅದೆ?’ ವಿವರ ಕೇಳಿದೆ.

‘ನೋಡ್ಲಾ, ಸಾಹಿತಿ ಒಬ್ಬ ಬರೆದಿರೋ ಪುಸ್ತಕವ ಪ್ರಕಾಶಕ ಪ್ರಿಂಟು ಮಾಡಿದ್ಕೆ ರಾಯಧನ ಅಂತ ಕೊಡ್ತರಲ್ಲಾ ಅದು ಪುಸ್ತಕದ ಬೆಲೆ ಅಲ್ಲ. ಸಾಹಿತಿ ಸೊಂಟ ಬಗ್ಗಿಸಿ ಬರೆಯಕ್ಕೆ ಗೌರವದ ಬೆಂಬಲ ಬೆಲೆ ಕಯ್ಯಾ’ ತುರೇಮಣೆ ವಿಶ್ಲೇಷಣೆ ಮಾಡಿದರು.

‘ನೀವೇಳ್ತಿರದು ಯಂಗೆ ಅಂದ್ರೆ, ಕಾಲೇಜು ಮೇಷ್ಟ್ರು ಅತಿಥಿ ಉಪನ್ಯಾಸಕ ಅಂತ ಅಪಾಯಿಂಟಾಗಿ ಮೈಮುರಿಯ ದುಡೀಲಿ ಅಂತ ಕೊಡೋ ಜುಜುಬಿ ಕಾಸು ಮೇಷ್ಟ್ರಿಗೆ ಸಿಕ್ಕೋ ಬೆಂಬಲ ಬೆಲೆ ಅನ್ರಿ!’ ಅಂತ ತಿವಿದೆ.

‘ಬುದುವಂತಾಯ್ತಿದೀಯ ಕಲಾ!’ ಅಂತ ತುರೇಮಣೆ ಹೊಗಳಿದರು.

‘ಹಂಗಾದ್ರೆ ಸಾ, ಒಂದು ಪಕ್ಷ ಬುಟ್ಟು ಇನ್ನೊಂದಕ್ಕೆ ಸೇರುವಾಗ ರಾಜಕಾರಣಿಗಳಿಗೆ ಏನಾದ್ರೂ ಬೆಂಬಲ ಬೆಲೆ ಸಂದಾಯವಾಗಿರ
ತದಾ?’ ಅಂತ ಕೇಳಿದೆ.

‘ಪಾರ್ಟಿಯ ಒಳಗೆ ಇದ್ದುಕ್ಯಂದು, ಅಧಿಕಾರ ಸಿಕ್ಕಲಿಲ್ಲ ಅಂತ ಸಿಟುಗಂದು ಬೋದಾಡಿದ್ರೆ ಅದು ಭಿನ್ನಮತ, ಬಂಡಾಯ. ಅವರ ಯೇಗ್ತೇಗೆ ತಕ್ಕಂಗೆ ಕಾಸು-ಕರೇಮಣಿ ಇಸುಗಂದು ‘ವರಿಷ್ಠರ ಮಾತಿಗೆ ತಲೆಬಾಗಿದ್ದೇನೆ’ ಅಂತ ಸಬೂಬು ಹೇಳಕ್ಕುಲ್ವಾ! ಇದೇ ರಾಜಕೀಯದ ಬೆಂಬಲ ಬೆಲೆ. ಮತದಾರರ ಹೆಸರೇಳಿಕ್ಯಂದು ಪಕ್ಷ ಬುಟ್ಟು ಹೋಗುವಾಗ, ಪಕ್ಷಕ್ಕೆ ಬಂದಾಗ ಈಥರ ಒಳ್ಳೆ ಬೆಂಬಲ ಬೆಲೆ ಸಿಕ್ಕಿರತದೆ’ ತುರೇಮಣೆ ವಿವರ ಕೊಟ್ರು.

‘ಹಂಗಾರೆ ಜನಕ್ಕೆ ಸಿಕ್ಕದು ತೆಂಗಿನಕಾಯಿ ಚಿಪ್ಪು ಅನ್ನಿ!’ ಅಂತ ನನ್ನ ಟೀಕೆ ಸೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT