‘ನೀವೇನೇ ಹೇಳಿ, ಕಮಲಮ್ಮನ ಇಬ್ರೂ ಸೊಸೆಯಂದಿರು ಹಾಗೆ ಮಾಡಬಾರದಿತ್ತು…’ ಮಡದಿಯ ಮಾತಿಗೆ ಕಿವಿತೆರೆದ ತಿಂಗಳೇಶ.
‘ಏನಾಯ್ತೀಗ? ಅವರ ಮದುವೆಯಾಗಿ ಐದು ವರ್ಷ ಆಗಿಲ್ಲ’.
‘ಹೌದು, ಆಗಲೇ ತವರುಮನೆಗೆ ಹೊರಟು ನಿಂತಾರಂತೆ ನೋಡ್ರಿ…’
‘ಊರವರು ಒಪ್ಪಲಿಲ್ಲ ಅಂತ ಕಮಲಮ್ಮನ ಮಕ್ಕಳಿಬ್ಬರೂ ಮುಂಬೈಗೆ ಓಡಿಹೋಗಿ ಲವ್ ಮ್ಯಾರೇಜ್ ಮಾಡಿಕೊಂಡು ಸಂಸಾರ-ವ್ಯವಹಾರದಲ್ಲಿ ಸುಖವಾಗಿದ್ದರಲ್ಲ, ಈಗೇನು ಅತ್ತೆಸೊಸೆ ಕಿತ್ತಾಟ ಶುರುವಾಯ್ತಾ?’
‘ಇಲ್ರೀ… ಅತ್ತೆಸೊಸೆ ತಾಯಿಮಕ್ಕಳಂತೆ ಅನ್ಯೋನ್ಯವಾಗಿದ್ದಾರೆ. ಗಂಡಹೆಂಡತಿ ಕೂಡ ಹೊಂದಿಕೊಂಡಿದ್ದಾರೆ. ಮಾವಸೊಸೆ ನಡುವೆಯೂ ತಕರಾರಿಲ್ಲ’.
‘ಮತ್ತಿನ್ನೇನು… ಪಕ್ಕದ ಮನೆ ತೆನೆಯಕ್ಕ ಏನಾದರೂ ಹಚ್ಚಿಕೊಟ್ಟಳೇನು…?’
‘ಇರಬಹುದೇನೋ, ಕಮಲಮ್ಮ ಮತ್ತು ತೆನೆಯಕ್ಕ ಗೇಟ್ ಬಳಿ ನಿಂತು ಗಂಟೆಗಟ್ಟಲೆ ಮಾತಾಡ್ತಾರಂತೆ. ಇತ್ತೀಚೆಗೆ ಕಮಲಮ್ಮನ ಕುಟುಂಬದ ದೊಡ್ಡ ಉದ್ದಿಮೆ ಹೀನಾಯ ನಷ್ಟ ಅನುಭವಿಸಿದೆ. ಇದಕ್ಕೆಲ್ಲಾ ಅನ್ಯಜಾತಿ ಸೊಸೆಯಂದಿರ ಕಾಲ್ಗುಣವೇ ಕಾರಣ ಅಂತ ಚುಚ್ಚಿಕೊಟ್ಟಿರಬಹುದು’.
‘ಅದೇನೇ ಇರಲಿ, ದೊಡ್ಡ ಸೊಸೆಯ ಅಪ್ಪ ಸಿದ್ದಣ್ಣನಿಗಾಗಲೀ ಸಣ್ಣಸೊಸೆ ಅಪ್ಪ ಶಿವಪ್ಪನಿಗಾಗಲೀ ಬುದ್ಧಿ ಬೇಡವೇ… ಮಕ್ಕಳಿಗೆ ತಿಳಿ ಹೇಳಬೇಡವೇ?’
‘ಇದರಲ್ಲಿ ತವರುಮನೆಯವರ ಕುಮ್ಮಕ್ಕೇ ಹೆಚ್ಚಿದ್ದಂತಿದೆ. ಮೊನ್ನೆತಾನೇ ಮಗಳು ಸೋಮವ್ವನ ಖಾತೆಗೆ ಸಿದ್ದಣ್ಣ ಅದೆಷ್ಟೋ ಹಣ ದಾನನೋ ಅನುದಾನನೋ ಕೊಟ್ಟು ಹುರಿದುಂಬಿಸಿದ್ದಾನೆ. ಈ ವಿಷಯದಲ್ಲಿ ಶಿವಪ್ಪನದೂ ಎತ್ತಿದ ಕೈ!’
‘ಅದರಲ್ಲೇನಿದೆ ವಿಶೇಷ? ಅಪ್ಪಂದಿರು ತಮ್ಮ ಹೆಣ್ಣುಮಕ್ಕಳಿಗೆ ‘ಹಸ್ತ’ಲಾಘವ ನೀಡಿದ್ದಾರೆ ಅಷ್ಟೇ’.
‘ನೀವೂ ಹಾಗೇ ಇದ್ದೀರಿ, ಅಪ್ಪನ ಹಸ್ತದ ಪ್ರೀತಿಗೋ, ಅನುದಾನದ ಆಸೆಗೋ ಕಟ್ಟಿಕೊಂಡ ಗಂಡನನ್ನು ಬಿಟ್ಟರೆ ಹೇಗೆ?’
‘ತೌರೂರ ದಾರಿಯಲಿ ತೆಂಗುಗಳು ತಲೆದೂಗಿ, ಬಾಳೆಗಳು ತೋಳ ಬೀಸಿ: ಮಲ್ಲಿಗೆಯ ಮೊಗ್ಗುಗಳು ಮುಳ್ಳುಬೇಲಿಯ ವರಿಸಿ, ಬಳುಕುತಿರೆ ಹಸ್ತನಾಪುರ ದಾರಿ ತೋರಿ…’ ತಿಂಗಳೇಶನೊಳಗಿನ ಕವಿ ಜಾಗೃತನಾದ.
‘ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು, ಚೆಂದ ನಿನಗಾವುದೆಂದು- ನಮ್ಮೂರು ಕಮಲಾಪುರವೋ, ನಿಮ್ಮೂರು ಹಸ್ತನಾಪುರವೋ, ಚೆಂದ ನಿನಗಾವುದೆಂದು… ಹಸ್ತನಾಪುರವೇ ಸುಖವೆಂದು, ನಿಲ್ಲಿಸಿತು ಪ್ರೇಮ ಕೂಗಿ...’ ಮಡದಿ ಮುಂದುವರಿಸಿದಳು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.