ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸ್ವರ್ಗಭಾಷಾ ಕೈಪಿಡಿ!

Published : 6 ಸೆಪ್ಟೆಂಬರ್ 2024, 18:42 IST
Last Updated : 6 ಸೆಪ್ಟೆಂಬರ್ 2024, 18:42 IST
ಫಾಲೋ ಮಾಡಿ
Comments

‘ಹಲೋ ಪ್ರಾಣಿ… ಹೇಗಿದ್ದೀಯಾ? ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ…’ ಪ್ರಾಣಿ ಜೊತೆ ಮಾತುಕತೆಯಾ ಎಂದು ಗಾಬರಿ ಬೀಳಬೇಡಿ. ಪ್ರಾಣೇಶ, ಗೆಳೆಯರ ಬಾಯಲ್ಲಿ ಪ್ರೀತಿಯ ‘ಪ್ರಾಣಿ’ ಅರ್ಥಾತ್ ಮನುಷ್ಯಪ್ರಾಣಿ ಅಷ್ಟೇ. ಅಪಾರ ದೈವಭಕ್ತಿಯ ಈತ ಗೆಳೆಯರ ಪ್ರಾಣ ತಿಂದ ಮಾತ್ರಕ್ಕೆ ಪ್ರಾಣಿ ಆಗಬೇಕಿರಲಿಲ್ಲ. ಮಾತಾಡುವಾಗ ಮಹಾಪ್ರಾಣ ನುಂಗಿ ಅಲ್ಪಪ್ರಾಣಗಳನ್ನಷ್ಟೇ ಉದುರಿಸುವುದು ಕೂಡ ಪ್ರಾಣಿನಾಮಧೇಯಕ್ಕೆ ಕಾರಣವಾಗಿರಬಹುದು.

‘ಏನೋ ಇದೀನಿ… ಭೂಮಿಗೆ ಭಾರವಾಗಿ…’ ಪ್ರಾಣಿಯ ನಿರಾಶೆಯ ದನಿ ತಿಂಗಳೇಶನಿಗೂ ಬೇಸರ ತರಿಸಿತು.

‘ಹುಟ್ಟು ಹಬ್ಬದ ದಿನ ಯಾಕೋ ಹೀಗಂತೀಯಾ? ಏನಾಯ್ತೀಗ?’

‘ಇನ್ನೇನು ಅರುವತ್ತು ವರ್ಷ ಆಯ್ತು, ಶಿವ ಶಿವಾ ಅಂತ ಸ್ವರ್ಗದ ಕಡೆ ಮುಖ ಮಾಡೋಣ ಅಂದ್ರೆ… ಅದೇನೋ ಸಂಸ್ಕೃತ ಅಡ್ಡ ತಂದಾರಲ್ಲಪ್ಪಾ…’. ಮಹಾಪ್ರಾಣ ಉಚ್ಚಾರ ಅಂದ್ರೆ ಪ್ರಾಣಾನೇ ಬಿಡುವ ಈ ಪ್ರಾಣಿ ಇನ್ನು ಸಂಸ್ಕೃತ ಕಲಿಯೋದು, ಸ್ವರ್ಗ ಸೇರೋದು…

‘ಅಯ್ಯೋ ತಲೆ ಕೆಡಿಸಿಕೊಳ್ಳಬೇಡ. ಇನ್ನೇನು ಎಲ್ಲಾ ಕಡೆ ಸಂಸ್ಕೃತ ಕೋರ್ಸುಗಳು, ಮನೆಪಾಠ ಶುರುವಾಗುತ್ತವೆ. ‘ಸ್ವರ್ಗಭಾಷಾ ಕೈಪಿಡಿ’, ‘ಸ್ವರ್ಗಕ್ಕೆ ಮೂವತ್ತೇ ಮೆಟ್ಟಿಲು’, ‘ಸಂಸ್ಕೃತ ಭಾಷಾ- ಸ್ವರ್ಗಕ್ಕೆ ವೀಸಾ’, ‘ಸಂಸ್ಕೃತ ಕಲಿ- ಸ್ವರ್ಗಕ್ಕೆ ಜಿಗಿ’ ಪುಸ್ತಕಗಳು ಬರಬಹುದು’.

‘ಸ್ವರ್ಗದ ಆಸೆಯಿಂದ ನಾವು ತೀರ್ಥಯಾತ್ರೆ ಮಾಡಿದ್ದೆಲ್ಲಾ ವೇಸ್ಟ್ ಆಯ್ತು. ಈಗಿನ ಹುಡುಗರು ಬುದ್ಧಿವಂತರು ನೋಡು. ಹೈಸ್ಕೂಲಿನಲ್ಲೇ ಸಂಸ್ಕೃತ ಆಯ್ಕೆ ಮಾಡಿಕೊಂಡು ಸ್ಕೋರೂ ಮಾಡ್ತಾವೆ, ಸ್ವರ್ಗದ ದಾರಿನೂ ಕಾಣ್ತಾವೆ. ನಮ್ಮಪ್ಪ ಕನ್ನಡ ಓದ್ಸಿ ನರಕಕ್ಕೆ ಕೆಡವಿದ’.

‘ಆಗಿದ್ದಾಯ್ತು, ಹಿಂದಿನವರನ್ನು ದೂರುತ್ತಾ ದಿನ ದೂಡೋದಿಕ್ಕೆ ನೀನೇನೂ ಸರ್ಕಾರ ನಡೆಸುವವನಲ್ಲ. ಈಗಲಾದ್ರೂ ಪ್ರಯತ್ನ ಪಟ್ಟರೆ ‘ವೀಸಾ’ ಸಿಗಬಹುದು’.

‘ಅರುವತ್ತನೇ ವಯಸ್ಸಿನಲ್ಲಿ ಎಂಥದೋ ಪ್ರಯತ್ನ? ಈಗ ವಯಸ್ಸಿನ ಜೊತೆಗೆ ಬಿ.ಪಿ, ಶುಗರು ಎಲ್ಲವೂ ಏರುಗತಿಯಲ್ಲಿವೆ; ಆಯಸ್ಸೊಂದೇ ಇಳಿಮುಖಿ!’

‘ನೀನೀಗ ಹಿರಿಯ ನಾಗರಿಕ. ಬ್ಯಾಂಕ್ ಬಡ್ಡಿ ಅರ್ಧ ಪರ್ಸೆಂಟು ಏರಿಕೆಯಾಗಲಿದೆ, ಖುಷಿಪಡು!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT