ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕಿಚನ್‌ ಸೀಲ್‌ಡೌನ್

Last Updated 26 ಜೂನ್ 2020, 19:00 IST
ಅಕ್ಷರ ಗಾತ್ರ

‘ಲೇ, ಗಂಟೆ ಏಳಾಯ್ತು, ಇನ್ನೂ ಕಾಫಿ ಇಲ್ಲ, ಮೇಲೇಳೆ’ ಎಂದು ಪೇಪರ್ ತಿರುವುತ್ತಾ ಮಡದಿಗೆ ಕರೆದೆ. ಸದ್ದೇ ಇಲ್ಲ, ಮತ್ತೆ ಓದಿನಲ್ಲಿ ಮಗ್ನನಾದೆ. ‘ಲೇ! ಟೈಮ್ ಎಷ್ಟ್ ಗೊತ್ತಾ? ಎಂಟು ಗಂಟೆ. ಏನ್ ನಾಟ್ಕ ಮಾಡ್ತಿದ್ದೀಯ?’ ಸ್ವಲ್ಪ ರಾಂಗಾದೆ. ಆದ್ರೂ ನೋ ರಿಪ್ಲೈ.

ಪೇಪರ್ ಪಕ್ಕಕ್ಕಿಟ್ಟು ಕಿಚನ್ನಿಗೆ ಕಾಲಿಟ್ಟೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ರಸ್ತೆಗಳಲ್ಲಿ ಇದ್ದಂತೆ ಮೌನ. ಬೆಡ್‌ರೂಮ್‌ನಲ್ಲಿ ಬಗ್ಗಿ ನೋಡಿದೆ. ಪಿಪಿಇ ಕಿಟ್‌ನಿಂದ ಮೈಯನ್ನೆಲ್ಲಾ ಮುಚ್ಚಿಕೊಳ್ಳುವಂತೆ ರಗ್ಗನ್ನು ತಲೆಯಿಂದ ಕಾಲಿನವರೆಗೂ ಸುತ್ತಿಕೊಂಡು ಮಡದಿ ಮಲಗಿದ್ದಾಳೆ. ಅಲುಗಾಡಿಸಿದೆ, ಕಮಕ್- ಕಿಮಕ್ ಅನ್ನಲಿಲ್ಲ. ರಗ್ಗನ್ನು ಜೋರಾಗಿ ಎಳೆದೆ.

‘ಏನ್ರೀ ನಿಂ ರಗಳೆ’ ಪೊಲೀಸರ ಕೊರೊನಾ ಲಾಠಿ ಏಟಿನಂತಿತ್ತು ಧ್ವನಿ. ‘ಟೈಂ ಎಂಟಾಯ್ತು’ ಎಂದೆ ದೈನ್ಯದಿಂದ. ‘ಅದಕ್ಕೇನೀಗ?’ ಮತ್ತೊಂದು ಕೊರೊನಾ ಏಟು. ‘ಒಂದಾನೊಂದು ಕಾಲದಲ್ಲಿ ತಿಂಡಿ ತಿಂದು ಆಫೀಸ್‌ಗೆ ಹೋಗೋ ಟೈಂ ಆದ್ರೂ ಇನ್ನೂ ಕಾಫಿಯೂ ಗತಿ ಇಲ್ಲ’ ಅಂಗಲಾಚಿದೆ.

‘ಕಾಫಿಯೂ ಇಲ್ಲ, ತಿಂಡಿ-ತೀರ್ಥ ಯಾವುದೂ ಇಲ್ಲ. ಇಂದಿನಿಂದ ಕಿಚನ್ ಸೀಲ್‌ಡೌನ್’ ಎಂದಳು ಕಡ್ಡಿಮುರಿದಂತೆ. ‘ಹ್ಞಾಂ! ನೀಲ್ ಡೌನ್, ಲಾಕ್‌ಡೌನ್ ಗೊತ್ತು. ಇದ್ಯಾವುದೇ ಕಿಚನ್ ಸೀಲ್‌ಡೌನ್’ ಅಚ್ಚರಿಯಿಂದ ಕೇಳಿದೆ.

‘ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗಿರುವ ಸ್ಥಳಗಳನ್ನು ಸೀಲ್‌ಡೌನ್ ಮಾಡ್ತಾರಲ್ಲ. ಅಲ್ಲಿ ಯಾರೂ ಹೊರಗೆ ಹೋಗಂಗಿಲ್ಲ. ಏನು ಬೇಕೋ ಅದನ್ನ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರುಸ್ಕೋಬೇಕು ತಾನೇ? ಲಾಕ್‌ಡೌನ್ ಆದಾಗಿಂದ ಪ್ರತಿದಿನ ಮನೆಮಂದಿಗೆಲ್ಲ ಬೇಕು ಬೇಕಾದ್ದನ್ನೆಲ್ಲ ಮಾಡಿ ಮಾಡಿ ಸಾಕಾಗಿದೆ. ಅದಕ್ಕೇ ಇಂದಿನಿಂದ ಕಿಚನ್ ಸೀಲ್‌ಡೌನ್. ನನಗೆ ಕ್ವಾರಂಟೈನ್. ತಿಂಡಿ, ಊಟನೆಲ್ಲಾ ಆನ್‌ಲೈನ್‌ನಲ್ಲೇ ಆರ್ಡರ್ ಮಾಡಿ’ ಎಂದು ಖಂಡತುಂಡವಾಗಿ ಹೇಳಿ, ಮತ್ತೆ ರಗ್ಗಿನಿಂದ ಮುಖ ಮುಚ್ಚಿಕೊಂಡು ಮಲಗಿದಳು.

‘ಈ ಕೊರೊನಾ ಮಹಿಮೆಯಿಂದ ಇನ್ನೂ ಏನೇನೆಲ್ಲಾ ನೋಡಬೇಕಾಗಿದೆಯೋ’ ಎಂದು ಶಪಿಸುತ್ತಾ, ಟಿಫಿನ್‌ಗೆ ಆರ್ಡರ್ ಮಾಡಲು ಫೋನ್ ಎತ್ತಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT