ಗುರುವಾರ , ಆಗಸ್ಟ್ 11, 2022
21 °C

ಚುರುಮುರಿ: ಕೊರೊನಾ ನಾಟೌಟ್

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ನಮ್ಮ ಕೊಹ್ಲಿ ಹುಡುಗರು ಕಂಡೋರ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡೋ ಪರಿಸ್ಥಿತಿ ಬಂತಲ್ಲ ಅಂತ ಹೊಟ್ಟೆ ಉರಿಯುತ್ತಿದೆರೀ...’ ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಸುಮಿಗೆ ಸಂಕಟವಾಯ್ತು.

‘ಪಾಪ! ನಮ್ಮ ಸ್ಟೇಡಿಯಂನಲ್ಲಿ ಬೌಂಡರಿ ಬಾರಿಸುವ ಭಾಗ್ಯ ಅವರಿಗಿಲ್ಲ. ಬೇಕಾದ್ರೆ ಮನೆ ಕಾಂಪೌಂಡ್‍ನಲ್ಲಿ ಆಡಿಕೊಳ್ಳಬಹುದಷ್ಟೇ’ ಎಂದ ಶಂಕ್ರಿ.

‘ಕಾಂಪೌಂಡ್‍ನಲ್ಲಿ ಆಡೋಕೆ ಗೋಲಿ, ಬುಗುರಿ ಆಟ ಅಲ್ಲ. ದೊಡ್ಡ ಸ್ಟೇಡಿಯಂನಲ್ಲಿ ಚಪ್ಪಾಳೆ ತಟ್ಟುವ ಪ್ರೇಕ್ಷಕರ ಸಮ್ಮುಖದಲ್ಲಿ ಆಡೋ ಆಟ ಕ್ರಿಕೆಟ್...’

‘ಕ್ರಿಕೆಟ್ ಆಡಬೇಕೂಂದ್ರೆ ಫಾರಿನ್‍ಗೇ ಹೋಗಬೇಕೇನ್ರೀ?’ ಸುಮಿಗೆ ನೋವು.

‘ಹೌದು, ಮೊನ್ನೆ ಐಪಿಎಲ್ ಟೂರ್ನಿಯನ್ನು ಫಾರಿನ್ ಅಂಗಳದಲ್ಲಿ ಆಡಿಬಂದರು. ಕೊರೊನಾ ವೈರಾಣು ಚೆಂಡಿನಂತೆ ಉಂಡೆಯಾಗಿ, ಹಿಟ್‍ಮ್ಯಾನ್ ರೋಹಿತ್ ಶರ್ಮಾನ ಬ್ಯಾಟಿಗೆ ಸಿಕ್ಕಿದರೆ, ಬಿಡದೆ ಅರಬ್ಬಿ ಸಮುದ್ರಕ್ಕೆ ಬಾರಿಸಿಬಿಡುತ್ತಾನೆ, ಅಷ್ಟೊಂದು ರೋಷ ಬಂದಿದೆಯಂತೆ. ಬ್ಯಾಟಿಗೂ ಸಿಗಲ್ಲ, ಕ್ಯಾಚಿಗೂ ಸಿಗಲ್ಲ ಈ ಕೊರೊನಾ, ಇದನ್ನು ಔಟ್ ಮಾಡೋದು ಹೆಂಗೆ?’

‘ಪ್ಲೇಯರ್‌ಗಳೇನೋ ಫಾರಿನ್‍ಗೆ ಹೋಗಿ ಆಟ ಆಡಿಕೊಂಡು ಬರ್ತಾರೆ. ಅವರ ಅಭಿಮಾನಿ ಪ್ರೇಕ್ಷಕರನ್ನು ಫಾರಿನ್‍ಗೆ ಕರ್ಕೊಂಡು ಹೋಗೋರು ಯಾರು?’

‘ಹೋಗೋ ಕಡೆಗೆಲ್ಲಾ ಪ್ಲೇಯರ್‌ಗಳು ಬ್ಯಾಟು, ಬಾಲು ಹೊತ್ಗೊಂಡು ಪ್ರೇಕ್ಷಕರನ್ನೂ ಕರ್ಕೊಂಡು ಹೋಗಲು ಆಗಲ್ಲ. ಟಿ.ವಿ.ಯಲ್ಲಿ ಮ್ಯಾಚ್ ನೋಡಿಕೊಂಡು ಸಮಾಧಾನ ಮಾಡಿಕೊಳ್ಳಬೇಕಷ್ಟೇ’.

‘ಥರ್ಡ್ ಅಂಪೈರ್‌ಗಿಂಥಾ ಸುಪ್ರೀಮ್ ಆಗಿಬಿಟ್ಟಿದೆ ಕೊರೊನಾ. ಆಡಿದ್ದೇ ಆಟ, ಹೇಳಿದ್ದೇ ತೀರ್ಪು, ಅಪೀಲಿಗೂ ಅವಕಾಶವಿಲ್ಲ. ಹೀಗೇ ಆದರೆ ನಮ್ಮ ಸ್ಟೇಡಿಯಂಗಳು ಹುಲ್ಲುಗಾವಲು ಆಗಿಬಿಡ್ತವೆ. ಆಮೇಲೆ ಕ್ರಿಕೆಟ್ ಮಂಡಳಿ ಪಶುಪಾಲನೆ ಮಾಡಿಕೊಂಡು ಹೈನುಗಾರಿಕೆ ಆರಂಭಿಸೋ ಸ್ಥಿತಿ ಬಂದುಬಿಟ್ರೆ ಗತಿ ಏನ್ರೀ...?’

‘ಹಾಗೇನಾಗೊಲ್ಲ, ಹುಟ್ಟಿಸಿದ ದೇವ್ರು ಹುಲ್ಲು ಮೇಯ್ಸೋದಿಲ್ಲ, ಲಸಿಕೆ ಹಂಚಿ ಕೊರೊನಾವನ್ನು ಔಟ್ ಮಾಡ್ತೀವಿ ಅಂತ ಡೆಲ್ಲಿ ಅಂಪೈರ್ ಆಶ್ವಾಸನೆ ಕೊಟ್ಟಿದ್ದಾರೆ’ ಎಂದ ಶಂಕ್ರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು