ಬೆಕ್ಕಣ್ಣ ವಿಡಿಯೊ ನೋಡುತ್ತ ‘ಭಲೆ, ಭಲೆ’ ಎನ್ನುತ್ತ ಚಪ್ಪಾಳೆ ತಟ್ಟಿತು.
‘ನೋಡು… ಮೋದಿಮಾಮ ಉಕ್ರೇನಿಗೆ ರೈಲು ಹತ್ತಿ ಹೋಗ್ಯಾನೆ’.
‘ಭಾರತದಲ್ಲಿ ಐಷಾರಾಮಿ ರೈಲುಗಳನ್ನ ಬಿಟ್ಟರೆ ಉಳಿದ ರೈಲುಗಳ ಸ್ಥಿತಿಗತಿ ಕೇಳುವವರಿಲ್ಲ. ಪ್ರಧಾನಿ ಒಮ್ಮೆ ಕಾಲಿಟ್ಟಿದ್ದರಾದರೂ ಅವುಗಳ ‘ಭಾಗ್ಯ’ದ ಬಾಗಿಲು ತೆರೆಯುತ್ತಿತ್ತೋ ಏನೊ. ಹೋಗಲಿ ಬಿಡು, ವಿದೇಶದಾಗಾದ್ರೂ ರೈಲು ಹತ್ಯಾರಲ್ಲ’ ಎಂದು ಕಿಚಾಯಿಸಿದೆ.
‘ನೀ ಏನರೆ ಕೊಂಕು ಹೇಳಬ್ಯಾಡ. ರೈಲಿನೊಳಗೆ ಉಕ್ರೇನಿಗೆ ಭೇಟಿ ಕೊಟ್ಟ ನಮ್ಮ ದೇಶದ ಫಸ್ಟ್ ಪಿಎಂ’ ಎಂದು ಎದೆಯುಬ್ಬಿಸಿ ಹೇಳಿತು.
‘ವಿಮಾನದಾಗೆ ಹೋದ್ರೆ ರಷ್ಯಾ ಕ್ಷಿಪಣಿಗಳು ಯಾವಾಗ ಕೆಳಗೆ ಉರುಳಿಸ್ತಾವೆ ಗೊತ್ತಿಲ್ಲ. ಅದಕ್ಕೇ ಉಕ್ರೇನಿಗೆ ಹೋಗೋರೆಲ್ಲ ಬುಲೆಟ್ ಪ್ರೂಫ್ ರೈಲಲ್ಲೇ ಹೋಗ್ತಾರಲೇ. ನಮ್ಮ ಪಿಎಂ ಅಷ್ಟೇ ಅಲ್ಲ, ಅಮೆರಿಕದ ಪ್ರೆಸಿಡೆಂಟ್ ಬೈಡನ್ ಕೂಡ ಅದೇ ರೈಲಿನಾಗೆ ಹೋಗ್ಯಾನೆ’ ಎಂದೆ.
‘ಆದರೆ ಮೋದಿಮಾಮ ಅಲ್ಲಿ ಶಾಂತಿಮಂತ್ರ ಜಪಿಸಿ, ಗಾಂಧಿಯನ್ನ ನೆನಪು ಮಾಡ್ಯಾನೆ. ಬೈಡನ್ ಎಲ್ಲಿ ಅದನ್ನೆಲ್ಲ ಮಾಡ್ಯನೆ? ಕಳೆದ ತಿಂಗಳು ರಷ್ಯಾಕ್ಕೆ ಹೋದಾಗ, ಅಲ್ಲೂ ಪುಟಿನ್ ಕಿವಿ ಹಿಂಡಿ, ಹಿಂಗೆಲ್ಲ ಜಗಳ ಆಡಬೇಡ್ರಪಾ ಅಂದಾನೆ. ಮೊನ್ನೆ ಝೆಲೆನ್‌ಸ್ಕಿಗೂ ಅದ್ನೇ ಹೇಳ್ಯಾನೆ. ಅವರಿಬ್ಬರೂ ಮೋದಿಮಾಮನ ಮಾತು ಕೇಳಿ, ಶಸ್ತ್ರಾಸ್ತ್ರ ಕೆಳಗಿಡತಾರೆ’ ಬೆಕ್ಕಣ್ಣ ಯಾವುದೋ ಕನಸಿನಲ್ಲಿ ವಿಹರಿಸುತ್ತಿದ್ದಂತೆ ಹೇಳಿತು.
‘ಅವೆಲ್ಲ ರಾಜಕೀಯದ ಶಿಷ್ಟಾಚಾರ. ಇವರು ಹೇಳತಾರೆ, ಅವರೂ ತಲೆಯಾಡಿಸುತ್ತ ಕೇಳತಾರೆ. ಅಷ್ಟೇ… ಆಮೇಲೆ ತಮ್ಮ ಮನಸ್ಸಿಗೆ ಬಂದಂತೆ ಮಾಡತಾರೆ’ ಎಂದೆ.
‘ನಮ್ಮ ಗೋದಿ ಮೀಡಿಯಾ ಮಾತ್ರವಲ್ಲ, ಗ್ಲೋಬಲ್ ಮೀಡಿಯಾದವ್ರೂ ಇಂಡಿಯಾ ಪಿಎಂ ಉಕ್ರೇನ್ ವಿಸಿಟ್ ಹಿಸ್ಟಾರಿಕಲ್ ಅಂತ ಹಾಡಿ ಹೊಗಳ್ಯಾರೆ. ಇಂಗ್ಲಿಷ್ ಪೇಪರ್ ಓದು’ ಎಂದು ನನ್ನ ಮೂತಿಗೆ ತಿವಿಯಿತು.
‘ಇಂಡಿಯಾ ಪಿಎಂ ಅನ್ನಬ್ಯಾಡ… I.N.D.I.A. ಮೈತ್ರಿಕೂಟ ಅಂದುಕೋತಾರೆ!’
‘ಹೌದು, ಭಾರತದ ಪಿಎಂ ಅಂತನೇ ಬರೀಬೇಕಂತ ಗ್ಲೋಬಲ್ ಪತ್ರಿಕೆಗಳಿಗೂ ಕರಾರು ಹಾಕಬೇಕು’ ಬೆಕ್ಕಣ್ಣ ಗುರುಗುಟ್ಟಿತು.
‘ಅಂದಹಾಗೆ ಪಿಎಂ ಮಣಿಪುರ ವಿಸಿಟ್ ಯಾವಾಗಂತೆ?’ ಕೇಳಿದೆ.
ಬೆಕ್ಕಣ್ಣ ಉಸಿರೆತ್ತಲಿಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.