ವಾರದಿಂದ ನಾಪತ್ತೆಯಾಗಿದ್ದ ಮನೆಕೆಲಸದ ಮಂಗಳಾ ಬಂದಳು. ‘ಇಷ್ಟು ದಿನ ಎಲ್ಲಿ ಹೋಗಿದ್ದೆ ಮಂಗಳಾ? ಫೋನ್ ಮಾಡಿದ್ರೂ ರಿಸೀವ್ ಮಾಡ್ತಿರ್ಲಿಲ್ಲ...’ ಸುಮಿಗೆ ಸಿಟ್ಟು ಬಂದಿತ್ತು.
‘ಕಂಡೋರ ಮನೆಯ ಕಸಮುಸುರೆ ಕೆಲಸ ಮಾಡಿ ನನಗೂ ಸಾಕಾಗಿದೆ ಅಮ್ಮಾವ್ರೇ. ಮನೆ ಕೆಲಸಕ್ಕೆ ರಾಜೀನಾಮೆ ಕೊಡು ಅಂತ ನನ್ನ ಗಂಡ ಹೇಳ್ತಾವ್ನೆ...’ ಎಂದು ಸುಮಿಗೆ ಒಂದು ಪತ್ರ ಕೊಟ್ಟಳು ಮಂಗಳಾ.
‘ರಾಜೀನಾಮೆ ಪತ್ರನಾ?!’
‘ಅಲ್ಲಾ, ಲೀವ್ ಲೆಟರ್ ಅಮ್ಮಾವ್ರೆ, ಎಲೆಕ್ಷನ್ ಮುಗಿಯೋವರೆಗೂ ರಜೆ ಹಾಕಿದ್ದೀನಿ’.
‘ಎಲೆಕ್ಷನ್‍ನಲ್ಲಿ ನಿನಗೇನು ಕೆಲಸ?’
‘ಮಾರಮ್ಮನ ಜಾತ್ರೆ ಥರಾ ಅಪರೂಪಕ್ಕೆ ಎಲೆಕ್ಷನ್ ಬಂದೈತೆ, ನಾವೂ ಅದರಲ್ಲಿ ಸೇರಿಕೊಂಡು ಆನಂದಪಡೋದು ಬ್ಯಾಡ್ವಾ?’
‘ಚುನಾವಣೆ ಪ್ರಚಾರ ಮಾಡ್ತೀಯಾ?’
‘ಹೌದು, ಪಕ್ಷಗಳ ಸಮಾವೇಶಕ್ಕೆ ನಮ್ಮನ್ನು ಕರಕೊಂಡು ಹೋಗ್ತಾರೆ, ಹೋಗಿಬರಲು ಬಸ್ ವ್ಯವಸ್ಥೆ ಮಾಡ್ತಾರೆ, ಊಟ-ತಿಂಡಿ ಕೊಟ್ಟು ಕೈಗೆ ಐನೂರು, ಸಾವಿರ ಕೊಡ್ತಾರೆ, ಅದೃಷ್ಟವಿದ್ದರೆ ಬಿರ್ಯಾನಿ ಊಟವೂ ಸಿಗ್ತದೆ’.
‘ಸಮಾವೇಶಗಳು ದಿನಾ ಇರೊಲ್ಲ’.
‘ಇಲ್ಲದ ದಿನ ತಂಡ ಮಾಡ್‌ಕೊಂಡು ಮನೆಮನೆಗೆ ಹೋಗಿ ಪಾಂಪ್ಲೆಟ್ ಕೊಟ್ಟು ಪ್ರಚಾರ ಮಾಡ್ತೀವಿ, ಪಕ್ಷದವರು ಸೀರೆಗೀರೆ ಕೊಟ್ಟರೆ ಹಂಚ್ತೀವಿ, ಊಟ-ತಿಂಡಿ ಕೊಟ್ಟು ಒಬ್ಬೊಬ್ಬರಿಗೆ ದಿನಕ್ಕೆ ಐನೂರು, ಸಾವಿರ ಕೊಡ್ತಾರೆ, ಮುಖ್ಯವಾಗಿ ನಮಗೆ ಗೌರವ ಕೊಡ್ತಾರೆ’.
‘ನಿನ್ನ ಗಂಡನೂ ಪ್ರಚಾರಕ್ಕೆ ಬರ್ತಾನಾ?’
‘ಬರ್ತಾನೆ, ಹಳ್ಳಿಯಲ್ಲಿದ್ದ ಅತ್ತೆ, ಮಾವನನ್ನೂ ಕರೆಸಿಕೊಂಡು ಎಲೆಕ್ಷನ್ ಡ್ಯೂಟಿಗೆ ಸೇರಿಸಿದ್ದೀನಿ, ಎಲ್ರೂ ಸೇರಿ ದಿನಕ್ಕೆ ನಾಕೈದು ಸಾವಿರ ಸಂಪಾದನೆ ಮಾಡ್ತೀವಿ’.
‘ಒಳ್ಳೇ ಸಂಪಾದನೆ ಮಾಡ್ತಿದ್ದೀರಿ...’
‘ಎಷ್ಟು ಜನ ಬಂದರೂ ಸೇರಿಸಿಕೊಳ್ತೀವಿ, ಮನೆಯಲ್ಲಿ ಕಾಲ ಕಳೆಯೋ ಬದಲು ನನ್ನ ಜೊತೆ ನೀವೂ ಬನ್ನಿ, ಕೈ ತುಂಬಾ ಸಂಪಾದನೆ ಮಾಡಬಹುದು’ ಎಂದು ಹೇಳುತ್ತಾ ಮಂಗಳಾ ಹೊರಟಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.