ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಫ್ರಿಜ್ಜು, ಕುಕ್ಕರು!

Last Updated 24 ನವೆಂಬರ್ 2022, 19:31 IST
ಅಕ್ಷರ ಗಾತ್ರ

‘ಹಲೋ... ಏನಮ್ಮಾ ಸೊಸೆ, ಹೇಗಿದೀಯ?’

‘ಓ... ಏನತ್ತೆ ಇದ್ದಕ್ಕಿದ್ದಂತೆ ನಮ್ಮನ್ನ ನೆನಪಿಸ್ಕೊಂಡಿದೀರಾ? ಇವತ್ತೇನೋ ಕಾದಿದೆ ಅನ್ಸುತ್ತೆ...’

‘ಅದು ಆಮೇಲೆ ಹೇಳ್ತೀನಿ, ಎಲ್ರೂ ಹೇಗಿದೀರಾ?’

‘ನೀವು ನಮ್ಮನ್ನ ಮನೆಯಿಂದ ಹೊರಗಾಕಿದ ಮೇಲೆ ಎಲ್ರೂ ತಣ್ಣಗಿದೀವಿ. ಅಲ್ಲಿ ಡೆಲ್ಲೀಲಿ ಎಲ್ರೂ ಆರಾಮಾ?’

‘ನೀನು ಹೋದ ಮೇಲೆ ಇಲ್ಲಿ ನಾವೂ ತಣ್ಣಗಿದೀವಿ. ಡೆಲ್ಲಿಲೀಗ ಭಯಂಕರ ಚಳಿ, ವಾಯುಮಾಲಿನ್ಯ ಬೇರೆ. ಉಸಿರಾಡೋಕೂ ಕಷ್ಟ ಆಗ್ತಿದೆ’.

‘ಹುಷಾರು ಅತ್ತೆ, ಕಷ್ಟ ಆದ್ರೂ ಉಸಿರಾಡ್ತಿರಿ’.

‘ಉಸಿರಾಡದೆ ಇರ್ತೀನಾ? ನನ್ ಮಗನ್ನ ಬುಟ್ಟಿಗೆ ಹಾಕ್ಕಂಡ ನಿಂಗೊಂದು ದಾರಿ ಕಾಣಿಸದೆ ಬಿಡ್ತೀನಾ?’

‘ಹಳೆ ಸಿನಿಮಾಗಳ ರಮಾದೇವಿ ಕಾಲ ಹೋಯ್ತು ಅತ್ತೆ, ಈಗೆಲ್ಲ ಸೊಸೆಯಂದಿರ ಕಾಲ’.

‘ಮುಂದೆ ನೀನೂ ಅತ್ತೆ ಆಗಲ್ವ? ಆಗೇನ್ಮಾಡ್ತೀಯ?’

‘ಸೊಸೆಗೆ ಅಧಿಕಾರ ಕೊಡ್ತೀನಿ. ಡೆಲ್ಲೀಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಥರ ಕಿತ್ತಾಡಲ್ಲ. ಒಂದು ಮನೆ, ಒಬ್ರುದೇ ಅಧಿಕಾರ ಇರ್ಬೇಕು ಅಲ್ವ?’

‘ಅದ್ಕೇ ನಾನು ನಿನ್ನ ಹೊರಗಾಕಿದ್ದು’.

‘ನಂಗೂ ಬಿಡುಗಡೆ ಸಿಕ್ತು ಬಿಡಿ, ಅದಿರ್‍ಲಿ, ಏನಕ್ಕೆ ಫೋನ್ ಮಾಡಿದ್ದು? ನಿಮ್ಮ ಮಗ ಮನೇಲಿಲ್ಲ’.

‘ಅಯ್ಯೋ ಅವನಿಗಲ್ಲ, ನಿಂಗೇ ಮಾಡಿದ್ದು. ನಿಂಗೊಂದು ಗಿಫ್ಟ್ ಕಳಿಸೋಣ ಅಂತ. ನಿನ್ ಸೈಜಿನ ಒಂದು ಹಳೇ ಫ್ರಿಜ್ ಇದೆ, ಪಾರ್ಸಲ್ ಮಾಡ್ಲಾ?’

‘ಡೆಲ್ಲಿ ಫ್ರಿಜ್ ಅಂದ್ರೆ ಅರ್ಥ ಆಯ್ತು ಅತ್ತೆ, ನಮ್ಮನೇಲಿ ಒಳ್ಳೆ ಫ್ರಿಜ್ ಇದೆ. ಅದೇನೂ ಬೇಡ. ನಾನೂ ನಿಮಗೊಂದು ಗಿಫ್ಟ್ ಕಳಿಸ್ಲಾ ಅತ್ತೆ?’

‘ನನಗೆ ಗಿಫ್ಟಾ? ಏನು?’

‘ಇಲ್ಲಿ ಮಂಗಳೂರ್ ಕುಕ್ಕರು ಅಂತ ಒಂದು ಹೊಸ ಬ್ರ್ಯಾಂಡ್ ಕುಕ್ಕರ್ ಬಂದಿದೆ ಅತ್ತೆ, ಕಳಿಸ್ಲಾ?’

ಅತ್ತೆ ಪಿಟಿಕ್ಕೆನ್ನಲಿಲ್ಲ. ಫೋನ್ ಕಟ್ಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT