ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಉಪ್ಪಿಲ್ಲದ ಉಪ್ಪಿಟ್ಟು

Last Updated 25 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಪುಟ್ಟಿಯ ಸಂಭ್ರಮ ಹೇಳತೀರದು- ಒಂದು ಕಡೆ ಕಾಲೇಜುಗಳ ಪುನರಾರಂಭದ ಸುದ್ದಿ, ಮತ್ತೊಂದೆಡೆ ಟಿ.ವಿಯಲ್ಲಿ ಕ್ರಿಕೆಟ್ ವೀಕ್ಷಣೆ.

‘ಇದೇನೇ? ಸ್ಟೇಡಿಯಂನಲ್ಲಿ ಜನರೇ ಇಲ್ಲ? ಆದರೂ ಸದ್ದು ಎಷ್ಟು ಜೋರಾಗಿದೆ... ಹರ್ಷೋದ್ಗಾರ, ಕೇಕೆ ಮುಗಿಲುಮುಟ್ಟಿದೆ...?’ ಕ್ರಿಕೆಟ್ ಕಾಮೆಂಟರಿ ಶುರುಮಾಡಿದರು ಅತ್ತೆ.

‘ಅಜ್ಜಿ, ಕೊರೊನಾ ಭಯ, ಅದಕ್ಕೇ ಲೈವ್ ನೋಡೋಕ್ಕೆ ಜನರಿಲ್ಲ- ಫೇಕ್ ಸೌಂಡ್- ಆಟಗಾರರಿಗೆ ಪ್ರೋತ್ಸಾಹ ಕೊಡುತ್ತೆ, ನೇರ ನೋಡಲಾಗದಿದ್ದರೇನಂತೆ ಟೀವಿಲಿ ನೋಡಬಹುದಲ್ಲ?’

‘ಟೀವಿ ಷೋಗಳಲ್ಲಿ ಹಾಸ್ಯದ ಹೆಸರಲ್ಲಿ ಅಪಹಾಸ್ಯ, ಒಣಹಾಸ್ಯವಿದ್ದರೂ ಹಿನ್ನೆಲೆಯಲ್ಲಿ ನಗುವಿನ ಅಲೆ, ಚಪ್ಪಾಳೆ ಕೇಳುತ್ತಲ್ಲಾ ಹಾಗೆ...’ ವಿವರಿಸಿದೆ.

‘ಅದೂ ಸರಿ, ಒಂಥರಾ ಭ್ರಾಮಕ ಲೋಕ... ನೇರ ನೋಡಲಿ ಎಂದು ನಾನು ಆಡುವುದಿಲ್ಲ, ಆಡುವುದು ಅನಿವಾರ್ಯ ಕರ್ಮ ನನಗೆ ಅನ್ನೋ ಹಾಗೆ... ಇರಲಿ’ ರಾಗವೆಳೆದರು ಅತ್ತೆ.

‘ಕ್ರಿಕೆಟ್ ಅಂದ್ರೆ ಅದೇನು ಹುಚ್ಚೋ? ಟೀವಿಗೆ ಅಂಟಿಕೊಂಡಿರ್ತೀರಿ? ನಿಮ್ಗಳಿಗೆ ಟೈಮ್ ಟೈಮ್‌ಗೆ ಸರಿಯಾಗಿ ತಿಂಡಿ ತೀರ್ಥ ನೀವಿರೋ ಕಡೆ ಒದಗಿಸೋ ಹೊತ್ಗೆ ಕುತ್ಗೆಗೆ ಬರುತ್ತೆ... ನಿನ್ನೆ ನಿಮ್ ಗೆಳೆಯ ಕಂಠಿ, ಕ್ರಿಕೆಟ್ ನೋಡೋ ಸಂಭ್ರಮದಲ್ಲಿ ಮಾಸ್ಕ್ ತೆಗೆಯೋದನ್ನೂ ಮರೆತು ಬಿಸಿ ಕಾಫಿ ಕುಡಿಯೋಕ್ಕೆ ಹೋಗಿ ಅವಾಂತರ ಮಾಡಿಕೊಂಡರಂತೆ’.

‘ಗೊಡ್ಡು ಸಾರು ಮಾಡಿದರೂ ಸಲೀಸಾಗಿ ಇಳಿಯುತ್ತೆ, ಇದನ್ನು ನೋಡಿ ಅದೇನ್ ಗುಡ್ಡೆ ಹಾಕ್ತಾರೋ, ಕ್ರಿಕೆಟ್ ಅಂದ್ರೆ ಕಿರಿಕಿರಿ ಅಂತ ಶ್ರೀಮತಿ ಬೇಸರಿಸಿಕೊಂಡಳು’ ನನ್ನವಳ ಪಿರಿಪಿರಿ.

‘ನೀವು ಚೂಯಿಂಗ್ ಗಮ್ ಹಾಗೆ ಎಳೆಯೋ ಧಾರಾವಾಹಿ ನೋಡೋಲ್ವ?’ ಪುಟ್ಟಿ ನಮ್ಮ ಪರ ಬ್ಯಾಟಿಂಗ್ ಮಾಡಿದಳು.

‘ಉಪ್ಪಿಲ್ಲದ ಉಪ್ಪಿಟ್ಟು ಕೊಟ್ಟರೂ ಉಸಿರೆತ್ತದೆ ನಾವೂ ತಿಂತೀವಲ್ಲ?’ ಬೆಳಗಿನ ತಿಂಡಿಯನ್ನು ನೆನಪಿಸಿಕೊಂಡು ಸಪ್ಪಗೆ ಉಲಿದೆ.

‘ಬಿ.ಪಿ ಕಂಟ್ರೋಲ್‌ನಲ್ಲಿ ಇರಲಿ ಅಂತ ಹಾಗೆ ಮಾಡಿದ್ದು, ಹಾಕೋಕ್ಕೆ ಮರೆತಿದ್ದೆ ಅಂದುಕೊಂಡ್ರೆ ಅದು ನಿಮ್ಮ ಭ್ರಮೆ’ ಬಾಯಿ ಮುಚ್ಚಿಸಿದಳು, ಬಿದ್ದರೂ ಮೀಸೆ ಮಣ್ಣಾಗದಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT