ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸರ್ಕಾರದ್ದೇ ವ್ಯವಸ್ಥೆ?

Published 9 ಮಾರ್ಚ್ 2024, 1:15 IST
Last Updated 9 ಮಾರ್ಚ್ 2024, 1:15 IST
ಅಕ್ಷರ ಗಾತ್ರ

ಚಟ್ನಿಹಳ್ಳಿಯಲ್ಲಿ ಶಾಸಕರು ಗೋಶಾಲೆ ಉದ್ಘಾಟಿಸಿದರು. ದನಕರುಗಳನ್ನು ಗೋಶಾಲೆಗೆ ಸೇರಿಸಲು ರೈತರು ಮುಗಿಬಿದ್ದರು. ಜನಜಂಗುಳಿಗೆ ಹೆದರಿದ್ದ ದನಗಳನ್ನು ಬಲವಂತವಾಗಿ ಎಳೆದು ಕೊಂಡು ಹೋಗಿ ಗೋಶಾಲೆಗೆ ಬಿಟ್ಟರು. ಗಾಬರಿಯಾಗಿದ್ದ ದನಗಳು ‘ಅಂಬಾ...’ ಎನ್ನುತ್ತಾ ಗೋಶಾಲೆಯಲ್ಲಿ ಗದ್ದಲ ಮಾಡಿದವು. ಶಿವಲಿಂಗನ ಎತ್ತು ಹಗ್ಗ ಕಿತ್ತುಕೊಂಡು ಓಡಿಹೋಯಿತು. ಊರ ತುಂಬಾ ಓಡಾಡಿದ ಎತ್ತನ್ನು ಹಿಡಿದು ತಂದು ಗೋಶಾಲೆಯಲ್ಲಿ ಬಿಟ್ಟ.

ಹಸುವನ್ನು ಗೋಶಾಲೆಗೆ ಸೇರಿಸಿದ ತಿಮ್ಮಜ್ಜಿ, ‘ಪುಣ್ಯಕೋಟಿಯಂಥಾ ನಮ್ಮ ಹಸು... ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ...’ ಅಂತ ಇತರ ದನಗಳನ್ನು ಬೇಡಿಕೊಂಡಳು.

‘ತಂಟೆ ದನಗಳು ನಮ್ಮ ಹಸುವನ್ನು ಹಾಯದಂತೆ, ತಿವಿಯದಂತೆ ನೋಡಿಕೊಳ್ಳಿ’ ತಿಮ್ಮಜ್ಜ ಶಾಸಕರಿಗೆ ಮನವಿ ಮಾಡಿದ.

‘ತಂಟೆ, ತಕರಾರು ಮಾಡುವ ದನಗಳನ್ನು ಟಿ.ಸಿ. ಕೊಟ್ಟು ಆಚೆ ಹಾಕ್ತೀವಿ. ಡೊನೇಷನ್ ಕೊಟ್ಟು ಖಾಸಗಿ ಗೋಶಾಲೆಗೆ ಸೇರಿಸಿಕೊಳ್ಳಿ’ ಶಾಸಕರು ಖಡಕ್ಕಾಗಿ ಹೇಳಿದರು.

‘ಗೋಶಾಲೆ ದನಗಳಿಗೂ ಅಕ್ಷರ ಕಲಿಸು
ವಂತಿದ್ದರೆ ನಮ್ಮ ಹಸುವೂ ವಿದ್ಯಾವಂತ ಆಗುತ್ತಿತ್ತು’ ಅಂದ ಗೋಪಾಲಿ.

‘ಮೇವು ತಿನ್ನುವ ಸ್ಪರ್ಧೆಯಾದರೂ ಏರ್ಪಡಿಸಿ, ಗೆಲ್ಲುವ ದನಗಳ ಮಾಲೀಕರಿಗೆ ಬಹುಮಾನ ಕೊಡಿ’ ಕೆಂಪಣ್ಣ ಕೇಳಿಕೊಂಡ.

‘ವರ್ಷದಿಂದ ಮುಚ್ಚಿರುವ ನಮ್ಮೂರಿನ ಮಕ್ಕಳ ಶಾಲೆ ತೆರೆಯಿರಿ ಸಾರ್’ ಅಂದ ಸೀನಪ್ಪ.

‘ಮಕ್ಕಳನ್ನೆಲ್ಲಾ ನೀವು ಖಾಸಗಿ ಶಾಲೆಗೆ ಸೇರಿಸಿದ್ದೀರಿ, ಶಾಲೆ ತೆರೆಯಲು ಮಕ್ಕಳು ಬೇಕಲ್ವಾ?’ ಅಂದರು ಶಾಸಕರು.

‘ಬಿಸಿಯೂಟ, ಯೂನಿಫಾರಂ ಕೊಟ್ಟರೆ ಸಾಕೆ? ಶಾಲೆಗೆ ಮಕ್ಕಳನ್ನೂ ಸರ್ಕಾರವೇ ವ್ಯವಸ್ಥೆ ಮಾಡಬೇಕು’ ಮಲ್ಲೇಶಿ ಒತ್ತಾಯಿಸಿದ.

‘ರೈತರ ಮಕ್ಕಳು ಮದ್ವೆಯಾಗಲು ಹೆಣ್ಣು ಕೊಡಿಸಿ ಅಂತ ಸರ್ಕಾರವನ್ನೇ ಕೇಳ್ತೀರಿ, ಶಾಲೆಗೆ ಮಕ್ಕಳನ್ನೂ ಸರ್ಕಾರವೇ ಕೊಡಬೇಕು ಅಂದ್ರೆ ಹೆಂಗ್ರಲಾ?’ ಕೋಪಗೊಂಡ ಶಾಸಕರು ಕಾರು ಹತ್ತಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT