ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅದೃಷ್ಟದ ಭೂಮಿ

Last Updated 28 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹೋದ ತಿಂಗಳು ಬೆಕ್ಕಣ್ಣ ‘ನಿನ್ನ ಚುರು ಮುರಿವಳಗ ನಾನೇ ಮುಖ್ಯಪಾತ್ರ ಅಂದ್ರ ನಾನೂ ಸಹಲೇಖಕ... ನಾನೂ ಸಾಯಿತಿ ಹೌದಿಲ್ಲೋ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೂ ಸ್ಪರ್ಧಿಸತೀನಿ’ ಎಂದು ದುಂಬಾಲು ಬಿದ್ದಿತ್ತು.

‘ಅದಕ್ಕ ಲಕ್ಷಗಟ್ಟಲೆ ರೊಕ್ಕ ಬೇಕು, ಸಂಘಟನಾ ಚಾತುರ್ಯ ಬೇಕು, ನಿನಗೆಲ್ಲೈತಿ ಅದೆಲ್ಲ’ ಎಂದು ಬೈದು ಸುಮ್ಮನಾಗಿಸಿದ್ದೆ.

ಕಳೆದ ವಾರ ‘ನನಗ ಒಂದು ದೊಡ್ಡ ಶಂಖ ತರಿಸಿಕೊಡು. ಎಲ್ಲಾ ಕಡಿಗಿ ಚುನಾವಣೆ ಪ್ರಚಾರ ಶಂಖ ಊದಾಕೆ ನಾನೊಬ್ಬನೇ ಹೋಗಬೇಕಂತ ಕುಮಾರಣ್ಣ ಅಳಾಕಹತ್ಯಾನ. ನಾ ಅವಂಗ ಸಹಾಯ ಮಾಡತೀನಿ’ ಅಂತ ವರಾತ ಹಚ್ಚಿತ್ತು.

ಇವತ್ತು ‘ನಿನ್ನ ಹತ್ರ ರೊಕ್ಕ ಎಷ್ಟೈತಿ’ ಅಂತ ಬೆಕ್ಕಣ್ಣ ಕೇಳಿದಾಗ, ಇದೇನೋ ಹೊಸ ಪ್ಲಾನ್ ಹಾಕ್ತಿದೆ ಎನ್ನಿಸಿ ಸ್ವಲ್ಪ ಚುರುಕಾದೆ.

‘ತಿಂಗಳ ಕೊನಿ... ನನ್ ಕೈ ಖಾಲಿ. ನಿನಗೆ ಕೊಟ್ಟಿದ್ದ ಪಾಕಿಟ್ ಮನಿವಳಗ ಉಳಿದಿದ್ದರೆ ಕೊಡು, ತರಕಾರಿ ತರಾಕ ಬೇಕು’ ಎಂದು ನಾನೇ ಮೊದಲು ದುಡ್ಡು ಕೇಳಿದೆ.

‘ಹಂತಾ ಚಿಲ್ಲರೆ ಕಾಸಲ್ಲ. ಬ್ಯಾಂಕಿನಾಗೆ, ಬಚ್ಚಲು ಮೋರಿ ಪೈಪಿನಾಗೆ, ಕಪಾಟಿನಾಗೆ, ಅಲ್ಲಿ ಇಲ್ಲಿ ಎಷ್ಟು ರೊಕ್ಕ ಮುಚ್ಚಿಟ್ಟಿದ್ದಿ ಅಂತ’.

‘ನಾ ಏನ್ ನೀರಾವರಿ ಇಲಾಖೆ ಎಂಜಿನಿಯರ್ ಏನು ಹಂಗ ಲಕ್ಷಗಟ್ಟಲೆ ರೊಕ್ಕ ಮುಚ್ಚಿಡಾಕೆ... ನಮ್ಮಂಥೋರ ಹತ್ರ ತಿಂಗಳ ಕೊನಿಗಿ ತರಕಾರಿ, ಪೆಟ್ರೋಲಿಗೆ ರೊಕ್ಕ ಇರಂಗಿಲ್ಲ. ಅದ್ಯಾರೋ ಎಂಜಿನಿಯರ‍್ರು ಎಂಟ್ಹತ್ತು ಕೆಜಿ ಬಂಗಾರ, 28 ಮನಿ ಮಾಡ್ಯಾನಂತೆ, ಅಂಥೋವ್ರಿಗೆ ಹೋಗಿ ಕೇಳು. ಅದ್ಸರಿ, ನಿನಗ್ಯಾಕಲೇ ಈಗ ರೊಕ್ಕ?’ ಎಂದೆ.

‘ಕೇತಗಾನಹಳ್ಳಿವಳಗ ಭೂಮಿ ತಗಂಡ್ ಮ್ಯಾಲೇ ದೇಗೌಡಜ್ಜಾರು ಸಿಎಮ್ಮು, ಪಿಎಮ್ಮು ಆದರು ಅಂತ ಕುಮಾರಣ್ಣ ಹೇಳ್ಯಾನ. ಅದಕ್ಕ ನಾನೂ ಅಲ್ಲಿ ಒಂದ್ ಗುಂಟೆ ಜಾಗ ತಗಳತೀನಿ. ಸಿಎಮ್ಮು, ಪಿಎಮ್ಮು ಅಲ್ಲದಿದ್ದರೂ ಅಂತರ
ರಾಷ್ಟ್ರೀಯ ಮಾರ್ಜಾಲ ಸಂಘದ ಅಧ್ಯಕ್ಷನಾರೂ ಆಗತೀನಿ’ ಎಂದು ಮೆತ್ತಗೆ ಹೊಸ ಯೋಜನೆ ಬಿಚ್ಚಿಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT