ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷತ್ರ ಸರೀಗಿಲ್ಲ...

Last Updated 11 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಕ್ಕಣ್ಣ ಲೊಚ್ ಲೊಚ್ ಎನ್ನುತ್ತ ಕೂತಿತ್ತು.

‘ವಳ್ಳೆ ಹಲ್ಲಿ ಹಂಗೆ ಲೊಚ್ ಅನ್ನಾಕಹತ್ತೀಯಲ್ಲ... ಏನಾತು’ ಎಂದು ಕಾಳಜಿಯಿಂದ ಕೇಳಿದೆ.

‘ಪಾಪ... ಟ್ರಂಪಣ್ಣಂಗ ಹೀಂಗ ಆಗಬಾರದಿತ್ತು...’ ಎಂದು ಮತ್ತೆ ಲೊಚಗುಟ್ಟಿತು.

‘ಅವನಿಗೇನಾಗೈತಿ... ಛಲೋನೆ ಅದಾನಲ್ಲ. ಕೊರೊನಾ ಬಂದ್ರೂ ಅವನ ಬಾಯಿಗಿ ಅಂಜಿ ಓಡಿಹೋಗೈತಿ, ಅಂವಾ ಆರಾಮಾಗ್ಯಾನ’ ಎಂದೆ.

‘ಅಂವನ್ನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ರಂತ. ತನಗೇ ಬರ್ತದಂತ ಎಷ್ಟ್ ಖುಷಿಖುಷಿಯಾಗಿ ಹರೇದ ಹುಡುಗನಂಗ ಕುಣಿದಾಡಿಕೊಂಡಿದ್ದ. ನೊಬೆಲ್ ಸಮಿತಿಯವರು ಹೀಂಗ ಮಾಡಬಾರದಿತ್ತು’ ಎಂದಿತು.

‘ಅಂವ ಏನು ಕಡಿದು ಶಾಂತಿ ಗುಡ್ಡೆ ಹಾಕ್ಯಾನಂತ ಕೊಡ್ತಾರ... ಅಂವಾ ಬಾಯಿಬಿಟ್ಟರೆ ಅಶಾಂತಿ’ ಎಂದು ನಾನು ಕಾಲೆಳೆದೆ. ‘ಮತ್ತ ನಿಮ್ಮ ಒಬಾಮಾ ಏನು ಗುಡ್ಡೆ ಹಾಕಿದ್ನಂತ ಅಂವ ಪ್ರೆಸಿಡೆಂಟ್ ಆದ ಆರು ತಿಂಗಳಿಗೇ ಕೊಟ್ಟಿದ್ರು?’ ಎಂದು ಬೆಕ್ಕಣ್ಣ ಹಂಗಿಸಿತು.

‘ಎಲ್ಲಾ ಬಿಟ್ಟು ವಿಶ್ವಸಂಸ್ಥೆ ಆಹಾರ ಕಾರ್ಯಕ್ರಮಕ್ಕೆ ಕೊಟ್ಟಾರಂದ್ರ ಇಡೀ ವಿಶ್ವವೇ ಸೇರಿ ಟ್ರಂಪಣ್ಣನ ವಿರುದ್ಧ ಪ್ಲಾಟ್ ಹಾಕ್ಯಾರ. ಯೋಗಿಮಾಮನೂ ಹೇಳ್ಯಾನ ಕೇಳಿಯಿಲ್ಲೋ... ಹಾಥರಸ್‌ ಕೇಸ್ ಎಲ್ಲ ಬರೀ ಸುಳ್ಳು... ಇಂಟರ್‌ ನ್ಯಾಷನಲ್‌ ಪ್ಲಾಟ್ ಹಾಕ್ಯಾರಂತ’ ಬೆಕ್ಕಣ್ಣ ವಾದಿಸಿತು.

‘ಬರೀ ಇಂಟರ್‌ನ್ಯಾಷನಲ್‌ ಅಲ್ಲಲೇ... ಇಂಟರ್‌ಗೆಲಾಕ್ಸಿ ಪ್ಲಾಟ್ ಹಾಕಿರಬಕು. ಮಂಗ್ಯಾನಂತವ್ನೆ.... ಅಪರಾಧ ಮುಚ್ಚಲಿಕ್ಕೆ ಇವ್ರು ಪ್ಲಾಟ್ ಹಾಕ್ಯಾರಷ್ಟೆ’ ಎಂದು ಬೈದೆ.

‘ಖರೇ ಇಂಟರ್‌ಗೆಲಾಕ್ಸಿ ಅಥವಾ ಇಂಟರ್‌ಸ್ಟಾರ್ ಪ್ಲಾಟ್ ಇರಬಕು... ಇಲ್ಲದಿದ್ರ ಉತ್ತರಪ್ರದೇಶದಾಗೆ ಮಾತ್ರ ಎದಕ್ಕ ದಲಿತ ಹೆಣ್ಣಮಕ್ಕಳ ಮ್ಯಾಗ ಹೆಚ್ಚು ದೌರ್ಜನ್ಯ ನಡೀತದ? ಒಟ್ಟು ಯೋಗಿಮಾಮನ ನಕ್ಷತ್ರ ಸರೀಗಿಲ್ಲ’ ಬೆಕ್ಕಣ್ಣ ಮತ್ತೆ ಅಲವತ್ತುಕೊಂಡಿತು.

‘ಕೊರೊನಾಕೆ ಮದ್ದಿಲ್ಲ, ಮಾಸ್ಕ್ ಹಾಕ್ಕೋರಿ, ಮನುಷ್ಯಪ್ರಾಣಿಗಳಿಂದ ದೂರನೇ ಇರ‍್ರಿ ಅಂತ ಮಾರ್ಜಾಲಾಂದೋಲನ ಮಾಡಾಕಹತ್ತೀವಿ, ಅದಕ್ಕ ಹೊಂಟೀನಿ’ ಎನ್ನುತ್ತ ಬೆಕ್ಕಣ್ಣ ಮಾಸ್ಕ್ ಮೂಗಿಗೇರಿಸಿ ಹೊರಗೋಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT