ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಸುದ್ದಿ ಯಾವುದು?

Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಕ್ಕಣ್ಣ ಪೇಪರಿನ ಮುಖಪುಟದಲ್ಲಿ ಮೇಲುಗಡೆ ಇದ್ದ ಜಾಹೀರಾತನ್ನು ನೋಡುತ್ತಿತ್ತು.

‘ನೋಡಿಲ್ಲಿ… ಮೋದಿಮಾಮನ ಸರ್ಕಾರದ ಗ್ಯಾರಂಟಿ! ಈ ಹತ್ತು ವರ್ಸದಾಗೆ ಕೃಷಿ ಬಜೆಟ್‌ ಐದು ಪಟ್ಟು ಹೆಚ್ಚಾಗೈತಿ. ಒಂದು ಲಕ್ಷ ಕೋಟಿ ರೂಪಾಯಿ ಅಂದರೆ ಒಂದರ ಮುಂದೆ ಎಷ್ಟು ಸೊನ್ನೆ ಲೆಕ್ಕಹಾಕು… ಅಷ್ಟ್‌ ರೊಕ್ಕ ಕೃಷಿಗೆ ಸಾಲ ಕೊಟ್ಟಾರೆ. ಖರೇ ನಮ್‌ ಮೋದಿಮಾಮ ಬಂದ್‌ ಮ್ಯಾಗೆ ರೈತ್ರ ಬಾಳು ಬಂಗಾರ ಆಗೈತಿ!’ ಎಂದು ಉದ್ಗರಿಸಿತು.

‘ಅಲ್ಲಲೇ… ಬರೇ ಜಾಹೀರಾತು ನೋಡಾಕೆ ಹತ್ತೀಯಲ್ಲ… ಅಲ್ಲೇ ಕೆಳಗಿರೋ ಸುದ್ದಿ ನೋಡು. ಪ್ರತಿಭಟನೆ ಮಾಡ್ತಿದ್ದ ರೈತರ ಮ್ಯಾಗೆ ರಬ್ಬರ್‌ ಗುಂಡು, ಅಶ್ರವಾಯು, ಲಾಠಿಚಾರ್ಜು… ಒಬ್ಬ ರೈತ ಸತ್ತಾನಂತ’.

‘ನಿಜವಾದ ರೈತ್ರು ಹೊಲದಾಗೆ ಗೇಯೂದು ಬಿಟ್ಟು, ಹೋರಾಟ ಮಾಡಾಕೆ ಬರ್ತಾರೇನು? ಅವರೆಲ್ಲ ಖಲಿಸ್ತಾನಿವಾದಿಗಳಂತೆ’ ಎಂದು ಬೆಕ್ಕಣ್ಣ ಉಡಾಫೆಯಿಂದ ಹೇಳಿತು.

‘ಬಾಳು ಖರೇಖರೇ ಬಂಗಾರ ಆಗಿದ್ದರೆ ಅವರ‍್ಯಾಕೆ ಬೀದಿಗೆ ಬರತಿದ್ದರು?’

‘ಇದೆಲ್ಲ ಆ ‘ಇಂಡಿಯಾ’ದವರ ಕುತಂತ್ರ. ಮಾಡಕ್ಕೆ ಬ್ಯಾರೆ ದಗದ ಇಲ್ಲದೇ ರೈತರಿನ್ನ ಎತ್ತಿ ಕಟ್ಟತಾರೆ. ಹೋರಾಟ ಮಾಡ್ತಿರೋರೆಲ್ಲ ಆಂದೋಲನವಾದಿಗಳು, ಅವ್ರಿಗೆ ಯಾವ್ಯಾವುದೋ ದೇಶಗಳಿಂದ ರೊಕ್ಕ ಬರತೈತಿ ಅಂತ ಟಿ.ವಿ. ವಳಗೆ ಸುದ್ದಿ ನಿರೂಪಕರು ಹೇಳ್ಯಾರೆ ನೋಡು’ ಎಂದು ಟಿ.ವಿ ನ್ಯೂಸ್‌ ಹಾಕಿತು.

‘ಅಲ್ಲಲೇ… ಈ ಟಿ.ವಿ ಆ್ಯಂಕರ್‌ಗಳಿಗೆ ತಿನ್ನೂ ಅನ್ನ ಎಲ್ಲಿಂದ ಬರತೈತಿ? ಇದೇ ಆಂದೋಲನವಾದಿಗಳೇ ಬೆಳೆದಿದ್ದನ್ನು ತಿನ್ನತಾರೆ ಹೌದಿಲ್ಲೋ?’

‘ಅವ್ರೆಲ್ಲ ಗ್ರೀನ್‌ಹೌಸಿನಾಗೆ ರೊಬಾಟ್‌ಗಳು ಬೆಳೆದ ತರಕಾರಿ, ಹಣ್ಣು ತಿಂತಾರಂತೆ!’ ಕಿಸಕ್ಕನೆ ನಕ್ಕ ಬೆಕ್ಕಣ್ಣ ‘ನೀ ಸುದ್ದಿ ಓದೂದು ಬಿಡು. ಇಂಥ ಜಾಹೀರಾತಿನೊಳಗೆ ಮೋದಿಮಾಮ ಎಷ್ಟ್‌ ಗ್ಯಾರಂಟಿ ಕೊಟ್ಟಾನೆ, ಕಳೆದ ಹತ್ತು ವರ್ಷದಿಂದ ಕಲ್ಯಾಣದೇಶ ಆಗೈತಿ ಅಂತ ಮಾಹಿತಿ ಇರತೈತಿ, ಅವನ್ನು ಓದು. ಆಂದೋಲನವಾದಿಗಳ ಬಗ್ಗೆ ಟಿ.ವಿ ನಿರೂಪಕರ ಚರ್ಚೆ ಕೇಳು, ಅಷ್ಟೇ ಸಾಕು’ ಎಂದು ನನ್ನ ತಲೆಗೆ ಮೊಟಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT