ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕತಾಮಂತ್ರ!

Last Updated 1 ನವೆಂಬರ್ 2020, 19:58 IST
ಅಕ್ಷರ ಗಾತ್ರ

ಪ್ರಧಾನಿಯವರ ಎರಡು ದಿನಗಳ ಗುಜರಾತ್ ಭೇಟಿ ವೇಳೆ ಸರ್ದಾರ್‌ ಪಟೇಲರ ಆತ್ಮ
ಸುಸ್ತಾಗಿಬಿಟ್ಟಿತು. ಪ್ರಧಾನಿ ಬರುತ್ತಾರೆಂದು ಏಕತಾಪ್ರತಿಮೆಯನ್ನು ತೊಳೆದಿದ್ದೇ ತೊಳೆದಿದ್ದು... ಪ್ರಧಾನಿಯವರು ಭಾಷಣದಲ್ಲಿ ಹತ್ತಾರು ಬಾರಿ ಉಲ್ಲೇಖಿಸಿದ್ದು, ಭಕ್ತಗಣಾದಿಗಳು ನೂರಾರು ಬಾರಿ ಮರುಉಲ್ಲೇಖಿಸಿದ್ದು, ಇದಾವ ‘ಉಕ್ಕಿನ ಮನುಷ್ಯ’ನೆಂದು ಚಿಳ್ಳೆಪಿಳ್ಳೆಗಳು ಗೂಗಲಿಸಿ ಹುಡುಕಿದ್ದು... ಹೀಗೆ ಎಲ್ಲರ ಉಲ್ಲೇಖಗಳಲ್ಲಿ ಪದೇ ಪದೇ ಪ್ರತ್ಯಕ್ಷವಾಗುತ್ತ ಪಾಪದ ಪಟೇಲರ ಆತ್ಮಕ್ಕೆ ಸುಸ್ತಾಗದಿದ್ದೀತೆ...!

ಇಷ್ಟೇ ಸಾಲದು ಎಂಬಂತೆ ಏಕತಾ ಪ್ರತಿಮೆಯಿಂದ ‘ಸೀಪ್ಲೇನ್’ನಲ್ಲಿ ಕೂರಿಸಿಕೊಂಡು ನೀರಿಲ್ಲದ ಸಾಬರ್ಮತಿಯೊಳು ಕೃತಕವಾಗಿ ನಿರ್ಮಿಸಿದ ರಿವರ್‌ಫ್ರಂಟ್‌ನಲ್ಲಿ ಇಳಿಸಿದ್ದು ಬೇರೆ. ಆಶ್ರಮದಲ್ಲಿ ಗಾಂಧಿಯನ್ನಾದರೂ ಭೇಟಿಯಾಗೋಣವೆಂದು ಹೋದರೆ ಗಾಂಧಿ ಮುಖ ಅತ್ತ ತಿರುವಿ ಕೂತಿದ್ದರು.

‘ಅಲ್ಲೋ ಮಾರಾಯ... ಮೂರನೇ ದರ್ಜೆ ರೈಲಿನಾಗೆ ಹೋಗಾಕೇ ನಾ ಹಿಂದೆಮುಂದೆ ನೋಡ್ತೀನಿ... ಹಂತಾದ್ರಾಗೆ ನೀ ಆ ಸೀಪ್ಲೇನ್ ಹತ್ತಿಕೆಂಡು ಹೆಂಗ ಬಂದೆ’ ಎಂದು ಜಬರಿಸಿದರು. ಹೀಗೆ ಸುಸ್ತಾಗಿ ಬೇಜಾರಾದ ಪಟೇಲರ ಆತ್ಮ, ಈ ಕಿರಿಕಿರಿಗಳೆ ಬೇಡ, ನಾಕು ದಿನ ಕರುನಾಡಿನ ಕಡೆ ಅಡ್ಡಾಡೋಣ ಎಂದು ಈ ಕಡೆ ಬಂದಿತು.

ಇಲ್ಲಿ ನೋಡಿದರೆ ಕನ್ನಡಮ್ಮ ಸೊರಗಿ ಹಂಚೀಕಡ್ಡಿಯಂತಾಗಿದ್ದಳು. ಇದೇನಬೇ ಹಿಂಗಾಗಿದ್ದಿ... 65 ವರ್ಷಗಳ ಕೆಳಗೆ ಏಕೀಕರಣಕ್ಕೆ ಒಳಗಾದಾಗ ಎಷ್ಟು ಕಳೆಕಳೆಯಾಗಿ ಇದ್ದೆ... ಏನಾತಬೇ’ ಪಟೇಲರು ಗಾಬರಿಯಾಗಿ ಕೇಳಿದರು.

‘ಏನ್ ಹೇಳಲಣ್ಣ... ಈ ತಿಂಗಳು ಪೂರಾ ಕನ್ನಡಮ್ಮನ ಉತ್ಸವ ಅಂತ ಎಲ್ಲ ಕಡೆ ಎಳೆದಾಡಿ ಸುಸ್ತು ಹೊಡೆಸ್ತಾರೆ... ಆಮೇಲೆ ಕೇಳೋರು ದಿಕ್ಕಿರಲ್ಲ. ಏನೋ ಹಳ್ಳಿಯವ್ರ ನಾಲಿಗೆ ಮೇಲಿದ್ದೀನಿ, ಗೌರ್ಮೆಂಟ್ ಸ್ಕೂಲಿಗೋಗೊ ಮಕ್ಕಳು ಇನ್ನಾ ಅಆಇಈ ತಿದ್ದುತಾರ ಅಂತ ನಾ ಇಷ್ಟರ ಉಳಿದೀನಿ. ಭಾರತಮಾತೆಯ ಎಲ್ಲ ತನುಜಾತೆಯರೂ ನನ್ನಂಗೇ ಬಸವಳಿದಿದ್ದಾರೆ... ವಿವಿಧತೆಯಲ್ಲಿ ಏಕತೆ ಅಂದಿದ್ದೆ ನೀನು, ಈಗ ಹಿಂದಿಯೇ ಏಕತಾಮಂತ್ರ ಆಗಿದೆ’ ಎಂದು ಉಸಿರುಗರೆದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT